೩೧
ಇಸ್ರಾಯೇಲರು ಮಿದ್ಯಾನ್ಯರನ್ನು ಸಂಹರಿಸಿದ್ದು
೧ ಯೆಹೋವನು ಮೋಶೆಯ ಸಂಗಡ ಮಾತನಾಡಿ, ೨ “ನೀನು ಇಸ್ರಾಯೇಲರಿಗೋಸ್ಕರ ಮಿದ್ಯಾನ್ಯರಿಗೆ ಪ್ರತಿದಂಡನೆಯನ್ನು ಮಾಡಬೇಕು. ಅನಂತರ ನೀನು ಪಿತೃಗಳ ಬಳಿಗೆ ಸೇರಬೇಕು” ಎಂದು ಹೇಳಿದನು.
೩ ಆಗ ಮೋಶೆಯು ಇಸ್ರಾಯೇಲರಿಗೆ, “ನಿಮ್ಮೊಳಗಿಂದ ಕೆಲವರು ಮಿದ್ಯಾನ್ಯರಿಗೆ ವಿರುದ್ಧವಾಗಿ ಯುದ್ಧಕ್ಕೆ ಸಿದ್ಧಮಾಡಿಕೊಳ್ಳಬೇಕು. ಯೆಹೋವನ ಪ್ರತಿದಂಡನೆಯನ್ನು ಅವರಿಗೆ ತೀರಿಸಬೇಕು. ೪ ಇಸ್ರಾಯೇಲರ ಒಂದೊಂದು ಕುಲದಿಂದ ಸಾವಿರ ಜನ ಭಟರನ್ನು ಮಿದ್ಯಾನ್ಯರಿಗೆ ವಿರುದ್ಧವಾಗಿ ಯುದ್ಧಕ್ಕೆ ಕಳುಹಿಸಬೇಕು.” ೫ ಆದಕಾರಣ ಇಸ್ರಾಯೇಲರು ಕುಲವೊಂದಕ್ಕೆ ಸಾವಿರ ಮಂದಿಯ ಮೇರೆಗೆ ಯುದ್ಧಕ್ಕೆ ಸನ್ನದ್ಧರಾದ ಹನ್ನೆರಡು ಸಾವಿರ ಮಂದಿಯನ್ನು ಎಣಿಕೆಮಾಡಿ ಕಳುಹಿಸಿದರು.
೬ ಮೋಶೆಯು ಇವರನ್ನು ಯುದ್ಧಕ್ಕೆ ಕಳುಹಿಸುವಾಗ ಕುಲವೊಂದಕ್ಕೆ ಸಾವಿರ ಭಟರನ್ನು, ಮಹಾಯಾಜಕನಾದ ಎಲ್ಲಾಜಾರನ ಮಗನಾದ ಫೀನೆಹಾಸನನ್ನು, ದೇವರ ಸಾಮಾನುಗಳನ್ನೂ, ಆಜ್ಞಾತುತೂರಿಗಳನ್ನೂ ತೆಗೆದುಕೊಂಡು ಅವರೊಡನೆ ಹೋಗಬೇಕೆಂದು ಆಜ್ಞಾಪಿಸಿದನು.
೭ ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಅವರು ಮಿದ್ಯಾನ್ಯರೊಡನೆ ಯುದ್ಧಮಾಡಿ ಗಂಡಸರೆಲ್ಲರನ್ನೂ ಸಂಹಾರಮಾಡಿದರು. ೮ ಖಡ್ಗದಿಂದ ಹತರಾದವರಲ್ಲಿ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬ ಮಿದ್ಯಾನ್ಯರ ಐದು ಮಂದಿ ರಾಜರು ಇದ್ದರು. ಅದಲ್ಲದೆ ಬೆಯೋರನ ಮಗನಾದ ಬಿಳಾಮನನ್ನು ಕೊಂದುಬಿಟ್ಟರು.
೯ ಇಸ್ರಾಯೇಲರು ಮಿದ್ಯಾನ್ಯರ ಎಲ್ಲಾ ಹೆಂಗಸರನ್ನೂ, ಮಕ್ಕಳನ್ನೂ ಸೆರೆಹಿಡಿದು ಎಲ್ಲಾ ದನಕುರಿಗಳನ್ನೂ, ಆಸ್ತಿಯನ್ನೂ ಸೂರೆಮಾಡಿದರು. ೧೦ ಅವರು ಇದ್ದ ಎಲ್ಲಾ ಊರುಗಳನ್ನೂ, ಪಾಳೆಯಗಳನ್ನೂ ಸುಟ್ಟುಬಿಟ್ಟರು. ೧೧ ಒಂದನ್ನೂ ಬಿಡದೆ ಮನುಷ್ಯರನ್ನೂ, ಪಶುಗಳನ್ನೂ ಸೆರೆಹಿಡಿದರು. ೧೨ ಮತ್ತು ಅವರು ಸೆರೆಯವರನ್ನೂ, ಪಶುಗಳನ್ನೂ, ಆಸ್ತಿಯನ್ನೂ ತೆಗೆದುಕೊಂಡು ಯೆರಿಕೋ ಪಟ್ಟಣದ ಎದುರಾಗಿ ಯೊರ್ದನ್ ನದಿಯ ತೀರದಲ್ಲಿ ಮೋವಾಬ್ಯರ ಮೈದಾನದಲ್ಲಿದ್ದ ಪಾಳೆಯಕ್ಕೆ ಮೋಶೆ, ಮಹಾಯಾಜಕನಾದ ಎಲ್ಲಾಜಾರ್ ಮತ್ತು ಇಸ್ರಾಯೇಲರ ಸರ್ವಸಮೂಹದವರ ಬಳಿಗೆ ಬಂದರು.
೧೩ ಮೋಶೆಯೂ, ಮಹಾಯಾಜಕನಾದ ಎಲ್ಲಾಜಾರನೂ, ಸಮೂಹದ ಪ್ರಧಾನರೂ ಪಾಳೆಯದ ಹೊರಗೆ ಹೋಗಿ ಅವರನ್ನು ಎದುರುಗೊಂಡರು.
೧೪ ಆಗ ಮೋಶೆಯು ಯುದ್ಧ ಭೂಮಿಯಿಂದ ಬಂದ ಸೈನ್ಯದ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಮೇಲೆ ಕೋಪಗೊಂಡನು.
೧೫ ಮೋಶೆಯು ಅವರಿಗೆ, “ನೀವು ಹೆಂಗಸರನ್ನೆಲ್ಲಾ ಉಳಿಸಿದ್ದೇನು? ೧೬ ಪೆಗೋರದ ಬಾಳನ ಸಂಗತಿಯಲ್ಲಿ ಬಿಳಾಮನ ಆಲೋಚನೆಯನ್ನು ಅನುಸರಿಸಿ ಇಸ್ರಾಯೇಲರನ್ನು ಯೆಹೋವನಿಗೆ ದ್ರೋಹಿಗಳನ್ನಾಗಿ ಮಾಡಿ ಸಮೂಹದವರಲ್ಲಿ ಘೋರವ್ಯಾಧಿ ಉಂಟಾಗುವಂತೆ ಮಾಡಿದವರು ಇವರೇ ಅಲ್ಲವೇ. ೧೭ ಆದಕಾರಣ ನೀವು ಈ ಗುಂಪಿನಲ್ಲಿರುವ ಎಲ್ಲಾ ಗಂಡು ಮಕ್ಕಳನ್ನೂ, ಪುರುಷ ಸಂಗಮಾಡಿದ ಎಲ್ಲಾ ಹೆಂಗಸರನ್ನೂ ಕೊಲ್ಲಬೇಕು. ೧೮ ಪುರುಷ ಸಂಗಮಾಡದಿರುವ ಕನ್ಯೆಯರನ್ನು ನಿಮಗೋಸ್ಕರ ಉಳಿಸಿಕೊಳ್ಳಬೇಕು. ೧೯ ನೀವಾದರೋ ಏಳು ದಿನದವರೆಗೂ ಪಾಳೆಯದ ಹೊರಗೆ ಇರಬೇಕು. ಮನುಷ್ಯ ಪ್ರಾಣತೆಗೆದವರೂ, ಶವಸೋಂಕಿದವರೂ, ನಿಮ್ಮವರಾದರೂ, ಸೆರೆಯವರಾದರೂ ಮೂರನೆಯ ಮತ್ತು ಏಳನೆಯ ದಿನಗಳಲ್ಲಿ ದೋಷಪರಿಹಾರಮಾಡಿಕೊಳ್ಳಬೇಕು. ೨೦ ಅದಲ್ಲದೆ ಎಲ್ಲಾ ಬಟ್ಟೆಗಳನ್ನೂ, ತೊಗಲಿನ ಸಾಮಾನನ್ನೂ, ಮೇಕೆ ಕೂದಲಿನ ವಸ್ತ್ರಗಳನ್ನು ಮರದ ವಸ್ತುಗಳನ್ನು ಶುದ್ಧ ಮಾಡಿಕೊಳ್ಳಬೇಕು” ಎಂದು ಹೇಳಿದನು.
೨೧ ಮಹಾಯಾಜಕನಾದ ಎಲ್ಲಾಜಾರನು ಯುದ್ಧಕ್ಕೆ ಹೋಗಿದ್ದ ಭಟರಿಗೆ ಹೀಗೆಂದನು, “ಯೆಹೋವನು ಮೋಶೆಗೆ ಅಪ್ಪಣೆಮಾಡಿದ ನಿಯಮ ಏನೆಂದರೆ, ೨೨ ಬೆಂಕಿಯನ್ನು ತಡೆಯುವ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ, ಸೀಸ ಮೊದಲಾದವುಗಳನ್ನು ಬೆಂಕಿದಾಟಿಸಿ ಶುದ್ಧಮಾಡಬೇಕು, ೨೩ ಅವುಗಳನ್ನು ಹೊಲೆ ಹೋಗಲಾಡಿಸುವ ನೀರಿನಿಂದಲೂ ಶುದ್ಧಮಾಡಬೇಕು. ಬೆಂಕಿಯಿಂದ ಸುಡಲಾರದ ವಸ್ತುಗಳನ್ನು ನೀರಿನಿಂದ ತೊಳೆದು ಶುದ್ಧಮಾಡಬೇಕು. ೨೪ ಏಳನೆಯ ದಿನದಲ್ಲಿ ನಿಮ್ಮ ಬಟ್ಟೆಗಳನ್ನು ಒಗೆದುಕೊಂಡ ನಂತರ ಶುದ್ಧರಾಗುವಿರಿ. ಆ ಮೇಲೆ ನೀವು ಪಾಳೆಯದೊಳಗೆ ಬರಬಹುದು” ಎಂದು ಹೇಳಿದನು.
೨೫ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, ೨೬ “ನೀನೂ, ಮಹಾಯಾಜಕನಾದ ಎಲ್ಲಾಜಾರನೂ, ಕುಲಾಧಿಪತಿಗಳೂ ಸಮೂಹದವರ ಕೈಗೆ ಸಿಕ್ಕಿದ ಮನುಷ್ಯರನ್ನೂ, ಪಶುಗಳನ್ನೂ ಲೆಕ್ಕಿಸಿ, ೨೭ ಒಟ್ಟು ಎರಡು ಭಾಗಮಾಡಿ ಯುದ್ಧಕ್ಕೆ ಹೋದ ಭಟರಿಗೆ ಅರ್ಧವನ್ನೂ, ಮಿಕ್ಕ ಸಮೂಹದವರಿಗೆ ಅರ್ಧವನ್ನೂ ಹಂಚಿಕೊಡಬೇಕು. ೨೮ ಯುದ್ಧಕ್ಕೆ ಹೋದ ಭಟರಿಗೆ ಬರುವ ಭಾಗದಿಂದ ಮನುಷ್ಯ, ದನ, ಕತ್ತೆ, ಆಡು, ಕುರಿ ಇವುಗಳಲ್ಲಿ ನೀನು ಐನೂರರಲ್ಲಿ ಒಂದರ ಮೇರೆಗೆ ಯೆಹೋವನಿಗೆ ಕಪ್ಪವನ್ನು ಎತ್ತಬೇಕು. ೨೯ ಅವರ ಅರ್ಧಪಾಲಿನಿಂದ ಅದನ್ನು ತೆಗೆದುಕೊಂಡು ಯೆಹೋವನಿಗೆ ಅರ್ಪಣೆಯಾಗಿ ಮಹಾಯಾಜಕನಾದ ಎಲ್ಲಾಜಾರನಿಗೆ ಒಪ್ಪಿಸಬೇಕು. ೩೦ ಉಳಿದ ಇಸ್ರಾಯೇಲರಿಗೆ ಬರುವ ಭಾಗದಿಂದ ಮನುಷ್ಯ, ದನ, ಕತ್ತೆ, ಆಡು, ಕುರಿ ಇವುಗಳಲ್ಲಿ ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಂಡು ಯೆಹೋವನ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಡಬೇಕು” ಎಂದು ಆಜ್ಞಾಪಿಸಿದನು. ೩೧ ಯೆಹೋವನ ಅಪ್ಪಣೆಯ ಮೇರೆಗೆ ಮೋಶೆಯೂ, ಮಹಾಯಾಜಕನಾದ ಎಲ್ಲಾಜಾರನೂ ಮಾಡಿದರು.
೩೨ ಭಟರು ತಂದ ಸುಲಿಗೆಯಲ್ಲಿ ಹಂಚಿಕೊಳ್ಳುವುದಕೋಸ್ಕರ ಉಳಿದದ್ದು ಎಷ್ಟೆಂದರೆ: ಕುರಿಗಳು - 675,000,
೩೩ ದನಗಳು - 72,000,
೩೪ ಕತ್ತೆಗಳು - 61,000,
೩೫ ಕನ್ಯೆಯರು - 32,000.
೩೬ ಯುದ್ಧಕ್ಕೆ ಹೋಗಿದ್ದ ಭಟರಿಗೆ ದೊರಕಿದ ಅರ್ಧ ಭಾಗವಾಗಿರುವ ಕುರಿಗಳು - 3,37,500.
೩೭ ಕುರಿಗಳಿಂದ ಯೆಹೋವನಿಗೆ ಬಂದ ಕಪ್ಪ - 675.
೩೮ ಹಾಗೆಯೇ ಅವರಿಗೆ ದೊರಕಿದ 36,000, ಎತ್ತುಗಳಲ್ಲಿ ಯೆಹೋವನಿಗೆ ಬಂದ ಕಪ್ಪ - 72.
೩೯ ಕತ್ತೆಗಳಲ್ಲಿ - 30,500 ಯೆಹೋವನಿಗೆ ಬಂದ ಕಪ್ಪ - 61 ೪೦ 16,000 ಕನ್ಯೆಯರಲ್ಲಿ- ಯೆಹೋವನಿಗೆ ಬಂದ ಕಪ್ಪ - 32 ಕನ್ಯೆಯರು. ೪೧ ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಆ ಕಪ್ಪವನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಮಹಾಯಾಜಕನಾದ ಎಲ್ಲಾಜಾರನಿಗೆ ಒಪ್ಪಿಸಿದನು.
೪೨ ಇಸ್ರಾಯೇಲರ ಭಟರು ತಂದ ಸುಲಿಗೆಯಲ್ಲಿ ಮೋಶೆ ಪ್ರತ್ಯೇಕಿಸಿದ ಹಂಚಿದ ಅರ್ಧ ಭಾಗದ ೪೩ ಎಷ್ಟೆಂದರೆ - 337,500 ಆಡುಕುರಿಗಳು.
೪೪ ಎತ್ತುಗಳು - 36,000,
೪೫ ಕತ್ತೆಗಳು - 30,500,
೪೬ ಕನ್ಯೆಯರು - 16,000, ಇಷ್ಟು ಇಸ್ರಾಯೇಲ ಸಮೂಹದವರ ಪಾಲಿಗೆ ಬಂದವು.
೪೭ ಇವುಗಳಲ್ಲಿ ಮೋಶೆಯು ಯೆಹೋವನ ಅಪ್ಪಣೆಯ ಪ್ರಕಾರ ಇಸ್ರಾಯೇಲರಲ್ಲಿ ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಂಡು ಯೆಹೋವನ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಟ್ಟನು.
೪೮ ಆಗ ದಂಡಿನ ಸಹಸ್ರಾಧಿಪತಿಗಳೂ ಮೋಶೆಯ ಬಳಿಗೆ ಬಂದು ಅವನಿಗೆ, ೪೯ “ನಿನ್ನ ದಾಸರಾದ ನಾವು ನಮ್ಮ ಅಧಿಕಾರದೊಳಗೆ ಇದ್ದ ಭಟರನ್ನು ಲೆಕ್ಕಿಸಲಾಗಿ ಒಬ್ಬನಾದರೂ ಕಡಿಮೆಯಾಗಿಲ್ಲವೆಂದು ಗೊತ್ತಾಯಿತು. ೫೦ ಆದಕಾರಣ ಯೆಹೋವನು ಕಾಪಾಡಿದ ನಮ್ಮ ಪ್ರಾಣಗಳಿಗೆ ಈಡಾಗಿ ಆತನಿಗೋಸ್ಕರ ಪ್ರಾಯಶ್ಚಿತ್ತ ಕಾಣಿಕೆಯಾಗಿ ನಮ್ಮಲ್ಲಿ ಒಬ್ಬೊಬ್ಬನು ತನಗೆ ಸಿಕ್ಕಿದ ಚಿನ್ನದ ಒಡವೆಗಳಲ್ಲಿ ತೋಳ್ಬಳೆ, ಕಡಗ, ಮುದ್ರೆಯುಂಗರ, ಮುರುವು, ಕಂಠಮಾಲೆ ಮುಂತಾದವುಗಳನ್ನು ತಂದಿದ್ದೇವೆ” ಎಂದರು. ೫೧ ಅವರು ಕೊಟ್ಟ ಆ ಚಿನ್ನದ ಒಡವೆಗಳನ್ನು ಮೋಶೆಯೂ, ಮಹಾಯಾಜಕ ಎಲ್ಲಾಜಾರನೂ ತೆಗೆದುಕೊಂಡರು. ಅವುಗಳೆಲ್ಲಾ ವಿಚಿತ್ರವಾದ ಆಭರಣಗಳು.
೫೨ ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸಿದ ಕಾಣಿಕೆಯ ಒಟ್ಟು ತೂಕ - 16,750 ತೊಲೆ. ೫೩ ಅದಲ್ಲದೆ ದಂಡಿನವರೆಲ್ಲರೂ ಸ್ವಂತಕ್ಕಾಗಿ ಲೂಟಿಯನ್ನು ತೆಗೆದುಕೊಂಡರು. ೫೪ ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ, ಕೊಟ್ಟ ಚಿನ್ನವನ್ನು ಮೋಶೆಯೂ, ಮಹಾಯಾಜಕ ಎಲ್ಲಾಜಾರನೂ ತೆಗೆದುಕೊಂಡು ಇಸ್ರಾಯೇಲರ ವಿಷಯದಲ್ಲಿ ಯೆಹೋವನಿಗೆ ಜ್ಞಾಪಕ ಮಾಡುವುದಕ್ಕಾಗಿ ದೇವದರ್ಶನದ ಗುಡಾರದೊಳಗೆ ತಂದರು.