೯
೧ ಯೇಸು ದೋಣಿಯನ್ನು ಹತ್ತಿ ಸಮುದ್ರವನ್ನು ದಾಟಿ ತನ್ನ ಊರಿಗೆ ಬಂದನು.
ಯೇಸು ಪಾರ್ಶ್ವವಾಯುರೋಗಿಯ ಪಾಪವನ್ನು ಕ್ಷಮಿಸಿ ಸ್ವಸ್ಥಮಾಡಿದ್ದು
(ಮಾರ್ಕ 2:1-12; ಲೂಕ 5:17-26)
೨ ಅಲ್ಲಿಗೆ ಯೇಸು ಬಂದಾಗ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದ ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ಹೊತ್ತುಕೊಂಡು ಬಂದರು. ಯೇಸು ರೋಗಿಯನ್ನು ಹೊತ್ತುಕೊಂಡು ಬಂದವರ ನಂಬಿಕೆಯನ್ನು ನೋಡಿ ಪಾರ್ಶ್ವವಾಯು ರೋಗಿಗೆ, ಮಗನೇ ಧೈರ್ಯವಾಗಿರು, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು. ೩ ಅಲ್ಲಿದ್ದ ಶಾಸ್ತ್ರಿಗಳಲ್ಲಿ ಕೆಲವರು, ಇವನು ದೇವದೂಷಣೆ ಮಾಡುತ್ತಾನೆಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ೪ ಯೇಸು ಅವರ ಆಲೋಚನೆಗಳನ್ನು ತಿಳಿದು, ನೀವು ಏಕೆ ನಿಮ್ಮ ಮನಸ್ಸಿನಲ್ಲಿ ದುರಾಲೋಚನೆಯನ್ನು ಮಾಡುತ್ತಿದ್ದೀರಿ? ೫ ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಅನ್ನುವುದೋ? ೬ ಅಥವಾ ‘ಎದ್ದು ನಡೆ’ ಅನ್ನುವದೋ? ಆದರೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದು ನಿಮಗೆ ತಿಳಿಯಬೇಕು ಎಂದು ಹೇಳಿ ಪಾರ್ಶ್ವವಾಯು ರೋಗಿಗೆ, ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಅಂದನು. ೭ ಆಗ ಅವನು ಎದ್ದು ತನ್ನ ಮನೆಗೆ ಹೊರಟುಹೋದನು. ೮ ಜನರು ಇದನ್ನು ನೋಡಿ ಆಶ್ಚರ್ಯಚಕಿತರಾಗಿ, ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟ ದೇವರನ್ನು ಕೊಂಡಾಡಿದರು.
ಯೇಸು ಮತ್ತಾಯನನ್ನು ಕರೆದದ್ದು
(ಮಾರ್ಕ 2:13-; ಲೂಕ 5:27-32)
೯ ಯೇಸು ಅಲ್ಲಿಂದ ಹಾದು ಹೋಗುತ್ತಿರುವಾಗ, ಸುಂಕ ಸಂಗ್ರಹಣೆ ಕಟ್ಟೆಯಲ್ಲಿ ಕುಳಿತಿದ್ದ ಮತ್ತಾಯನೆಂಬ ಒಬ್ಬ ಮನುಷ್ಯನನ್ನು ನೋಡಿ, ನನ್ನನ್ನು ಹಿಂಬಾಲಿಸು ಎಂದು ಅವನನ್ನು ಕರೆಯಲು ಅವನು ಎದ್ದು ಆತನನ್ನು ಹಿಂಬಾಲಿಸಿದನು.
೧೦ ಅನಂತರ ಯೇಸು ಅವನ ಮನೆಯಲ್ಲಿ ಊಟಕ್ಕೆ ಕುಳಿತಿರುವಾಗ ಬಹು ಮಂದಿ ಸುಂಕದವರೂ ಪಾಪಿಗಳೂ ಬಂದು ಯೇಸುವಿನ ಮತ್ತು ಆತನ ಶಿಷ್ಯರ ಪಂಕ್ತಿಯಲ್ಲೇ ಕುಳಿತುಕೊಂಡರು. ೧೧ ಅದನ್ನು ನೋಡಿದ ಫರಿಸಾಯರು ಆತನ ಶಿಷ್ಯರನ್ನು, ನಿಮ್ಮ ಗುರುವು ಸುಂಕದವರು ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ? ಎಂದು ಕೇಳಿದರು. ೧೨ ಯೇಸು ಅದನ್ನು ಕೇಳಿ, ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು. ೧೩ ನೀವು ಹೋಗಿ, ‘ನಾನು ಯಜ್ಞವನ್ನಲ್ಲ, * ಹೋಶೇ. 6:6; ಮತ್ತಾಯನು 12:7; ಮೀಕ 6:8ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬ ಮಾತಿನ ಅರ್ಥವನ್ನು ಕಲಿತುಕೊಳ್ಳಿರಿ. ನಾನು ನೀತಿವಂತರನ್ನು ಕರೆಯುವುದಕ್ಕೆ ಬಂದವನಲ್ಲ, ಆದರೆ ಪಾಪಿಗಳನ್ನು ಕರೆಯುವುದಕ್ಕೆ ಬಂದವನು ಅಂದನು.
ಉಪವಾಸದ ವಿಷಯವಾಗಿ ಪ್ರಶ್ನೆ (ಮಾರ್ಕ 2:18-22; ಲೂಕ 5:33-39)
೧೪ ನಂತರ ಯೋಹಾನನ ಶಿಷ್ಯರು ಆತನ ಬಳಿಗೆ ಬಂದು, ಫರಿಸಾಯರೂ ನಾವೂ ಬಹಳಸಾರಿ ಉಪವಾಸಮಾಡುತ್ತೇವೆ; ನಿನ್ನ ಶಿಷ್ಯರು ಏಕೆ ಉಪವಾಸ ಮಾಡುವುದಿಲ್ಲ ಎಂದು ಕೇಳಿದರು. ಅದಕ್ಕೆ ಯೇಸು ಅವರಿಗೆ, ೧೫ ಮದುವೆಯ ಅತಿಥಿಗಳು ತಮ್ಮ ಸಂಗಡ ಮದಲಿಂಗನು ಇರುವ ತನಕ ದುಃಖಪಡುವರೇ? ಆದರೆ ಮದಲಿಂಗನನ್ನು ಅವರ ಬಳಿಯಿಂದ ತೆಗೆದುಕೊಂಡುಹೋಗುವ ಕಾಲ ಬರುತ್ತದೆ; ಆಗ ಅವರು ಉಪವಾಸಮಾಡುವರು. ಯಾರೂ ಹೊಸ ಬಟ್ಟೆಯ ತುಂಡನ್ನು ಹಳೆಯ ವಸ್ತ್ರಕ್ಕೆ ತ್ಯಾಪೆ ಹಚ್ಚುವುದಿಲ್ಲ; ಹಾಗೆ ಹಚ್ಚಿದರೆ ೧೬ ಆ ತ್ಯಾಪೆಯು ಹಳೆ ವಸ್ತ್ರವನ್ನು ಹಿಂಜುವುದರಿಂದ ಹರಕು ಹೆಚ್ಚಾಗುವುದು. ೧೭ ಇದಲ್ಲದೆ ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಹಾಕಿಡುವುದಿಲ್ಲ; ಇಟ್ಟರೆ ಬುದ್ದಲಿಗಳು ಒಡೆದು ದ್ರಾಕ್ಷಾರಸವು ಚೆಲ್ಲಿಹೋಗುವುದಲ್ಲದೆ, ಬುದ್ದಲಿಗಳು ನಾಶವಾಗುವವು; ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುತ್ತಾರೆ, ಆಗ ಎರಡೂ ಸಂರಕ್ಷಿಸಲ್ಪಡುವವು ಎಂದು ಹೇಳಿದನು.
ಯೇಸು ಒಬ್ಬ ಹುಡುಗಿಯನ್ನು ಬದುಕಿಸಿದ್ದು; ಇನ್ನೂ ಕೆಲವು ಅದ್ಭುತಗಳನ್ನು ನಡೆಸಿದ್ದು
(ಮಾರ್ಕ 5:22-43; ಲೂಕ 8:41-56)
೧೮ ಹೀಗೆ ಯೇಸು ಅವರೊಂದಿಗೆ ಮಾತನಾಡುತ್ತಿರುವಾಗ ಒಬ್ಬ ಅಧಿಕಾರಿಯು ಬಂದು ಆತನಿಗೆ ಅಡ್ಡಬಿದ್ದು, ನನ್ನ ಮಗಳು ಈಗಲೇ ತೀರಿಹೋದಳು; ಆದಾಗ್ಯೂ ನೀನು ಬಂದು ಆಕೆಯ ಮೇಲೆ ಕೈ ಇಟ್ಟರೆ ಬದುಕುವಳು ಎಂದು ಬೇಡಿಕೊಂಡನು. ೧೯ ಯೇಸು ಎದ್ದು ಆ ಅಧಿಕಾರಿಯ ಹಿಂದೆ ಹೋಗುವಾಗ ಆತನ ಶಿಷ್ಯರು ಸಹ ಆತನನ್ನು ಹಿಂಬಾಲಿಸಿದರು.
೨೦ ಆಗ ಹನ್ನೆರಡು ವರುಷದಿಂದ ರಕ್ತಕುಸುಮ ರೋಗವಿದ್ದ ಒಬ್ಬ ಹೆಂಗಸು, ೨೧ ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ಸ್ವಸ್ಥಳಾಗುವೆ ಎಂದು ಮನಸ್ಸಿನಲ್ಲಿ ಅಂದುಕೊಂಡು ಹಿಂದಿನಿಂದ ಬಂದು ಯೇಸುವಿನ ಉಡುಪಿನ ಅಂಚನ್ನು ಮುಟ್ಟಿದಳು. ೨೨ ಆಗ ಯೇಸು ಹಿಂತಿರುಗಿ ಆಕೆಯನ್ನು ನೋಡಿ, ಮಗಳೇ, ಧೈರ್ಯವಾಗಿರು; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು ಅಂದನು. ಆ ಕ್ಷಣವೇ ಆ ಹೆಂಗಸು ಸ್ವಸ್ಥಳಾದಳು.
೨೩ ಯೇಸು ಆ ಅಧಿಕಾರಿಯ ಮನೆಗೆ ಬಂದಾಗ ಕೊಳಲು ಊದುವವರನ್ನೂ ಗದ್ದಲ ಮಾಡುವ ಜನರ ಗುಂಪನ್ನೂ ಕಂಡು ಅವರಿಗೆ, ೨೪ ಹೊರಗೆ ಹೋಗಿರಿ; ಹುಡುಗಿ ಸತ್ತಿಲ್ಲ ನಿದ್ರಿಸುತ್ತಿದ್ದಾಳೆ ಅಂದನು. ಅದಕ್ಕೆ ಅವರು ಆತನನ್ನು ಪರಿಹಾಸ್ಯ ಮಾಡಿದರು. ೨೫ ಜನರನ್ನು ಹೊರಕ್ಕೆ ಕಳುಹಿಸಿದ ಮೇಲೆ ಆತನು ಒಳಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆ ಎದ್ದಳು. ೨೬ ಈ ಸುದ್ದಿ ಆ ದೇಶದೊಳಗೆಲ್ಲಾ ಹಬ್ಬಿತು.
೨೭ ಯೇಸು ಅಲ್ಲಿಂದ ಹಾದುಹೋಗುತ್ತಿರುವಾಗ ಇಬ್ಬರು ಕುರುಡರು, ದಾವೀದ ಕುಮಾರನೇ, ನಮ್ಮನ್ನು ಕರುಣಿಸು ಎಂದು ಕೂಗುತ್ತಾ ಆತನನ್ನು ಹಿಂಬಾಲಿಸಿದರು. ೨೮ ಯೇಸು ಮನೆಗೆ ಬಂದಾಗ ಆ ಕುರುಡರು ಆತನ ಬಳಿಗೆ ಬಂದರು. ಯೇಸು ಅವರನ್ನು, ನಾನು ಇದನ್ನು ಮಾಡಬಲ್ಲೆನೆಂಬುದನ್ನು ನೀವು ನಂಬುತ್ತೀರೋ ಎಂದು ಕೇಳಿದ್ದಕ್ಕೆ, ಅವರು ಹೌದು, ಕರ್ತನೇ, ನಂಬುತ್ತೇವೆ ಅಂದರು. ೨೯ ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ, ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ ಅಂದನು. ಆಗ ಅವರ ಕಣ್ಣುಗಳು ತೆರೆಯಲ್ಪಟ್ಟವು. ೩೦ ನಂತರ ಯೇಸು ಅವರಿಗೆ, ಇದು ಯಾರಿಗೂ ತಿಳಿಯದಂತೆ ನೋಡಿಕೊಳ್ಳಿರಿ ಎಂದು ಕಟ್ಟುನಿಟ್ಟಾಗಿ ಆದೇಶಿಸಿದನು. ೩೧ ಆದರೆ ಅವರು ಹೊರಟುಹೋಗಿ ಆ ದೇಶದೊಳಗೆಲ್ಲಾ ಆತನ ಸುದ್ದಿಯನ್ನು ಹಬ್ಬಿಸಿದರು.
೩೨ ಅವರು ಹೊರಟುಹೋಗುತ್ತಿರುವಾಗ ದೆವ್ವಹಿಡಿದ ಒಬ್ಬ ಮೂಕನನ್ನು ಯೇಸುವಿನ ಬಳಿಗೆ ಕರೆತಂದರು. ೩೩ ದೆವ್ವ ಬಿಡಿಸಿದ ಮೇಲೆ ಮೂಕನಾಗಿದ್ದ ಅವನು ಮಾತನಾಡುವವನಾದನು. ಅದಕ್ಕೆ ಜನರು, ಇಸ್ರಾಯೇಲಿನಲ್ಲಿ ಇಂಥ ಕಾರ್ಯವನ್ನು ಇದುವರೆಗೂ ಯಾರೂ ನೋಡಲಿಲ್ಲವೆಂದು ಆಶ್ಚರ್ಯಚಕಿತರಾದರು. ೩೪ ಆದರೆ ಫರಿಸಾಯರು, ಇವನು ದೆವ್ವಗಳ ಒಡೆಯನ ಸಹಾಯದಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ ಎಂದು ಹೇಳಿದರು.
ಯೇಸು ಹನ್ನೆರಡು ಮಂದಿ ಶಿಷ್ಯರನ್ನು ಆರಿಸಿಕೊಂಡು ಸುವಾರ್ತೆಯನ್ನು ಸಾರುವುದಕ್ಕೆ ಕಳುಹಿಸಿದ್ದು
(ಮಾರ್ಕ 3:13-19; 6:6-13; ಲೂಕ 6:12-16; 9:1-6)
೩೫ ತರುವಾಯ ಯೇಸು ಎಲ್ಲಾ ಪಟ್ಟಗಳಲ್ಲೂ ಹಳ್ಳಿಗಳಲ್ಲೂ ಸಂಚರಿಸುತ್ತಾ ಅವರ ಸಭಾಮಂದಿರಗಳಲ್ಲಿ ಉಪದೇಶಮಾಡುತ್ತಾ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು. ೩೬ ಯೇಸು ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ಚದುರಿರುವುದನ್ನು ಕಂಡು ಅವರ ಮೇಲೆ ಕನಿಕರಪಟ್ಟನು. ೩೭ ಆತನು ತನ್ನ ಶಿಷ್ಯರಿಗೆ, ಬೆಳೆಯು ಬಹಳ ಇದೆ, ಆದರೆ ಕೆಲಸದವರು ಸ್ವಲ್ಪ. ೩೮ ಆದುದರಿಂದ ಬೆಳೆಯ ಯಜಮಾನನನ್ನು, ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಿಕೊಡಬೇಕೆಂದು ಬೇಡಿಕೊಳ್ಳಿರಿ ಎಂದು ಹೇಳಿದನು.