3
ಸಂಕಟದ ಅರ್ಥ
ಯೆಹೋವನ ರೌದ್ರ ದಂಡದಿಂದ
ಸಂಕಟವನ್ನು ಅನುಭವಿಸಿರುವವನು ನಾನೇ!
ಯೆಹೋವನು ನನ್ನನ್ನು ಬೆಳಕೇ ಇಲ್ಲದ
ಕತ್ತಲೆಗೆ ನಡೆಸಿಕೊಂಡು ಬಂದನು.
ಯೆಹೋವನು ತನ್ನ ಕೈಯನ್ನು ನನಗೆ ವಿರೋಧವಾಗಿ ತಿರುಗಿಸಿದನು.
ಆತನು ಇಡೀ ದಿನವೆಲ್ಲಾ ಮತ್ತೆಮತ್ತೆ ಹಾಗೆಯೇ ಮಾಡಿದನು.
ಆತನು ನನ್ನ ಮಾಂಸವನ್ನು ಮತ್ತು ಚರ್ಮವನ್ನು ಕಂದಿಸಿದ್ದಾನೆ.
ಆತನು ನನ್ನ ಮೂಳೆಗಳನ್ನು ಮುರಿದುಹಾಕಿದನು.
ಆತನು ನನ್ನನ್ನು ಕಠೋರತೆಯಿಂದಲೂ
ಆಪತ್ತಿನಿಂದಲೂ ಸುತ್ತುವರಿದು ಮುತ್ತಿಗೆಹಾಕಿದ್ದಾನೆ.
ಬಹುಕಾಲದ ಹಿಂದೆಯೇ ಸತ್ತಿರುವವರಂತೆ
ನನ್ನನ್ನು ಕತ್ತಲೆಯಲ್ಲಿ ಕುಳ್ಳಿರಿಸಿದ್ದಾನೆ.
ಯೆಹೋವನು ನನ್ನನ್ನು ಬಂಧಿಸಿ ನಾನು ಹೊರಗೆ ಬರಲಾಗದಂತೆ ಮಾಡಿದನು.
ಆತನು ನನ್ನನ್ನು ಬಲವಾದ ಸರಪಣಿಗಳಿಂದ ಕಟ್ಟಿ ಹಾಕಿದನು.
ನಾನು ಸಹಾಯಕ್ಕಾಗಿ ಅರಚಿಕೊಳ್ಳುವಾಗಲೂ ಕೂಗಿಕೊಳ್ಳುವಾಗಲೂ
ಯೆಹೋವನು ನನ್ನ ಪ್ರಾರ್ಥನೆಗೆ ಉತ್ತರ ಕೊಡುವುದಿಲ್ಲ.
ಆತನು ನನ್ನ ದಾರಿಯನ್ನು ಕಲ್ಲುಗಳಿಂದ ಮುಚ್ಚಿದ್ದಾನೆ.
ಆತನು ನನ್ನ ಹಾದಿಯನ್ನು ಡೊಂಕುಗೊಳಿಸಿದ್ದಾನೆ.
10 ನನ್ನ ಪಾಲಿಗಂತೂ ಯೆಹೋವನು ಆಕ್ರಮಣಮಾಡಲು ಸಿದ್ಧವಾಗಿರುವ ಕರಡಿಯಂತೆಯೂ
ಅಡಗಿಕೊಂಡಿರುವ ಸಿಂಹದಂತೆಯೂ ಇದ್ದಾನೆ.
11 ಯೆಹೋವನು ನನ್ನನ್ನು ನನ್ನ ದಾರಿಯಿಂದ ಓಡಿಸಿದನು.
ಆತನು ನನ್ನನ್ನು ಚೂರುಚೂರು ಮಾಡಿದನು. ಆತನು ನನ್ನನ್ನು ಅಸಹಾಯಕನನ್ನಾಗಿ ತೊರೆದುಬಿಟ್ಟಿದ್ದಾನೆ.
12 ಆತನು ತನ್ನ ಬಿಲ್ಲನ್ನು ಸಜ್ಜುಗೊಳಿಸಿದನು.
ಆತನು ತನ್ನ ಬಾಣಗಳಿಂದ ನನಗೆ ಗುರಿಯಿಟ್ಟನು.
13 ಆತನು ನನ್ನ ಹೊಟ್ಟೆಗೆ
ತನ್ನ ಬಾಣಗಳಿಂದ ಹೊಡೆದನು.
14 ನನ್ನ ಜನರಿಗೆಲ್ಲಾ ಹಾಸ್ಯಾಸ್ಪದವಾಗಿದ್ದೇನೆ.
ದಿನವೆಲ್ಲಾ ಅವರು ನನ್ನ ಬಗ್ಗೆ ಹಾಡುಗಳನ್ನು ಹಾಡುತ್ತಾ ಗೇಲಿ ಮಾಡುತ್ತಾರೆ.
15 ಯೆಹೋವನು ನನಗೆ ಕುಡಿಯಲು ಈ ವಿಷವನ್ನು (ಶಿಕ್ಷೆಯನ್ನು) ಕೊಟ್ಟನು.
ಕಹಿಯಾದ ಈ ಪಾನೀಯದಿಂದ ಆತನು ನನ್ನನ್ನು ತುಂಬಿಸಿದನು.
16 ಯೆಹೋವನು ನನಗೆ ನುರುಜುಗಲ್ಲನ್ನು ಮುಕ್ಕಿಸಿ ನನ್ನ ಹಲ್ಲುಗಳನ್ನು ಮುರಿದುಹಾಕಿದ್ದಾನೆ.
ಆತನು ನನ್ನನ್ನು ಧೂಳಿಗೆ ಹಾಕಿ ತುಳಿದಿದ್ದಾನೆ.
17 ಇನ್ನೆಂದಿಗೂ ಸಮಾಧಾನವೇ ಇರುವುದಿಲ್ಲವೆಂದುಕೊಂಡೆನು.
ನಾನು ಸಂತೋಷವನ್ನು ಮರೆತುಬಿಟ್ಟೆನು.
18 ನಾನು ನನ್ನೊಳಗೆ, “ಯೆಹೋವನು ನನಗೆ ಸಹಾಯ ಮಾಡುತ್ತಾನೆ
ಎಂಬ ನಿರೀಕ್ಷೆ ಇನ್ನೆಂದಿಗೂ ನನಗಿಲ್ಲ” ಎಂದು ಕೊಂಡೆನು.
19 ನನ್ನ ಸಂಕಟವನ್ನು ಮತ್ತು ಮನೆಯಿಲ್ಲದ ಸ್ಥಿತಿಯನ್ನು
ನೆನಸಿಕೊಂಡರೆ ಅದು ಕಹಿ ವಿಷದಂತಿದೆ.
20 ನನ್ನ ಸಂಕಷ್ಟಗಳನ್ನೆಲ್ಲ ನಾನು ಚೆನ್ನಾಗಿ ಜ್ಞಾಪಿಸಿಕೊಳ್ಳುವೆನು,
ಆದ್ದರಿಂದ ನಾನು ತುಂಬಾ ವ್ಯಸನಗೊಂಡಿದ್ದೇನೆ.
21 ಆದರೆ ನಾನು ಬೇರೊಂದನ್ನು ಯೋಚಿಸಿಕೊಂಡಾಗ ನಾನು ನಿರೀಕ್ಷೆಯುಳ್ಳವನಾಗುವೆನು.
ನಾನು ಯೋಚಿಸಿಕೊಳ್ಳುವದೇನೆಂದರೆ:
22 ಯೆಹೋವನ ಪ್ರೀತಿಗೂ ಕರುಣೆಗೂ ಕೊನೆಯೇ ಇಲ್ಲ.
ಆತನ ದಯೆಗೆ ಅಂತ್ಯವೇ ಇಲ್ಲ.
23 ಪ್ರತಿ ಮುಂಜಾನೆಯೂ ಆತನು ಅದನ್ನು ಹೊಸ ರೀತಿಗಳಲ್ಲಿ ತೋರಿಸುವನು.
ಯೆಹೋವನೇ, ನೀನು ಎಷ್ಟೋ ಸತ್ಯವಂತನು ಮತ್ತು ನಂಬಿಗಸ್ತನು!
24 ನಾನು ನನ್ನೊಳಗೆ, “ಯೆಹೋವನೇ ನನ್ನ ಪಾಲು;
ಆದ್ದರಿಂದ ನಾನು ಆತನಲ್ಲಿ ಭರವಸವಿಡುವೆನು” ಎಂದುಕೊಳ್ಳುವೆನು.
 
25 ಯೆಹೋವನು ತನಗಾಗಿ ಕಾಯುವ ಜನರಿಗೆ ಒಳ್ಳೆಯವನಾಗಿರುತ್ತಾನೆ.
ಯೆಹೋವನು ತನ್ನನ್ನು ಎದುರುನೋಡುವ ಜನರಿಗೆ ಒಳ್ಳೆಯವನಾಗಿರುತ್ತಾನೆ.
26 ತನ್ನ ರಕ್ಷಣೆಗಾಗಿ ಯೆಹೋವನಿಗಾಗಿಯೇ
ಮೌನದಿಂದ ಕಾಯುವುದು ಮನುಷ್ಯನಿಗೆ ಒಳ್ಳೆಯದು.
27 ಯೌವನದಲ್ಲೇ ಸಂಕಟದ ನೊಗವನ್ನು
ಹೊರುವುದು ಮನುಷ್ಯನಿಗೆ ಒಳ್ಳೆಯದು.
28 ಯೆಹೋವನು ಈ ಸಂಕಟದ ನೊಗವನ್ನು
ಅವನ ಮೇಲೆ ಹಾಕುವಾಗ ಅವನು ಮೌನವಾಗಿ ಕುಳಿತುಕೊಂಡಿರಬೇಕು.
29 ಅವನು ದೀನತೆಯಿಂದ ತನ್ನ ಮುಖವನ್ನು ಧೂಳಿನಲ್ಲಿ ಹಾಕಬೇಕು.
ಆಗ ಅವನ ಜೀವಕ್ಕೆ ನಿರೀಕ್ಷೆ ಇದ್ದರೂ ಇರಬಹುದು.
30 ಆ ವ್ಯಕ್ತಿಯು ತನ್ನನ್ನು ಹೊಡೆಯುವವರಿಗೆ ತನ್ನ ಕೆನ್ನೆಯನ್ನು ಒಡ್ಡಬೇಕು.
ಅವನು ತನಗೆ ಜನರಿಂದಾಗುವ ಗೇಲಿಯನ್ನು ಸಹಿಸಿಕೊಳ್ಳಬೇಕು.
31 ಯೆಹೋವನು ಜನರನ್ನು ಶಾಶ್ವತವಾಗಿ ತೊರೆದುಬಿಡುವುದಿಲ್ಲ
ಎಂಬುದು ಆ ವ್ಯಕ್ತಿಯ ನೆನಪಿನಲ್ಲಿರಬೇಕು.
32 ಯೆಹೋವನು ಶಿಕ್ಷಿಸುವಾಗ ಕರುಣೆಯುಳ್ಳವನೂ ಆಗಿರುತ್ತಾನೆ.
ಆತನು ತನ್ನ ಮಹಾಪ್ರೀತಿ ಮತ್ತು ಕನಿಕರಗಳಿಂದಲೇ ಕರುಣೆಯುಳ್ಳವನಾಗಿರುತ್ತಾನೆ.
 
33 ತಾನು ಜನರನ್ನು ಶಿಕ್ಷಿಸಬೇಕೆಂಬುದು ಯೆಹೋವನ ಬಯಕೆಯೇನಲ್ಲ.
ತಾನು ಜನರನ್ನು ವ್ಯಸನಗೊಳಿಸಬೇಕೆಂಬುದು ಆತನಿಗೆ ಇಷ್ಟವಿಲ್ಲ.
34 ಈ ಸಂಗತಿಗಳನ್ನು ಇಷ್ಟಪಡುವುದಿಲ್ಲ. ಯಾರೋ ಒಬ್ಬನು ಈ ಲೋಕದ ಕೈದಿಗಳನ್ನೆಲ್ಲಾ ತನ್ನ ಪಾದದ ಕೆಳಗೆ ಹಾಕಿ ತುಳಿಯುವುದನ್ನು ಆತನು ಇಷ್ಟಪಡುವುದಿಲ್ಲ.
35 ಒಬ್ಬನು ಮತ್ತೊಬ್ಬನಿಗೆ ಅನ್ಯಾಯ ಮಾಡುವುದನ್ನು ಆತನು ಇಷ್ಟಪಡುವುದಿಲ್ಲ.
ಆದರೆ ಕೆಲವರು ಆ ಕೆಟ್ಟಕಾರ್ಯಗಳನ್ನು ಮಹೋನ್ನತನಾದ ಯೆಹೋವನ ಎದುರಿನಲ್ಲಿಯೇ ಮಾಡುತ್ತಾರೆ.
36 ವ್ಯಾಜ್ಯದಲ್ಲಿ ದೊರೆಯಬೇಕಾದ ನ್ಯಾಯವನ್ನು ದೊರೆಯದಂತೆ ಮಾಡುವುದು ಯೆಹೋವನಿಗೆ ಇಷ್ಟವಿಲ್ಲ.
ಯೆಹೋವನು ಈ ಸಂಗತಿಗಳಲ್ಲಿ ಯಾವುದನ್ನೂ ಇಷ್ಟಪಡುವುದಿಲ್ಲ.
37 ಯಾರೇ ಆಗಲಿ ತಾವು ಮುಂತಿಳಿಸಿದ್ದನ್ನು
ಯೆಹೋವನು ಆಜ್ಞಾಪಿಸದ ಹೊರತು ಅದು ನೆರವೇರುವುದಿಲ್ಲ.
38 ಕೆಟ್ಟವುಗಳೂ ಸಂಭವಿಸುವಂತೆ
ಮಹೋನ್ನತನಾದ ಯೆಹೋವನು ಆಜ್ಞಾಪಿಸುತ್ತಾನೆ.
39 ಜೀವಂತವಾಗಿರುವ ಯಾವ ವ್ಯಕ್ತಿಯೇ ಆಗಲಿ ತನ್ನ ಪಾಪಗಳ ನಿಮಿತ್ತ
ಯೆಹೋವನ ಶಿಕ್ಷೆಗೆ ಗುರಿಯಾಗುವಾಗ ದೂರು ಹೇಳಕೂಡದು.
40 ನಾವು ಏನು ಮಾಡಿದ್ದೇವೆ ಎಂಬುದನ್ನು ಪರಿಶೀಲಿಸಿ ನೋಡೋಣ.
ಬಳಿಕ ಯೆಹೋವನಿಗೆ ಅಭಿಮುಖರಾಗೋಣ.
 
41 ಪರಲೋಕದ ದೇವರಿಗೆ ನಮ್ಮ ಹೃದಯಗಳನ್ನೂ
ಕೈಗಳನ್ನೂ ಎತ್ತಿಹಿಡಿಯೋಣ.
42 “ನಾವು ದಂಗೆ ಎದ್ದಿದ್ದೇವೆ ಮತ್ತು ಅವಿಧೇಯರಾಗಿದ್ದೇವೆ.
ಆದ್ದರಿಂದ ನೀನು ನಮ್ಮನ್ನು ಕ್ಷಮಿಸಿಲ್ಲ.
43 ನೀನು ನಮಗೆ ನಿನ್ನ ಕೋಪವನ್ನು ಹೊದಿಸಿ ನಮ್ಮನ್ನು ಓಡಿಸಿಬಿಟ್ಟೆ.
ನೀನು ನಮ್ಮನ್ನು ನಿಷ್ಕರುಣೆಯಿಂದ ಕೊಂದುಹಾಕಿದೆ!
44 ನೀನು ನಿನಗೆ ಮೋಡಗಳನ್ನು ಹೊದಿಸಿಕೊಂಡು
ನಮ್ಮ ಯಾವ ಪ್ರಾರ್ಥನೆಯೂ ನಿನ್ನ ಬಳಿಗೆ ಬಾರದಂತೆ ಮಾಡಿದೆ.
45 ನೀನು ನಮ್ಮನ್ನು ಇತರ ಜನಾಂಗಗಳಿಗೆ ಕಸದಂತೆಯೂ
ಹೊಲಸಿನಂತೆಯೂ ಮಾಡಿದೆ.
46 ನಮ್ಮ ಶತ್ರುಗಳೆಲ್ಲಾ
ನಮ್ಮೊಂದಿಗೆ ಕೋಪದಿಂದ ಮಾತಾಡುತ್ತಾರೆ.
47 ನಾವು ಭಯಗೊಂಡಿದ್ದೇವೆ.
ನಾವು ಗುಂಡಿಯೊಳಗೆ ಬಿದ್ದಿದ್ದೇವೆ.
ನಮಗೆ ಬಹಳವಾಗಿ ನೋವಾಗಿದೆ!
ನಾವು ಮುರಿದುಹೋದವರಾಗಿದ್ದೇವೆ!”
48 ನನ್ನ ಕಣ್ಣೀರು ತೊರೆಗಳಂತೆ ಹರಿಯುತ್ತಿದೆ!
ನನ್ನ ಜನರು ನಾಶವಾದ ಕಾರಣ ನಾನು ಗೋಳಾಡುತ್ತಿರುವೆ!
49 ನನ್ನ ಕಣ್ಣೀರು ಸತತವಾಗಿ ಹರಿಯುತ್ತಿದೆ!
ನಾನು ಗೋಳಾಡುತ್ತಲೇ ಇರುವೆನು!
50 ಯೆಹೋವನೇ, ಕೆಳಗಿರುವ ನಮ್ಮನ್ನು
ನೀನು ಬಗ್ಗಿ ನೋಡುವತನಕ ನಾನು ಗೋಳಾಡುತ್ತಲೇ ಇರುವೆನು!
ನೀನು ಪರಲೋಕದಿಂದ ನಮ್ಮನ್ನು ನೋಡುವತನಕ
ನಾನು ಗೋಳಾಡುತ್ತಲೇ ಇರುವೆನು.
51 ನನ್ನ ಪಟ್ಟಣದ ಯುವತಿಯರಿಗೆ ಸಂಭವಿಸಿದ್ದನ್ನು
ನಾನು ನೋಡುವಾಗಲೆಲ್ಲ ನನ್ನ ಕಣ್ಣುಗಳು ನನ್ನನ್ನು ದುಃಖಗೊಳಿಸುತ್ತವೆ.
52 ನಿಷ್ಕಾರಣವಾಗಿ ಜನರು ನನ್ನ ವೈರಿಗಳಾಗಿದ್ದು ನನ್ನನ್ನು ಪಕ್ಷಿಯಂತೆ ಬೇಟೆಯಾಡಿದರು.
53 ನನ್ನ ಪ್ರಾಣವನ್ನು ಒಂದು ಗುಂಡಿಯಲ್ಲಿ ಕೊನೆಗಾಣಿಸಲು ಅವರು ಪ್ರಯತ್ನಿಸಿದರು.
ಅವರು ನನಗೆ ಕಲ್ಲುಗಳನ್ನು ತೂರಿದರು.
54 ನೀರು ನನ್ನ ತಲೆಯ ಮೇಲೆ ಏರಿತು.
“ನಾನು ಸತ್ತುಹೋಗುತ್ತೇನೆ” ಎಂದುಕೊಂಡೆನು.
55 ಯೆಹೋವನೇ, ಗುಂಡಿಯ ತಳದಿಂದ
ನಾನು ನಿನ್ನ ಹೆಸರೆತ್ತಿ ಪ್ರಾರ್ಥಿಸಿದೆನು.
56 ನೀನು ನನ್ನ ಸ್ವರವನ್ನು ಕೇಳಿದೆ.
ನೀನು ನಿನ್ನ ಕಿವಿಗಳನ್ನು ಮುಚ್ಚಿಕೊಳ್ಳಲಿಲ್ಲ;
ನಿನ್ನನ್ನು ರಕ್ಷಿಸುವುದಿಲ್ಲ ಎಂದು ಹೇಳಲಿಲ್ಲ.
57 ನಾನು ನಿನ್ನನ್ನು ಕರೆದಾಗ, ನೀನು ಸಮೀಪಕ್ಕೆ ಬಂದು,
“ಭಯಪಡದಿರು” ಎಂದು ಹೇಳಿದೆ.
58 ಯೆಹೋವನೇ, ನೀನು ನನ್ನ ಪರವಾಗಿ ಹೋರಾಡಿದೆ.
ನನ್ನ ಪ್ರಾಣವನ್ನು ರಕ್ಷಿಸಿದೆ.
59 ಯೆಹೋವನೇ, ನನಗಾಗಿರುವ ಅನ್ಯಾಯವನ್ನು ನೀನು ನೋಡಿರುವೆ.
ವ್ಯಾಜ್ಯದಲ್ಲಿ ನನ್ನ ಪರವಾಗಿ ತೀರ್ಪು ನೀಡು.
60 ನನ್ನ ಶತ್ರುಗಳು ನನ್ನ ಮೇಲೆ ಹೇಗೆ ಸೇಡನ್ನು ತೀರಿಸಿಕೊಂಡಿದ್ದಾರೆ ನೋಡು.
ನನಗೆ ವಿರೋಧವಾಗಿ ಅವರು ಮಾಡಿದ ಎಲ್ಲಾ ಯೋಜನೆಗಳನ್ನು ನೋಡು.
61 ಯೆಹೋವನೇ, ಅವರು ನನಗಾಡುವ ಗೇಲಿ ಮಾತನ್ನು ಕೇಳು.
ಅವರು ನನ್ನ ವಿರುದ್ಧ ಮಾಡಿದ ಎಲ್ಲಾ ಯೋಜನೆಗಳನ್ನು ಕೇಳು.
62 ನನ್ನ ಶತ್ರುಗಳ ಮಾತುಗಳು ಮತ್ತು ಆಲೋಚನೆಗಳು
ಯಾವಾಗಲೂ ನನಗೆ ವಿರೋಧವಾಗಿವೆ.
63 ಯೆಹೋವನೇ, ನೋಡು!
ಅವರು ಕುಳಿತುಕೊಂಡಿರುವಾಗಲೂ ನಿಂತುಕೊಂಡಿರುವಾಗಲೂ ನನ್ನನ್ನು ಹೇಗೆ ಗೇಲಿ ಮಾಡುತ್ತಾರೆ!
64 ಯೆಹೋವನೇ, ನೀನು ಅವರಿಗೆ ಮುಯ್ಯಿತೀರಿಸು!
ಅವರು ಮಾಡಿರುವುದಕ್ಕೆ ತಕ್ಕಂತೆ ಅವರನ್ನು ದಂಡಿಸು!
65 ಅವರ ಹೃದಯವನ್ನು ಕಠಿಣಗೊಳಿಸು!
ಬಳಿಕ ಅವರನ್ನು ಶಪಿಸು!
66 ಕೋಪದಿಂದ ಅವರನ್ನು ಓಡಿಸಿಬಿಡು! ಅವರನ್ನು ನಾಶಮಾಡು!
ಯೆಹೋವನೇ, ಅವರನ್ನು ಈ ಭೂಲೋಕದಿಂದಲೇ ಅಳಿಸಿಹಾಕು!