Job
ಯೋಬನು
ಯೋಬನ ಸತ್ವಪರೀಕ್ಷೆ
೧ ಊಚ್ ದೇಶದಲ್ಲಿ ಯೋಬನೆಂಬ ಒಬ್ಬ ಮನುಷ್ಯನಿದ್ದನು. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ, ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದನು. ೨ ಅವನಿಗೆ ಏಳು ಮಂದಿ ಗಂಡುಮಕ್ಕಳೂ, ಮೂರು ಮಂದಿ ಹೆಣ್ಣುಮಕ್ಕಳೂ ಇದ್ದರು. ೩ ಅವನಿಗೆ ಏಳು ಸಾವಿರ ಕುರಿಗಳೂ, ಮೂರು ಸಾವಿರ ಒಂಟೆಗಳೂ, ಐನೂರು ಜೋಡಿ ಎತ್ತುಗಳೂ, ಐನೂರು ಹೆಣ್ಣು ಕತ್ತೆಗಳೂ, ಬಹುಮಂದಿ ಸೇವಕರೂ ಇದ್ದುದರಿಂದ ಅವನು ಮೂಡಣ ದೇಶದವರಲ್ಲೆಲ್ಲಾ ಹೆಚ್ಚು ಸ್ವಾಸ್ತ್ಯವುಳ್ಳವನಾಗಿದ್ದನು.
೪ ಅವನ ಗಂಡು ಮಕ್ಕಳು ಒಂದೊಂದು ದಿನ ಒಬ್ಬೊಬ್ಬನ ಮನೆಯಲ್ಲಿ ಔತಣವನ್ನು ನಡೆಸುತ್ತಾ ಆ ಭೋಜನಕ್ಕೆ ತಮ್ಮ ಮೂವರು ಅಕ್ಕತಂಗಿಯರನ್ನೂ ಕರೆಕಳುಹಿಸುತ್ತಿದ್ದರು. ೫ ಔತಣದ ಸರದಿ ತೀರಿದ ನಂತರ ಯೋಬನು, “ನನ್ನ ಮಕ್ಕಳು ಒಂದು ವೇಳೆ ಹೃದಯದಲ್ಲಿ ದೇವರನ್ನು ದೂಷಿಸಿ ಪಾಪ ಮಾಡಿರಬಹುದು” ಎಂದು ಅವರನ್ನು ಕರೆಯಿಸಿ ಶುದ್ಧಿಪಡಿಸಿ, ಬೆಳಿಗ್ಗೆ ಎದ್ದು ಅವರ ಸಂಖ್ಯೆಗೆ ತಕ್ಕಂತೆ ಹೋಮಗಳನ್ನು ಅರ್ಪಿಸುತ್ತಿದ್ದನು. ಹೀಗೆ ಯೋಬನು ಕ್ರಮವಾಗಿ ಮಾಡುವುದು ದೈನಂದಿನ ಕ್ರಮವಾಗಿತ್ತು.
೬ ಒಂದು ದಿನ ದೇವದೂತರು ಯೆಹೋವನ ಸನ್ನಿಧಿಗೆ ಬರುವಾಗ ಸೈತಾನನು (ಆಪಾದಕ ದೂತನು) ಅವರ ಜೊತೆಯಲ್ಲಿ ಬಂದನು. ೭ ಯೆಹೋವನು ಸೈತಾನನನ್ನು, “ಎಲ್ಲಿಂದ ಬಂದೆ?” ಎಂದು ಕೇಳಲು ಸೈತಾನನು ಯೆಹೋವನಿಗೆ, “ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗುತ್ತಾ ಇದ್ದು ಬಂದೆನು” ಎಂದು ಹೇಳಿದನು. ೮ ಆಗ ಯೆಹೋವನು, “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟೆಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ, ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ” ಎಂದು ಸೈತಾನನಿಗೆ ಹೇಳಿದನು.
೯ ಅದಕ್ಕೆ ಸೈತಾನನು, “ಯೋಬನು ನಿನ್ನಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ? ೧೦ ನೀನು ಅವನಿಗೂ, ಅವನ ಮನೆಗೂ, ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತು ಮುತ್ತಲು ನಿನ್ನ ಕೃಪೆಯ ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವುದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ. ೧೧ ಆದರೆ ನಿನ್ನ ಕೈಚಾಚಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸದೇ ಬಿಡುವನೇ?” ಎಂದನು. ೧೨ ಯೆಹೋವನು ಸೈತಾನನಿಗೆ, “ನೋಡು, ಅವನ ಸ್ವಾಸ್ತ್ಯವೆಲ್ಲಾ ನಿನ್ನ ಕೈಯಲ್ಲಿದೆ. ಆದರೆ ಅವನ ಮೈಮೇಲೆ ಮಾತ್ರ ಕೈಹಾಕಬೇಡ” ಎಂದು ಅಪ್ಪಣೆಕೊಟ್ಟನು. ಆಗ ಸೈತಾನನು ಯೆಹೋವನ ಸನ್ನಿಧಾನದಿಂದ ಹೊರಟುಹೋದನು.
ಯೋಬನ ಮಕ್ಕಳು ಮತ್ತು ಸೊತ್ತಿನ ಅಳಿವು
೧೩ ಇದಾದ ಬಳಿಕ ಒಂದು ದಿನ ಯೋಬನ ಗಂಡು ಹೆಣ್ಣು ಮಕ್ಕಳು ಹಿರಿಯವನ ಮನೆಯಲ್ಲಿ ಔತಣದಲ್ಲಿ ಊಟಮಾಡಿ ಕುಡಿಯುತ್ತಿರುವಾಗ, ೧೪ ಒಬ್ಬ ದೂತನು ಯೋಬನ ಬಳಿಗೆ ಬಂದು, “ನಿನ್ನ ಎತ್ತುಗಳು ಉಳುತ್ತಾ ಇರುವಾಗ ಅವುಗಳ ಹತ್ತಿರ ಕತ್ತೆಗಳು ಮೇಯುತ್ತಾ ಇದ್ದವು. ೧೫ ಶೆಬದವರು ಅವುಗಳ ಮೇಲೆ ಬಿದ್ದು ಹೊಡೆದುಕೊಂಡು ಹೋದರು. ಇದಲ್ಲದೆ ಆಳುಗಳನ್ನು ಕತ್ತಿಯಿಂದ ಸಂಹರಿಸಿದರು. ಈ ಸುದ್ದಿಯನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದು ಹೇಳಿದನು.
೧೬ ಅವನು ಮಾತನಾಡುತ್ತಿರುವಾಗಲೇ ಮತ್ತೊಬ್ಬನು ಬಂದು, “ದೇವರ ಬೆಂಕಿ ಆಕಾಶದಿಂದ ಬಿದ್ದು ಕುರಿಗಳನ್ನೂ, ಆಳುಗಳನ್ನೂ ದಹಿಸಿ ನುಂಗಿಬಿಟ್ಟಿದೆ. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು. ೧೭ ಅಷ್ಟರಲ್ಲಿ ಇನ್ನೊಬ್ಬನು ಬಂದು, “ಕಸ್ದೀಯರು ಮೂರು ಗುಂಪುಗಳಾಗಿ ಬಂದು ಒಂಟೆಗಳ ಮೇಲೆ ಬಿದ್ದು ಹೊಡೆದುಕೊಂಡು ಹೋದರು. ಇದಲ್ಲದೆ ಆಳುಗಳನ್ನು ಕತ್ತಿಯಿಂದ ಹತ್ಯೆ ಮಾಡಿದರು. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು.
೧೮ ಅವನು ಇನ್ನು ಮಾತನಾಡುತ್ತಿರುವಾಗಲೆ ಬೇರೊಬ್ಬನು ಬಂದು, “ನಿನ್ನ ಗಂಡು, ಹೆಣ್ಣು ಮಕ್ಕಳು ತಮ್ಮ ಅಣ್ಣನ ಮನೆಯಲ್ಲಿ ತಿಂದು ಕುಡಿಯುತ್ತಿರುವಾಗ, ೧೯ ಅರಣ್ಯದ ಕಡೆಯಿಂದ ಬಿರುಗಾಳಿಯು ಬೀಸಿ ಮನೆಯ ನಾಲ್ಕು ಮೂಲೆಗಳಿಗೆ ಬಡಿದು, ಮನೆಯು ಯೌವನಸ್ಥರ ಮೇಲೆ ಬಿದ್ದಿತು. ಅವರೆಲ್ಲರು ಸತ್ತು ಹೋದರು. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು.
೨೦ ಆಗ ಯೋಬನು ಎದ್ದು ಮೇಲಂಗಿಯನ್ನು ಹರಿದುಕೊಂಡು, ತಲೆ ಬೋಳಿಸಿಕೊಂಡು ನೆಲದ ಮೇಲೆ ಅಡ್ಡಬಿದ್ದು ದೇವರನ್ನು ಆರಾಧಿಸಿ, ೨೧ “ಏನೂ ಇಲ್ಲದವನಾಗಿ ತಾಯಿಯ ಗರ್ಭದಿಂದ ಬಂದೆನು; ಏನೂ ಇಲ್ಲದವನಾಗಿಯೇ ಗತಿಸಿಹೋಗುವೆನು; ಯೆಹೋವನೇ ಕೊಟ್ಟನು, ಯೆಹೋವನೇ ತೆಗೆದುಕೊಂಡನು; ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ” ಎಂದು ಹೇಳಿದನು. ೨೨ ಇದೆಲ್ಲದರಲ್ಲಿಯೂ ಯೋಬನು ಪಾಪಮಾಡಲಿಲ್ಲ. ದೇವರ ಮೇಲೆ ತಪ್ಪುಹೊರಿಸಲೂ ಇಲ್ಲ.