೧೧
ಸೊಲೊಮೋನನು ಅನ್ಯಜನಾಂಗದ ಪತ್ನಿಯರಿಂದ ದೈವದ್ರೋಹಿಯಾದದ್ದು
೧ ಅರಸನಾದ ಸೊಲೊಮೋನನು ಫರೋಹನ ಮಗಳನ್ನಲ್ಲದೆ ಮೋವಾಬ್ಯರು, ಅಮ್ಮೋನಿಯರು, ಎದೋಮ್ಯರು, ಚೀದೋನ್ಯರು ಮತ್ತು ಹಿತ್ತೀಯರು ಎಂಬ ಜನಾಂಗಗಳ ಸ್ತ್ರೀಯರನ್ನು ಮೋಹಿಸಿದನು. ೨ ಯೆಹೋವನು ಈ ಜನಾಂಗಗಳ ವಿಷಯದಲ್ಲಿ ಇಸ್ರಾಯೇಲರಿಗೆ, “ನಿಮಗೂ ಅವರಿಗೂ ಕೊಡುವುದು ತೆಗೆದುಕೊಳ್ಳುವುದು ನಡೆಯಬಾರದು, ಅದು ನಡೆಯುವುದಾದರೆ ಅವರು ನಿಮ್ಮ ಮನಸ್ಸನ್ನು ತಮ್ಮ ದೇವತೆಗಳ ಕಡೆಗೆ ತಿರುಗಿಸಾರು” ಎಂದು ಆಜ್ಞಾಪಿಸಿದ್ದರೂ ಸೊಲೊಮೋನನು ಅವರ ಸ್ತ್ರೀಯರಲ್ಲಿ ಅನುರಕ್ತನಾಗಿದ್ದನು. ೩ ಅವನಿಗೆ ರಾಜವಂಶದವರಾದ ಏಳುನೂರು ಮಂದಿ ಪತ್ನಿಯರಲ್ಲದೆ ಮುನ್ನೂರು ಜನರು ಉಪಪತ್ನಿಯರಿದ್ದರು. ಈ ಸ್ತ್ರೀಯರು ಅವನ ಮನಸ್ಸನ್ನು ಕೆಡಿಸಿಬಿಟ್ಟರು. ೪ ಅವನು ವೃದ್ಧನಾದಾಗ ಇವರು ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು. ಈ ಕಾರಣದಿಂದ ಅವನು ತನ್ನ ದೇವರಾದ ಯೆಹೋವನಲ್ಲಿಟ್ಟಿದ್ದ ಪ್ರಾಮಾಣಿಕವಾದ ಭಕ್ತಿಯನ್ನು ಕಳೆದುಕೊಂಡನು. ತನ್ನ ತಂದೆಯಾದ ದಾವೀದನಂತೆ ನಡೆಯಲಿಲ್ಲ. ೫ ಅವನು ಚೀದೋನ್ಯರ ಅಷ್ಟೋರೆತ್ ದೇವತೆಯನ್ನೂ, ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹವನ್ನು ಆರಾಧಿಸತೊಡಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು. ೬ ಅವನ ತಂದೆಯಾದ ದಾವೀದನು ಪೂರ್ಣಮನಸ್ಸಿನಿಂದ ಯೆಹೋವನನ್ನು ಸೇವಿಸಿದಂತೆ ಅವನು ಸೇವಿಸಲಿಲ್ಲ. ೭ ಅವನು ಯೆರೂಸಲೇಮಿನ ಮೂಡಲಲ್ಲಿರುವ ಗುಡ್ಡದಲ್ಲಿ ಮೋವಾಬ್ಯರ ಕೆಮೋಷ್ ಎಂಬ ಅಸಹ್ಯ ವಿಗ್ರಹಕ್ಕೂ ಮತ್ತು ಅಮ್ಮೋನಿಯರ ಮೋಲೆಕ್ ಎಂಬ ಅಸಹ್ಯ ವಿಗ್ರಹಕ್ಕೂ ಪೂಜಾಸ್ಥಳಗಳನ್ನು ಕಟ್ಟಿಸಿದನು. ೮ ಈ ರೀತಿಯಾಗಿ ಅನ್ಯಜನಾಂಗಗಳಿಂದ ಬಂದ ತನ್ನ ಹೆಂಡತಿಯರು ತಮ್ಮ ದೇವತೆಗಳಿಗೆ ಧೂಪಹಾಕುವುದಕ್ಕೂ ಮತ್ತು ಯಜ್ಞವರ್ಪಿಸುವುದಕ್ಕೂ ಅನುಕೂಲ ಮಾಡಿಕೊಟ್ಟನು.
೯ ಇಸ್ರಾಯೇಲ್ ದೇವರಾದ ಯೆಹೋವನು ಸೊಲೊಮೋನನಿಗೆ ಎರಡು ಸಾರಿ ಕಾಣಿಸಿಕೊಂಡು, ೧೦ ಅನ್ಯದೇವತೆಗಳನ್ನು ಸೇವಿಸಲೇ ಬಾರದೆಂದು ಆಜ್ಞಾಪಿಸಿದ್ದರೂ ಅವನು ಆತನ ಆಜ್ಞೆಗಳನ್ನು ಮೀರಿದ್ದರಿಂದ ಆತನು ಅವನ ಮೇಲೆ ಕೋಪಗೊಂಡನು. ೧೧ ಯೆಹೋವನು ಅವನಿಗೆ, “ನೀನು ಈ ರೀತಿಯಾಗಿ ಮಾಡಿ ನನ್ನ ವಿಧಿನಿಬಂಧನೆಗಳನ್ನು ಮೀರಿದ್ದರಿಂದ ನಿನ್ನ ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನ್ನ ಸೇವಕನಿಗೆ ಕೊಡುವೆನು. ೧೨ ಆದರೂ ನಾನು ನಿನ್ನ ತಂದೆಯಾದ ದಾವೀದನನ್ನು ನೆನಸಿ ನಿನ್ನ ಕಾಲದಲ್ಲಿ ಇದನ್ನು ಮಾಡುವುದಿಲ್ಲ. ನಿನ್ನ ಮಗನ ಕೈಯಿಂದ ಅದನ್ನು ಕಿತ್ತುಕೊಳ್ಳುವೆನು. ೧೩ ಆದರೆ ರಾಜ್ಯವನ್ನೆಲ್ಲಾ ಕಿತ್ತುಕೊಳ್ಳುವುದಿಲ್ಲ. ನನ್ನ ಸೇವಕನಾದ ದಾವೀದನಿಗೋಸ್ಕರವೂ ನಾನು ಆರಿಸಿಕೊಂಡ ಯೆರೂಸಲೇಮ್ ಪಟ್ಟಣಕ್ಕೋಸ್ಕರವೂ ನಿನ್ನ ಮಗನಿಗೆ ಒಂದು ಕುಲವನ್ನು ಉಳಿಸುವೆನು” ಎಂದು ಹೇಳಿದನು.
ರಾಜ್ಯದಲ್ಲಿ ವೈರಿಗಳು ಎದ್ದದ್ದು
೧೪ ಯೆಹೋವನು ಎದೋಮ್ಯನೂ, ರಾಜಪುತ್ರನೂ ಆದ ಹದದನನ್ನು ಸೊಲೊಮೋನನಿಗೆ ವಿರುದ್ಧವಾಗಿ ಎಬ್ಬಿಸಿದನು. ೧೫ ದಾವೀದನಿಗೂ ಎದೋಮಿನವರಿಗೂ ಯುದ್ಧ ನಡೆಯುತ್ತಿರುವಾಗ ಸೇನಾಪತಿಯಾದ ಯೋವಾಬನು ಇಸ್ರಾಯೇಲ್ ಸರ್ವಸೈನ್ಯದೊಡನೆ ಅಲ್ಲಿಗೆ ಹೋಗಿ, ಹತರಾದ ಇಸ್ರಾಯೇಲರನ್ನು ಸಮಾಧಿಮಾಡಿದನು. ೧೬ ಯೋವಾಬನು ಮತ್ತು ಎಲ್ಲಾ ಇಸ್ರಾಯೇಲರು ಆರು ತಿಂಗಳು ಅಲ್ಲಿಯೇ ಇದ್ದು, ಎದೋಮ್ಯರ ಎಲ್ಲಾ ಗಂಡಸರನ್ನು ಸಂಹರಿಸಿದರು. ೧೭ ಆ ಸಮಯದಲ್ಲಿ ಬಾಲಕನಾದ ಹದದನು ತನ್ನ ತಂದೆಯ ಸೇವಕರಾದ ಕೆಲವು ಜನರು ಎದೋಮ್ಯರ ಜೊತೆಯಲ್ಲಿ ಐಗುಪ್ತಕ್ಕೆ ಓಡಿಹೋಗಬೇಕೆಂದು ಹೊರಟನು. ೧೮ ಅವರು ಮೊದಲು ಮಿದ್ಯಾನಿಗೂ, ಆ ಮೇಲೆ ಪಾರಾನಿಗೂ ಬಂದರು. ಅಲ್ಲಿಂದ ಕೆಲವು ಜನರು ಪಾರಾನಿನ ಜನರನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಐಗುಪ್ತದ ಅರಸನಾದ ಫರೋಹನ ಬಳಿಗೆ ಬಂದರು. ಫರೋಹನು ಹದದನಿಗೆ ಆಹಾರವನ್ನು, ಮನೆಯನ್ನೂ ಮತ್ತು ಭೂಮಿಯನ್ನೂ ಕೊಟ್ಟನು. ೧೯ ಹದದನು ಫರೋಹನ ವಿಶೇಷ ದಯೆಗೆ ಪಾತ್ರನಾದುದರಿಂದ ಫರೋಹನನು ತನ್ನ ಹೆಂಡತಿಯೂ ರಾಣಿಯೂ ಆದ ತಖ್ಪೆನೇಸ್ ಎಂಬಾಕೆಯ ತಂಗಿಯನ್ನು ಅವನಿಗೆ ಮದುವೆಮಾಡಿಕೊಟ್ಟನು. ೨೦ ಆಕೆಯಲ್ಲಿ ಅವನಿಗೆ ಗೆನುಬತ್ ಎಂಬ ಮಗನು ಹುಟ್ಟಿದನು. ತಖ್ಪೆನೆಸಳು ಈ ಹುಡುಗನನ್ನು ಫರೋಹನ ಮನೆಯಲ್ಲೇ ಸಾಕಿದಳು. ಅಲ್ಲಿ ಅವನು ಫರೋಹನ ಕುಮಾರರ ಜೊತೆಯಲ್ಲಿದ್ದನು. ೨೧ ದಾವೀದನು ಪಿತೃಗಳ ಬಳಿಗೆ ಸೇರಿದನೆಂದೂ ಸೇನಾಧಿಪತಿಯಾದ ಯೋವಾಬನು ಮೃತನಾದನೆಂದೂ ಐಗುಪ್ತದಲ್ಲಿದ್ದ ಹದದನು ಕೇಳಿ ಫರೋಹನನಿಗೆ, “ನಾನು ಸ್ವದೇಶಕ್ಕೆ ಹೋಗಬೇಕೆಂದಿರುತ್ತೇನೆ, ನನಗೆ ಅಪ್ಪಣೆ ಕೊಡು” ಅಂದನು. ೨೨ ಫರೋಹನು ಅವನನ್ನು, “ನನ್ನ ಬಳಿಯಲ್ಲಿ ನೀನಗೇನು ಕೊರತೆಯಾಯಿತು. ಸ್ವದೇಶಕ್ಕೆ ಹೋಗಬೇಕೆಂದು ಯಾಕೆ ಬಯಸುತ್ತೀ?” ಎಂದು ಕೇಳಿದನು. ಅದಕ್ಕೆ ಹದದನು, “ಏನೂ ಕೊರತೆಯಾಗಿರುವುದಿಲ್ಲ. ಆದರೂ ನನಗೆ ಹೋಗುವುದಕ್ಕೆ ಅಪ್ಪಣೆಯಾಗಬೇಕು” ಎಂದು ಕೇಳಿಕೊಂಡನು.
೨೩ ದೇವರು ಸೊಲೊಮೋನನಿಗೆ ವಿರೋಧವಾಗಿ ಎಬ್ಬಿಸಿದ ಎರಡನೆಯ ವೈರಿಯು ಎಲ್ಯಾದಾವನ ಮಗನಾದ ರೆಜೋನ್ ಎಂಬುವನು. ೨೪ ದಾವೀದನು ಚೋಬದವರನ್ನು ಸಂಹರಿಸಿದಾಗ ಅವನು ಚೋಬದ ಅರಸನೂ ಒಡೆಯನೂ ಆದ ಹದದೆಜೆರನನ್ನು ಬಿಟ್ಟು ಓಡಿಹೋಗಿ ಕೆಲವು ಜನರನ್ನು ಕೂಡಿಸಿಕೊಂಡು ತಾನು ಅವರ ನಾಯಕನಾಗಿ ಅವರೊಡನೆ ದಮಸ್ಕಕ್ಕೆ ಬಂದು ಅಲ್ಲಿ ಅರಸನಾದನು. ೨೫ ಸೊಲೊಮೋನನ ಜೀವಮಾನದಲ್ಲೆಲ್ಲಾ ಇಸ್ರಾಯೆಲರಿಗೆ ಮಹಾಬಾಧಕನಾದ ಹದದನಲ್ಲದೆ ಅವನೂ ವೈರಿಯಾಗಿದ್ದನು. ಅವನು ಅರಾಮ್ ದೇಶದಲ್ಲಿ ಆಳುವವನಾಗಿ ಇಸ್ರಾಯೇಲರನ್ನು ಬಹಳವಾಗಿ ದ್ವೇಷಿಸಿದನು.
೨೬ ಅರಸನಾದ ಸೊಲೊಮೋನನಿಗೆ ವಿರುದ್ಧವಾಗಿ ಎದ್ದವರಲ್ಲಿ ಅವನ ಸೇವಕನೂ ಚರೇದ ಊರಿನ ಎಫ್ರಾಯೀಮ್ಯನಾದ ನೆಬಾಟನ ಮಗನಾದ ಯಾರೊಬ್ಬಾಮನೆಂಬವನು ಮತ್ತೊಬ್ಬನು. ಚೆರೂಗಳೆಂಬ ವಿಧವೆಯು ಅವನ ತಾಯಿ. ೨೭ ಅವನು ತಿರುಗಿ ಬಿದ್ದದ್ದು ಹೇಗೆಂದರೆ, ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿ ತನ್ನ ತಂದೆಯಾದ ದಾವೀದನ ಪಟ್ಟಣದ ದುರ್ಬಲ ಸ್ಥಳಗಳನ್ನು ಭದ್ರಪಡಿಸುತ್ತಿರುವಾಗ, ೨೮ ಯೌವನಸ್ಥನಾದ ಯಾರೊಬ್ಬಾಮನು ಬಹು ಸಾಮರ್ಥ್ಯದಿಂದ ಕೆಲಸಮಾಡುತ್ತಿರುವುದನ್ನು ಕಂಡು ಅವನನ್ನು ಯೋಸೇಫ್ಯರ ಎಲ್ಲಾ ಆಳುಗಳ ಮೇಲೆ ಮೇಸ್ತ್ರಿಯನ್ನಾಗಿ ನೇಮಿಸಿದನು. ೨೯ ಒಂದು ದಿನ ಯಾರೊಬ್ಬಾಮನು ಯೆರೂಸಲೇಮಿನಿಂದ ಎಲ್ಲಿಗೋ ಹೋಗುತ್ತಿರುವಾಗ ಅಡವಿಯಲ್ಲಿ ಶಿಲೋವಿನವನಾದ ಅಹೀಯನೆಂಬ ಪ್ರವಾದಿಯು ಅವನಿಗೆ ಎದುರಾದನು. ಅವನು ಹೊಸ ಬಟ್ಟೆಯನ್ನು ಹೊದ್ದುಕೊಂಡಿದ್ದನು. ಅಲ್ಲಿ ಇವರಿಬ್ಬರ ಹೊರತಾಗಿ ಬೇರೆ ಯಾರೂ ಇರಲಿಲ್ಲ. ೩೦ ಆಗ ಅಹೀಯನು ತಾನು ಹೊದ್ದುಕೊಂಡಿದ್ದ ಹೊಸ ಬಟ್ಟೆಯನ್ನು ತೆಗೆದುಕೊಂಡು ಹರಿದು ಹನ್ನೆರಡು ತುಂಡು ಮಾಡಿದನು. ೩೧ ಅವನು ಯಾರೊಬ್ಬಾಮನಿಗೆ, “ನೀನು ಇವುಗಳಲ್ಲಿ ಹತ್ತು ತುಂಡುಗಳನ್ನು ತೆಗೆದುಕೋ. ಇಸ್ರಾಯೇಲ್ ದೇವರಾದ ಯೆಹೋವನು ರಾಜ್ಯವನ್ನು ಸೊಲೊಮೋನನಿಂದ ಕಿತ್ತುಕೊಂಡು, ೩೨ ತನ್ನ ಸೇವಕನಾದ ದಾವೀದನ ನಿಮಿತ್ತವಾಗಿಯೂ, ತಾನು ಇಸ್ರಾಯೇಲರ ಎಲ್ಲಾ ಕುಲಗಳಿಂದ ಆರಿಸಿಕೊಂಡ ಯೆರೂಸಲೇಮ್ ಪಟ್ಟಣದ ನಿಮಿತ್ತವಾಗಿಯೂ ಅವನಿಗೆ ಒಂದೇ ಕುಲವನ್ನು ಉಳಿಸಿ, ಬೇರೆ ಹತ್ತು ಕುಲಗಳನ್ನು ನಿನಗೆ ಕೊಡುತ್ತೇನೆ” ಎಂದು ಹೇಳುತ್ತಾನೆ. ೩೩ ಇದಲ್ಲದೆ ಆತನು ನಿನಗೆ, “ಸೊಲೊಮೋನನೂ ಅವರ ಮನೆಯವರೂ ನನ್ನನ್ನು ಬಿಟ್ಟು ಚೀದೋನ್ಯರ ದೇವತೆಯಾದ ಅಷ್ಟೋರೆತ್, ಮೋವಾಬ್ಯರ ದೇವತೆಯಾದ ‘ಕೆಮೋಷ್’ ಮತ್ತು ಅಮ್ಮೋನಿಯರ ‘ಮಿಲ್ಕೋಮ್’ ಇವುಗಳನ್ನು ಆರಾಧಿಸಿದ್ದೂ ಮತ್ತು ಅವರ ತಂದೆಯಾದ ದಾವೀದನು ನನ್ನ ನೇಮವಿಧಿಗಳನ್ನು ಕೈಕೊಂಡು ನನ್ನನ್ನು ಮೆಚ್ಚಿಸಿ ನಡೆದಂತೆ ಅವರು ನಡೆಯದೆ ಹೋದದ್ದೇ ಇದಕ್ಕೆ ಕಾರಣ. ೩೪ ಆದರೂ ನಾನು ಸೊಲೊಮೋನನ ಕೈಯಿಂದ ರಾಜ್ಯವನ್ನೆಲ್ಲಾ ಕಿತ್ತುಕೊಳ್ಳುವುದಿಲ್ಲ. ನನ್ನ ಆಜ್ಞಾವಿಧಿಗಳನ್ನು ಕೈಕೊಂಡವನೂ, ನಾನು ಆರಿಸಿಕೊಂಡ ಸೇವಕನೂ ಆದ ದಾವೀದನ ನಿಮಿತ್ತವಾಗಿ ಅವನನ್ನು ಅವನ ಜೀವಮಾನದಲ್ಲೆಲ್ಲಾ ಅರಸನನ್ನಾಗಿಯೇ ಇರಿಸುವೆನು. ೩೫ ಆದರೆ ಅದನ್ನು ಅವನ ಮಗನ ಕೈಯಿಂದ ಕಿತ್ತುಕೊಂಡು ನಿನಗೆ ಹತ್ತು ಕುಲಗಳನ್ನು ಕೊಡುವೆನು. ೩೬ ನಾನು ನನ್ನ ಹೆಸರಿಗೋಸ್ಕರ ಆರಿಸಿಕೊಂಡ ಯೆರೂಸಲೇಮ್ ಪಟ್ಟಣದಲ್ಲಿ ನನ್ನ ಸೇವಕನಾದ ದಾವೀದನ ದೀಪವು ನನ್ನ ಸನ್ನಿಧಿಯಲ್ಲಿ ಉರಿಯುತ್ತಲೇ ಇರುವಂತೆ ಅವನ ಮಗನಿಗೆ ಒಂದು ಕುಲವನ್ನು ಉಳಿಸುವೆನು. ೩೭ ನಾನು ನಿನ್ನನ್ನು ಇಸ್ರಾಯೇಲರ ಅರಸನನ್ನಾಗಿ ನೇಮಿಸುವೆನು. ನೀನು ಅವರನ್ನು ನಿನ್ನ ಇಷ್ಟದ ಪ್ರಕಾರ ಆಳಬಹುದು. ೩೮ ನನ್ನ ಸೇವಕನಾದ ದಾವೀದನು ನನ್ನ ಆಜ್ಞಾವಿಧಿಗಳನ್ನು ಕೈಕೊಂಡಂತೆ ನೀನೂ ನನ್ನ ಆಜ್ಞೆಗಳನ್ನು ಕೈಕೊಂಡು ನನ್ನ ಮಾರ್ಗದಲ್ಲಿ ನಡೆದು ನನ್ನನ್ನು ಮೆಚ್ಚಿಸುವುದಾದರೆ ನಾನು ನಿನ್ನ ಸಂಗಡ ಇದ್ದು ದಾವೀದನ ಸಂತಾನದಂತೆ ನಿನ್ನ ಸಂತಾನವನ್ನೂ ಸ್ಥಿರಪಡಿಸುವೆನು. ಇಸ್ರಾಯೇಲ್ ರಾಜ್ಯವು ನಿನ್ನ ಪಾಲಾಗುವುದು. ೩೯ ದಾವೀದನ ಸಂತಾನದವರನ್ನು ಅವರ ಪಾಪದ ನಿಮಿತ್ತ ತಲೆತಗ್ಗಿಸುವಂತೆ ಮಾಡಿ ಕುಗ್ಗಿಸುವೆನು. ಆದರೆ ಸದಾಕಾಲಕ್ಕು ಅದು ಮುಂದುವರಿಯುವುದಿಲ್ಲ” ಎಂದು ಹೇಳಿದನು.
ಸೊಲೊಮೋನನ ಮರಣ
೪೦ ಸೊಲೊಮೋನನು ಯಾರೊಬ್ಬಾಮನನ್ನು ಕೊಲ್ಲುವುದಕ್ಕೆ ಪ್ರಯತ್ನಿಸಿದಾಗ ಅವನು ತಪ್ಪಿಸಿಕೊಂಡು ಐಗುಪ್ತದ ಅರಸನಾದ ಶೀಶಕನ ಬಳಿಗೆ ಹೋಗಿ ಸೊಲೊಮೋನನು ಜೀವದಿಂದಿರುವ ವರೆಗೆ ಅಲ್ಲಿಯೇ ಇದ್ದನು.
೪೧ ಸೊಲೊಮೋನನ ಉಳಿದ ಎಲ್ಲಾ ಕೃತ್ಯಗಳನ್ನೂ, ಅವನ ಜ್ಞಾನವನ್ನೂ ಕುರಿತು ಸೊಲೊಮೋನನ ಚರಿತ್ರೆ ಎಂಬ ಗ್ರಂಥದಲ್ಲಿ ಬರೆದಿರುತ್ತದೆ. ೪೨ ಅವನು ಯೆರೂಸಲೇಮಿನಲ್ಲಿದ್ದುಕೊಂಡು ಎಲ್ಲಾ ಇಸ್ರಾಯೇಲರನ್ನು ನಲ್ವತ್ತು ವರುಷ ಆಳಿದ ನಂತರ, ೪೩ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ತಂದೆಯಾದ ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ರೆಹಬ್ಬಾಮನು ಅರಸನಾದನು.