2
ಯೆಹೋವನು ಜೆರುಸಲೇಮನ್ನು ನಾಶಮಾಡಿದನು
1 ಕೋಪೋದ್ರಿಕ್ತನಾದ ಯೆಹೋವನು ಚೀಯೋನಿನ ಮಗಳ* ಚೀಯೋನಿನ ಮಗಳು ಜೆರುಸಲೇಮ್ ನಗರದ ಇನ್ನೊಂದು ಹೆಸರು. ಮೇಲೆ ಹೇಗೆ ಕಾರ್ಮೋಡಗಳು ಕವಿಯುವಂತೆ ಮಾಡಿದ್ದಾನೆ ನೋಡಿರಿ.
ಆತನು ಇಸ್ರೇಲಿನ ವೈಭವವನ್ನು ಆಕಾಶದಿಂದ ಭೂಮಿಗೆ ಎಸೆದಿದ್ದಾನೆ.
ಯೆಹೋವನಿಗೆ ಕೋಪ ಬಂದಾಗ ಆತನು ಇಸ್ರೇಲ್ ತನ್ನ ಪಾದಪೀಠವೆಂಬುದನ್ನು ಗಮನಕ್ಕೆ ತಂದುಕೊಳ್ಳಲಿಲ್ಲ.
2 ಯೆಹೋವನು ಯಾಕೋಬನ ಮನೆಗಳನ್ನು ನಾಶಪಡಿಸಿದನು.
ಆತನು ಕನಿಕರವಿಲ್ಲದೆ ಅವುಗಳನ್ನು ನುಂಗಿಬಿಟ್ಟನು.
ತನ್ನ ಕೋಪದಲ್ಲಿ ಆತನು ಯೆಹೂದದ
ಮಗಳ† ಯೆಹೂದದ ಮಗಳು ಯೆಹೂದ ಜನಾಂಗ. ಕೋಟೆಗಳನ್ನು ನಾಶಪಡಿಸಿದನು.
ಯೆಹೋವನು ಯೆಹೂದ ರಾಜ್ಯವನ್ನೂ ಮತ್ತು ಅದರ ಅಧಿಪತಿಗಳನ್ನೂ ನೆಲಕ್ಕೆ ಅಪ್ಪಳಿಸಿದನು.
ಆತನು ಯೆಹೂದ ರಾಜ್ಯಕ್ಕೆ ಅವಮಾನ ಮಾಡಿದ್ದಾನೆ.
3 ನನ್ನ ಕೋಪದ ಭರದಲ್ಲಿ ಯೆಹೋವನು
ಇಸ್ರೇಲಿನ ಶಕ್ತಿಯನ್ನೆಲ್ಲ ಕತ್ತರಿಸಿಹಾಕಿದನು.
ಆತನು ಇಸ್ರೇಲಿನಿಂದ ತನ್ನ ಬಲಗೈಯನ್ನು ಹಿಂತೆಗೆದುಕೊಂಡನು.
ಶತ್ರು ಬಂದಾಗ ಆತನು ಹೀಗೆ ಮಾಡಿದನು.
ಅಗ್ನಿಜ್ವಾಲೆಗಳಂತೆ ಆತನು ಯಾಕೋಬಿನಲ್ಲಿ ಉರಿದನು.
ಸುತ್ತಮುತ್ತಲೆಲ್ಲ (ಪ್ರತಿಯೊಂದನ್ನೂ) ದಹಿಸುವ ಬೆಂಕಿಯಂತೆ ಆತನಿದ್ದನು.
4 ಯೆಹೋವನು ವೈರಿಯಂತೆ ತನ್ನ ಬಿಲ್ಲನ್ನು ಬಾಗಿಸಿದನು.
ತನ್ನ ಬಲಗೈಯಲ್ಲಿ ಖಡ್ಗವನ್ನು ಧರಿಸಿದನು:
ಆತನು ಯೆಹೂದದ ಎಲ್ಲ ಆಕರ್ಷಕ ಜನರನ್ನು ಕೊಂದುಹಾಕಿದನು.
ಆತನು ಶತ್ರುವಿನಂತೆ ಅವರನ್ನು ಕೊಂದನು.
ಆತನು ತನ್ನ ರೋಷಾಗ್ನಿಯನ್ನು ಹೊರಸೂಸಿದನು.
ಆತನು ಅದನ್ನು ಚೀಯೋನಿನ ಗುಡಾರಗಳ ಮೇಲೆ ಸುರಿಸಿದನು.
5 ಆತನು ಒಬ್ಬ ಶತ್ರುವಿನಂತಾಗಿದ್ದಾನೆ.
ಆತನು ಇಸ್ರೇಲನ್ನು ನಾಶಮಾಡಿದನು.
ಆತನು ಅವಳ ಎಲ್ಲ ಅರಮನೆಗಳನ್ನು ನುಂಗಿಬಿಟ್ಟನು.
ಆತನು ಅವಳ ಎಲ್ಲ ಕೋಟೆಗಳನ್ನು ನುಂಗಿಬಿಟ್ಟನು.
ಯೆಹೂದ ಜನಾಂಗದಲ್ಲಿ
ಆತನು ಹೆಚ್ಚಿನ ದುಃಖವನ್ನು ಉಂಟುಮಾಡಿ ಶೋಕವನ್ನು ಹರಡಿದ್ದಾನೆ.
6 ಯೆಹೋವನು ತನ್ನ ಸ್ವಂತ ಗುಡಾರವನ್ನು
ಒಂದು ತೋಟವೋ ಎಂಬಂತೆ ಹಾಳುಮಾಡಿದ್ದಾನೆ.
ಜನರು ಆತನನ್ನು ಆರಾಧಿಸಲು
ಸೇರಿಬರುತ್ತಿದ್ದ ಸ್ಥಳವನ್ನು ನಾಶಪಡಿಸಿದ್ದಾನೆ.
ಚೀಯೋನಿನಲ್ಲಿ ಜನರು ಮಹೋತ್ಸವಗಳನ್ನು
ಮತ್ತು ವಿಶೇಷ ವಿಶ್ರಾಂತಿ ದಿನಗಳನ್ನು ಮರೆಯುವಂತೆ ಯೆಹೋವನು ಮಾಡಿದ್ದಾನೆ.
ಯೆಹೋವನು ರಾಜನನ್ನು ಮತ್ತು ಯಾಜಕರನ್ನು ತಿರಸ್ಕರಿಸಿದ್ದಾನೆ.
ಆತನು ತನ್ನ ಕಡುಕೋಪದಿಂದ ಅವರನ್ನು ತಿರಸ್ಕರಿಸಿದ್ದಾನೆ.
7 ಯೆಹೋವನು ತನ್ನ ಯಜ್ಞವೇದಿಕೆಯನ್ನು ತಿರಸ್ಕರಿಸಿದ್ದಾನೆ.
ಆತನು ತನ್ನ ಪವಿತ್ರಾಲಯವನ್ನು ತಿರಸ್ಕರಿಸಿದ್ದಾನೆ.
ಆತನು ಜೆರುಸಲೇಮಿನ ಅರಮನೆಗಳ ಗೋಡೆಗಳನ್ನು
ಶತ್ರುಗಳ ವಶಮಾಡಿದ್ದಾನೆ.
ವೈರಿಗಳು ಯೆಹೋವನ ಪವಿತ್ರ ಆಲಯದಲ್ಲಿ ಗದ್ದಲವನ್ನು ಮಾಡಿದರು.
ಅವರು ಉತ್ಸವದ ದಿನದಂತೆ ಗದ್ದಲವನ್ನು ಮಾಡಿದರು.
8 ಯೆಹೋವನು ಚೀಯೋನ್ ಕುಮಾರಿಯ
ಪೌಳಿಗೋಡೆಯನ್ನು ನಾಶಮಾಡಬೇಕೆಂದು ಯೋಚಿಸಿದ್ದಾನೆ.
ಆತನು ಅಳತೆದಾರದಿಂದ ಒಡೆಯಬೇಕಾದ ಗೋಡೆಗೆ ಗುರುತು ಮಾಡಿದ್ದಾನೆ.
ಆತನು ತಾನು ಮಾಡುತ್ತಿದ್ದ ನಾಶನವನ್ನು ನಿಲ್ಲಿಸಲಿಲ್ಲ.
ಪೌಳಿಗೋಡೆಗಳು ಮತ್ತು ಗೋಪುರಗಳು ದುಃಖದಿಂದ ಗೋಳಾಡುವಂತೆ ಆತನು ಮಾಡಿದ್ದಾನೆ.
ಅವೆರಡೂ ಕುಸಿದುಹೋಗಿವೆ.
9 ಜೆರುಸಲೇಮಿನ ಹೆಬ್ಬಾಗಿಲುಗಳು ನೆಲದಲ್ಲಿ ಹೂತುಹೋಗಿವೆ.
ಆತನು ಹೆಬ್ಬಾಗಿಲುಗಳ ಸರಳುಗಳನ್ನು ಮುರಿದು ಚೂರುಚೂರು ಮಾಡಿದ್ದಾನೆ.
ಅವಳ ರಾಜನು ಮತ್ತು ರಾಜಕುಮಾರರು ಅನ್ಯಜನಾಂಗಗಳ ಮಧ್ಯದಲ್ಲಿದ್ದಾರೆ.
ಆ ಜನರಿಗೆ ಉಪದೇಶ ಮಾಡಲು ಯಾರೂ ಇಲ್ಲ.
ಪ್ರವಾದಿಗಳಿಗೆ ಯೆಹೋವನಿಂದ ಯಾವ ದರ್ಶನಗಳೂ ಇಲ್ಲ.
10 ಚೀಯೋನಿನ ಹಿರಿಯರು ನೆಲದ ಮೇಲೆ
ಮೌನವಾಗಿ ಕುಳಿತುಕೊಂಡಿದ್ದಾರೆ.
ಅವರು ತಮ್ಮ ತಲೆಗಳ ಮೇಲೆ ಧೂಳನ್ನು ತೂರಿಕೊಂಡು
ಗೋಣಿತಟ್ಟನ್ನು ಸುತ್ತಿಕೊಂಡಿದ್ದಾರೆ.
ಜೆರುಸಲೇಮಿನ ತರುಣಿಯರು
ದುಃಖದಿಂದ ತಲೆ ತಗ್ಗಿಸಿಕೊಂಡಿದ್ದಾರೆ.
11 ಕಂಬನಿ ಸುರಿದು ನನ್ನ ಕಣ್ಣುಗಳು ಇಂಗಿಹೋಗಿವೆ.
ನನ್ನ ಕರುಳು ತಳಮಳಗೊಂಡಿದೆ.
ನನ್ನ ಹೃದಯವನ್ನು ನೆಲಕ್ಕೆ ಚೆಲ್ಲಲಾಗಿದೆ ಎಂದೆನಿಸುತ್ತಿದೆ.
ನನ್ನ ಜನರ ವಿನಾಶದಿಂದ ನನಗೆ ಹೀಗಾಗಿದೆ.
ಮಕ್ಕಳು ಮತ್ತು ಶಿಶುಗಳು ಮೂರ್ಛೆ ಹೋಗುತ್ತಿದ್ದಾರೆ.
ಅವರು ನಗರದ ಕೇಂದ್ರ ಸ್ಥಳಗಳಲ್ಲಿ (ಚೌಕಗಳಲ್ಲಿ) ಮೂರ್ಛೆಹೋಗುತ್ತಿದ್ದಾರೆ.
12 ಆ ಮಕ್ಕಳು ತಮ್ಮ ತಾಯಂದಿರನ್ನು,
“ರೊಟ್ಟಿ ಮತ್ತು ದ್ರಾಕ್ಷಾರಸ ಎಲ್ಲಿದೆ?” ಎಂದು ಕೇಳುತ್ತಿದ್ದಾರೆ.
ಅವರು ಅಸುನೀಗುವಾಗ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ.
ಅವರು ತಮ್ಮ ತಾಯಂದಿರ ಮಡಿಲಲ್ಲಿಯೇ ಪ್ರಾಣಬಿಡುತ್ತಿದ್ದಾರೆ.
13 ನನ್ನ ಪ್ರಿಯ ಜೆರುಸಲೇಮೇ, ನಾನು ನಿನ್ನ ಬಗ್ಗೆ ಏನು ಹೇಳಲಿ?
ನಾನು ನಿನ್ನನ್ನು ಯಾವುದಕ್ಕೆ ಹೋಲಿಸಲಿ?
ನೀನು ಎಂಥವಳೆಂದು ಹೇಳಲಿ?
ನನ್ನ ಚೀಯೋನೇ,
ನಾನು ನಿನ್ನನ್ನು ಹೇಗೆ ಸಂತೈಸಲಿ.
ನಿನ್ನ ವಿನಾಶವು ಸಾಗರದಷ್ಟು ಅಪಾರ.
ಯಾರೂ ನಿನ್ನನ್ನು ಸ್ವಸ್ಥ ಮಾಡಲಾರರು ಎಂದೆನಿಸುತ್ತದೆ.
14 ನಿನ್ನ ಪ್ರವಾದಿಗಳು ನಿನಗಾಗಿ ದರ್ಶನಗಳನ್ನು ಕಂಡರು.
ಆದರೆ ಅವರ ದರ್ಶನಗಳು ನಿರರ್ಥಕವಾದ ಹುಸಿನುಡಿಗಳಾಗಿವೆ.
ಅವರು ನಿನ್ನ ಪಾಪಕೃತ್ಯಗಳನ್ನು ಬಹಿರಂಗಪಡಿಸಲಿಲ್ಲ.
ಅವರು ಪರಿಸ್ಥಿತಿಯನ್ನು ಸುಧಾರಿಸುವ ಪ್ರಯತ್ನ ಮಾಡಲಿಲ್ಲ.
ಅವರು ನಿನ್ನ ಕುರಿತು ಸಂದೇಶಗಳನ್ನು ಪ್ರವಾದಿಸಿದರು.
ಆದರೆ ಅವು ನಿರಾಧಾರವಾದ ಸಂದೇಶಗಳಾಗಿದ್ದು ನಿನ್ನನ್ನು ಮರುಳುಗೊಳಿಸಿದವು.
15 ಪಕ್ಕದಲ್ಲಿ ದಾರಿ ಹಿಡಿದುಹೋಗುವ ಜನರು
ನಿನ್ನನ್ನು ನೋಡಿ ಅಪಹಾಸ್ಯದಿಂದ ಚಪ್ಪಾಳೆ ತಟ್ಟುತ್ತಾರೆ.
ಜೆರುಸಲೇಮಿನ ಮಗಳ ಸ್ಥಿತಿಯನ್ನು ನೋಡಿ
ಅವರು ಸಿಳ್ಳುಹಾಕುತ್ತಾರೆ ಮತ್ತು ತಲೆಯಾಡಿಸುತ್ತಾರೆ.
“ಜನರಿಂದ ‘ಪರಿಪೂರ್ಣ ಸುಂದರ ನಗರ’
‘ಸಮಸ್ತಲೋಕದ ಸಂತೋಷ’ ಎಂದು ಕರೆಸಿಕೊಂಡದ್ದು
ಇದೇ ನಗರವೇ?” ಎಂದು ಅವರು ಕೇಳುತ್ತಾರೆ.
16 ನಿನ್ನ ಎಲ್ಲ ವೈರಿಗಳು ನಿನ್ನನ್ನು ನೋಡಿ
ಬಾಯಿ ತೆರೆದು ಸಿಳ್ಳುಹಾಕಿ ಹಲ್ಲು ಕಡಿಯುತ್ತಾರೆ.
“ನಾವು ಅವರನ್ನು ಸಂಪೂರ್ಣವಾಗಿ ನುಂಗಿದೆವು!
ನಿಜವಾಗಿ ನಾವು ಈ ದಿನವನ್ನೇ ನಿರೀಕ್ಷಿಸುತ್ತಿದ್ದೆವು.
ಅಂತೂ ಕೊನೆಗೆ ಇದು ನೆರವೇರುವುದನ್ನು ನಾವು ಕಂಡೆವು”
ಎಂದು ಅವರು ಅನ್ನುತ್ತಾರೆ.
17 ಯೆಹೋವನು ತಾನು ನಿಯೋಜಿಸಿದಂತೆ ಮಾಡಿದನು.
ತಾನು ಮಾಡುತ್ತೇನೆಂದು ಹೇಳಿದ್ದನ್ನು ಆತನು ಮಾಡಿದ್ದಾನೆ.
ಪುರಾತನ ಕಾಲದಿಂದ ತಾನು ವಿಧಿಸಿದ್ದನ್ನು ಆತನು ಮಾಡಿದ್ದಾನೆ.
ಆತನು ನಿಷ್ಕರುಣೆಯಿಂದ ನಾಶಮಾಡಿದ್ದಾನೆ.
ನಿನಗೆ ಸಂಭವಿಸಿದವುಗಳ ಮೂಲಕವಾಗಿ ಆತನು ನಿನ್ನ ವೈರಿಗಳನ್ನು ಸಂತೋಷಪಡಿಸಿದ್ದಾನೆ.
ಆತನು ನಿನ್ನ ವೈರಿಗಳ ಸಾಮರ್ಥ್ಯವನ್ನು ಹೆಚ್ಚಿಸಿದ್ದಾನೆ.
18 ಜೆರುಸಲೇಮ್ ನಗರದ ಗೋಡೆಯೇ,
ಮನಃಪೂರ್ವಕವಾಗಿ ಯೆಹೋವನಲ್ಲಿ ಮೊರೆಯಿಡು.
ನಿನ್ನ ಕಣ್ಣೀರು ಹಗಲಿರುಳು ನದಿಯಂತೆ ಹರಿಯಲಿ, ನಿಲ್ಲಿಸಬೇಡ.
ನಿನ್ನ ಕಣ್ಣುಗಳಿಗೆ ವಿರಾಮ ಸಿಗುವುದು ಬೇಡ.
19 ರಾತ್ರಿಯ ಒಂದೊಂದು ಜಾವದ ಆರಂಭದಲ್ಲಿ ಎದ್ದೆದ್ದು ಗೋಳಾಡಿರಿ.
ನಿಮ್ಮ ಹೃದಯವು ನೀರಿನಂತೆ ಹರಿಯಲಿ.
ನಿಮ್ಮ ಹೃದಯಸಾರವನ್ನು ಯೆಹೋವನ ಸಮ್ಮುಖದಲ್ಲಿ ಹೊಯ್ದುಬಿಡಿರಿ.
ನಿಮ್ಮ ಕೈಗಳನ್ನು ಮೇಲೆತ್ತಿ ಯೆಹೋವನಿಗೆ ಪ್ರಾರ್ಥಿಸಿರಿ.
ನಿಮ್ಮ ಮಕ್ಕಳು ಬದುಕಲಿ ಎಂದು ಆತನನ್ನು ಕೇಳಿಕೊಳ್ಳಿರಿ.
ಹಸಿವೆಯಿಂದ ಮೂರ್ಛೆಹೋಗುತ್ತಿದ್ದ ನಿಮ್ಮ ಮಕ್ಕಳ ಪ್ರಾಣ ಉಳಿಯಲಿ ಎಂದು ಆತನನ್ನು ಪ್ರಾರ್ಥಿಸಿರಿ.
ಹಸಿವೆಯಿಂದ ಅವರು ನಗರದ ಎಲ್ಲ ಬೀದಿಗಳಲ್ಲಿ ಮೂರ್ಛೆಹೋಗುತ್ತಿದ್ದಾರೆ.
20 ನನ್ನ ಕಡೆಗೆ ನೋಡು. ನೀನು ಇಷ್ಟೆಲ್ಲ ಮಾಡಿದ್ದು ಯಾರಿಗೆ ಎಂಬುದನ್ನು ನೋಡು.
ನಾನು ನಿನಗೆ ಈ ಪ್ರಶ್ನೆಗಳನ್ನು ಕೇಳಬಯಸುತ್ತೇನೆ.
ಏನು, ಸ್ತ್ರೀಯರು ತಾವು ಹೆತ್ತ ಮಕ್ಕಳನ್ನೇ ತಿನ್ನಬೇಕೇ? ಸ್ತ್ರೀಯರು ತಾವು ಲಾಲನೆಪಾಲನೆ ಮಾಡಿದ ಮಕ್ಕಳನ್ನೇ ತಿನ್ನಬೇಕೇ?
ಯೆಹೋವನ ಪವಿತ್ರ ಆಲಯದಲ್ಲಿಯೇ ಯಾಜಕನನ್ನು ಮತ್ತು ಪ್ರವಾದಿಯನ್ನು ಕೊಲ್ಲಬೇಕೇ?
21 ಬೀದಿಗಳಲ್ಲಿ ತರುಣರು ಮತ್ತು ವೃದ್ಧರು
ನೆಲದ ಮೇಲೆ ಬಿದ್ದಿದ್ದಾರೆ.
ನನ್ನ ಯುವತಿಯರು ಮತ್ತು ಯುವಕರು
ಖಡ್ಗದಿಂದ ಹತರಾಗಿದ್ದಾರೆ.
ಯೆಹೋವನೇ, ನಿನಗೆ ಕೋಪಬಂದ ದಿನ ಅವರನ್ನು ಕೊಂದುಬಿಟ್ಟೆ;
ಕರುಣೆ ತೋರದೆ ಅವರನ್ನು ಸಂಹರಿಸಿದೆ.
22 ಭೀತಿಯು ಸುತ್ತಮುತ್ತಲಿಂದ
ನನ್ನ ಕಡೆಗೆ ಬರುವಂತೆ ನೀನು ಆಹ್ವಾನಿಸಿದೆ.
ಯೆಹೋವನ ಕೋಪದ ದಿನದಂದು
ಯಾರೂ ತಪ್ಪಿಸಿಕೊಳ್ಳಲಿಲ್ಲ.
ಯಾರೂ ಉಳಿಯಲಿಲ್ಲ.
ನಾನು ಸಾಕಿಸಲಹಿದವರನ್ನು ನನ್ನ ವೈರಿಯು ಸಂಹರಿಸಿದನು.