೨೭
ತೂರಿನ ವೈಭವವೂ, ನಾಶನವೂ
೧ ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು, ೨ “ನರಪುತ್ರನೇ, ನೀನು ತೂರಿನ ವಿಷಯದಲ್ಲಿ ಶೋಕ ಗೀತೆಯನ್ನೆತ್ತು, ಅದಕ್ಕೆ ಹೀಗೆ ನುಡಿ, ೩ ‘ಸಮುದ್ರ ದ್ವಾರದಲ್ಲಿ ವಾಸಿಸುತ್ತಾ, ಜನಾಂಗಗಳಿಗಾಗಿ ಅನೇಕ ದ್ವೀಪಗಳೊಂದಿಗೆ ವ್ಯಾಪಾರ ಮಾಡುವ ನಗರಿಯೇ!’ ಕರ್ತನಾದ ಯೆಹೋವನು ಇಂತೆನ್ನುತ್ತಾನೆ,
ತೂರೇ, ‘ನಾನು ಪರಿಪೂರ್ಣ ಸುಂದರಿಯಾಗಿದ್ದೇನೆ’ ಎಂದು ನೀನು ಅಂದುಕೊಂಡಿದ್ದೀ!
೪ ನಿನ್ನ ನೆಲೆಯು ಸಮುದ್ರದ ಮಧ್ಯವೇ; ನಿನ್ನನ್ನು ಕಟ್ಟಿದವರು ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದರು.
೫ ಸೆನೀರಿನ ತುರಾಯಿ ಮರದಿಂದ ನಿನ್ನ ಹಲಗೆಗಳನ್ನ ಮಾಡುವುದಕ್ಕೆ
ಮತ್ತು ನಿನ್ನ ಸ್ತಂಭವನ್ನು ರಚಿಸುವುದಕ್ಕೆ ಲೆಬನೋನಿನಿಂದ ದೇವದಾರು ಮರವನ್ನು ತಂದರು.
೬ ನಿನ್ನ ಹುಟ್ಟುಗೋಲನ್ನು ಬಾಷಾನಿನ ಓಕ್ ಮರದಿಂದ ಮಾಡಿ,
ಕಿತ್ತೀಮ್ ದ್ವೀಪದ ಹಲಿಗೆಯಿಂದ ನಿನ್ನ ಹಡಗಿನ ಮೇಲ್ಮಾಳಿಗೆಯನ್ನು ಕಟ್ಟಿ, ಅದನ್ನು ದಂತದಿಂದ ಕೆತ್ತಿದ್ದಾರೆ.
೭ ನಿನ್ನ ಹಾಯಿಯು ನಿನಗೆ ಧ್ವಜವಾಗಲೆಂದು ಅದನ್ನು ಐಗುಪ್ತದ ಕಸೂತಿಯ ನಾರು ಬಟ್ಟೆಯಿಂದ ಮಾಡಿದರು. ನಿನ್ನ ಮೇಲ್ಕಟ್ಟನ್ನು ಎಲೀಷ ಕರಾವಳಿಯ ಧೂಮ್ರ ರಕ್ತವರ್ಣಗಳಿಂದ ಚಿತ್ರಿತವಾಗಿದೆ.
೮ ಚೀದೋನಿನ, ಅರ್ವಾದಿನ ನಿವಾಸಿಗಳು ನಿನಗೆ ಹುಟ್ಟು ಹಾಕುವರು;
ತೂರೇ, ನಿನ್ನಲ್ಲಿನ ವಿವೇಕಿಗಳು ನಿನ್ನ ನಾವಿಕರು.
೯ ನಿನ್ನಲ್ಲಿ ಸೇರಿಕೊಂಡಿದ್ದ ಗೇಬಾಲಿನ ಹಿರಿಯರೂ ಮತ್ತು ಜಾಣರೂ ನಿನ್ನ ಬಿರುಕುಗಳನ್ನು ಮುಚ್ಚಿದ್ದಾರೆ.
ಸಮುದ್ರದ ಸಕಲ ನಾವೆಗಳ ಮತ್ತು ನಾವಿಕರ ಸಮೇತ ನಿನ್ನ ಬಳಿಯಲ್ಲಿದ್ದು, ನಿನಗೆ ಸರಕುಗಳನ್ನು ತಂದೊಪ್ಪಿಸಿದ್ದಾರೆ.
೧೦ ಪಾರಸಿಯರೂ, ಲೂದ್ಯರೂ, ಪೂಟ್ಯರೂ ನಿನ್ನ ಸೈನ್ಯಾಧಿಕಾರಿಗಳಾಗಿ ನಿನ್ನ ಸೈನ್ಯದಲ್ಲಿದ್ದರು.
ಗುರಾಣಿಯನ್ನು ಮತ್ತು ಶಿರಸ್ತ್ರಾಣವನ್ನು ನಿನ್ನಲ್ಲಿ ತೂಗಿಸಿದರು. ಇವರು ನಿನಗೆ ಮಹತ್ತನ್ನು ಕೊಟ್ಟರು! ೧೧ ಅರ್ವಾದಿನವರೂ ಮತ್ತು ಹೆಲೆಕರು ನಿನ್ನ ಸೈನಿಕರ ಸಂಗಡ ನಿನ್ನ ಗೋಡೆಗಳ ಸುತ್ತಲೂ ನಿಂತಿದ್ದರು. ಗಮ್ಮಾದ್ಯರು ನಿನ್ನ ಕೊತ್ತಲುಗಳಲ್ಲಿ ಕಾವಲಾಗಿದ್ದರು. ಎಲ್ಲರೂ ತಮ್ಮ ಗುರಾಣಿಗಳನ್ನು ಸುತ್ತಮುತ್ತಲು ನಿನ್ನ ಗೋಡೆಗಳ ಮೇಲೆ ನೇತುಹಾಕಿ, ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದರು!
೧೨ “ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿದ್ದರಿಂದ ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ ಮತ್ತು ಸೀಸಗಳನ್ನು ಒದಗಿಸುತ್ತಿದ್ದರು. ೧೩ ಯಾವಾನ್, ತೂಬಲ್, ಮೆಷೆಕ್ ಇವರು ನಿನ್ನ ವರ್ತಕರಾಗಿದ್ದರು. ಗುಲಾಮರನ್ನೂ ಮತ್ತು ತಾಮ್ರದ ಪಾತ್ರೆಗಳನ್ನೂ ನಿನಗೆ ಸರಬರಾಜು ಮಾಡುತ್ತಿದ್ದರು.
೧೪ “ತೋಗರ್ಮ ವಂಶದವರು ಕುದುರೆಗಳಿಂದಲೂ, ಕುದುರೆ ಸವಾರಿಗಳಿಂದಲೂ, ಹೇಸರಕತ್ತೆಗಳಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು. ೧೫ ದೇದಾನಿನವರು ನಿನ್ನ ವರ್ತಕರಾಗಿದ್ದರು; ಅನೇಕ ದ್ವೀಪಗಳು ನಿನ್ನ ಕೈಕೆಳಗೆ ವ್ಯಾಪಾರವನ್ನು ನಡೆಸಿದವು; ಅವರು ದಂತ ಕೊಂಬು ಮತ್ತು, ಕಪ್ಪುಮರಗಳನ್ನೂ ನಿನಗೆ ಕಪ್ಪವಾಗಿ ಸಲ್ಲಿಸುತ್ತಿದ್ದರು.
೧೬ “ನಿನ್ನ ಕೈಕೆಲಸದ ವಸ್ತುಗಳು ಅಪಾರವಾಗಿದ್ದುದರಿಂದ ಅರಾಮಿನವರೂ ನಿನ್ನವರಾಗಿ ವ್ಯಾಪಾರಮಾಡಿ, ಕೆಂಪರಲು, ರಕ್ತಾಂಬರ, ಕಸೂತಿಯ ವಸ್ತ್ರ, ನಾರುಬಟ್ಟೆ, ಹವಳ, ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿದರು.
೧೭ “ಯೆಹೂದ್ಯರೂ, ಇಸ್ರಾಯೇಲ್ ದೇಶದವರೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ ಗೋಧಿಯಿಂದಲೂ, ಖಂಡಸಕ್ಕರೆ, ಜೇನು, ಎಣ್ಣೆ ಮತ್ತು ಸುಗಂಧತೈಲದಿಂದಲೂ ನಿನ್ನೊಂದಿಗೆ ವ್ಯಾಪಾರ ನಡೆಸಿದರು.
೧೮ “ನಿನ್ನ ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿದ್ದುದರಿಂದಲೂ, ಅಪರಿಮಿತವಾದ ಬಗೆಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದುದರಿಂದಲೂ ದಮಸ್ಕದವರೂ ನಿನ್ನ ಪರವಾಗಿ ವ್ಯಾಪಾರಮಾಡಿ, ಹೆಲ್ಬೋನಿನ ದ್ರಾಕ್ಷಾರಸವನ್ನೂ ಹಾಗು ಚಾಹರಿನ ಉಣ್ಣೆಯನ್ನೂ ನಿನ್ನಲ್ಲಿ ತುಂಬಿಸುತ್ತಿದ್ದರು.
೧೯ “ದಾನಿನವರೂ ಮತ್ತು ಯಾವಾನಿನವರೂ ಊಜಾಲಿನಿಂದ ನಾನಾ ಸರಕುಗಳನ್ನು ತಂದು ನಿನಗೆ ಒಪ್ಪಿಸಿದರು.ಕಬ್ಬಿಣ, ಬಜೆ, ಲವಂಗ, ಚಕ್ಕೆ ಇವುಗಳು ನಿನಗೆ ಆಮದಾಗುತ್ತಿದ್ದವು. ೨೦ ದೇದಾನಿನವರು ರಥಗಳ ಸವಾರಿಗಳಿಗೆ ತಕ್ಕ ಒಳ್ಳೆಯ ಬಟ್ಟೆಗಳಿಂದ ನಿನ್ನ ಸಂಗಡ ವ್ಯಾಪಾರ ಮಾಡುತ್ತಿದ್ದರು. ೨೧ ಆರಬರು ಮತ್ತು ಕೇದಾರಿನ ಪ್ರಧಾನರೂ ನಿನ್ನ ಕೈಕೆಳಗಿನ ವರ್ತಕರಾಗಿದ್ದರು; ಕುರಿಮರಿಗಳಿಂದಲೂ, ಟಗರುಗಳಿಂದಲೂ, ಹೋತಗಳಿಂದಲೂ ನಿನ್ನೊಡನೆ ವ್ಯಾಪಾರ ಮಾಡಿದ್ದರು.
೨೨ “ಶೇಬಾದವರೂ ಮತ್ತು ರಗ್ಮದವರೂ ನಿನ್ನ ಕಡೆಯ ವರ್ತಕರಾಗಿ, ಎಲ್ಲಾ ಶ್ರೇಷ್ಠವಾದ ಸುಗಂಧದ್ರವ್ಯದಿಂದಲೂ, ಅಮೂಲ್ಯವಾದ ರತ್ನಗಳಿಂದಲೂ, ಚಿನ್ನದಿಂದಲೂ ನಿನ್ನೊಡನೆ ವ್ಯಾಪಾರ ಮಾಡಿದರು. ೨೩ ಹಾರಾನ್, ಕನ್ನೆ, ಎದೆನ್ ಸ್ಥಳಗಳವರೂ, ಶೆಬ, ಅಶ್ಶೂರ್ ಕಿಲ್ಮದ್ ಪ್ರಾಂತಗಳವರೂ ನಿನ್ನ ವರ್ತಕರಾಗಿದ್ದರು. ೨೪ ಅವರು ನಿನ್ನ ವ್ಯಾಪಾರಿಗಳಾಗಿ, ಉತ್ತಮ ಕಸೂತಿಯ ಧೂಮ್ರ ವರ್ಣದ ನಿಲುವಂಗಿ ಮೊದಲಾದ ಸರಕುಗಳನ್ನೂ, ಹಗ್ಗಗಳಿಂದ ಬಲವಾಗಿ ಬಿಗಿದ ವಿಚಿತ್ರ ವಸ್ತ್ರಗಳ ಪೆಟ್ಟಿಗೆಗಳನ್ನೂ ತಂದರು. ೨೫ ತಾರ್ಷೀಷಿನ ಹಡಗುಗಳು ಸಾಲುಸಾಲಾಗಿ ನಿನಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಬಂದವು.
ನೀನು ಸಮುದ್ರ ಮಧ್ಯದಲ್ಲಿ ಬಹಳ ಘನವುಳ್ಳವಳಾದೆ.
೨೬ ಹುಟ್ಟುಹಾಕುವವರು ನಿನ್ನನ್ನು ಮಹಾ ತರಂಗಗಳಿಗೆ ಸಿಕ್ಕಿಸಿದ್ದಾರೆ; ಮೂಡಣ ಗಾಳಿಯು ನಿನ್ನನ್ನು ಸಾಗರದ ಮಧ್ಯದಲ್ಲಿ ಒಡೆದುಬಿಟ್ಟಿದೆ. ೨೭ ನಿನ್ನ ಆಸ್ತಿಯು, ನಿನ್ನ ವಸ್ತುಗಳು, ನಿನ್ನ ಸರಕುಗಳು, ನಿನ್ನ ನಾವಿಕರು, ನಿನ್ನ ಅಂಬಿಗರು, ನಿನ್ನ ಒಡಕುಗಳನ್ನು ಭದ್ರಪಡಿಸುವವರು, ನಿನ್ನ ವ್ಯಾಪಾರಿಗಳು, ನಿನ್ನಲ್ಲಿನ ಸಮಸ್ತ ಸೈನಿಕರು, ಅಂತು ನಿನ್ನೊಳಗೆ ಸೇರಿಕೊಂಡಿರುವ ನಿನ್ನ ಸಿಬ್ಬಂದಿಯೆಲ್ಲವೂ ನಿನ್ನ ನಾಶದ ದಿನದಲ್ಲಿ ಸಮುದ್ರದೊಳಗೆ ಮುಳುಗಿ ಹೋಗುವರು.
೨೮ ನಿನ್ನ ನಾವಿಕರ ಕೂಗಾಟಕ್ಕೆ ಸಮೀಪದ ಪ್ರದೇಶಗಳು ನಡುಗುವುವು.
೨೯ ಹುಟ್ಟುಹಾಕುವವರೆಲ್ಲರೂ, ಅಂಬಿಗರೂ,
ಸಮುದ್ರದ ಸಕಲ ನಾವಿಕರೂ ತಮ್ಮ ತಮ್ಮ ಹಡಗುಗಳಿಂದ ಇಳಿದು ನೆಲೆದ ಮೇಲೆ ನಿಂತುಕೊಳ್ಳುವರು.
೩೦ ನಿನ್ನ ನಿಮಿತ್ತ ದುಃಖದಿಂದ ಅರಚಿ, ತಲೆಗೆ ಧೂಳೆರಚಿಕೊಂಡು,
ಬೂದಿಯಲ್ಲಿ ಬಿದ್ದು ಹೊರಳಾಡಿ,
೩೧ ನಿನಗಾಗಿ ತಲೆ ಬೋಳಿಸಿಕೊಂಡು, ಗೋಣಿತಟ್ಟನ್ನು ಸುತ್ತಿಕೊಂಡು,
ಮನೋವ್ಯಥೆಯಿಂದ ಗೋಳಾಡಿ, ನಿನಗೋಸ್ಕರ ಬಿಕ್ಕಿಬಿಕ್ಕಿ ಅಳುವರು.
೩೨ ಅವರು ರೋಧನ ಮಾಡುತ್ತಾ ನಿನ್ನ ವಿಷಯವಾಗಿ ಶೋಕ ಗೀತವನ್ನೆತ್ತಿ ಹೀಗೆ ಪ್ರಲಾಪಿಸುವರು,
‘ಸಮುದ್ರದ ನಡುವೆ ಹಾಳಾಗಿರುವ ತೂರಿಗೆ ಯಾವ ಪಟ್ಟಣ ಸಮಾನವಾಗಿದೆ?’
೩೩ ನಿನ್ನ ಸರಕುಗಳು ಸಮುದ್ರಗಳನ್ನು ದಾಟಿ ಹರಡಿಕೊಂಡವು, ಅವುಗಳಿಂದ ಅನೇಕ ಜನಾಂಗಗಳನ್ನು ತೃಪ್ತಿಪಡಿಸಿದಿ;
ನಿನ್ನ ಅಪಾರವಾದ ಐಶ್ವರ್ಯದಿಂದಲೂ, ವ್ಯಾಪಾರದ ವಸ್ತುಗಳಿಂದಲೂ ಭೂರಾಜರನ್ನು ಸಮೃದ್ಧಿಪಡಿಸಿದಿ.
೩೪ ಈಗಲಾದರೋ ನೀನು ಸಮುದ್ರದಿಂದ ಹಾಳಾದೆ, ನಿನ್ನ ಸರಕುಗಳೂ,
ನಿನ್ನಲ್ಲಿ ಸೇರಿಕೊಂಡಿದ್ದ ಸಕಲ ಜನರೂ ಆಗಾಧಜಲದಲ್ಲಿ ಮುಳುಗಿ ಹೋದರು.
೩೫ ಕರಾವಳಿಯ ಸಮಸ್ತ ನಿವಾಸಿಗಳು ನಿನ್ನ ಸ್ಥಿತಿಗೆ ಬೆಚ್ಚಿ ವಿಸ್ಮಯರಾಗಿದ್ದಾರೆ;
ಅರಸರು ಭಯಪಟ್ಟಿದ್ದಾರೆ. ಅರಸರು ನಡುಗಿ ಭೀತಿಗೊಂಡಿದ್ದಾರೆ.
೩೬ ಜನಾಂಗಗಳ ವರ್ತಕರು ನಿನ್ನನ್ನು ನೋಡಿ, ಸಿಳ್ಳು ಹಾಕುತ್ತಾರೆ;
ನೀನು ಸಂಪೂರ್ಣ ಧ್ವಂಸವಾಗಿ ಇನ್ನೆಂದಿಗೂ ಇಲ್ಲದಂತಾಗಿರುವೆ.”