2
ಎಫೆಸದಲ್ಲಿರುವ ಸಭೆಗೆ ಯೇಸುವಿನ ಪತ್ರ
1 “ಎಫೆಸದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ತನ್ನ ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದಿರುವಾತನು ಮತ್ತು ಏಳು ದೀಪಸ್ತಂಭಗಳ ನಡುವೆ ತಿರುಗಾಡುವಾತನು ನಿನಗೆ ಇವುಗಳನ್ನು ಹೇಳುತ್ತಾನೆ.
2 “ನೀನು ಮಾಡುತ್ತಿರುವುದು ನನಗೆ ತಿಳಿದಿದೆ. ನೀನು ಕಷ್ಟಪಟ್ಟು ಕೆಲಸಮಾಡುತ್ತಾ ತಾಳ್ಮೆಯಿಂದಿರುವೆ. ನೀನು ಕೆಟ್ಟ ಜನರನ್ನು ಸಹಿಸಿಕೊಳ್ಳುವುದಿಲ್ಲ ಎಂಬುದು ನನಗೆ ತಿಳಿದಿದೆ. ಅಪೊಸ್ತಲರಾಗಿಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷಿಸಿ, ಅವರು ಸುಳ್ಳುಗಾರರೆಂಬುದನ್ನು ಕಂಡುಹಿಡಿದಿರುವೆ. 3 ನೀನು ತಾಳ್ಮೆಯಿಂದ ಸತತವಾಗಿ ಪ್ರಯತ್ನಿಸುತ್ತಿರುವೆ; ನನ್ನ ಹೆಸರಿನ ನಿಮಿತ್ತ ಬಾಧೆಯನ್ನು ಬೇಸರಪಡದೆ ಸಹಿಸಿಕೊಂಡೆ.
4 “ಆದರೆ ನಿನ್ನ ವಿರುದ್ಧವಾಗಿ ನಾನು ಹೇಳುವುದೇನೆಂದರೆ: ನಿನ್ನ ಮೊದಲಿನ ಪ್ರೀತಿಯನ್ನು ತೊರೆದುಬಿಟ್ಟಿರುವೆ. 5 ಆದ್ದರಿಂದ ನೀನು ಎಲ್ಲಿಂದ ಬಿದ್ದಿದ್ದೀ ಎಂಬುದನ್ನು ನೆನಪು ಮಾಡಿಕೊ; ಮನಸ್ಸನ್ನು ಪರಿವರ್ತಿಸಿಕೊ. ನೀನು ಮೊದಲು ಮಾಡಿದ ಕಾರ್ಯಗಳನ್ನು ಮಾಡು. ನೀನು ಪರಿವರ್ತನೆಗೊಳ್ಳದಿದ್ದರೆ ನಾನು ನಿನ್ನಲ್ಲಿಗೆ ಬಂದು ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದುಬಿಡುತ್ತೇನೆ. 6 ಆದರೆ ನೀನು ಯೋಗ್ಯವಾದ ಒಂದನ್ನು ಮಾಡುತ್ತಿರುವೆ. ಅದೇನೆಂದರೆ, ನಿಕೊಲಾಯಿತರು* ನಿಕೋಲಾಯಿತರು ಏಷ್ಯಾ ಮೈನರ್ ಪ್ರಾಂತ್ಯದಲ್ಲಿರುವ ಒಂದು ಧಾರ್ಮಿಕ ಗುಂಪು. ಮಾಡುವ ಕಾರ್ಯಗಳನ್ನು ನೀನು ದ್ವೇಷಿಸುತ್ತಿ. ನಾನು ಸಹ ಅವರ ಕಾರ್ಯಗಳನ್ನು ದ್ವೇಷಿಸುತ್ತೇನೆ.
7 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು. ಯಾವನು ಜಯಗಳಿಸುತ್ತಾನೋ ಅವನಿಗೆ ತಿನ್ನಲು ಜೀವದಾಯಕ ಮರದ ಹಣ್ಣನ್ನು ಕೊಡುತ್ತೇನೆ. ಈ ಮರವು ದೇವರ ತೋಟದಲ್ಲಿದೆ.
ಸ್ಮುರ್ನದಲ್ಲಿರುವ ಸಭೆಗೆ ಯೇಸುವಿನ ಪತ್ರ
8 “ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ಆದಿಯೂ ಅಂತ್ಯವೂ ಆಗಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ. ಸತ್ತು ಜೀವಂತವಾಗಿ ಎದ್ದುಬಂದಾತನು ಆತನೇ.
9 “ನಿನ್ನ ಸಂಕಟಗಳನ್ನು ನಾನು ಬಲ್ಲೆನು. ನೀನು ಬಡವನೆಂಬುದೂ ನನಗೆ ತಿಳಿದಿದೆ. ಆದರೆ ನೀನು ನಿಜವಾಗಿಯೂ ಶ್ರೀಮಂತ. ನಿನ್ನ ಬಗ್ಗೆ ಕೆಲವು ಜನರು ಹೇಳುವ ಕೆಟ್ಟ ಸಂಗತಿಗಳು ನನಗೆ ತಿಳಿದಿವೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ನಿಜವಾದ ಯೆಹೂದ್ಯರಲ್ಲ. ಅವರು ಸೈತಾನನ ಸಮಾಜದವರಾಗಿದ್ದಾರೆ. 10 ನಿನಗೆ ಸಂಭವಿಸುವ ಸಂಗತಿಗಳ ವಿಷಯದಲ್ಲಿ ಭಯಪಡಬೇಡ. ನಾನು ನಿನಗೆ ಹೇಳುವುದೇನೆಂದರೆ, ಸೈತಾನನು ನಿಮ್ಮಲ್ಲಿ ಕೆಲವರನ್ನು ಪರೀಕ್ಷಿಸುವುದಕ್ಕಾಗಿ ಸೆರೆಮನೆಗೆ ಹಾಕಿಸುತ್ತಾನೆ. ನೀವು ಹತ್ತು ದಿನಗಳ ಕಾಲ ಸಂಕಟವನ್ನು ಅನುಭವಿಸುವಿರಿ. ನೀನು ಸಾಯಬೇಕಾದರೂ ನಂಬಿಗಸ್ತನಾಗಿದ್ದರೆ, ನಾನು ನಿನಗೆ ಜೀವವೆಂಬ ಕಿರೀಟವನ್ನು ದಯಪಾಲಿಸುವೆನು.
11 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು. ಜಯಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.
ಪೆರ್ಗಮದಲ್ಲಿರುವ ಸಭೆಗೆ ಯೇಸುವಿನ ಪತ್ರ
12 “ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ಹರಿತವಾದ ಇಬ್ಬಾಯಿಖಡ್ಗವನ್ನು ಹೊಂದಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ.
13 “ನೀನು ಎಲ್ಲಿ ವಾಸಮಾಡುತ್ತಿರುವೆ ಎಂಬುದು ನನಗೆ ತಿಳಿದಿದೆ. ಸೈತಾನನ ಸಿಂಹಾಸನ ವಿರುವ ಕಡೆಯಲ್ಲಿ ನೀನು ವಾಸಿಸುತ್ತಿರುವೆ. ಆದರೆ ನೀನು ನನಗೆ ನಂಬಿಗಸ್ತನಾಗಿರುವೆ. ಅಂತಿಪನ ಕಾಲದಲ್ಲಿಯೂ ನೀನು ನನ್ನಲ್ಲಿಟ್ಟಿರುವ ನಂಬಿಕೆಯನ್ನು ತಿಳಿಸಲು ನಿರಾಕರಿಸಲಿಲ್ಲ. ನಿನ್ನ ಪಟ್ಟಣದಲ್ಲಿ ಕೊಲ್ಲಲ್ಪಟ್ಟ ಅಂತಿಪನು ನನ್ನ ನಂಬಿಗಸ್ತ ಸಾಕ್ಷಿಯಾಗಿದ್ದನು. ನಿನ್ನ ನಗರ ಸೈತಾನನು ವಾಸಿಸುವ ನಗರವಾಗಿದೆ.
14 “ಆದರೆ ನಿನ್ನ ವಿರುದ್ಧವಾಗಿ ಹೇಳಬೇಕಾದ ಕೆಲವು ಸಂಗತಿಗಳಿವೆ. ನಿನ್ನ ಸಭೆಯಲ್ಲಿ ಬಿಳಾಮನ ದುರ್ಬೋಧನೆಗಳನ್ನು ಅನುಸರಿಸುವ ಜನರಿದ್ದಾರೆ. ಇಸ್ರೇಲಿನ ಜನರನ್ನು ಹೇಗೆ ಪಾಪಕ್ಕೆ ಒಳಗಾಗುವಂತೆ ಮಾಡಬೇಕೆಂಬುದನ್ನು ಬಿಳಾಮನು ಬಾಲಾಕನಿಗೆ ದುರ್ಬೋಧನೆ ಮಾಡಿದನು. ಆದ್ದರಿಂದ ಇಸ್ರೇಲರು ವಿಗ್ರಹಗಳಿಗೆ ಅರ್ಪಿತವಾದ ಆಹಾರವನ್ನು ತಿನ್ನುವುದರ ಮೂಲಕವಾಗಿಯೂ ಲೈಂಗಿಕ ಪಾಪಗಳನ್ನು ಮಾಡುವುದರ ಮೂಲಕವಾಗಿಯೂ ಪಾಪ ಮಾಡಿದರು. 15 ನಿನ್ನ ಸಭೆಯಲ್ಲಿಯೂ ಇದೇ ರೀತಿ ನಡೆಯುತ್ತಿದೆ. ನಿಕೊಲಾಯಿತರ ಬೋಧನೆಗಳನ್ನು ಅನುಸರಿಸುವ ಜನರು ನಿನ್ನಲ್ಲಿದ್ದಾರೆ. 16 ಆದ್ದರಿಂದ ನಿನ್ನ ಮನಸ್ಸನ್ನು ಪರಿವರ್ತಿಸಿಕೊ! ಇಲ್ಲವಾದರೆ, ನಾನು ತ್ವರಿತವಾಗಿ ನಿನ್ನಲ್ಲಿಗೆ ಬಂದು, ನನ್ನ ಬಾಯಿಂದ ಹೊರಗೆ ಬರುವ ಖಡ್ಗದಿಂದ ಆ ಜನರ ವಿರುದ್ಧ ಹೋರಾಡುತ್ತೇನೆ.
17 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.
“ಜಯಗಳಿಸಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಅಡಗಿಸಿಟ್ಟಿರುವ ಮನ್ನವನ್ನು† ಮನ್ನ ನೋಡಿರಿ: ವಿಮೋಚನ. 16:4-36; ಇಬ್ರಿಯ. 9:4. ಕೊಡುತ್ತೇನೆ. ಅವನಿಗೆ ನಾನು ಬಿಳುಪಾದ ಕಲ್ಲನ್ನು ಕೊಡುತ್ತೇನೆ. ಆ ಕಲ್ಲಿನ ಮೇಲೆ ಹೊಸ ಹೆಸರನ್ನು ಕೆತ್ತಲಾಗಿದೆ. ಈ ಹೊಸ ಹೆಸರು ಯಾರಿಗೂ ತಿಳಿದಿಲ್ಲ. ಈ ಕಲ್ಲನ್ನು ಪಡೆದುಕೊಂಡ ವ್ಯಕ್ತಿಯು ಮಾತ್ರ ಹೊಸ ಹೆಸರನ್ನು ತಿಳಿದುಕೊಳ್ಳುತ್ತಾನೆ.
ಥುವತೈರದಲ್ಲಿರುವ ಸಭೆಗೆ ಯೇಸುವಿನ ಪತ್ರ
18 “ಥುವತೈರದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ದೇವಕುಮಾರನು ಈ ಸಂಗತಿಗಳನ್ನು ಹೇಳುತ್ತಾನೆ. ಬೆಂಕಿಯ ಉರಿಯಂತೆ ಪ್ರಜ್ವಲಿಸುವ ಕಣ್ಣುಗಳೂ ಹೊಳೆಯುವ ತಾಮ್ರದಂತಿರುವ ಪಾದಗಳೂ ಇರುವಾತನು, ನಿನಗೆ ಇವುಗಳನ್ನು ಹೇಳುತ್ತಾನೆ.
19 “ನೀನು ಮಾಡುವ ಕಾರ್ಯಗಳು ನನಗೆ ತಿಳಿದಿವೆ. ನಿನ್ನ ಪ್ರೀತಿ, ನಂಬಿಕೆ, ಸೇವೆ ಮತ್ತು ತಾಳ್ಮೆಗಳು ನನಗೆ ತಿಳಿದಿವೆ. ಈಗ ನೀನು ಮೊದಲಿಗಿಂತ ಹೆಚ್ಚಿಗೆ ಮಾಡುತ್ತಿರುವುದನ್ನೂ ಬಲ್ಲೆನು. 20 ಆದರೆ ನಿನ್ನ ವಿರುದ್ಧವಾಗಿ ಇವುಗಳನ್ನು ಹೇಳಬೇಕಾಗಿದೆ. ಯೆಜೆಬೇಲ್ ಎಂಬ ಸ್ತ್ರೀಯು ತನ್ನ ಇಷ್ಟದಂತೆ ಮಾಡಲು ಅವಕಾಶಕೊಟ್ಟಿರುವೆ. ಆಕೆಯು ತನ್ನನ್ನು ಪ್ರವಾದಿನಿಯೆಂದು ಹೇಳಿಕೊಂಡು ತನ್ನ ಬೋಧನೆಗಳಿಂದ ನನ್ನ ಸೇವಕರನ್ನು ನನ್ನಿಂದ ದೂರ ಸೆಳೆಯುತ್ತಿದ್ದಾಳೆ. ಲೈಂಗಿಕ ಪಾಪಗಳನ್ನು ಮಾಡುವಂತೆಯೂ ವಿಗ್ರಹಗಳಿಗೆ ಅರ್ಪಿತವಾದ ಆಹಾರವನ್ನು ತಿನ್ನುವಂತೆಯೂ ಆಕೆಯು ನನ್ನ ಜನರನ್ನು ಪ್ರೇರೇಪಿಸುತ್ತಿದ್ದಾಳೆ.‡ ನೋಡಿರಿ: ಪ್ರಕಟನೆ 2:14. 21 ತನ್ನ ಮನಸ್ಸನ್ನು ಪರಿವರ್ತಿಸಿಕೊಂಡು ಪಾಪಗಳಿಂದ ದೂರ ಸರಿಯಲು ನಾನು ಆಕೆಗೆ ಸಮಯ ಕೊಟ್ಟರೂ ಪರಿವರ್ತನೆ ಹೊಂದಲು ಆಕೆಗೆ ಇಷ್ಟವಿಲ್ಲ.
22 “ಆದ್ದರಿಂದ ಆಕೆಯು ಮಹಾಸಂಕಟಪಡುತ್ತಾ ಹಾಸಿಗೆಯ ಮೇಲೆ ಬಿದ್ದಿರುವಂತೆ ಮಾಡುತ್ತೇನೆ. ಅವಳ ಜೊತೆಯಲ್ಲಿ ಲೈಂಗಿಕ ಪಾಪ ಮಾಡುವ ಜನರೆಲ್ಲರೂ ಮಹಾಸಂಕಟವನ್ನು ಅನುಭವಿಸುತ್ತಾರೆ. ಅವಳು ಮಾಡುವ ಕಾರ್ಯಗಳಿಗೆ ಅವರು ವಿಮುಖರಾಗದಿದ್ದರೆ ನಾನು ಇದನ್ನು ಈಗಲೇ ಮಾಡುತ್ತೇನೆ. 23 ನಾನು ಅವಳ ಹಿಂಬಾಲಕರನ್ನು ಕೊಲ್ಲುತ್ತೇನೆ. ಮನುಷ್ಯರ ಅಂತರಂಗವನ್ನೂ ಅವರ ಆಲೋಚನೆಗಳನ್ನೂ ತಿಳಿದಿರುವಾತನು ನಾನೇ ಎಂಬುದನ್ನು ಆಗ ಎಲ್ಲಾ ಸಭೆಗಳವರು ತಿಳಿದುಕೊಳ್ಳುವರು. ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಅವನವನ ಕಾರ್ಯಗಳಿಗೆ ತಕ್ಕ ಪ್ರತಿಫಲವನ್ನು ನೀಡುತ್ತೇನೆ.
24 “ಆದರೆ ಥುವತೈರದಲ್ಲಿರುವ ಇನ್ನಿತರರಿಗೆ ನಾನು ಹೇಳುವುದೇನೆಂದರೆ, ನೀವು ಆಕೆಯ ಬೋಧನೆಗಳನ್ನು ಅನುಸರಿಸಲಿಲ್ಲ, ‘ಸೈತಾನನ ಅಗಾಧವಾದ ರಹಸ್ಯಗಳು’ ಎಂದು ಅವರು ಹೇಳುವ ಸಂಗತಿಗಳನ್ನು ನೀವು ಕಲಿತುಕೊಂಡಿಲ್ಲ. ಆದ್ದರಿಂದ ನಾನು ಬೇರೊಂದು ಹೊರೆಯನ್ನು ನಿಮ್ಮ ಮೇಲೆ ಹೊರಿಸುವುದಿಲ್ಲ. 25 ನಾನು ಬರುವ ತನಕ ಈಗ ನೀವಿರುವಂತೆಯೇ ಇರಿ.
26 “ಜಯಗಳಿಸುವವನಿಗೆ ಮತ್ತು ನಾನು ಅಪೇಕ್ಷಿಸುವುದನ್ನು ಕೊನೆಯವರೆಗೆ ಮಾಡುವವನಿಗೆ ಜನಾಂಗಗಳ ಮೇಲಿನ ಅಧಿಕಾರವನ್ನು ನೀಡುತ್ತೇನೆ: 27 ‘ಅವನು ಕಬ್ಬಿಣದ ಕೋಲಿನಿಂದ ಅವರನ್ನು ಆಳುತ್ತಾನೆ. ಮಣ್ಣಿನ ಕುಡಿಕೆಗಳೋ ಎಂಬಂತೆ ಅವರನ್ನು ಚೂರುಚೂರು ಮಾಡುತ್ತಾನೆ.’ ✡ ಉಲ್ಲೇಖನ: ಕೀರ್ತನೆ. 2:9. 28 ನಾನು ನನ್ನ ತಂದೆಯಿಂದ ಪಡೆದುಕೊಂಡ ಶಕ್ತಿ ಇದೇ. ನಾನು ಅವನಿಗೆ ಉದಯಸೂಚಕ ನಕ್ಷತ್ರವನ್ನು ನೀಡುತ್ತೇನೆ. 29 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.
*2:6: ನಿಕೋಲಾಯಿತರು ಏಷ್ಯಾ ಮೈನರ್ ಪ್ರಾಂತ್ಯದಲ್ಲಿರುವ ಒಂದು ಧಾರ್ಮಿಕ ಗುಂಪು.
†2:17: ಮನ್ನ ನೋಡಿರಿ: ವಿಮೋಚನ. 16:4-36; ಇಬ್ರಿಯ. 9:4.
‡2:20: ನೋಡಿರಿ: ಪ್ರಕಟನೆ 2:14.
✡2:27: ಉಲ್ಲೇಖನ: ಕೀರ್ತನೆ. 2:9.