೩
ಇಸ್ರಾಯೇಲಿನ ವಿವಿಧ ಪಾಪಕ್ಕೆ ಆದ ಘೋರ ದುರ್ಗತಿ
೧ ಇಸ್ರಾಯೇಲರೇ ಯೆಹೋವನು ನಿಮಗೆ ವಿರುದ್ಧವಾಗಿ, ತಾನು ಐಗುಪ್ತ ದೇಶದೊಳಗಿಂದ ಪಾರು ಮಾಡಿದ ಪೂರ್ಣಕುಲಕ್ಕೆ ವಿರುದ್ಧವಾಗಿ ನುಡಿದಿರುವ ಈ ಮಾತನ್ನು ಕೇಳಿರಿ,
೨ ಭೂಮಿಯ ಸಕಲ ಕುಲಗಳೊಳಗೆ
ನಿಮ್ಮನ್ನು ಮಾತ್ರ ನನ್ನವರೆಂದು ಆರಿಸಿಕೊಂಡಿದ್ದೇನೆ.
ಆದಕಾರಣ ನಿಮ್ಮ ಎಲ್ಲಾ ಪಾಪಗಳ ಫಲವನ್ನು
ನೀವು ಅನುಭವಿಸುವಂತೆ ಮಾಡುವೆನು.
ಪ್ರವಾದಿಯು ನಿಷ್ಕಾರಣವಾಗಿ ಖಂಡಿಸನು
೩ ಗೊತ್ತು ಗುರಿಯಿಲ್ಲದೆ ಯಾರಾದರಿಬ್ಬರು
ಜೊತೆಯಾಗಿ ಪ್ರಯಾಣ ಮಾಡುವುದುಂಟೆ?
೪ ಬೇಟೆಯ ಬಲಿ ಕಾಣದೇ ಸಿಂಹವು
ಅರಣ್ಯದಲ್ಲಿ ಗರ್ಜಿಸುವುದೋ?
ಏನನ್ನೂ ಬೇಟೆಯಾಡದೆ
ಪ್ರಾಯದ ಸಿಂಹವು ಗವಿಯಲ್ಲಿ ಕುಳಿತು ಗುರುಗುಟ್ಟುವುದೋ?
೫ ಕಾಳಿಲ್ಲದೆ ಪಕ್ಷಿಯು
ನೆಲದಲ್ಲಿನ ಬಲೆಯೊಳಗೆ ಬೀಳುವುದೋ?
ಏನೂ ಬಲೆಗೆ ಸಿಕ್ಕಿಕೊಳ್ಳದೇ ಬೋನು ಉರುಲಾಗುವುದೋ?
೬ ಪಟ್ಟಣದಲ್ಲಿ ಕೊಂಬನ್ನು ಊದಿದರೆ
ಜನರು ಹೆದರುವುದಿಲ್ಲವೋ?
ಯೆಹೋವನಿಂದಲ್ಲದೆ
ಪಟ್ಟಣಕ್ಕೆ ವಿಪತ್ತು ಸಂಭವಿಸುವುದೋ?
೭ ನಿಶ್ಚಯವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ಯೋಜನೆಯನ್ನು ತಿಳಿಸದೆ
ಯೆಹೋವನಾದ ದೇವರು ಏನನ್ನೂ ಮಾಡುವುದಿಲ್ಲ.
೮ ಸಿಂಹವು ಗರ್ಜಿಸಿದರೆ,
ಭಯಪಡದೆ ಇರುವವರು ಯಾರು?
ಕರ್ತನಾದ ಯೆಹೋವನು ನುಡಿದಿದ್ದಾನೆ,
ಆ ನುಡಿಯನ್ನು ಕೇಳಿ ಪ್ರವಾದಿಸದವರು ಯಾರು?
ಸಮಾರ್ಯ ಪಟ್ಟಣದ ಧ್ವಂಸ
೯ ಅಷ್ದೋದಿನ ಅರಮನೆಗಳಲ್ಲಿಯೂ,
ಐಗುಪ್ತ ದೇಶದ ಅರಮನೆಗಳಲ್ಲಿಯೂ ಹೀಗೆ ಪ್ರಕಟಿಸಿರಿ,
“ಸಮಾರ್ಯದ ಬೆಟ್ಟಗಳಲ್ಲಿ ಕೂಡಿಬನ್ನಿರಿ.
ಪಟ್ಟಣದೊಳಗೆ ಇರುವ ಗದ್ದಲವನ್ನು,
ಅದರೊಳಗಿರುವ ಹಿಂಸೆಯನ್ನೂ ನೋಡಿರಿ.
೧೦ ನ್ಯಾಯನೀತಿಗಳನ್ನು ಮಾಡುವುದಕ್ಕೆ ಅವರಿಗೆ ತಿಳಿದಿಲ್ಲ”
ಇದು ಯೆಹೋವನ ನುಡಿ.
ತಮ್ಮ ಉಪ್ಪರಿಗೆಗಳಲ್ಲಿ ಬಾಧೆಯನ್ನೂ,
ನಾಶನವನ್ನೂ ಕೂಡಿಸಿಟ್ಟುಕೊಂಡಿದ್ದಾರೆ.
೧೧ ಹೀಗಿರಲು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ:
“ಶತ್ರುವು ನಿನ್ನ ದೇಶವನ್ನು ಮುತ್ತಿಕೊಳ್ಳುವನು.
ನಿನ್ನ ಶಕ್ತಿಯನ್ನು ಕುಂದಿಸಿಬಿಡುವನು
ಮತ್ತು ನಿನ್ನ ಅರಮನೆಗಳು ಸೂರೆಯಾಗುವವು.”
೧೨ ಯೆಹೋವನು ಇಂತೆನ್ನುತ್ತಾನೆ:
“ಸಿಂಹದ ಬಾಯೊಳಗಿಂದ ಕುರುಬನು ತನ್ನ ಕುರಿಗಳ ಎರಡು ಕಾಲನ್ನೂ,
ಅಥವಾ ಕಿವಿಯ ಒಂದು ತುಂಡನ್ನೂ,
ಹೇಗೆ ರಕ್ಷಿಸುವನೋ, ಹಾಗೆಯೇ ಸಮಾರ್ಯದೊಳಗೆ ಹಾಸಿಗೆಯ ಮೂಲೆಯಲ್ಲಿಯೂ,
ಮಂಚದ ಪಟ್ಟೇದಿಂಬುಗಳಲ್ಲಿಯೂ,
ಒರಗಿಕೊಳ್ಳುವ ಇಸ್ರಾಯೇಲರ ಸ್ವಲ್ಪ ಭಾಗ ಮಾತ್ರ ರಕ್ಷಿಸಲ್ಪಡುವುದು.”
೧೩ ಸೇನಾಧೀಶ್ವರ ದೇವನಾದ ಯೆಹೋವನು ಇಂತೆನ್ನುತ್ತಾನೆ;
ಕೇಳಿರಿ, ಯಾಕೋಬ ವಂಶದವರಿಗೆ ವಿರುದ್ಧವಾಗಿ ಸಾಕ್ಷಿಕೊಡಿರಿ.
೧೪ “ನಾನು ಇಸ್ರಾಯೇಲಿನ ದ್ರೋಹಗಳಿಗಾಗಿ ಅವರನ್ನು ಶಿಕ್ಷಿಸುವ ದಿನಗಳಲ್ಲಿ,
ಬೇತೇಲಿನ ಯಜ್ಞವೇದಿಗಳನ್ನು ಧ್ವಂಸಮಾಡುವೆನು.
ಯಜ್ಞವೇದಿಯ ಕೊಂಬುಗಳು ಕಡಿಯಲ್ಪಟ್ಟು
ನೆಲದ ಮೇಲೆ ಉರುಳುವವು.
೧೫ ನಾನು ಚಳಿಗಾಲದ ಅರಮನೆಯನ್ನೂ,
ಬೇಸಿಗೆಯ ಅರಮನೆಯನ್ನೂ ಹೊಡೆದುಹಾಕುವೆನು.
ದಂತಮಂದಿರಗಳು ಹಾಳಾಗುವವು
ಮತ್ತು ದೊಡ್ಡಮನೆಗಳು ಕೊನೆಗಾಣುವು”
ಇದು ಯೆಹೋವನ ನುಡಿ.