25
ರಚನೆಗಾರ: ದಾವೀದ.
ಯೆಹೋವನೇ, ನಿನ್ನಲ್ಲೇ ಮನಸ್ಸಿಟ್ಟಿದ್ದೇನೆ.
ನನ್ನ ದೇವರೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ.
ನನ್ನನ್ನು ನಿರಾಶೆಗೊಳಿಸಬೇಡ.
ವೈರಿಗಳು ನನ್ನನ್ನು ನೋಡಿ ಗೇಲಿ ಮಾಡದಂತಾಗಲಿ!
ನಿನ್ನಲ್ಲಿ ಭರವಸವಿಟ್ಟಿರುವವರು ನಿರಾಶರಾಗುವುದಿಲ್ಲ
ದ್ರೋಹಿಗಳಾದರೋ ನಿರಾಶರಾಗುವರು.
ಅವರಿಗೆ ಏನೂ ದೊರೆಯುವುದಿಲ್ಲ.
 
ಯೆಹೋವನೇ ನಿನ್ನ ಮಾರ್ಗಗಳನ್ನು ನನಗೆ ತಿಳಿಸು.
ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
ನನಗೆ ಮಾರ್ಗದರ್ಶನ ನೀಡು; ನಿನ್ನ ಸತ್ಯಗಳನ್ನು ನನಗೆ ಉಪದೇಶಿಸು.
ನೀನೇ ನನ್ನ ದೇವರು, ನೀನೇ ನನ್ನ ರಕ್ಷಕ.
ಹಗಲೆಲ್ಲಾ ನಿನ್ನಲ್ಲಿ ಭರವಸವಿಟ್ಟಿರುವೆ.
ಯೆಹೋವನೇ, ನನಗೆ ಕರುಣೆ ತೋರಬೇಕೆಂಬುದನ್ನು ಜ್ಞಾಪಿಸಿಕೊ.
ನಿನ್ನ ಶಾಶ್ವತವಾದ ಪ್ರೀತಿಯನ್ನು ನನಗೆ ತೋರಿಸು.
ನಾನು ಯೌವನಸ್ಥನಾಗಿದ್ದಾಗ ಮಾಡಿದ ಪಾಪಗಳನ್ನಾಗಲಿ ಕೆಟ್ಟಕಾರ್ಯಗಳನ್ನಾಗಲಿ ಜ್ಞಾಪಿಸಿಕೊಳ್ಳಬೇಡ.
ಯೆಹೋವನೇ, ನಿನ್ನ ಒಳ್ಳೆಯ ಹೆಸರಿನ ನಿಮಿತ್ತ ನನ್ನನ್ನು ಪ್ರೀತಿಯಿಂದ ಜ್ಞಾಪಿಸಿಕೊ.
 
ಯೆಹೋವನು ಒಳ್ಳೆಯವನೂ ಸತ್ಯಸ್ವರೂಪನೂ ಆಗಿದ್ದಾನೆ.
ಆತನು ಪಾಪಿಗಳಿಗೆ ಜೀವಮಾರ್ಗವನ್ನು ಬೋಧಿಸುವನು.
ಆತನು ದೀನರಿಗೆ ತನ್ನ ಮಾರ್ಗಗಳನ್ನು ಉಪದೇಶಿಸುವನು.
ಆತನು ಅವರನ್ನು ತನ್ನ ನ್ಯಾಯಾನುಸಾರವಾಗಿ ನಡೆಸುವನು.
10 ಯೆಹೋವನ ಒಡಂಬಡಿಕೆಯನ್ನೂ ವಾಗ್ದಾನಗಳನ್ನೂ ಅನುಸರಿಸುವ ಜನರಿಗೆ
ಆತನ ಮಾರ್ಗಗಳೆಲ್ಲ ಕರುಣೆಯುಳ್ಳವೂ ಸತ್ಯವೂ ಆಗಿವೆ.
 
11 ಯೆಹೋವನೇ, ನಾನು ಅನೇಕ ಪಾಪಗಳನ್ನು ಮಾಡಿದ್ದೇನೆ.
ಆದರೆ ನೀನು ನಿನ್ನ ಹೆಸರಿನ ನಿಮಿತ್ತ ಅವುಗಳನ್ನೆಲ್ಲಾ ಕ್ಷಮಿಸಿಬಿಟ್ಟೆ.
 
12 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರಿಗೆ
ಅತ್ಯುತ್ತಮವಾದ ಜೀವಮಾರ್ಗವನ್ನು ತೋರಿಸುವನು.
13 ಅವನು ಸುಖದಿಂದಿರುವನು.
ಆತನು ವಾಗ್ದಾನ ಮಾಡಿದ ದೇಶವನ್ನು ಅವನ ಮಕ್ಕಳು ಅನುಭವಿಸುವರು.
14 ಯೆಹೋವನು ತನಗೆ ವಿಧೇಯರಾಗಿರುವವರಿಗೆ ಆಪ್ತಮಿತ್ರನಂತಿರುವನು.
ಆತನು ಅವರಿಗೆ ತನ್ನ ಒಡಂಬಡಿಕೆಯನ್ನು ಉಪದೇಶಿಸುವನು.
15 ನನ್ನ ಕಣ್ಣುಗಳು ಸಹಾಯಕ್ಕಾಗಿ ಯೆಹೋವನನ್ನೇ ದೃಷ್ಟಿಸುತ್ತಿವೆ.
ಆತನು ನನ್ನನ್ನು ತೊಂದರೆಗಳಿಂದ ಖಂಡಿತವಾಗಿ ಬಿಡುಸುವನು.* ಆತನು … ಬಿಡಿಸುವನು ಅಕ್ಷರಶಃ, “ಆತನು ನನ್ನ ಕಾಲುಗಳನ್ನು ಬಲೆಯಿಂದ ಬಿಡಿಸುವನು.”
 
16 ಯೆಹೋವನೇ, ನಾನು ಬಾಧೆಪಡುವವನೂ ಒಬ್ಬಂಟಿಗನೂ ಆಗಿದ್ದೇನೆ.
ನನಗೆ ಅಭಿಮುಖನಾಗಿ ಕರುಣೆತೋರು.
17 ಇಕ್ಕಟ್ಟುಗಳಿಂದ ನನ್ನನ್ನು ಬಿಡಿಸು.
ನನ್ನ ಸಮಸ್ಯೆಗಳನ್ನು ಪರಿಹರಿಸು.
18 ಯೆಹೋವನೇ, ನನ್ನ ಸಂಕಟವನ್ನೂ ತೊಂದರೆಗಳನ್ನೂ ನೋಡು.
ನನ್ನ ಪಾಪಗಳನ್ನೆಲ್ಲ ಕ್ಷಮಿಸು.
19 ನನ್ನ ವೈರಿಗಳನ್ನೆಲ್ಲ ದೃಷ್ಟಿಸಿನೋಡು.
ಅವರು ನನ್ನನ್ನು ದ್ವೇಷಿಸುತ್ತಾ ಕೇಡುಮಾಡಬೇಕೆಂದಿದ್ದಾರೆ.
20 ದೇವರೇ, ನನ್ನನ್ನು ಕಾಪಾಡು, ನನ್ನನ್ನು ರಕ್ಷಿಸು.
ನಾನು ನಿನ್ನಲ್ಲಿ ಭರವಸವಿಟ್ಟಿರುವುದರಿಂದ ನನ್ನನ್ನು ನಿರಾಶೆಗೊಳಿಸಬೇಡ.
21 ದೇವರೇ, ನೀನು ನಿಜವಾಗಿಯೂ ಒಳ್ಳೆಯವನು.
ನಾನು ನಿನ್ನಲ್ಲಿ ಭರವಸವಿಟ್ಟಿರುವೆ, ಆದ್ದರಿಂದ ನನ್ನನ್ನು ಕಾಪಾಡು.
22 ದೇವರೇ, ಇಸ್ರೇಲರನ್ನು
ವೈರಿಗಳಿಂದ ತಪ್ಪಿಸಿ ಕಾಪಾಡು.
 

*25:15: ಆತನು … ಬಿಡಿಸುವನು ಅಕ್ಷರಶಃ, “ಆತನು ನನ್ನ ಕಾಲುಗಳನ್ನು ಬಲೆಯಿಂದ ಬಿಡಿಸುವನು.”