೩೫
೧ ಆ ಮೇಲೆ ಎಲೀಹು ಮತ್ತೆ ಇಂತೆಂದನು,
೨ “ನೀತಿಯಿಂದ ನನಗೇನು ಪ್ರಯೋಜನವಾಯಿತು?
ಪಾಪಮಾಡದೆ ಇದ್ದುದರಿಂದ ನನಗಾದ ಹೆಚ್ಚು ಲಾಭವೇನು?
೩ ಈ ರೀತಿ ನೀನು ನುಡಿಯುವುದು ನ್ಯಾಯವೆಂದು ನೀನು ಊಹಿಸಿಕೊಂಡು,
ನನ್ನ ನೀತಿಯು ದೇವರ ನೀತಿಗಿಂತ ಹೆಚ್ಚೆಂದುಕೊಳ್ಳುತ್ತಿಯಾ?
೪ ನಾನು ನಿನಗೂ, ನಿನ್ನ ಜೊತೆಗಾರರಿಗೂ ಕೂಡ ಉತ್ತರಕೊಡುವೆನು.
೫ ಕಣ್ಣೆತ್ತಿ ಗಗನಮಂಡಲವನ್ನು ನೋಡು, ಮೇಘಮಾರ್ಗವನ್ನು ದೃಷ್ಟಿಸು,
ಅವು ನಿನಗಿಂತ ಎಷ್ಟೋ ಎತ್ತರವಾಗಿವೆ!
೬ ನೀನು ಪಾಪಮಾಡಿದ್ದರೆ ಆತನಿಗೆ ಏನು ಮಾಡಿದಂತಾಯಿತು?
ನಿನ್ನ ದ್ರೋಹಗಳು ಹೆಚ್ಚಾಗಿದ್ದರೂ ಆತನಿಗೇನು?
೭ ನೀನು ನೀತಿವಂತನಾಗಿದ್ದರೆ ಆತನಿಗೇನು ಕೊಟ್ಟಂತಾಯಿತು?
ನಿನ್ನ ಕೈಯಿಂದ ಆತನಿಗೆ ಲಾಭವೇನು?
೮ ನಿನ್ನ ಕೆಟ್ಟತನದಿಂದ ನಿನ್ನಂಥವನಿಗೇ ನಷ್ಟವಾದೀತು,
ನಿನ್ನ ನೀತಿಯಿಂದ ನರಜನ್ಮದವನಿಗೇನು ಲಾಭ ಸಿಕ್ಕಬಹುದು.
೯ ಅಪಾರವಾದ ಹಿಂಸೆಗಳಿಗೆ ಒಳಪಟ್ಟವರು ಮೊರೆಯಿಡುತ್ತಾ,
ಬಲಿಷ್ಠರ ಭುಜಬಲದಿಂದ ಪೀಡಿತರಾಗಿ ಕೂಗಿಕೊಳ್ಳುವರು.
೧೦ ‘ನನ್ನ ಸೃಷ್ಟಿ ಕರ್ತನಾದ ದೇವರು ಎಲ್ಲಿ?
ಆತನು ರಾತ್ರಿಯಲ್ಲಿಯೂ ಕೀರ್ತನೆಗಳನ್ನು ಹಾಡುತ್ತಾನಲ್ಲಾ ಎಂದು ಯಾರೂ ಹೇಳುವುದಿಲ್ಲ.
೧೧ ಆತನು ಕಾಡು ಮೃಗಗಳಿಗಿಂತ ನಮಗೆ ಹೆಚ್ಚು ಜ್ಞಾನವನ್ನು ಬೋಧಿಸುತ್ತಾ,
ಆಕಾಶದ ಪಕ್ಷಿಗಳಿಗಿಂತ ಹೆಚ್ಚು ಬುದ್ಧಿಯನ್ನು ನಮಗೆ ಕಲಿಸುತ್ತಾನೆ’ ಎಂದು ಹೇಳುವುದೇ ಇಲ್ಲ.
೧೨ ಇಂಥಾ ಸಂದರ್ಭದಲ್ಲಿ ಅವರು ದುಷ್ಟರ ಸೊಕ್ಕಿನಿಂದ ನೊಂದು ಗೋಳಾಡುವರು,
ಆದರೂ ಆತನು ಉತ್ತರವನ್ನು ದಯಪಾಲಿಸುವುದಿಲ್ಲ.
೧೩ ದೇವರು ಮೂರ್ಖನ ಮಾತಿಗೆ ಕಿವಿಗೊಡುವುದೇ ಇಲ್ಲ, ಸರ್ವಶಕ್ತನು ಅದನ್ನು ಎಂದಿಗೂ ಲಕ್ಷಿಸುವುದಿಲ್ಲ.
೧೪ ಹೀಗಿರಲು ಆತನು ಕಾಣುವುದಿಲ್ಲ, ನನ್ನ ವ್ಯಾಜ್ಯವು ಆತನ ಮುಂದೆ ಇದೆ,
ಆತನನ್ನು ಕಾದಿರುತ್ತೇನೆ ಎಂದು ನೀನು ಹೇಳಿದರೆ ಆತನು ಕೇಳುತ್ತಾನೆಯೇ?
೧೫ ಆತನು ದುಷ್ಟರ ಮೇಲೆ ತನ್ನ ಕೋಪವನ್ನು ತೀರಿಸದೆ ಇರುವ ಕಾರಣ ಆಹಾ,
ಆತನು ದ್ರೋಹವನ್ನು ವಿಶೇಷವಾಗಿ ಗಮನಿಸುವುದಿಲ್ಲವೆಂದು,
೧೬ ಯೋಬನು ಸುಮ್ಮನೆ ಬಾಯಿ ತೆರೆಯುತ್ತಾನೆ,
ಯಾವ ತಿಳಿವಳಿಕೆಯೂ ಇಲ್ಲದೆ ಬಹಳ ಮಾತನಾಡುತ್ತಾನೆ.”