2
ಜೆರುಸಲೇಮನ್ನು ಅಳತೆ ಮಾಡಿದ್ದು
ಆಗ ನಾನು ಮೇಲಕ್ಕೆ ನೋಡಿದಾಗ ಒಬ್ಬ ಮನುಷ್ಯನು ಕೈಯಲ್ಲಿ ಒಂದು ಹಗ್ಗ ಮತ್ತು ಅಳತೆ ಮಾಡುವ ಸಾಮಾಗ್ರಿಗಳನ್ನು ಹಿಡಿದುಕೊಂಡಿದ್ದನ್ನು ಕಂಡೆನು. “ನೀನು ಎಲ್ಲಿಗೆ ಹೋಗುತ್ತೀ?” ಎಂದು ನಾನು ಅವನನ್ನು ವಿಚಾರಿಸಿದೆನು.
“ನಾನು ಜೆರುಸಲೇಮ್ ಎಷ್ಟು ಉದ್ದಗಲವಿದೆಯೆಂದು ಅಳತೆ ಮಾಡಲು ಹೋಗುತ್ತಿದ್ದೇನೆ” ಎಂದನು.
ಆಗ ನನ್ನೊಡನೆ ಮಾತನಾಡುತ್ತಿದ್ದ ದೂತನು ನನ್ನನ್ನು ಬಿಟ್ಟುಹೋದನು. ಅವನೊಡನೆ ಮಾತನಾಡಲು ಇನ್ನೊಬ್ಬ ದೂತನು ಬಂದನು. ಅವನು, “ಓಡಿಹೋಗಿ ಆ ಯೌವನಸ್ಥನಿಗೆ ಜೆರುಸಲೇಮು ಅಳತೆ ಮಾಡಲು ಸಾಧ್ಯವಾಗದಷ್ಟು ದೊಡ್ಡದಾಗಿದೆ ಎಂದು ಹೇಳು. ಅಲ್ಲದೆ ಅವನಿಗೆ ಈ ವಿಷಯವನ್ನೂ ತಿಳಿಸು:
 
‘ಜೆರುಸಲೇಮ್ ಗೋಡೆಗಳಿಲ್ಲದ ಪಟ್ಟಣವಾಗುವದು.
ಯಾಕೆಂದರೆ ಅಷ್ಟೊಂದು ಜನರೂ ಪಶುಗಳೂ ಅಲ್ಲಿ ವಾಸಿಸುವವು.’
ಯೆಹೋವನು ಹೇಳುವುದೇನೆಂದರೆ,
‘ನಾನು ಆಕೆಯ ಸುತ್ತಲೂ ಆಕೆಯನ್ನು ಸಂರಕ್ಷಿಸುವ ಬೆಂಕಿಯ ಗೋಡೆಯಂತಿರುವೆನು.
ಮತ್ತು ನಾನು ಅಲ್ಲಿಯೇ ವಾಸಿಸುವದರಿಂದ ಆ ನಗರಕ್ಕೆ ಮಹಿಮೆಯನ್ನು ತರುವೆನು.’ ”
ತಮ್ಮ ಮನೆಗೆ ಬರಲು ದೇವರು ತನ್ನ ಜನರನ್ನು ಕರೆಯುತ್ತಾನೆ
ಯೆಹೋವನು ಹೀಗೆನ್ನುತ್ತಾನೆ,
“ಅವಸರಪಡುತ್ತಾ ಉತ್ತರದ ದೇಶಗಳಿಂದ ಹೊರಬನ್ನಿರಿ.
ಹೌದು, ನಾನು ನಿಮ್ಮ ಜನರನ್ನು ಪ್ರತಿಯೊಂದು ದಿಕ್ಕಿಗೂ ಚದರಿಸಿರುವುದು ನಿಜ.
ಚೀಯೋನಿನ ಜನರಾದ ನೀವು ಬಾಬಿಲೋನಿನಲ್ಲಿ ವಾಸಿಸುತ್ತಿದ್ದೀರಿ.
ಅಲ್ಲಿಂದ ತಪ್ಪಿಸಿಕೊಂಡು ಬನ್ನಿರಿ. ಆ ನಗರದಿಂದ ಓಡಿಹೋಗಿರಿ.”
ಇದು ಸರ್ವಶಕ್ತನಾದ ಯೆಹೋವನ ನುಡಿ.
“ನಿಮ್ಮ ವಸ್ತುಗಳನ್ನು ಕದ್ದುಕೊಂಡ ಜನಾಂಗಗಳಿಗೆ ಆತನು ನನ್ನನ್ನು ಕಳುಹಿಸಿದನು.
ನಿಮಗೆ ಗೌರವವನ್ನು ತರುವುದಕ್ಕಾಗಿ ಆತನು ನನ್ನನ್ನು ಕಳುಹಿಸಿದನು.
ಯಾಕೆಂದರೆ, ನಿಮಗೆ ಹಾನಿ ಮಾಡಿದರೆ
ಅದು ದೇವರ ಕಣ್ಣುಗುಡ್ಡೆಗೆ ಹಾನಿ ಮಾಡಿದಂತೆ.
ಬಾಬಿಲೋನಿನ ಜನರು ನನ್ನ ಜನರನ್ನು ತೆಗೆದುಕೊಂಡು ಹೋಗಿ ತಮ್ಮ ಗುಲಾಮರನ್ನಾಗಿ ಮಾಡಿದರು.
ಆದರೆ ನಾನು ಅವರನ್ನು ಹೊಡೆಯುವೆನು.
ಅವರನ್ನು ನನ್ನ ಜನರ ಗುಲಾಮರನ್ನಾಗಿ ಮಾಡುವೆನು.”
ಆಗ ಯೆಹೋವ ದೇವರು ನನ್ನನ್ನು ಕಳುಹಿಸಿದನೆಂಬುದು ನಿಮಗೆ ಗೊತ್ತಾಗುವದು.
 
10 ಯೆಹೋವನು ಹೀಗೆನ್ನುತ್ತಾನೆ,
“ಚೀಯೋನೇ, ಆನಂದಿಸು, ಯಾಕೆಂದರೆ ನಾನು ಬಂದು
ನಿಮ್ಮ ಪಟ್ಟಣದಲ್ಲಿ ವಾಸಿಸುವೆನು.
11 ಆ ಸಮಯದಲ್ಲಿ ವಿವಿಧ ಜನಾಂಗಗಳ ಜನರು
ನನ್ನನ್ನು ನೋಡಲು ಬರುವರು.
ಅವರು ನನ್ನ ಜನರಾಗುವರು.
ಮತ್ತು ನಾನು ನಿಮ್ಮ ನಗರದಲ್ಲಿ ವಾಸಿಸುವೆನು.”
ಆಗ ಸರ್ವಶಕ್ತನಾದ ದೇವರು ನನ್ನನ್ನು ಕಳುಹಿಸಿದ್ದಾನೆಂದು
ನಿಮಗೆ ಗೊತ್ತಾಗುವುದು.
 
12 ಯೆಹೋವನು ತಿರುಗಿ ಜೆರುಸಲೇಮನ್ನು ತನ್ನ ವಿಶೇಷ ನಗರವನ್ನಾಗಿ ಆರಿಸಿಕೊಳ್ಳುವನು.
ಯೆಹೂದವು ಆ ಪವಿತ್ರ ದೇಶದಲ್ಲಿರುವ ಆತನ ಪಾಲು.
13 ಎಲ್ಲರೂ ಮೌನವಾಗಿರಿ.
ಯೆಹೋವನು ತನ್ನ ಪರಿಶುದ್ಧ ನಿವಾಸದಿಂದ ಹೊರಬರುತ್ತಿದ್ದಾನೆ.