೧೧
ಬಲಿಷ್ಟರ ಪತನ
೧ ಲೆಬನೋನೇ, ನಿನ್ನ ಬಾಗಿಲುಗಳನ್ನು ತೆರೆ, ಬೆಂಕಿಯು ನಿನ್ನ ದೇವದಾರುಗಳನ್ನು ನುಂಗಲಿ!
೨ ತುರಾಯಿ ಮರವೇ, ಗೋಳಾಡು! ದೇವದಾರು ಬಿದ್ದಿದೆ, ಶ್ರೇಷ್ಠವೃಕ್ಷಗಳು ನಾಶವಾಗಿವೆ.
ಬಾಷಾನಿನ ಅಲ್ಲೋನ್ ಮರಗಳೇ ಕಿರುಚಿರಿ! ನುಗ್ಗಲಾಗದ ದಟ್ಟವಾದ ವನವು ಉರುಳಿದೆ.
೩ ಆಹಾ, ಕುರುಬರು ಗೋಳಾಡುತ್ತಾರೆ! ಅವರ ಅತಿಶಯದ ಕಾವಲು ಹಾಳಾಗಿದೆ.
ಇಗೋ, ಪ್ರಾಯದ ಸಿಂಹಗಳು ಗರ್ಜಿಸುತ್ತವೆ! ಯೊರ್ದನಿನ ದಟ್ಟ ಅಡವಿಯು ಹಾಳಾಗಿದೆ.
ಒಳ್ಳೆಯ ಕುರುಬನಿಗಾಗುವ ತಿರಸ್ಕಾರ
೪ ನನ್ನ ದೇವರಾದ ಯೆಹೋವನು ಹೀಗೆ ಅಪ್ಪಣೆಕೊಟ್ಟನು, “ಕೊಯ್ಗುರಿಗಳ ಮಂದೆಯನ್ನು ಕಾಯಿ; ೫ ಕೊಂಡುಕೊಳ್ಳುವವರು ಅವುಗಳನ್ನು ಕೊಯ್ದರೂ ದೋಷಿಗಳೆಂದು ಎಣಿಸುವುದಿಲ್ಲ; ಮಾರುವವರು ಯೆಹೋವನಿಗೆ ಸ್ತೋತ್ರವಾಗಲಿ, ಧನವಂತರಾದೆವು ಅಂದುಕೊಳ್ಳುವರು. ಆ ಮಂದೆಯ ಕುರುಬರಾದರೂ ಅವುಗಳನ್ನು ಕರುಣಿಸುವುದಿಲ್ಲ.” ೬ ಯೆಹೋವನು ಇಂತೆನ್ನುತ್ತಾನೆ, “ನಾನು ಲೋಕನಿವಾಸಿಗಳನ್ನು ಇನ್ನು ಕರುಣಿಸೆನು; ಇಗೋ, ಪ್ರತಿಯೊಬ್ಬನನ್ನು ಅವನವನ ನೆರೆಯವನ ಕೈಗೂ, ಅರಸನ ಕೈಗೂ ಒಪ್ಪಿಸುವೆನು; ಆ ಬಲಿಷ್ಟರು ಲೋಕವನ್ನು ಪುಡಿಪುಡಿಮಾಡುವರು; ಅವರ ಕೈಗೆ ಸಿಕ್ಕಿದವರನ್ನು ಉದ್ಧರಿಸೆನು.”
೭ ಆಗ ನಾನು ದೀನಾವಸ್ಥೆಯಲ್ಲಿದ್ದ ಆ ಕೊಯ್ಗುರಿಗಳ ಮಂದೆಯನ್ನು ಮೇಯಿಸಿದೆನು. ಎರಡು ಕೋಲುಗಳನ್ನು ತೆಗೆದುಕೊಂಡು ಒಂದಕ್ಕೆ “ಕೃಪೆ” ಎಂತಲೂ ಇನ್ನೊಂದಕ್ಕೆ, “ಒಗ್ಗಟ್ಟು” ಎಂತಲೂ ಹೆಸರಿಟ್ಟು ಅವುಗಳಿಂದ ಮಂದೆಯನ್ನು ಮೇಯಿಸಿದೆನು. ೮ ಒಂದೇ ತಿಂಗಳೊಳಗೆ ಮೂವರು ಕುರುಬರನ್ನು ಅಡಗಿಸಿಬಿಟ್ಟೆನು; ಅನಂತರ ನನಗೆ ಕುರಿಗಳ ವಿಷಯವಾಗಿ ತಾಳ್ಮೆ ತಪ್ಪಿತು; ಅವುಗಳಿಂದ ನನಗೆ ಬೇಸರವಾಯಿತು. ೯ ಆಗ, “ನಾನು ನಿಮ್ಮನ್ನು ಮೇಯಿಸೆನು; ಸಾಯುವುದು ಸಾಯಲಿ, ಹಾಳಾಗುವುದು ಹಾಳಾಗಲಿ, ಉಳಿದವುಗಳು ಒಂದರ ಮಾಂಸವೊಂದನ್ನು ತಿನ್ನಲಿ ಅಂದುಕೊಂಡೆನು.”
೧೦ ಆಗ ನಾನು ಎಲ್ಲಾ ಜನಾಂಗಗಳೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಭಂಗಪಡಿಸಬೇಕೆಂದು “ಕೃಪೆ” ಎಂಬ ನನ್ನ ಕೋಲನ್ನು ತೆಗೆದು ಕತ್ತರಿಸಿಬಿಟ್ಟೆನು. ಆಗಲೇ ಮುರಿದುಹೋಯಿತು; ೧೧ ಇದರಿಂದ ಆ ದೀನವಾದ ಮಂದೆಯಲ್ಲಿ ನನ್ನನ್ನು ಲಕ್ಷಿಸುತ್ತಿದ್ದ ಕುರಿಗಳು, ಇದು ಯೆಹೋವನ ನುಡಿ ಎಂದು ತಿಳಿದುಕೊಂಡವು. ೧೨ ಅನಂತರ ನಾನು ನಿಮಗೆ, “ಸರಿಯಾಗಿ ತೋರಿದರೆ ನನಗೆ ಸಂಬಳವನ್ನು ಕೊಡಿರಿ ಇಲ್ಲವಾದರೆ ಬಿಡಿರಿ” ಅನ್ನಲು ಅವರು ಮೂವತ್ತು ತೊಲೆ ಬೆಳ್ಳಿಯನ್ನು ತೂಗಿ ನನ್ನ ಸಂಬಳಕ್ಕಾಗಿ ಕೊಟ್ಟರು.
೧೩ ಅವರು ಇವನ ಯೋಗ್ಯತೆ ಇಷ್ಟೇ ಎಂದುಕೊಂಡು ನನಗೆ ಕೊಟ್ಟ ಆ ಬಾರೀ ಸಂಬಳವನ್ನು ಯೆಹೋವನು ನೋಡಿ, “ಅದನ್ನು ಡಬ್ಬಿಗೆ ಹಾಕು” ಎಂದು ಅಪ್ಪಣೆ ಮಾಡಿದಾಗ ನಾನು ಆ ಮೂವತ್ತು ತೊಲ ಬೆಳ್ಳಿಯನ್ನು ತೆಗೆದು ಯೆಹೋವನ ಆಲಯದ ಡಬ್ಬಿಗೆ ಹಾಕಿದೆನು. ೧೪ ಕೂಡಲೆ ಯೆಹೂದಕ್ಕೂ, ಇಸ್ರಾಯೇಲಿಗೂ ಇದ್ದ ಸಹೋದರಭಾವವನ್ನು ಭಂಗಪಡಿಸಬೇಕೆಂದು “ಒಗ್ಗಟ್ಟು” ಎಂಬ ನನ್ನ ಎರಡನೆಯ ಕೋಲನ್ನು ಮುರಿದುಬಿಟ್ಟೆನು.
ಮೂರ್ಖನಾದ ಕುರುಬನು
೧೫ ಆ ಮೇಲೆ ಯೆಹೋವನು ನನಗೆ ಹೀಗೆ ಅಪ್ಪಣೆ ಮಾಡಿದನು, “ನೀನು ಮತ್ತೊಮ್ಮೆ ತಕ್ಕ ಸಲಕರಣೆಗಳನ್ನು ತೆಗೆದುಕೊಂಡು ಮೂರ್ಖಕುರುಬನಂತೆ ನಟಿಸು. ೧೬ ಇಗೋ, ದೇಶದಲ್ಲಿ ನಾನು ಒಬ್ಬ ಕುರುಬನನ್ನು ನೇಮಿಸುವೆನು; ಅವನು ಹಾಳಾಗುತ್ತಿರುವ ಕುರಿಗಳನ್ನು ನೋಡಿಕೊಳ್ಳನು, ಚದುರಿದವುಗಳನ್ನು ಹುಡುಕನು, ಊನವಾದವುಗಳನ್ನು ಗುಣಪಡಿಸನು, ನೆಟ್ಟಗಿರುವವುಗಳನ್ನು ಸಾಕನು; ಕೊಬ್ಬಿದವುಗಳ ಮಾಂಸವನ್ನು ತಿನ್ನುವನು, ಕುರಿಗಳ ಗೊರಸುಗಳನ್ನು ಚೂರುಚೂರು ಮಾಡುವನು.
೧೭ ಮಂದೆಯನ್ನು ಕಾಯದೆ ಬಿಟ್ಟು ಬಿಟ್ಟ ಕುರುಬನ ಗತಿಯನ್ನು ಏನು ಹೇಳಲಿ?
ಖಡ್ಗವು ಅವನ ತೋಳಿಗೂ, ಬಲಗಣ್ಣಿಗೂ ತಾಗುವುದು;
ಅವನ ತೋಳು ತೀರಾ ಒಣಗಿಹೋಗುವುದು. ಅವನ ಬಲಗಣ್ಣು ಪೂರಾ ಮೊಬ್ಬಾಗುವುದು.”