Ruth
ರೂತಳು
೧
ರೂತಳು ಅತ್ತೆಯೊಡನೆ ಯೆಹೂದ ದೇಶಕ್ಕೆ ಬಂದದ್ದು
೧ ನ್ಯಾಯಸ್ಥಾಪಕರು ಆಳುತ್ತಿದ್ದ ಕಾಲದಲ್ಲಿ ಒಮ್ಮೆ ದೇಶದಲ್ಲಿ ಬರ ಬಂದಿದ್ದರಿಂದ ಯೆಹೂದ ಪ್ರಾಂತದ ಬೇತ್ಲೆಹೇಮಿನವನೊಬ್ಬನು ತನ್ನ ಹೆಂಡತಿ, ಇಬ್ಬರು ಪುತ್ರರ ಸಹಿತವಾಗಿ ಮೋವಾಬ್ ದೇಶದಲ್ಲಿ ವಾಸಮಾಡುವುದಕ್ಕಾಗಿ ಹೊರಟುಹೋದನು. ೨ ಆ ಮನುಷ್ಯನ ಹೆಸರು ಎಲೀಮೆಲೆಕ, ಅವನ ಹೆಂಡತಿ ನೊವೊಮಿ. ಅವನ ಇಬ್ಬರು ಮಕ್ಕಳ ಹೆಸರು ಮಹ್ಲೋನ್ ಮತ್ತು ಕಿಲ್ಯೋನ್. ಯೆಹೂದ ದೇಶಕ್ಕೆ ಸೇರಿದ ಎಫ್ರಾತದಲ್ಲಿರುವ ಬೇತ್ಲೆಹೇಮಿನವರಾದ ಇವರು ಮೋವಾಬ್ ದೇಶದಲ್ಲಿ ಬಂದು ವಾಸವಾಗಿದ್ದಾಗ ೩ ನೊವೊಮಿಯ ಗಂಡನಾದ ಎಲೀಮೆಲೆಕನು ಮರಣ ಹೊಂದಿದನು. ಆಕೆಯು ಇಬ್ಬರು ಮಕ್ಕಳೊಡನೆ ಅಲ್ಲಿಯೇ ಉಳಿದಳು. ೪ ಈ ಮಕ್ಕಳು ಒರ್ಫಾ, ರೂತ್ ಎಂಬ ಹೆಸರಿನ ಮೋವಾಬ್ ಸ್ತ್ರೀಯರನ್ನು ಮದುವೆಮಾಡಿಕೊಂಡು ಸುಮಾರು ಹತ್ತು ವರುಷಗಳ ಕಾಲ ಅಲ್ಲಿ ವಾಸವಾಗಿದ್ದರು. ೫ ಅವರು ಅಲ್ಲಿದ್ದಾಗ ನೊವೊಮಿಯ ಮಕ್ಕಳಾದ ಮಹ್ಲೋನ್ ಮತ್ತು ಕಿಲ್ಯೋನ್ ಇಬ್ಬರೂ ತೀರಿಹೋದರು. ಹೀಗೆ ನೊವೊಮಿ ಗಂಡನನ್ನೂ, ಇಬ್ಬರು ಮಕ್ಕಳನ್ನೂ ಕಳೆದುಕೊಂಡು ಸೊಸೆಯರೊಂದಿಗೆ ಅಲ್ಲೇ ಉಳಿದಳು.
೬ ಯೆಹೋವನು ತನ್ನ ಜನರನ್ನು ಸಂದರ್ಶಿಸಿ ಅವರಿಗೆ ಆಹಾರವನ್ನು ಅನುಗ್ರಹಿಸಿದ್ದಾನೆಂಬ ವರ್ತಮಾನವನ್ನು ಕೇಳಿದ ನೊವೊಮಿಯು ತನ್ನ ಸೊಸೆಯರೊಡನೆ ಮೋವಾಬ್ ದೇಶದಿಂದ ಯೆಹೂದ ದೇಶಕ್ಕೆ ಹೋಗಬೇಕೆಂದು ನಿರ್ಧರಿಸಿದಳು. ೭ ಆಕೆಯು ಇಬ್ಬರು ಸೊಸೆಯರೊಡನೆ ತಾನಿದ್ದ ಸ್ಥಳದಿಂದ ಯೆಹೂದ ದೇಶಕ್ಕೆ ಹೋಗುವ ದಾರಿಯಲ್ಲಿ ಹೋಗುತ್ತಿರುವಾಗ ೮ ಅವರಿಗೆ, “ನೀವು ತಿರುಗಿ ನಿಮ್ಮ ನಿಮ್ಮ ತವರುಮನೆಗಳಿಗೆ ಹೋಗಿರಿ, ನೀವು ನನ್ನನ್ನೂ, ಮರಣಹೊಂದಿದ ನನ್ನ ಮಕ್ಕಳನ್ನು ಪ್ರೀತಿಸಿದಂತೆ ಯೆಹೋವನು ನಿಮ್ಮನ್ನು ಪ್ರೀತಿಸಿ ನಿಮಗೆ ಕೃಪೆತೋರಿಸಲಿ. ೯ ನೀವಿಬ್ಬರೂ ಮದುವೆಯಾಗಿ ಗಂಡನ ಮನೆಯಲ್ಲಿ ಸುಖವಾಗಿರುವಂತೆ ಯೆಹೋವನು ಅನುಗ್ರಹಿಸಲಿ” ಎಂದು ಹೇಳಿ ಅವರಿಗೆ ಮುದ್ದಿಟ್ಟಳು. ೧೦ ಆಗ ಅವರು ಬಹಳ ದುಃಖದಿಂದ ಗಟ್ಟಿಯಾಗಿ ಅತ್ತು ನಾವೂ ನಿನ್ನ ಜೊತೆಯಲ್ಲೇ ನಿನ್ನ ಸ್ವಜನರ ಬಳಿಗೆ ಬರುತ್ತೇವೆ ಅನ್ನಲು, ೧೧ ಆಕೆಯು, “ನನ್ನ ಮಕ್ಕಳೇ, ನೀವು ನನ್ನೊಡನೆ ಬರುವುದೇಕೆ? ಹಿಂದಿರುಗಿ ಹೋಗಿರಿ. ನಿಮಗೆ ಗಂಡಂದಿರನ್ನು ಕೊಡುವುದಕ್ಕೆ ನನ್ನ ಗರ್ಭದಲ್ಲಿ ಬೇರೆ ಮಕ್ಕಳಿಲ್ಲವಲ್ಲಾ. ೧೨ ನಾನು ಮತ್ತೊಬ್ಬನನ್ನು ಪುನಃ ಮದುವೆಮಾಡಿಕೊಳ್ಳುವ ಪ್ರಾಯವೂ ನನಗೆ ದಾಟಿಹೋಗಿದೆ. ಆದುದರಿಂದ ನನ್ನ ಮಕ್ಕಳೇ, ನೀವು ಹಿಂದಿರುಗಿ ಹೋಗಿರಿ. ಒಂದು ವೇಳೆ ಆ ನಿರೀಕ್ಷೆಯಿಂದ ಈ ಹೊತ್ತೇ ನಾನು ಪುನಃ ಮದುವೆಯಾಗಿ ಮಕ್ಕಳನ್ನು ಹೆತ್ತರೂ, ೧೩ ಅವರು ದೊಡ್ಡವರಾಗುವ ತನಕ ನೀವು ಕಾದಿರುವಿರೋ? ಅಲ್ಲಿಯ ವರೆಗೂ ಗಂಡಂದಿರಿಲ್ಲದೆ ಇರುವಿರೋ? ನನ್ನ ಮಕ್ಕಳೇ, ಹಾಗೆ ಮಾಡಬೇಡಿರಿ; ಯೆಹೋವನ ಹಸ್ತವು ನನ್ನಿಂದ ದೂರವಾಗಿರುವುದರಿಂದ ನಾನು ನಿಮಗಿಂತ ಹೆಚ್ಚಾಗಿ ದುಃಖಪಡುತ್ತೇನೆ, ಅಂದಳು. ೧೪ ಆಗ ಅವರು ಬಹಳವಾಗಿ ದುಃಖಿಸಿ ಗಟ್ಟಿಯಾಗಿ ಅತ್ತರು. ಒರ್ಫಳು ಅತ್ತೆಯನ್ನು ಮುದ್ದಿಟ್ಟು ಹೊರಟು ತನ್ನ ತವರಿಗೆ ಹೋದಳು; ರೂತಳಾದರೋ ಅತ್ತೆಯನ್ನು ತೊರೆದುಹೋಗದೆ ಅವಳೊಂದಿಗೇ ಇದ್ದಳು. ೧೫ ನೊವೊಮಿಯು ರೂತಳಿಗೆ, ಇಗೋ, ನಿನ್ನ ಓರಗಿತ್ತಿಯು ತಿರುಗಿ ತನ್ನ ಜನರ ಬಳಿಗೂ, ತನ್ನ ಕುಲದೇವರುಗಳ ಬಳಿಗೂ ಹೋಗಿದ್ದಾಳೆ. ನೀನೂ ಆಕೆಯಂತೆ ನಿನ್ನ ಜನರ ಬಳಿಗೆ ಹೋಗು ಅಂದಾಗ, ೧೬ ಆಕೆಯು, “ನಿನ್ನನ್ನು ಬಿಟ್ಟು ಹಿಂದಿರುಗಿ ಹೋಗಬೇಕೆಂದು ನನ್ನನ್ನು ಒತ್ತಾಯಪಡಿಸಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು. ೧೭ ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲೇ ನನಗೆ ಸಮಾಧಿಯಾಗಬೇಕು. ಮರಣದಿಂದಲ್ಲದೆ ನಾನು ನಿನ್ನನ್ನು ಅಗಲಿದರೆ ಯೆಹೋವನು ನನ್ನನ್ನು ಹೆಚ್ಚಾಗಿ ಶಿಕ್ಷಿಸಲಿ” ಎಂದಳು. ೧೮ ಆಕೆಯು ತನ್ನ ಜೊತೆಯಲ್ಲಿ ಬರುವುದಕ್ಕೆ ನಿರ್ಧರಿಸಿದ್ದಾಳೆಂದು ನೊವೊಮಿಯು ತಿಳಿದು ಸುಮ್ಮನಾದಳು. ೧೯ ಹಾಗೆಯೇ ಪ್ರಯಾಣಮಾಡಿಕೊಂಡು ಅವರಿಬ್ಬರೂ ಬೇತ್ಲೆಹೇಮಿಗೆ ಬಂದು ಊರೊಳಕ್ಕೆ ಹೋದಾಗ ಅಲ್ಲಿಯ ಜನರಲ್ಲಿ ಕುತೂಹಲ ಮೂಡಿತು. ಸ್ತ್ರೀಯರು, “ಈಕೆಯು ನೊವೊಮಿಯಲ್ಲವೇ?” ಎಂದು ವಿಚಾರಿಸಲು ೨೦ ಆಕೆಯು ಅವರಿಗೆ, “ನನ್ನನ್ನು ನೊವೊಮಿಯೆಂದು ಕರೆಯಬೇಡಿರಿ; ನನ್ನನ್ನು ‘ಮಾರಾ’ (ಕಹಿ) ಎಂದು ಕರೆಯಿರಿ. ಏಕೆಂದರೆ, ಸರ್ವಶಕ್ತನಾದ ದೇವರು ಬಹಳ ತೀಕ್ಷ್ಣವಾಗಿ ನನ್ನ ಜೀವಿತವನ್ನು ಮಾರ್ಪದಿಸಿದ್ದಾನೆ. ೨೧ ಸಿರಿವಂತಳಾಗಿ ಹೋದೆನು; ಯೆಹೋವನು ನನ್ನನ್ನು ಗತಿಹೀನಳನ್ನಾಗಿ ಹಿಂತಿರುಗುವಂತೆ ಮಾಡಿದನು. ಯೆಹೋವನು ನನಗೆ ವಿರೋಧವಾಗಿದ್ದಾನೆ, ಸರ್ವಶಕ್ತನು ನನ್ನನ್ನು ಭಾದಿಸಿದ್ದಾನೆ. ಹೀಗಿರುವಾಗ ನೀವು ನನ್ನನ್ನು ನೊವೊಮಿಯೆಂದು ಕರೆಯುವುದು ಸರಿಯೇ” ಅಂದಳು.
೨೨ ಹೀಗೆ, ನೊವೊಮಿಯು ಮೋವಾಬ್ಯಳಾದ ತನ್ನ ಸೊಸೆ ರೂತಳೊಡನೆ ಬೇತ್ಲೆಹೇಮಿಗೆ ಬಂದಳು. ಆಗ ಜವೆಗೋದಿಯ ಸುಗ್ಗಿಯು ಪ್ರಾರಂಭವಾಗಿತ್ತು.