2
ಸತ್ಯಬೋಧನೆಯನ್ನು ಅನುಸರಿಸಿರಿ
1 ಸತ್ಯಬೋಧನೆಯನ್ನು ಅನುಸರಿಸಲು ಜನರು ಮಾಡಬೇಕಾದ ಕಾರ್ಯಗಳನ್ನು ಅವರಿಗೆ ನೀನು ತಿಳಿಸು. 2 ವೃದ್ಧರಾದವರು, ಜಿತೇಂದ್ರಿಯರೂ ಗಂಭೀರ ಸ್ವಭಾವದವರೂ ವಿವೇಕವುಳ್ಳವರೂ ಆಗಿರಬೇಕೆಂದು ತಿಳಿಸು. ಅವರು ತಮ್ಮ ನಂಬಿಕೆಯಲ್ಲಿ, ಪ್ರೀತಿಯಲ್ಲಿ ಮತ್ತು ತಾಳ್ಮೆಯಲ್ಲಿ ಬಲವಾಗಿರಬೇಕೆಂದು ತಿಳಿಸು.
3 ಅಂತೆಯೇ ವೃದ್ಧ ಸ್ತ್ರೀಯರು ಸಭ್ಯರಾಗಿ ವರ್ತಿಸಬೇಕು. ಅವರು ಚಾಡಿ ಹೇಳಬಾರದು; ಮದ್ಯಾಸಕ್ತರಾಗಿರಬಾರದು. ಅವರು ಒಳ್ಳೆಯದನ್ನೇ ಉಪದೇಶಿಸಬೇಕು. 4 ಅವರು ಗೃಹಿಣಿಯರಿಗೆ, “ನಿಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರೀತಿಸಿರಿ. 5 ಜ್ಞಾನವುಳ್ಳವರಾಗಿರಿ, ಪರಿಶುದ್ಧರಾಗಿರಿ, ನಿಮ್ಮ ಮನೆಕೆಲಸವನ್ನು ನೋಡಿಕೊಳ್ಳಿರಿ, ದಯೆಯುಳ್ಳವರಾಗಿರಿ, ನಿಮ್ಮ ಗಂಡಂದಿರಿಗೆ ವಿಧೇಯರಾಗಿರಿ” ಎಂದು ಉಪದೇಶಿಸಬೇಕು. ಆಗ ದೇವರು ನಮಗೆ ದಯಪಾಲಿಸಿದ ಬೋಧನೆಯನ್ನು ಟೀಕಿಸಲು ಯಾರಿಗೂ ಸಾಧ್ಯವಾಗುವುದಿಲ್ಲ.
6 ಇದೇ ರೀತಿಯಲ್ಲಿ ಯುವಕರಿಗೆ ಜ್ಞಾನಿಗಳಾಗಿರಲು ತಿಳಿಸು. 7 ನೀನು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಯುವಕರಿಗೆ ಸರ್ವವಿಧದಲ್ಲಿಯೂ ಮಾದರಿಯಾಗಿರಬೇಕು. ನಿನ್ನ ಉಪದೇಶದಲ್ಲಿ ಯಥಾರ್ಥತೆಯನ್ನು ಮತ್ತು ಗಂಭೀರತೆಯನ್ನು ತೋರಿಸಿಕೊಡು. 8 ನೀನು ಸತ್ಯವನ್ನೇ ಮಾತನಾಡು. ಆಗ ನಿನ್ನನ್ನು ಟೀಕಿಸಲು ಸಾಧ್ಯವಿಲ್ಲದೆ ನಿನ್ನ ವಿರೋಧಿಗಳು ಅಪಮಾನಕ್ಕೆ ಗುರಿಯಾಗುವರು.
9 ಗುಲಾಮರಿಗೆ ಈ ಸಂಗತಿಗಳನ್ನು ತಿಳಿಸು: ಅವರು ತಮ್ಮ ಯಜಮಾನರಿಗೆ ಯಾವಾಗಲೂ ವಿಧೇಯರಾಗಿದ್ದು ಅವರನ್ನು ಮೆಚ್ಚಿಸಲು ಪ್ರಯತ್ನಿಸಬೇಕು. ಅವರು ತಮ್ಮ ಯಜಮಾನರ ಜೊತೆಯಲ್ಲಿ ವಾಗ್ವಾದ ಮಾಡಬಾರದು; 10 ಅವರು ವಸ್ತುಗಳನ್ನು ಕದಿಯಬಾರದು; ಮತ್ತು ತಾವು ನಂಬಿಗಸ್ತರೆಂಬುದನ್ನು ತೋರಿಸಿಕೊಡಬೇಕು. ಗುಲಾಮರು ಹೀಗೆ ನಡೆದುಕೊಳ್ಳುವುದಾದರೆ, ಅವರು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ನಮ್ಮ ರಕ್ಷಕನಾದ ದೇವರ ಉಪದೇಶವು ಶ್ರೇಷ್ಠವಾದದ್ದೆಂದು ತೋರ್ಪಡಿಸಲು ಸಾಧ್ಯವಾಗುತ್ತದೆ.
11 ಎಲ್ಲರಿಗೂ ರಕ್ಷಣೆಯನ್ನು ಕೊಡುವ ದೇವರ ಕೃಪೆಯು ಪ್ರತ್ಯಕ್ಷವಾಗಿದೆ. 12 ನಾವು ದೇವರಿಗೆ ವಿರುದ್ಧವಾಗಿ ಜೀವಿಸದಂತೆಯೂ ಲೋಕದ ಜನರು ಮಾಡಲಪೇಕ್ಷಿಸುವ ಕೆಟ್ಟಕಾರ್ಯಗಳನ್ನು ಮಾಡದಂತೆಯೂ ಅದು ತಡೆಯುತ್ತದೆ. ನಾವು ದೇವರ ಸೇವೆಯನ್ನು ಮಾಡುತ್ತಿದ್ದೇವೆ ಎಂಬುದನ್ನು ತೋರಿಸುವುದಕ್ಕಾಗಿ ನೀತಿವಂತರಾಗಿಯೂ ಜ್ಞಾನಿಗಳಾಗಿಯೂ ಲೋಕದಲ್ಲಿ ಈಗ ಬಾಳಬೇಕೆಂದು ಅದು ಬೋಧಿಸುತ್ತದೆ. 13 ನಮ್ಮ ಮಹಾದೇವರು ಮತ್ತು ರಕ್ಷಕನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯನ್ನು ಎದುರುನೋಡುತ್ತಿರುವ ನಾವು ಆ ರೀತಿಯಲ್ಲಿಯೇ ಬಾಳಬೇಕು. ಆತನೇ ನಮ್ಮ ಮಹಾ ನಿರೀಕ್ಷೆಯಾಗಿದ್ದಾನೆ. ಆತನು ತನ್ನ ಮಹಿಮೆಯೊಂದಿಗೆ ಬರುತ್ತಾನೆ. 14 ಆತನು ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು. ನಮ್ಮನ್ನು ಪಾಪದಿಂದ ಬಿಡುಗಡೆ ಮಾಡಲು ಮತ್ತು ಯಾವಾಗಲೂ ಒಳ್ಳೆಯ ಕಾರ್ಯಗಳನ್ನೇ ಮಾಡ ಬಯಸುವ ತನ್ನ ಪರಿಶುದ್ಧ ಜನರನ್ನಾಗಿ ಮಾಡಲು ಆತನು ಮರಣ ಹೊಂದಿದನು.
15 ಈ ಸಂಗತಿಗಳನ್ನು ಜನರಿಗೆ ತಿಳಿಸಲು ನಿನಗೆ ಸಂಪೂರ್ಣ ಅಧಿಕಾರವಿದೆ. ಜನರನ್ನು ಬಲಗೊಳಿಸಲು ಈ ಅಧಿಕಾರವನ್ನು ಬಳಸಿಕೊಂಡು, ಅವರು ಮಾಡಬೇಕಾದುದನ್ನು ತಿಳಿಸು. ನೀನು ಮುಖ್ಯನಾದವನಲ್ಲವೆಂದು ಯಾರೂ ನಿನ್ನನ್ನು ಪರಿಗಣಿಸದಂತೆ ನೋಡಿಕೊ.