೪೭
ದೇವಸ್ಥಾನದಿಂದ ಹೊರಡುವ ಪ್ರವಾಹ
೧ ಆಮೇಲೆ ಅವನು ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು. ಆಹಾ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವಕ್ಕೆ ಹರಿಯುತ್ತಿತ್ತು. (ದೇವಸ್ಥಾನವು ಪೂರ್ವಾಭಿಮುಖವಷ್ಟೆ) ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಯಜ್ಞವೇದಿಯ ದಕ್ಷಿಣದಲ್ಲಿ ಹರಿಯುತ್ತಿತ್ತು. ೨ ಆಗ ಅವನು ನನ್ನನ್ನು ಉತ್ತರದಿಕ್ಕಿನ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಕೊಂಡು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಕರೆದು ತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲನೆ ಹರಿಯುವ ನೀರು ಕಾಣಿಸಿತು.
೩ ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊಂಡು ಪೂರ್ವಕ್ಕೆ ಮುಂದುವರಿದು ಸಾವಿರ ಮೊಳ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸಿದನು. ಅಲ್ಲಿ ನೀರು ಕಾಲು ಮುಳುಗುವಷ್ಟಿತ್ತು. ೪ ಅವನು ತಿರುಗಿ ಸಾವಿರ ಮೊಳ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ, ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ತಿರುಗಿ ಸಾವಿರ ಮೊಳ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ, ಆ ನೀರು ಸೊಂಟದವರೆಗೆ ಇತ್ತು. ೫ ಅವನು ಮತ್ತೆ ಸಾವಿರ ಮೊಳ ಅಳೆದನು. ಅದು ನನ್ನಿಂದ ದಾಟಲಾಗದ ನದಿಯಾಗಿತ್ತು; ನೀರು ಆಳವಾಗಿ ಈಜಾಡುವಷ್ಟು ಪ್ರವಾಹವಾಗಿತ್ತು, ದಾಟಲಾಗದ ನದಿಯಾಗಿತ್ತು. ೬ ಆಗ ಅವನು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ?” ಎಂದು ಹೇಳಿ ನನ್ನನ್ನು ನದಿಯ ದಡಕ್ಕೆ ಹತ್ತಿಸಿ ಹಿಂದಿರುಗಿಸಿದನು.
೭ ನಾನು ಹಿಂದಿರುಗಲು ಆಹಾ, ನದಿಯ ಎರಡು ದಡಗಳಲ್ಲಿಯೂ ಅನೇಕ ವೃಕ್ಷಗಳು ಕಾಣಿಸಿದವು. ೮ ಆಗ ಅವನು ನನಗೆ ಹೀಗೆ ಹೇಳಿದನು, “ಈ ಪ್ರವಾಹವು ಪೂರ್ವ ಪ್ರಾಂತ್ಯಕ್ಕೆ ಹೊರಟು, ಅರಾಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು. ಈ ನೀರು ಲವಣ ಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು. ೯ ಈ ನದಿಯು ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪು ಗುಂಪಾಗಿ ಚಲಿಸುವ ಸಕಲ ವಿಧವಾದ ಜಲಜಂತುಗಳು ಬದುಕಿ ಬಾಳುವವು; ಮೀನುಗಳು ಗುಂಪು ಗುಂಪಾಗಿರುವವು. ಈ ನೀರು ಸಮುದ್ರಕ್ಕೆ ಬೀಳಲು, ಆ ನೀರೂ ಸಿಹಿಯಾಗುವುದು. ಈ ನದಿಯು ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು. ೧೦ ಆಗ ಆ ಸಮುದ್ರದ ತೀರದಲ್ಲಿ ಬೆಸ್ತರು ನಿಂತಿರುವರು; ಏನ್ ಗೆದಿಯಿಂದ ಏನ್ ಎಗ್ಲಯಿಮಿನವರೆಗೆ ದಡವೆಲ್ಲಾ ಬಲೆ ಹಾಸುವ ಸ್ಥಳವಾಗುವುದು; ಬಗೆಬಗೆಯ ಮೀನುಗಳು ಮಹಾಸಾಗರದ ಮೀನುಗಳಂತೆ ಅವರಿಗೆ ರಾಶಿ ರಾಶಿಯಾಗಿ ಸಿಕ್ಕುವವು. ೧೧ ಆದರೆ ಅದರ ಸುತ್ತಣ ಕೆಸರಾದ ಸ್ಥಳಗಳು, ಕೊಳಚೆಗಳು ಸಿಹಿಯಾಗುವುದಿಲ್ಲ. ಅವು ಉಪ್ಪಿನ ಗಣಿಯಾಗುವುವು. ೧೨ ನದಿಯ ಎರಡು ದಡಗಳ ತನಕ ಸಕಲ ಫಲವೃಕ್ಷಗಳು ಬೆಳೆಯುವವು. ಅವುಗಳ ಎಲೆ ಬಾಡುವುದಿಲ್ಲ, ಹಣ್ಣು ತೀರುವುದಿಲ್ಲ; ನದಿಯ ನೀರು ಪವಿತ್ರಾಲಯದಿಂದ ಹೊರಟು ಬರುವ ಕಾರಣ ಅವು ತಿಂಗಳುಗಳ ಪ್ರಕಾರ ಹೊಸ ಫಲವನ್ನು ಫಲಿಸುವವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಉಪಯೋಗವಾಗುವುದು.”
ಇಸ್ರಾಯೇಲ್ ದೇಶದ ಮೇರೆಗಳು
೧೩ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀವು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ದೇಶವನ್ನು ಬಾಧ್ಯವಾಗಿ ಹಂಚಿಕೊಡುವಾಗ ಮುಂದಿನ ಮೇರೆಗಳನ್ನು ಅನುಸರಿಸಬೇಕು. ಯೋಸೇಫಿಗೆ ಎರಡು ಪಾಲು ಸೇರಲಿ. ೧೪ ನಾನು ನಿಮ್ಮ ಪಿತೃಗಳಿಗೆ ಪ್ರಮಾಣವಾಗಿ ವಾಗ್ದಾನ ಮಾಡಿದ ಈ ದೇಶವನ್ನು ನೀವೆಲ್ಲರೂ ಸರಿಸಮಾನವಾಗಿ ಅನುಭವಿಸುವಿರಿ. ಇದು ನಿಮಗೆ ಸ್ವಾಸ್ತ್ಯವಾಗಿಯೇ ಇರುವುದು.
೧೫ “ನಿಮ್ಮ ದೇಶದ ಮೇರೆಗಳು ಹೀಗಿರಬೇಕು, ಉತ್ತರದ ಮೇರೆಯು ಮಹಾ ಸಮುದ್ರದಿಂದ ಆರಂಭವಾಗಿ ಹೆತ್ಲೋನಿನ ಮಾರ್ಗವಾಗಿ ಚೆದಾದಿಗೆ ಸೇರುವುದು. ೧೬ ಹಮಾತ್, ಬೇರೋತ, ದಮಸ್ಕದವರೆಗೂ ಹಮಾತಿನ ಮೇರೆಗೂ ಮಧ್ಯವಾಗಿರುವ ಸಿಬ್ರಯಿಮ್ ಎಂಬ ಊರುಗಳ ಮೇಲೆ ಹವ್ರಾನಿನ ಮೇರೆಯಲ್ಲಿರುವ ಹಾಚೇರ್ ಹತ್ತೀಕೋನಿನ ಬಳಿಯಲ್ಲಿ ಮುಗಿಯಬೇಕು. ೧೭ ಹೀಗೆ ಉತ್ತರ ಮೇರೆಯು ಸಮುದ್ರದಿಂದ ದಮಸ್ಕದ ಮೇರೆಯ ಹಚರ್ ಐನೋನಿನವರೆಗೆ ಹಬ್ಬುವುದು. ಅದರ ಉತ್ತರದಲ್ಲಿ ಹಮಾತಿನ ಪ್ರಾಂತ್ಯವಿರುವುದು.
೧೮ “ಇದು ಪೂರ್ವದಿಕ್ಕಿನ ಮೇರೆಯಾಗಿದೆ: ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯೆದಲ್ಲಿರುವ ಯೊರ್ದನ್ ಹೊಳೆಯು ಮೇರೆಯಾಗಿರುವುದು. ಉತ್ತರ ಮೇರೆಯಿಂದ ದಕ್ಷಿಣ ಸಮುದ್ರದವರೆಗೆ ನೀವು ಗುರುತು ಹಾಕಿಕೊಳ್ಳಬೇಕು. ೧೯ ಇದು ದಕ್ಷಿಣದ ಮೇರೆಯಾಗಿದೆ: ದಕ್ಷಿಣದ ಮೇರೆಯು ತಾಮಾರಿನಿಂದ ಹೊರಟು, ಮೆರೀಬೋತ್ ಕಾದೇಶಿನ ಹಳ್ಳದ ಮೇಲೆ ಐಗುಪ್ತದವರೆಗೆ ಮುಂದುವರೆಯುವ ನದಿಯ ಮಾರ್ಗವಾಗಿ ಮಹಾ ಸಮುದ್ರವನ್ನು ಮುಟ್ಟಬೇಕು. ೨೦ ಇದು ಪಶ್ಚಿಮದ ಮೇರೆಯಾಗಿದೆ. ಹಮಾತಿನ ದಾರಿಗೆ ಎದುರಿನ (ಕರಾವಳಿಯ) ತನಕ ಮಹಾ ಸಮುದ್ರದವರೆಗೂ ಪಶ್ಚಿಮದ ಮೇರೆಯಾಗಿರುವುದು. ೨೧ ಈ ರೀತಿಯಾಗಿ ದೇಶವನ್ನು ನೀವು ಇಸ್ರಾಯೇಲಿನ ಎಲ್ಲಾ ಕುಲಕ್ಕೂ ಹಂಚಿಕೊಳ್ಳಬೇಕು. ೨೨ ನಿಮಗೂ, ನಿಮ್ಮ ಮಧ್ಯದಲ್ಲಿ ಪ್ರವಾಸ ಮಾಡುತ್ತಾ, ಮಕ್ಕಳನ್ನು ಪಡೆದಿರುವ ವಿದೇಶಿಗಳಿಗೂ ದೇಶವನ್ನು ಬಾಧ್ಯವಾಗಿ ಹಂಚಬೇಕು. ಅವರು ಇಸ್ರಾಯೇಲರ ಮಧ್ಯೆದಲ್ಲಿ ನಿಮಗೆ ಸ್ವದೇಶಿಗಳಂತೆಯೇ ಇರಬೇಕು. ಇಸ್ರಾಯೇಲಿನ ಕುಲಗಳೊಳಗೆ ನಿಮ್ಮೊಂದಿಗೆ ಅವರಿಗೆ ಸ್ವಾಸ್ತ್ಯವಾಗಲಿ. ೨೩ ಯಾವ ಕುಲದಲ್ಲಿ ವಿದೇಶಿಯು ಪ್ರವಾಸವಾಗಿರುತ್ತಾನೋ ಅಲ್ಲಿ ಅವನಿಗೆ ಸ್ವಾಸ್ತ್ಯವನ್ನು ಕೊಡಬೇಕು” ಇದು ಕರ್ತನಾದ ಯೆಹೋವನ ನುಡಿ.