೧೫
ನಾನಾ ನಿಯಮಗಳು 15
ಯಜ್ಞಪಶುಗಳೊಡನೆ ಸಮರ್ಪಿಸಬೇಕಾದ ನೈವೇದ್ಯದ್ರವ್ಯಗಳ ವಿವರಣೆ
೧ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, ೨ “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ನಾನು ನಿಮ್ಮ ವಾಸಕ್ಕಾಗಿ ಕೊಡುವ ದೇಶಕ್ಕೆ ನೀವು ಸೇರಿದ ನಂತರ, ೩ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದಕ್ಕಾಗಿ ಪಶುಗಳಿಂದಾಗಲಿ, ಆಡುಕುರಿ ಹಿಂಡುಗಳಿಂದಾಗಲಿ ಒಂದು ಪಶುವನ್ನು ಹೋಮಮಾಡುವವನು, ದಹನ ಬಲಿ ಮಾಡುವುದಕ್ಕೂ, ಹರಕೆಸಲ್ಲಿಸುವುದಕ್ಕೋ, ಕೃತಜ್ಞತೆಯನ್ನು ತೋರಿಸುವುದಕ್ಕೋ, ಹಬ್ಬವನ್ನು ಆಚರಿಸುವುದಕ್ಕೋ ಸಮಾಧಾನಯಜ್ಞಮಾಡಿದರೆ, ೪ ಅದರೊಂದಿಗೆ ಯೆಹೋವನಿಗೆ ಕಾಣಿಕೆಯಾಗಿ ಧಾನ್ಯನೈವೇದ್ಯ ಸಮರ್ಪಿಸುವಾಗ ಒಂದುವರೆ ಸೇರು ಎಣ್ಣೆ ಬೆರಸಿದ ಮೂರು ಸೇರು ಗೋದಿಯ ಹಿಟ್ಟನ್ನೂ ಸೇರಿಸಬೇಕು. ೫ ಪಾನದ್ರವ್ಯಕ್ಕಾಗಿ ಒಂದುವರೆ ಸೇರು ದ್ರಾಕ್ಷಾರಸವನ್ನೂ ತರಬೇಕು. ನೀವು ಸರ್ವಾಂಗಹೋಮ ಅಥವಾ ಸಮಾಧಾನಯಜ್ಞವಾಗಿ ಕಾಣಿಕೆಯಾಗಿ ಒಂದೊಂದು ಕುರಿಯೊಂದಿಗೂ ದಹನ ಬಲಿಯನ್ನು ಸಮರ್ಪಿಸಬೇಕು.
೬ “ ‘ಇದಲ್ಲದೆ ಟಗರಿನೊಂದಿಗೆ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದಕ್ಕೆ, ಧಾನ್ಯನೈವೇದ್ಯಕ್ಕಾಗಿ ಎರಡು ಸೇರು ಎಣ್ಣೆ ಬೆರಸಿದ ಆರು ಸೇರು ಗೋದಿಯ ಹಿಟ್ಟನ್ನೂ, ೭ ಪಾನದ್ರವ್ಯವಾಗಿ ಯೆಹೋವನಿಗೆ ಸುವಾಸನೆಯಾಗಿ ಎರಡು ಸೇರು ದ್ರಾಕ್ಷಾರಸವನ್ನೂ ತಂದು ಸಮರ್ಪಿಸಬೇಕು.
೮ “ ‘ನೀನು ಸರ್ವಾಂಗಹೋಮ, ಹರಕೆಸಲ್ಲಿಸುವಯಜ್ಞ, ಬೇರೆ ವಿಧವಾದ ಸಮಾಧಾನಯಜ್ಞ ಇವುಗಳಿಗಾಗಿ ಹೋರಿಯನ್ನು ಯೆಹೋವನಿಗೆ ದಹನ ಬಲಿಗಾಗಿ ಸಿದ್ದಮಾಡುವಾಗ, ೯ ಅವನು ಧಾನ್ಯನೈವೇದ್ಯಕ್ಕಾಗಿ ಮೂರು ಸೇರು ಎಣ್ಣೆ ಬೆರಸಿದ ಒಂಭತ್ತು ಸೇರು ಗೋದಿಯ ಹಿಟ್ಟನ್ನೂ, ಒಂದು ಹೋರಿಯೊಂದಿಗೆ ತರಬೇಕು. ೧೦ ಪಾನದ್ರವ್ಯಕ್ಕಾಗಿ ಮೂರು ಸೇರು ದ್ರಾಕ್ಷಾರಸವನ್ನೂ ತಂದು ಸಮರ್ಪಿಸಬೇಕು. ಇದು ಯೆಹೋವನಿಗೆ ಸುವಾಸನೆಯ ಸುಗಂಧ ಹೋಮವಾಗುವುದು.
೧೧ “ ‘ಕುರಿ, ಆಡು, ಟಗರು, ಹೋರಿ ಇವುಗಳಲ್ಲಿ ಪ್ರತಿಯೊಂದು ಪಶುವಿನ ಸಂಗಡ ಈ ಪ್ರಕಾರ ನೀವು ನೈವೇದ್ಯಮಾಡಬೇಕು. ೧೨ ನೀವು ಸಮರ್ಪಿಸುವ ಪಶುಗಳ ಲೆಕ್ಕದ ಪ್ರಕಾರವೇ ಒಂದೊಂದು ಪಶುವಿನ ಸಂಗಡ ಈ ರೀತಿಯಾಗಿ ಸಮರ್ಪಿಸಬೇಕು. ೧೩ ಸ್ವದೇಶದವರೆಲ್ಲರೂ ಯೆಹೋವನಿಗೆ ಸುಗಂಧ ಹೋಮವನ್ನು ಸಮರ್ಪಿಸುವಾಗ ಈ ರೀತಿಯಾಗಿ ಮಾಡಬೇಕು. ೧೪ ನಿಮ್ಮ ಮಧ್ಯದಲ್ಲಿ ಇಲ್ಲವೆ ನಿಮ್ಮ ಸಂತತಿಯವರ ಮಧ್ಯದಲ್ಲಿ ಒಕ್ಕಲಿರುವ ಅನ್ಯದೇಶದವನಾಗಲಿ ಅಥವಾ ಇಳಿದುಕೊಂಡಿರುವ ಯಾರೇ ಆಗಲಿ ಯೆಹೋವನಿಗೆ ಸುಗಂಧ ಹೋಮ ಮಾಡಬೇಕಾದರೆ ನಿಮ್ಮಂತೆಯೇ ಅವನೂ ಮಾಡಬೇಕು. ೧೫ ಸರ್ವರಿಗೂ ಅಂದರೆ ನಿಮಗೂ, ನಿಮ್ಮಲ್ಲಿರುವ ಅನ್ಯದೇಶದವರಿಗೂ ಒಂದೇ ನಿಯಮವಿರಬೇಕು; ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮ. ಯೆಹೋವನ ಸನ್ನಿಧಿಯಲ್ಲಿ ನೀವು ಹೇಗೋ, ಅನ್ಯದೇಶದವನೂ ಸಹ ಹಾಗೆಯೇ ಇರುವನು. ೧೬ ನಿಮಗೂ, ನಿಮ್ಮ ಬಳಿಯಲ್ಲಿ ಒಕ್ಕಲಿರುವ ಅನ್ಯದೇಶದವನಿಗೂ ಒಂದೇ ವಿಧವಾದ ನಿಯಮಗಳಿರಬೇಕು.’ ”
ಯಾಜಕರಿಗೆ ಪ್ರತ್ಯೇಕಿಸಬೇಕಾದ ರೊಟ್ಟಿಯ ನಿಯಮ
೧೭ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, ೧೮ “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ನಾನು ನಿಮ್ಮನ್ನು ಕರೆದುಕೊಂಡುಹೋಗುವ ದೇಶಕ್ಕೆ ನೀವು ಸೇರಿದ ನಂತರ, ೧೯ ನೀವು ಭೂಮಿಯಿಂದ ಬೆಳೆದ ಬೆಳೆಯನ್ನು ಉಪಯೋಗಿಸುವಾಗ, ಸ್ವಲ್ಪವನ್ನು ಯೆಹೋವನಿಗೋಸ್ಕರ ಕಾಣಿಕೆಯಾಗಿ ಪ್ರತ್ಯೇಕಿಸಬೇಕು. ೨೦ ನೀವು ಕಣದಲ್ಲಿ ತುಳಿಸಿದ ದವಸದಲ್ಲಿ ಸ್ವಲ್ಪವನ್ನು ಯೆಹೋವನದೆಂದು ಪ್ರತ್ಯೇಕಿಸುವ ಪ್ರಕಾರವೇ ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನೂ ಕಾಣಿಕೆಯಾಗಿ ಪ್ರತ್ಯೇಕಿಸಬೇಕು.
ತಿಳಿಯದೆ ಮಾಡಿದ ತಪ್ಪಿಗಾಗಿ ದೋಷಪರಿಹಾರವನ್ನು ಮಾಡುವ ವಿಧಾನ
೨೧ “ ‘ನೀವೂ ಮತ್ತು ನಿಮ್ಮ ಸಂತತಿಯವರೂ ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನು ಯೆಹೋವನಿಗೋಸ್ಕರ ಕಾಣಿಕೆಯಾಗಿ ಪ್ರತ್ಯೇಕಿಸಬೇಕು. ೨೨ ನಾನು ಮೋಶೆಗೆ ಹೇಳಿದ ಈ ಎಲ್ಲಾ ಆಜ್ಞೆಗಳಿಗೆ ನೀವು ವಿಧೇಯರಾಗಿರದಿದ್ದರೆ, ೨೩ ಆತನು ನಿಮಗೆ ಆಜ್ಞೆಗಳನ್ನು ಕೊಟ್ಟ ದಿನದಿಂದ ಮೊದಲುಗೊಂಡು ನಿಮಗೂ ಮತ್ತು ನಿಮ್ಮ ಸಂತತಿಗೂ ಮೋಶೆಯ ಮುಖಾಂತರ ಆಜ್ಞಾಪಿಸಿದಂತೆ ನೀವು ಮಾಡದೆ ಹೋದರೆ, ೨೪ ಯಾವಾಗಲಾದರೂ ಸಮೂಹದವರು ತಿಳಿಯದೆ ಮೀರಿ ದ್ರೋಹಿಗಳಾದರೆ, ಸರ್ವಸಮೂಹದವರೆಲ್ಲರು ಒಟ್ಟಾಗಿ ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವುದಕ್ಕಾಗಿ ದಹನ ಬಲಿಗಾಗಿ ಒಂದು ಹೋರಿಯನ್ನೂ, ನೈವೇದ್ಯಕ್ಕಾಗಿ ಅದಕ್ಕೆ ನೇಮಿತವಾದ ಧಾನ್ಯದ್ರವ್ಯಗಳನ್ನೂ ಮತ್ತು ಪಾನದ್ರವ್ಯಗಳನ್ನೂ, ದೋಷಪರಿಹಾರಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ೨೫ ಯಾಜಕನು ಇಸ್ರಾಯೇಲರ ಸರ್ವಸಮೂಹದವರಿಗೋಸ್ಕರ ದೋಷಪರಿಹಾರವನ್ನು ಮಾಡಿದಾಗ ಅವರಿಗೆ ಕ್ಷಮಾಪಣೆಯಾಗುವುದು. ಅವರು ಆ ತಪ್ಪನ್ನು ತಿಳಿಯದೆ ಮಾಡಿದುದರಿಂದ ಮತ್ತು ಅವರು ಅದನ್ನು ಪರಿಹರಿಸುವುದಕ್ಕಾಗಿ ಯೆಹೋವನ ಸನ್ನಿಧಿಯಲ್ಲಿ ಕಾಣಿಕೆಯಾಗಿ ಸರ್ವಾಂಗ ಹೋಮವನ್ನೂ, ದೋಷಪರಿಹಾರಕಯಜ್ಞವನ್ನೂ ಮಾಡಿಸಿದ್ದರಿಂದ, ೨೬ ಜನರೆಲ್ಲರೂ ಆ ತಪ್ಪನ್ನು ತಿಳಿಯದೆ ಮಾಡಿದ್ದರಿಂದ, ಇಸ್ರಾಯೇಲರ ಸರ್ವಸಮೂಹದವರಿಗೂ, ಅವರಲ್ಲಿ ಇಳಿದುಕೊಂಡಿರುವ ಅನ್ಯದೇಶದವರಿಗೂ ಕ್ಷಮಾಪಣೆಯಾಗುವುದು.
೨೭ “ ‘ಯಾವನಾದರೂ ತಿಳಿಯದೆ ತಪ್ಪು ಮಾಡಿದರೆ ಅವನು ದೋಷಪರಿಹಾರಕ ಯಜ್ಞಕ್ಕಾಗಿ ಒಂದು ವರುಷದ ಆಡನ್ನು ಸಮರ್ಪಿಸಬೇಕು. ೨೮ ತಿಳಿಯದೆ ತಪ್ಪು ಮಾಡಿದವನಿಗೋಸ್ಕರ ಯಾಜಕನು ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವುದು. ೨೯ ಈ ವಿಷಯದಲ್ಲಿ ಇಸ್ರಾಯೇಲರಲ್ಲಿರುವ ಸ್ವದೇಶದವರಿಗೂ, ಅನ್ಯದೇಶದವರಿಗೂ ಒಂದೇ ನಿಯಮವಿರಬೇಕು, ೩೦ ಆದರೆ ಸ್ವದೇಶದವನಾಗಲಿ, ಅನ್ಯದೇಶದವನಾಗಲಿ ಯಾವನಾದರೂ ಮನಃಪೂರ್ವಕವಾಗಿ ಹಟದಿಂದ ಪಾಪವನ್ನು ಮಾಡಿದರೆ ಅವನು ಯೆಹೋವನನ್ನು ದೂಷಿಸಿದವನಾದುದರಿಂದ ಕುಲದಿಂದ ಹೊರಗೆ ಹಾಕಬೇಕು. ೩೧ ಆ ಮನುಷ್ಯನು ಯೆಹೋವನ ಮಾತನ್ನು ತಾತ್ಸಾರಮಾಡಿ ಆತನ ಆಜ್ಞೆಯನ್ನು ಮೀರಿದುದರಿಂದ ಕುಲದಿಂದ ಹೊರಗೆ ಹಾಕಬೇಕು. ಅವನು ತನ್ನ ಪಾಪದ ಫಲವನ್ನು ಅನುಭವಿಸಲಿ.’ ”
ಸಬ್ಬತ್ ದಿನದಲ್ಲಿ ಕೆಲಸಮಾಡಿದವನಿಗೆ ಮರಣಶಿಕ್ಷೆ ವಿಧಿಸಲ್ಪಟ್ಟಿದ್ದು
೩೨ ಇಸ್ರಾಯೇಲರು ಮರುಭುಮಿಯಲ್ಲಿ ಇದ್ದಾಗ ಒಬ್ಬನು ಸಬ್ಬತ್ ದಿನದಲ್ಲಿ ಕಟ್ಟಿಗೆಕೂಡಿಸುವುದನ್ನು ಕಂಡರು. ೩೩ ಅದನ್ನು ನೋಡಿದವರು ಅವನನ್ನು ಮೋಶೆ, ಆರೋನರ ಮತ್ತು ಸರ್ವಸಮೂಹದವರ ಬಳಿಗೆ ಹಿಡಿದುಕೊಂಡು ಬಂದರು. ೩೪ ಅಂಥವನಿಗೆ ವಿಧಿಸಬೇಕಾದ ಶಿಕ್ಷೆಯ ವಿಷಯದಲ್ಲಿ ಆ ವರೆಗೂ ನಿಯಮವೇ ಇರಲಿಲ್ಲವಾದ ಕಾರಣ ಅವರು ಅವನನ್ನು ಕಾವಲಲ್ಲಿಟ್ಟರು. ೩೫ ತರುವಾಯ ಯೆಹೋವನು ಮೋಶೆಗೆ, “ಆ ಮನುಷ್ಯನಿಗೆ ಮರಣಶಿಕ್ಷೆಯಾಗಬೇಕು; ಸರ್ವಸಮೂಹದವರ ಪಾಳೆಯದ ಹೊರಗೆ ಅವನನ್ನು ಕಲ್ಲೆಸೆದು ಕೊಲ್ಲಬೇಕು” ಎಂದು ಆಜ್ಞಾಪಿಸಿದನು. ೩೬ ಯೆಹೋವನು ಮೋಶೆಗೆ ಅಪ್ಪಣೆಕೊಟ್ಟಂತೆ ಸರ್ವಸಮೂಹದವರು ಆ ಮನುಷ್ಯನನ್ನು ಪಾಳೆಯದ ಹೊರಗೆ ಹಿಡಿದುಕೊಂಡುಹೋಗಿ ಕಲ್ಲೆಸೆದು ಕೊಂದರು.
ಇಸ್ರಾಯೇಲರು ಬಟ್ಟೆಯ ಮೂಲೆಗಳಿಗೆ ಗೊಂಡೆ ಕಟ್ಟಿಕೊಳ್ಳಬೇಕೆಂಬುದು
೩೭ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, ೩೮ “ನೀನು ಇಸ್ರಾಯೇಲರ ಸಂತತಿಯವರ ಸಂಗಡ ಮಾತನಾಡಿ, ಅವರು ತಮ್ಮ ವಸ್ತ್ರಗಳ ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು, ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿ ದಾರದಿಂದ ಕಟ್ಟಿರಬೇಕು ಎಂದು ಅವರಿಗೆ ಆಜ್ಞಾಪಿಸು. ೩೯ ಆ ಗೊಂಡೆಗಳ ಉಪಯೋಗವೇನೆಂದರೆ, ನೀವು ಅವುಗಳನ್ನು ನೋಡುವಾಗ ನನ್ನ ಆಜ್ಞೆಗಳನ್ನೆಲ್ಲಾ ನೆನಪಿಗೆ ತಂದುಕೊಂಡು ಅದನ್ನು ನಡೆಸಬೇಕು ಮತ್ತು ನೀವು ಪೂರ್ವದಲ್ಲಿ ನನಗೆ ದೇವದ್ರೋಹಿಗಳಾಗಿ ಮನಸ್ಸಿಗೂ, ಕಣ್ಣಿಗೂ ತೋರಿದಂತೆ ೪೦ ದಾರಿ ತಪ್ಪಿ ನಡೆದ ಪ್ರಕಾರ ಇನ್ನು ಮುಂದೆ ನಡೆಯದೆ, ನನ್ನ ಆಜ್ಞೆಗಳನ್ನೆಲ್ಲಾ ಲಕ್ಷಿಸಿ ಅನುಸರಿಸಿ ನಿಮ್ಮ ದೇವರಿಗೆ ಪ್ರತಿಷ್ಠಿತರಾಗಿರಬೇಕೆಂಬುದೇ. ೪೧ ನಿಮ್ಮ ದೇವರಾದ ಯೆಹೋವನು ನಾನೇ, ನಿಮ್ಮ ದೇವರಾಗುವುದಕ್ಕಾಗಿ ನಿಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ನಿಮ್ಮ ದೇವರಾದ ಯೆಹೋವನು ನಾನೇ.”