೧೭
೧ “ನನ್ನ ಆತ್ಮವು ಒಡೆದುಹೋಗಿದೆ, ನನ್ನ ದಿನಗಳು ಮುಗಿದಿವೆ,
ಗೋರಿಯು ನನಗಾಗಿ ಕಾದಿದೆ.
೨ ನನ್ನ ಬಳಿಯಲ್ಲಿರುವವರು ಹಾಸ್ಯಗಾರರೇ ಸರಿ,
ಅವರ ಕೆಣಕಾಟವು ಯಾವಾಗಲೂ ನನ್ನ ಕಣ್ಣಿನ ಮುಂದೆ ಇದೆ.
೩ ಕೃಪೆಮಾಡಿ ಈಡನ್ನು ಕೊಡು, ನನಗಾಗಿ ನೀನೇ ನಿನ್ನ ಹತ್ತಿರ ಹೊಣೆಯಾಗು,
ನನ್ನ ಕೈ ಮೇಲೆ ಕೈ ಹಾಕತಕ್ಕವರು ನನಗೆ ಇನ್ನಾರೂ ಇಲ್ಲ.
೪ ವಿವೇಕವು ಪ್ರವೇಶಿಸದಂತೆ;
ಅವರ ಮನಸ್ಸನ್ನು, ಹೃದಯವನ್ನು ಮುಚ್ಚಿರುವೆ, ಹೀಗೆ ಅವರು ಜಯಶಿಳರಾಗದಂತೆ ತಡೆಯುವೆ.
೫ ಯಾರು ಸ್ವಲಾಭಕ್ಕಾಗಿ ಮಿತ್ರರ ಮೇಲೆ ದೂರು ಹೊರಿಸುವನೋ,
ಅವನ ಮಕ್ಕಳು ಕಂಗೆಡುವರು.
೬ ಆತನು ನನ್ನನ್ನು ಅನ್ಯದೇಶದವರ ವ್ಯರ್ಥ ಆಪಾದನೆಗಳಿಗೆ ಗುರಿ ಮಾಡಿದ್ದಾನೆ,
ಜನರ ಉಗುಳಿಗೆ ನನ್ನ ಮುಖ ಗುರಿಯಾಗಿದೆ.
೭ ದುಃಖದಿಂದ ನನ್ನ ಕಣ್ಣು ಮೊಬ್ಬಾಗಿದೆ,
ನನ್ನ ಅಂಗಗಳೆಲ್ಲಾ ನೆರಳಿನಂತೆ ನಿಸ್ಸಾರವಾಗಿವೆ.
೮ ಯಥಾರ್ಥಜನರು ಇದನ್ನು ನೋಡಿ ಬೆರಗಾಗಿದ್ದಾರೆ,
ಮತ್ತು ನಿರಪರಾಧಿಯು ಭ್ರಷ್ಟನ ವಿಷಯದಲ್ಲಿ ಎಚ್ಚರಗೊಳ್ಳುತ್ತಾನೆ.
೯ ಹೀಗಾದರೂ ಶಿಷ್ಟನು ತನ್ನ ಮಾರ್ಗವನ್ನೇ ಹಿಡಿದು ನಡೆಯುವನು,
ಶುದ್ಧಹಸ್ತನು ಬಲಗೊಳ್ಳುತ್ತಲೇ ಇರುವನು.
೧೦ ಆದರೆ ನೀವೆಲ್ಲರೂ ಮತ್ತೆ ವಾದಕ್ಕೆ ಬನ್ನಿರಿ,
ನಿಮ್ಮಲ್ಲಿ ಒಬ್ಬ ಜ್ಞಾನಿಯನ್ನಾದರೂ ಕಾಣೆನು.
೧೧ ನನ್ನ ದಿನಗಳು ಮುಗಿದುಹೋದವು.
ನನ್ನ ಉದ್ದೇಶಗಳೂ, ನನ್ನ ಹೃದಯದ ಆಶೆಗಳೂ ಭಂಗವಾದವು.
೧೨ ಇವರು ಇರುಳನ್ನು ಹಗಲೆಂದು ಸಾಧಿಸಿ,
ಕತ್ತಲಿಂದ ಬೆಳಕು ಬೇಗನೆ ಬರುವುದೆಂದು ತಿಳಿಸುತ್ತಾರೆ.
೧೩ ನಾನು ಪಾತಾಳವನ್ನು ನನ್ನ ಮನೆಯೆಂದು ನಿರೀಕ್ಷಿಸಿ,
ನನ್ನ ಹಾಸಿಗೆಯನ್ನು ಕತ್ತಲಲ್ಲಿ ಹಾಸಿದ್ದೇನೆ.
೧೪ ಸಮಾಧಿಯನ್ನು, ‘ನೀನು, ನನ್ನ ತಂದೆ’
ಎಂದೂ ಹುಳುವನ್ನು, ‘ನನ್ನ ತಾಯಿ, ನನ್ನ ತಂಗಿ’ ಎಂದೂ ಕರೆಯುವುದಾದರೆ,
೧೫ ನನ್ನ ನಿರೀಕ್ಷೆ ಎಂಥದು?
ನನ್ನ ನಿರೀಕ್ಷೆಯನ್ನು ಯಾರು ನೋಡುವರು?
೧೬ ಅದು ನನ್ನ ಸಂಗಡ ಪಾತಾಳಕ್ಕೆ ಇಳಿದು ಬಂದೀತೇ?
ನಾವು ಜೊತೆಯಾಗಿ ಧೂಳಿಗೆ ಸೇರಲು ಸಾಧ್ಯವೇ?”