೪
ಯೋನನ ಕೋಪವೂ ದೇವರ ಕನಿಕರವೂ
೧ ಇದರಿಂದ ಯೋನನಿಗೆ ಬಹು ಬೇಸರವಾಯಿತು; ಅವನು ಬಹಳ ಸಿಟ್ಟುಗೊಂಡನು. ೨ ಆಗ ಅವನು ಯೆಹೋವನಿಗೆ ಮೊರೆಯಿಟ್ಟನು, “ಯೆಹೋವನೇ, ಲಾಲಿಸು, ನಾನು ಸ್ವದೇಶದಲ್ಲಿರುವಾಗಲೇ ಹೀಗಾಗುವುದೆಂದು ಹೇಳಿದೆನಷ್ಟೆ; ನೀನು ದಯೆಯೂ, ಕನಿಕರವೂ, ದೀರ್ಘಶಾಂತಿಯೂ, ಮಹಾಕೃಪೆಯೂ ಉಳ್ಳ ದೇವರು, ಮಾಡಬೇಕೆಂದಿದ್ದ ಕೇಡಿಗೆ ಮನಮರುಗುವವನು ಎಂದು ನಾನು ತಿಳಿದೇ, ತಾರ್ಷೀಷಿಗೆ ಓಡಿಹೋಗಲು ಪ್ರಯತ್ನಿಸಿದ್ದು. ೩ ಆದುದರಿಂದ ಯೆಹೋವನೇ, ನನ್ನ ಪ್ರಾಣವನ್ನು ತೆಗೆದುಕೋ; ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು” ಎಂದು ವಿಜ್ಞಾಪಿಸಿಕೊಂಡನು. ೪ ಅದಕ್ಕೆ ಯೆಹೋವನು, “ನೀನು ಸಿಟ್ಟುಗೊಳ್ಳುವುದು ಸರಿಯೋ?” ಎಂದು ಕೇಳಿದನು. ೫ ಅನಂತರ ಯೋನನು ಪಟ್ಟಣವನ್ನು ಬಿಟ್ಟು ಅದರ ಮೂಡಣದಲ್ಲಿ ಒಂದು ಗುಡಿಸಲನ್ನು ಮಾಡಿಕೊಂಡು ಪಟ್ಟಣವು ಏನಾಗುವುದೋ ಎಂದು ನೋಡುತ್ತಾ ಅದರ ನೆರಳಿನಲ್ಲಿ ಕುಳಿತುಕೊಂಡಿದ್ದನು. ೬ ಆಗ ದೇವರಾದ ಯೆಹೋವನು ಒಂದು ಸೋರೆಗಿಡವನ್ನು ಬೆಳೆಯುವಂತೆ ಮಾಡಿ ಅದು ಯೋನನ ತಲೆಗೆ ನೆರಳಾಗಿ ಅವನ ಮನೋವ್ಯಥೆಗೆ ಸಮಾಧಾನ ಬರುವಂತೆ ಮಾಡಿದನು. ಇದರಿಂದ ಯೋನನಿಗೆ ಬಹು ಸಂತೋಷವಾಯಿತು. ೭ ಮಾರನೆಯ ದಿನ ಮುಂಜಾನೆ ದೇವರು ಒಂದು ಹುಳಕ್ಕೆ ಆ ಸೋರೆಗಿಡವನ್ನು ಕೊರೆಯಲು ಅಪ್ಪಣೆ ಮಾಡಿದನು. ಆ ಗಿಡವು ಒಣಗಿಹೋಯಿತು. ೮ ಸೂರ್ಯನು ಉದಯಿಸಿದಾಗ ದೇವರು ಬಿಸಿಯಾದ ಮೂಡಣ ಗಾಳಿಯನ್ನು ಏರ್ಪಡಿಸಿದನು; ಬಿಸಿಲು ಯೋನನ ತಲೆಗೆ ಹೊಡೆಯಲು ಅವನು ಮೂರ್ಛೆಹೋಗುವವನಾಗಿ “ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು” ಎಂದು ಸಾಯಲು ಬಯಸಿದನು. ೯ ಆಗ ದೇವರು ಯೋನನಿಗೆ, “ನೀನು ಸೋರೆಗಿಡ ಒಣಗಿದ್ದಕ್ಕಾಗಿ ಸಿಟ್ಟುಗೊಳ್ಳುವುದು ಸರಿಯೋ?” ಎಂದು ಕೇಳಲು ಯೋನನು “ಹೌದು, ನಾನು ಸಾಯುವಷ್ಟು ಕಾಲ ಸಿಟ್ಟುಗೊಳ್ಳುವುದು ಸರಿಯೇ” ಎಂದು ಉತ್ತರಕೊಟ್ಟನು. ೧೦ ಅದಕ್ಕೆ ಯೆಹೋವನು “ನೀನು ಆ ಸೋರೆಗಿಡಕ್ಕಾಗಿ ಕಷ್ಟಪಡಲಿಲ್ಲ, ಬೆಳೆಯಿಸಲಿಲ್ಲ; ಅದು ಒಂದು ರಾತ್ರಿಯಲ್ಲಿ ಹುಟ್ಟಿ ಒಂದು ರಾತ್ರಿಯಲ್ಲಿ ನಾಶವಾಯಿತು; ೧೧ ಇಂಥ ಗಿಡಕ್ಕಾಗಿ ನೀನು ಕನಿಕರಪಡುವಾಗ ಎಡಗೈ ಬಲಗೈ ತಿಳಿಯದ ಒಂದು ಲಕ್ಷದ ಇಪ್ಪತ್ತು ಸಾವಿರ ಜನರು, ಅಪಾರ ಪಶುಪ್ರಾಣಿಗಳೂ ಇರುವ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರಪಡಬಾರದೋ?” ಎಂದನು.