18
ಬಾಬಿಲೋನ್ ನಾಶವಾಯಿತು
1 ನಂತರ ಮತ್ತೊಬ್ಬ ದೇವದೂತನು ಪರಲೋಕದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಈ ದೇವದೂತನಿಗೆ ಮಹಾ ಅಧಿಕಾರವಿತ್ತು. ಈ ದೇವದೂತನ ಪ್ರಭಾವವು ಭೂಮಿಯನ್ನು ಪ್ರಕಾಶಗೊಳಿಸಿತು. 2 ದೇವದೂತನು ತನ್ನ ಶಕ್ತಿಯುತವಾದ ಧ್ವನಿಯಿಂದ ಆರ್ಭಟಿಸಿದನು:
“ಅವಳು ನಾಶವಾದಳು!
ಬಾಬಿಲೋನೆಂಬ ಮಹಾನಗರಿಯು ನಾಶವಾದಳು!
ಅವಳು (ಬಾಬಿಲೋನ್) ದೆವ್ವಗಳಿಗೆ ವಾಸಸ್ಥಾನವಾದಳು,
ಸಕಲ ಅಶುದ್ಧಾತ್ಮಗಳಿಗೆ ನೆಲೆಯಾದಳು,
ಅಶುದ್ಧವಾದ ಮತ್ತು ಅಸಹ್ಯವಾದ
ಸಕಲ ಹಕ್ಕಿಗಳಿಗೆ ಆಶ್ರಯವಾದಳು.”
3 ದೇವರ ಕೋಪವೆಂಬ ಮತ್ತು ಅವಳ ಲೈಂಗಿಕ ಪಾಪವೆಂಬ ದ್ರಾಕ್ಷಾರಸವನ್ನು ಲೋಕದ ಜನರೆಲ್ಲರೂ ಕುಡಿದು ಮತ್ತರಾದರು.
ಭೂಲೋಕದ ರಾಜರುಗಳೆಲ್ಲ ಅವಳೊಂದಿಗೆ ಲೈಂಗಿಕ ಪಾಪ ಮಾಡಿದರು.
ಭೂಲೋಕದ ವರ್ತಕರು ಅವಳ ಅತಿಯಾದ ಸುಖದಿಂದ ಶ್ರೀಮಂತರಾದರು.
4 ನಂತರ ಪರಲೋಕದಿಂದ ಮತ್ತೊಂದು ಧ್ವನಿಯು ಹೀಗೆ ಹೇಳುವುದು ನನಗೆ ಕೇಳಿತು:
“ನನ್ನ ಜನರೇ, ನೀವು ಆ ನಗರದಿಂದ ಹೊರಗೆ ಬಂದುಬಿಡಿ.
ಆಗ ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗುವುದಿಲ್ಲ;
ಅವಳಿಗಾಗುವ ಉಪದ್ರವಗಳು ನಿಮಗೆ ಸಂಭವಿಸುವುದಿಲ್ಲ.
5 ಆ ನಗರಿಯ ಪಾಪಗಳು ಪರಲೋಕವನ್ನು ಮುಟ್ಟುವಂತೆ ಬೆಳೆದುನಿಂತಿವೆ.
ಅವಳು ಮಾಡಿದ ಕೆಟ್ಟಕಾರ್ಯಗಳನ್ನು ದೇವರು ಮರೆತಿಲ್ಲ.
6 ಆ ನಗರಿಯು ಬೇರೆಯವರಿಗೆ ಕೊಟ್ಟಂತೆ ನೀವೂ ಅವಳಿಗೆ ಕೊಡಿರಿ.
ಅವಳು ಮಾಡಿದ್ದಕ್ಕೆ ಪ್ರತಿಯಾಗಿ ಎರಡರಷ್ಟನ್ನು ಅವಳಿಗೆ ಕೊಡಿರಿ.
ಅವಳು ಇತರರಿಗೆ ಕೊಟ್ಟ ದ್ರಾಕ್ಷಾರಸಕ್ಕಿಂತ ಎರಡರಷ್ಟು ಗಟ್ಟಿಯಾದ ದ್ರಾಕ್ಷಾರಸವನ್ನು ಅವಳಿಗೆ ಸಿದ್ಧಪಡಿಸಿಕೊಡಿರಿ.
7 ಅವಳು ತನ್ನನ್ನು ಘನಪಡಿಸಿಕೊಂಡು ವೈಭವದಿಂದ ಜೀವಿಸಿದಳು.
ಆದ್ದರಿಂದ ಅದಕ್ಕೆ ತಕ್ಕಂತೆ ಸಂಕಟವನ್ನೂ ದುಃಖವನ್ನೂ ಅವಳಿಗೆ ಬರಮಾಡಿರಿ.
‘ನಾನು ನನ್ನ ಸಿಂಹಾಸನದ ಮೇಲೆ ಕುಳಿತಿರುವ ರಾಣಿ.
ನಾನು ವಿಧವೆಯಲ್ಲ,
ನಾನು ಎಂದೆಂದಿಗೂ ದುಃಖಿಸುವುದಿಲ್ಲ’ ಎಂದು ಅವಳು ತನಗೆ ತಾನೇ ಹೇಳಿಕೊಳ್ಳುತ್ತಾಳೆ.
8 ಆದ್ದರಿಂದ ಅವಳಿಗೆ ಮರಣ, ಗೋಳಾಟ,
ಭೀಕರ ಕ್ಷಾಮ ಎಂಬ ಉಪದ್ರವಗಳು ಒಂದೇ ದಿನದಲ್ಲಿ ಬರುತ್ತವೆ.
ಅವಳಿಗೆ ತೀರ್ಪು ನೀಡಿದ ದೇವರಾಗಿರುವ ಪ್ರಭುವು
ಬಲಿಷ್ಠನಾಗಿರುವುದರಿಂದ ಅವಳು ಬೆಂಕಿಯಿಂದ ನಾಶವಾಗುತ್ತಾಳೆ.
9 “ಅವಳೊಂದಿಗೆ ಲೈಂಗಿಕ ಪಾಪಮಾಡಿ ಅವಳ ಸಂಪತ್ತಿನಲ್ಲಿ ಪಾಲುಗಾರರಾದ ಲೋಕದ ರಾಜರುಗಳು ಅವಳ ದಹನದಿಂದೇರುವ ಹೊಗೆಯನ್ನು ನೋಡುತ್ತಾರೆ. ಅವಳು ಸಾಯುತ್ತಿರುವುದನ್ನು ಕಂಡು ರಾಜರುಗಳು ಗೋಳಾಡುವರು ಮತ್ತು ದುಃಖಿಸುವರು. 10 ಅವಳ ಯಾತನೆಯನ್ನು ಕಂಡು ರಾಜರುಗಳು ಭಯದಿಂದ ದೂರನಿಂತು ಹೀಗೆನ್ನುವರು:
‘ಅಯ್ಯೋ, ಅಯ್ಯೋ, ಮಹಾನಗರಿಯೇ,
ಬಲಿಷ್ಠವಾದ ಬಾಬಿಲೋನ್ ಪಟ್ಟಣವೇ,
ಒಂದೇ ಗಳಿಗೆಯಲ್ಲಿ ನಿನಗೆ ದಂಡನೆ ಆಯಿತಲ್ಲಾ!’
11 “ಭೂಲೋಕದ ವರ್ತಕರು ಬಾಬಿಲೋನಿನ ವಿಷಯದಲ್ಲಿ ಗೋಳಾಡುವರು ಮತ್ತು ದುಃಖಿಸುವರು. ಅವರು ಮಾರುವ ವಸ್ತುಗಳನ್ನು ಕೊಂಡುಕೊಳ್ಳಲು ಯಾರೂ ಇಲ್ಲದಿರುವುದರಿಂದ ಅವರು ದುಃಖಿಸುವರು. 12 ಅವರು ಚಿನ್ನ, ಬೆಳ್ಳಿ, ರತ್ನ, ಮುತ್ತು, ನಯವಾದ ನಾರುಮಡಿ, ಧೂಮ್ರ ವರ್ಣದ ವಸ್ತ್ರ, ರೇಷ್ಮೆ, ರಕ್ತಾಂಬರ, ಸಕಲ ವಿಧವಾದ ಅಗಿಲುಮರ, ದಂತದಿಂದ ಮಾಡಿದ ನಾನಾ ಬಗೆಯ ವಸ್ತುಗಳು, ಬಹು ಬೆಲೆಬಾಳುವ ಮರ, ತಾಮ್ರ, ಕಬ್ಬಿಣ ಮತ್ತು ಚಂದ್ರಕಾಂತ ಶಿಲೆ ಇವುಗಳನ್ನು ಮಾರುತ್ತಾರೆ. 13 ಆ ವರ್ತಕರು ದಾಲ್ಚಿನ್ನಿ, ಸಾಂಬಾರ ಪದಾರ್ಥಗಳು, ಧೂಪ, ಪರಿಮಳತೈಲ, ಸಾಂಬ್ರಾಣಿ, ದ್ರಾಕ್ಷಾರಸ ಮತ್ತು ಆಲಿವ್‌ಎಣ್ಣೆ, ನಯವಾದ ಹಿಟ್ಟು, ಗೋಧಿ, ದನಕರು, ಕುರಿ, ಕುದುರೆಗಳು, ರಥಗಳು, ಗುಲಾಮರು ಮತ್ತು ಮಾನವ ಪ್ರಾಣಗಳನ್ನು ಮಾರುತ್ತಾರೆ. ವರ್ತಕರು ಅಳುತ್ತಾ ಹೀಗೆ ಹೇಳುವರು:
14 ‘ಬಾಬಿಲೋನೇ, ನೀನು ಅಪೇಕ್ಷಿಸಿದ ಉತ್ತಮ ವಸ್ತುಗಳೆಲ್ಲವೂ ನಿನ್ನಿಂದ ಹೋಗಿಬಿಟ್ಟವು.
ನಿನ್ನಲ್ಲಿದ್ದ ಶ್ರೀಮಂತಿಕೆಯ ಮತ್ತು ಅಲಂಕಾರಿಕ ವಸ್ತುಗಳೆಲ್ಲ ಅದೃಶ್ಯವಾಗಿಬಿಟ್ಟವು.
ಅವುಗಳನ್ನು ಮತ್ತೆ ನೀನೆಂದಿಗೂ ಪಡೆಯುವುದಿಲ್ಲ.’
15 “ಆ ವರ್ತಕರು ಅವಳ ಯಾತನೆಯನ್ನು ಕಂಡು ಭಯದಿಂದ ಅವಳಿಂದ ಬಹುದೂರದಲ್ಲಿ ನಿಂತುಕೊಳ್ಳುವರು. ಆ ವಸ್ತುಗಳನ್ನು ಅವಳಿಗೆ ಮಾರಿ ಶ್ರೀಮಂತರಾದ ವರ್ತಕರು ಇವರೇ. 16 ಅವರು ದುಃಖದಿಂದ ಗೋಳಾಡುತ್ತಾ ಹೀಗೆನ್ನುವರು:
‘ಅಯ್ಯೋ, ಅಯ್ಯೋ, ಮಹಾನಗರಿಯೇ!
ಅವಳು ನಯವಾದ ನಾರುಮಡಿಯನ್ನು,
ಧೂಮ್ರವರ್ಣದ ಉಡುಪನ್ನು ಮತ್ತು ರಕ್ತಾಂಬರಗಳನ್ನು ಧರಿಸಿದ್ದಳು.
ಅವಳು ಚಿನ್ನ, ರತ್ನ, ಮುತ್ತುಗಳಿಂದ ಶೋಭಿಸುತ್ತಿದ್ದಳು!
17 ಈ ಶ್ರೀಮಂತಿಕೆಯೆಲ್ಲವೂ ಒಂದೇ ಗಳಿಗೆಯಲ್ಲಿ ನಾಶವಾಯಿತಲ್ಲಾ!’
“ಹಡಗುಗಳ ಒಡೆಯರೂ ಹಡಗುಗಳಲ್ಲಿ ಸಂಚರಿಸುವ ಜನರೆಲ್ಲರೂ ನಾವಿಕರೂ ಸಮುದ್ರದಿಂದ ಹಣವನ್ನು ಗಳಿಸುವ ಜನರೆಲ್ಲರೂ ದೂರದಲ್ಲಿ ನಿಂತುಕೊಂಡು 18 ಬಾಬಿಲೋನಿನ ದಹನದಿಂದೇರುತ್ತಿದ್ದ ಹೊಗೆಯನ್ನು ನೋಡಿ ಅವರು ಗಟ್ಟಿಯಾದ ಧ್ವನಿಯಲ್ಲಿ, ‘ಈ ಮಹಾನಗರಿಯಂತಹ ನಗರವು ಇರಲೇ ಇಲ್ಲ!’ ಎಂದು ಹೇಳಿದರು. 19 ಅವರು ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡು, ದುಃಖದಿಂದ ಗೋಳಾಡುತ್ತಾ ಹೀಗೆ ಹೇಳಿದರು:
‘ಅಯ್ಯೋ! ಅಯ್ಯೋ! ಈ ಮಹಾನಗರಿಗೆ ಎಂಥಾ ಗತಿಯಾಯಿತು!
ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದ್ದ ಜನರೆಲ್ಲರೂ ಅವಳ ಸಂಪತ್ತಿನಿಂದ ಶ್ರೀಮಂತರಾದರು!
ಆದರೆ ಅವಳು ಒಂದೇ ಗಳಿಗೆಯಲ್ಲಿ ನಾಶವಾಗಿಬಿಟ್ಟಳು!
20 ಪರಲೋಕವೇ, ಇದರಿಂದ ನೀನೂ ಸಂತೋಷಪಡು!
ದೇವರ ಪರಿಶುದ್ಧ ಜನರೇ, ಅಪೊಸ್ತಲರೇ, ಪ್ರವಾದಿಗಳೇ, ನೀವೂ ಸಂತೋಷಪಡಿರಿ!
ಅವಳು ನಿಮಗೆ ಮಾಡಿದ ಕೇಡುಗಳಿಗಾಗಿ ದೇವರು ಅವಳನ್ನು ದಂಡಿಸಿದನು.’ ”
21 ನಂತರ ಬಲಿಷ್ಠನಾದ ದೇವದೂತನೊಬ್ಬನು ಒಂದು ದೊಡ್ಡ ಬಂಡೆಯನ್ನು ಎತ್ತಿಕೊಂಡನು. ಆ ಬಂಡೆಯು ಒಂದು ದೊಡ್ಡ ಬೀಸುವ ಕಲ್ಲಿನಂತಿತ್ತು. ದೇವದೂತನು ಆ ಬಂಡೆಯನ್ನು ಸಮುದ್ರದಲ್ಲಿ ಎಸೆದು ಹೀಗೆ ಹೇಳಿದನು:
“ಮಹಾನಗರಿಯಾದ ಬಾಬಿಲೋನ್ ಹೀಗೆಯೇ ಕೆಳಕ್ಕೆ ಎಸೆಯಲ್ಪಡುವುದು.
ಆ ನಗರಿಯು ಮತ್ತೆಂದಿಗೂ ಕಾಣಿಸುವುದಿಲ್ಲ.
22 ಹಾರ್ಪ್ ಮುಂತಾದ ವಾದ್ಯಗಳನ್ನು ನುಡಿಸುವ ಜನರ ಸಂಗೀತವು, ಕೊಳಲು ಮತ್ತು ತುತೂರಿಗಳನ್ನು ನುಡಿಸುವ ಜನರ ಸಂಗೀತವು ನಿನ್ನಲ್ಲಿ ಇನ್ನೆಂದಿಗೂ ಕೇಳಿಬರುವುದಿಲ್ಲ.
ಕುಶಲಕರ್ಮಿಗಳಾರೂ ನಿನ್ನಲ್ಲಿ ಸಿಕ್ಕುವುದಿಲ್ಲ.
ಬೀಸುವ ಕಲ್ಲಿನ ಶಬ್ದವು ಇನ್ನೆಂದಿಗೂ ನಿನ್ನಲ್ಲಿ ಕೇಳಿಬರುವುದಿಲ್ಲ.
23 ದೀಪದ ಬೆಳಕು ಇನ್ನೆಂದಿಗೂ ನಿನ್ನಲ್ಲಿ ಪ್ರಕಾಶಿಸುವುದಿಲ್ಲ.
ವಧೂವರರ ಧ್ವನಿಯು ಇನ್ನೆಂದಿಗೂ ನಿನ್ನಲ್ಲಿ ಕೇಳಿಬರುವುದಿಲ್ಲ.
ನಿನ್ನ ವರ್ತಕರು ಪ್ರಪಂಚದ ಮಹಾಪುರುಷರಾಗಿದ್ದರು.
ನಿನ್ನ ಮಾಟದಿಂದ ಎಲ್ಲಾ ಜನಾಂಗಗಳೂ ಮರುಳಾದರು.
24 ಅವಳು ಪ್ರವಾದಿಗಳ, ದೇವರ ಪರಿಶುದ್ಧಜನರ
ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವನ್ನು ಸುರಿಸಿ ಅಪರಾಧಿಯಾದಳು.”