೨
ಯೋನನ ಪ್ರಾರ್ಥನೆ
೧ ಯೋನನು ಆ ಮೀನಿನ ಹೊಟ್ಟೆಯೊಳಗೆ ಇದ್ದು ಕೊಂಡು ತನ್ನ ದೇವರಾದ ಯೆಹೋವನಿಗೆ ಹೀಗೆ ಪ್ರಾರ್ಥನೆ ಮಾಡಿದನು:
೨ “ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು;
ಆತನು ನನಗೆ ಸದುತ್ತರವನ್ನು ದಯಪಾಲಿಸಿದನು;
ಪಾತಾಳದ ಗರ್ಭದೊಳಗಿಂದ ಸಹಾಯಕ್ಕಾಗಿ ಕೂಗಿಕೊಂಡೆನು!
ಆಹಾ, ನೀನು ನನ್ನ ಸ್ವರವನ್ನು ಲಾಲಿಸಿದೆ.
೩ ನನ್ನನ್ನು ಸಮುದ್ರದ ಆಗಾಧಸ್ಥಳದಲ್ಲಿ ಹಾಕಿದಿಯಲ್ಲಾ;
ಪ್ರವಾಹವು ನನ್ನನ್ನು ಸುತ್ತಿಕೊಂಡಿತು;
ಲೆಕ್ಕವಿಲ್ಲದ ಸಮುದ್ರದ ಅಲೆಗಳೂ, ತೆರೆಗಳೂ ನನ್ನ ಮೇಲೆ ದಾಟಿ ಹೋದವು
೪ ‘ನಿನ್ನ ಸಾನ್ನಿಧ್ಯದಿಂದ ತಳ್ಳಲ್ಪಟ್ಟಿದ್ದೇನೆ ಎಂದು ಕೊಂಡೆನು;
ನಾನು ನಿನ್ನ ಪರಿಶುದ್ಧ ಮಂದಿರದ ಕಡೆಗೆ ಪುನಃ ಹೇಗೆ ನೋಡುವೆನು?’
೫ ಜಲರಾಶಿಯು ನನ್ನನ್ನು ಮುತ್ತಿ ನನ್ನ ಪ್ರಾಣಕ್ಕೆ ಹಾನಿ ತಂದಿತು,
ಮಹಾಸಾಗರವು ನನ್ನನ್ನು ಆವರಿಸಿತು,
ಕಡಲಕಳೆಯು ನನ್ನ ತಲೆಯನ್ನು ಸುತ್ತಿಕೊಂಡಿತು.
೬ ಪರ್ವತಗಳ ತಳಹದಿಗೆ ಇಳಿದುಹೋದೆನು,
ಭೂಲೋಕದ ದ್ವಾರಗಳ ಚಿಲಕಗಳು ಎಂದಿಗೂ ತೆಗೆಯದ ಹಾಗೆ ನನ್ನನ್ನು ಬಂಧಿಸಿದವು;
ನನ್ನ ದೇವರಾದ ಯೆಹೋವನೇ, ನೀನು ನನ್ನ ಪ್ರಾಣವನ್ನು ಅಧೋಲೋಕದೊಳಗಿನಿಂದ ಉದ್ಧರಿಸಿದ್ದೀ.
೭ “ನನ್ನ ಆತ್ಮವು ನನ್ನಲ್ಲಿ ಕುಂದಿಹೋದಾಗ ಯೆಹೋವನಾದ ನಿನ್ನನ್ನು ನೆನಪು ಮಾಡಿಕೊಂಡು ಸ್ಮರಿಸಿದೆನು;
ನನ್ನ ಬಿನ್ನಹವು ನಿನಗೆ ಮುಟ್ಟಿತು, ಅದು ನಿನ್ನ ಪರಿಶುದ್ಧಾಲಯವನ್ನು ಬಂದು ಸೇರಿತು.
೮ “ನಿರ್ಜೀವ ವಿಗ್ರಹಗಳನ್ನು ಅವಲಂಬಿಸಿದವರು
ತಮ್ಮ ದೇವರ ಕರುಣಾನಿಧಿಯನ್ನು ತೊರೆದುಬಿಡುವರು.
೯ ಆದರೆ ನಾನು ಸ್ತೋತ್ರ ಧ್ವನಿಯಿಂದ ನಿನಗೆ ಯಜ್ಞವನ್ನರ್ಪಿಸುವೆನು,
ನಿನಗೆ ಮಾಡಿಕೊಂಡ ಹರಕೆಯನ್ನು ಸಲ್ಲಿಸುವೆನು.
ರಕ್ಷಣೆಯು ಯೆಹೋವನಿಂದಲೇ ಉಂಟಾಗುವುದು.”
೧೦ ಆಗ ಯೆಹೋವನು ಮೀನಿಗೆ ಅಪ್ಪಣೆಕೊಡಲು ಅದು ಯೋನನನ್ನು ಸಮುದ್ರದ ದಡದಲ್ಲಿ ಕಾರಿಬಿಟ್ಟಿತು.