ಯೆಹೋವನ ದಿನ
೪
೧ “ಇಗೋ, ಯೆಹೋವನ ದಿನವು ಬರುತ್ತಿದೆ, ಒಲೆಯಂತೆ ಉರಿಯುತ್ತಿದೆ; ಸಕಲ ಅಹಂಕಾರಿಗಳೂ, ದುಷ್ಕರ್ಮಿಗಳೂ ಒಣಹುಲ್ಲಿನಂತೆ ಇರುವರು. ಬರುತ್ತಿರುವ ಆ ದಿನವು ಅವರಿಗೆ ಅಗ್ನಿಪ್ರಳಯವಾಗುವುದು. ಬುಡ, ರೆಂಬೆಗಳಾವುದನ್ನೂ ಉಳಿಸದು. ೨ ನನ್ನ ನಾಮದಲ್ಲಿ ಭಯಭಕ್ತಿಯಿಟ್ಟಿರುವ ನಿಮಗೋ ದೇವರ ಧರ್ಮವೆಂಬ ಸೂರ್ಯನು ಸ್ವಸ್ಥತೆಯನ್ನುಂಟುಮಾಡುವ ಕಿರಣಗಳುಳ್ಳವನಾಗಿ ಮೂಡುವನು; ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ ನೀವು ಹೊರಟು ಬಂದು ಕುಣಿದಾಡುವಿರಿ; ದುಷ್ಟರನ್ನು ತುಳಿದುಬಿಡುವಿರಿ. ೩ ನಾನು ಕಾರ್ಯಸಾಧಿಸುವ ದಿನದಲ್ಲಿ ಅಧರ್ಮಿಗಳು ನಿಮ್ಮ ಅಂಗಾಲುಗಳ ಕೆಳಗೆ ಬೂದಿಯಾಗಿ ಬಿದ್ದಿರುವರು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
ಎಲೀಯನ ಬರುವಿಕೆ
೪ “ನನ್ನ ಸೇವಕನಾದ ಮೋಶೆಯ ಧರ್ಮಶಾಸ್ತ್ರವನ್ನು ಅಂದರೆ, ನಾನು ಹೋರೇಬ್ ಬೆಟ್ಟದಲ್ಲಿ ಎಲ್ಲಾ ಇಸ್ರಾಯೇಲರಿಗಾಗಿ ಮೋಶೆಗೆ ನೇಮಿಸಿದ ನಿಯಮವಿಧಿಗಳನ್ನು ಜ್ಞಾಪಕಮಾಡಿಕೊಳ್ಳಿರಿ. ೫ ನಾನು ಬಂದು ದೇಶವನ್ನು ಶಾಪದಿಂದ ಹತಮಾಡದಂತೆ ಯೆಹೋವನ ಆಗಮನದ ಭಯಂಕರವಾದ ಮಹಾದಿನವು ಬರುವುದಕ್ಕೆ ಮೊದಲೇ ಪ್ರವಾದಿಯಾದ ಎಲೀಯನನ್ನು ನಿಮ್ಮ ಬಳಿಗೆ ಕಳುಹಿಸುವೆನು; ೬ ಅವನು ತಂದೆಗಳ ಮನಸ್ಸನ್ನು ಮಕ್ಕಳ ಕಡೆಗೂ, ಮಕ್ಕಳ ಮನಸ್ಸನ್ನು ತಂದೆಗಳ ಕಡೆಗೂ ತಿರುಗಿಸುವನು.”