25
ಭೂಮಿಗೆ ವಿಶ್ರಾಂತಿಯ ಸಮಯ
ಯೆಹೋವನು ಮೋಶೆಯೊಡನೆ ಸೀನಾಯಿ ಬೆಟ್ಟದಲ್ಲಿ ಮಾತಾಡಿದನು. ಯೆಹೋವನು ಹೇಳಿದ್ದೇನೆಂದರೆ: “ಇಸ್ರೇಲರಿಗೆ ಹೀಗೆ ಹೇಳು: ನಾನು ನಿಮಗೆ ಕೊಡುತ್ತಿರುವ ದೇಶಕ್ಕೆ ನೀವು ಪ್ರವೇಶಿಸುವಿರಿ. ಆ ಸಮಯದಲ್ಲಿ ನೀವು ಭೂಮಿಗೆ ವಿಶ್ರಾಂತಿಯ ಸಮಯವಿರುವುದಕ್ಕೆ ಬಿಡಬೇಕು. ಇದು ಯೆಹೋವನನ್ನು ಸನ್ಮಾನಿಸುವುದಕ್ಕಾಗಿರುವ ವಿಶೇಷವಾದ ವಿಶ್ರಾಂತಿಯ ಸಮಯವಾಗಿರುವುದು. ನೀವು ಆರು ವರ್ಷಗಳು ನಿಮ್ಮ ಹೊಲದಲ್ಲಿ ಬೀಜಬಿತ್ತುವಿರಿ. ಆರು ವರ್ಷಗಳು ನಿಮ್ಮ ದ್ರಾಕ್ಷಿತೋಟಗಳಲ್ಲಿ ಕೆಲಸಮಾಡುವಿರಿ. ಅದರ ಫಲಗಳನ್ನು ಒಟ್ಟುಗೂಡಿಸುವಿರಿ. ಆದರೆ ಏಳನೆಯ ವರ್ಷದಲ್ಲಿ ನೀವು ಭೂಮಿಗೆ ವಿಶ್ರಾಂತಿ ಕೊಡುವಿರಿ. ಇದು ಯೆಹೋವನನ್ನು ಸನ್ಮಾನಿಸಲು ನೇಮಕವಾದ ವಿಶ್ರಾಂತಿಯ ವಿಶೇಷ ಸಮಯವಾಗಿರುವುದು. ನೀವು ನಿಮ್ಮ ಹೊಲಗಳಲ್ಲಿ ಬೀಜವನ್ನು ಬಿತ್ತಬಾರದು, ದ್ರಾಕ್ಷಿತೋಟದ ಕೆಲಸವನ್ನು ಮಾಡಬಾರದು. ಕೊಯ್ಲಿನ ನಂತರ ತನ್ನಷ್ಟಕ್ಕೆ ತಾನೇ ಬೆಳೆದ ಪೈರನ್ನೂ ಕೊಯ್ಯಬಾರದು. ನೀವು ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಲ್ಲಿ ಬಂದ ದ್ರಾಕ್ಷಿಯನ್ನು ಸಂಗ್ರಹಿಸಬಾರದು. ಭೂಮಿಗೆ ಒಂದು ವರ್ಷದ ವಿಶ್ರಾಂತಿಯಿರುವುದು.
“ಸಬ್ಬತ್ ವರ್ಷದಲ್ಲಿ ಭೂಮಿಯು ತಾನಾಗಿ ಫಲಿಸುವ ಬೆಳೆಯಿಂದ ನಿಮಗೆ ಸಾಕಷ್ಟು ಆಹಾರವಿರುವುದು. ನಿಮ್ಮ ದಾಸದಾಸಿಯರಿಗೂ ಸಾಕಷ್ಟು ಆಹಾರವಿರುವುದು. ನಿಮ್ಮ ದೇಶದಲ್ಲಿ ವಾಸವಾಗಿರುವ ಕೂಲಿಯಾಳುಗಳಿಗೂ ಪರದೇಶಸ್ಥರಿಗೂ ಸಾಕಷ್ಟು ಆಹಾರವಿರುವುದು. ನಿಮ್ಮ ದನಗಳಿಗೂ ಇತರ ಪ್ರಾಣಿಗಳಿಗೂ ತಿನ್ನುವುದಕ್ಕೆ ಸಾಕಷ್ಟು ಆಹಾರವಿರುವುದು.
ಜ್ಯೂಬಿಲಿ-ಬಿಡುಗಡೆಯ ವರ್ಷ
“ಅದಲ್ಲದೆ, ಏಳು ವರ್ಷಗಳ ಏಳು ಗುಂಪುಗಳನ್ನು ಲೆಕ್ಕಿಸಬೇಕು. ಈ ಏಳು ಗುಂಪುಗಳು ಸೇರಿ ನಲವತ್ತೊಂಭತ್ತು ವರ್ಷಗಳಾಗಿರುವವು. ಆ ಸಮಯದಲ್ಲಿ ಭೂಮಿಗೆ ಏಳು ವರ್ಷಗಳ ವಿಶ್ರಾಂತಿಯಿರುವುದು. ದೋಷಪರಿಹಾರಕ ದಿನದಲ್ಲಿ ಅಂದರೆ ಐವತ್ತನೆಯ ವರ್ಷದ ಏಳನೆಯ ತಿಂಗಳ ಹತ್ತನೆಯ ದಿನದಲ್ಲಿ ದೇಶದಲ್ಲೆಲ್ಲಾ ಕೊಂಬನ್ನೂದಿಸಬೇಕು. 10 ಐವತ್ತನೆಯ ವರ್ಷವನ್ನು ನೀವು ವಿಶೇಷ ವರ್ಷವನ್ನಾಗಿ ಮಾಡಬೇಕು. ನಿಮ್ಮ ದೇಶದಲ್ಲಿ ವಾಸಿಸುವ ಜನರೆಲ್ಲರಿಗೆ ನೀವು ಸ್ವಾತಂತ್ರ್ಯವನ್ನು ಘೋಷಿಸಬೇಕು. ಈ ಸಮಯವು ‘ಜ್ಯೂಬಿಲಿ’ ಎಂಬುದಾಗಿ ಕರೆಯಲ್ಪಡುವುದು. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಸ್ವಾಸ್ತ್ಯಕ್ಕೆ ಹಿಂತಿರುಗಿ ಹೋಗುವನು; ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಕುಟುಂಬಕ್ಕೆ ಹಿಂತಿರುಗುವನು. 11 ಐವತ್ತನೆಯ ವರ್ಷವು ನಿಮಗೆ ವಿಶೇಷವಾದ ಆಚರಣೆಯಾಗಿರುವುದು. ಬೀಜವನ್ನು ಬಿತ್ತಬೇಡಿರಿ. ತನ್ನಷ್ಟಕ್ಕೆ ತಾನೇ ಬೆಳೆದ ಪೈರುಗಳನ್ನು ಕೊಯ್ಯಬೇಡಿರಿ. ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಿಂದ ದ್ರಾಕ್ಷಿಯನ್ನು ಸಂಗ್ರಹಿಸಬೇಡಿರಿ. 12 ಆ ವರ್ಷ ಜ್ಯೂಬಿಲಿಯಾಗಿದೆ. ಅದು ನಿಮಗೆ ಪವಿತ್ರ ಸಮಯವಾಗಿರುವುದು. ಹೊಲದಿಂದ ದೊರಕುವ ಪೈರುಗಳು ನಿಮಗೆ ಆಹಾರವಾಗಿರುವುದು. 13 ಜ್ಯೂಬಿಲಿ ವರ್ಷದಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಸ್ವಾಸ್ತ್ಯಕ್ಕೆ ಹೋಗುವನು.
14 “ಭೂಮಿಯನ್ನು ನೆರೆಯವನಿಗೆ ಮಾರುವಾಗ ಅಥವಾ ಅವನಿಂದ ಭೂಮಿಯನ್ನು ಕೊಂಡುಕೊಳ್ಳುವಾಗ ಮೋಸ ಮಾಡಬೇಡಿ. 15 ನಿಮ್ಮ ನೆರೆಯವನ ಭೂಮಿಯನ್ನು ಕೊಂಡುಕೊಳ್ಳಲು ನೀವು ಬಯಸುವುದಾದರೆ, ಆಗ ಕಳೆದ ಜ್ಯೂಬಿಲಿ ವರ್ಷದಿಂದ ಈಗ ಎಷ್ಟು ವರ್ಷವಾಯಿತೆಂದು ಲೆಕ್ಕಿಸಿ ಸರಿಯಾದ ಬೆಲೆಯನ್ನು ನಿರ್ಣಯಿಸಿರಿ. ನೀವು ಭೂಮಿಯನ್ನು ಮಾರುವುದಾದರೆ, ಪೈರುಗಳನ್ನು ಕೊಯ್ಯುವುದಕ್ಕಿರುವ ವರ್ಷಗಳನ್ನು ಲೆಕ್ಕಿಸಿ ಸರಿಯಾದ ಬೆಲೆಯನ್ನು ನಿರ್ಣಯಿಸಿರಿ. 16 ಇನ್ನೂ ಅನೇಕ ವರ್ಷಗಳು ಇದ್ದರೆ, ಬೆಲೆ ಹೆಚ್ಚಾಗಿರುವುದು. ವರ್ಷಗಳು ಕಡಿಮೆಯಾಗಿದ್ದರೆ, ಬೆಲೆ ಕಡಿಮೆಯಾಗಿರುವುದು. ಯಾಕೆಂದರೆ ನಿಮ್ಮ ನೆರೆಯವನು ನಿಜವಾಗಿ ಕೇವಲ ಕೆಲವೇ ಪೈರುಗಳನ್ನು ನಿಮಗೆ ಮಾರುತ್ತಿದ್ದಾನೆ. ಮುಂದಿನ ಜ್ಯೂಬಿಲಿ ವರ್ಷದಲ್ಲಿ ಭೂಮಿಯು ತಿರುಗಿ ಅವನ ಕುಟುಂಬಕ್ಕೆ ಸೇರುವುದು. 17 ನೀವು ಒಬ್ಬರಿಗೊಬ್ಬರು ಮೋಸ ಮಾಡಬಾರದು. ನೀವು ದೇವರಿಗೆ ಭಯಪಡಬೇಕು! ನಾನೇ ನಿಮ್ಮ ದೇವರಾದ ಯೆಹೋವನು!
18 “ನನ್ನ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಜ್ಞಾಪಕಮಾಡಿಕೊಳ್ಳಿರಿ. ಅವುಗಳಿಗೆ ವಿಧೇಯರಾಗಿರಿ. ಆಗ ನೀವು ನಿಮ್ಮ ದೇಶದಲ್ಲಿ ಸುರಕ್ಷಿತವಾಗಿ ವಾಸಿಸುವಿರಿ. 19 ಮತ್ತು ಭೂಮಿಯು ಒಳ್ಳೆಯ ಪೈರುಗಳನ್ನು ಕೊಡುವುದು. ಆಗ ನಿಮಗೆ ಬೇಕಾದಷ್ಟು ಆಹಾರವಿರುವುದು ಮತ್ತು ನೀವು ದೇಶದಲ್ಲಿ ಸುರಕ್ಷಿತವಾಗಿ ಜೀವಿಸುವಿರಿ.
20 “ಒಂದುವೇಳೆ ನೀವು, ‘ನಾವು ಬೀಜಗಳನ್ನು ಬಿತ್ತದಿದ್ದರೆ ಅಥವಾ ಪೈರುಗಳನ್ನು ಸಂಗ್ರಹಿಸದಿದ್ದರೆ ಏಳನೆಯ ವರ್ಷದಲ್ಲಿ ನಮಗೆ ತಿನ್ನಲು ಏನೂ ಇರುವುದಿಲ್ಲ’ ಎಂದು ಹೇಳಬಹುದು. 21 ಚಿಂತೆ ಮಾಡಬೇಡಿರಿ! ಆರನೆಯ ವರ್ಷದಲ್ಲಿ ನನ್ನ ಆಶೀರ್ವಾದವು ನಿಮ್ಮ ಮೇಲಿರುವುದು. ಆ ವರ್ಷ ಭೂಮಿಯಲ್ಲಿ ಬೆಳೆದ ಪೈರುಗಳು ಮೂರು ವರ್ಷಗಳವರೆಗೆ ಬೆಳೆಯುತ್ತಿರುವುದು. 22 ನೀವು ಎಂಟನೆಯ ವರ್ಷದಲ್ಲಿ ಬೀಜ ಬಿತ್ತಿದಾಗ, ನೀವು ಇನ್ನೂ ಹಳೆಯ ಬೆಳೆಯನ್ನು ತಿನ್ನುತ್ತಿರುವಿರಿ. ಒಂಭತ್ತನೆಯ ವರ್ಷದವರೆಗೆ ಅಂದರೆ ಎಂಟನೆಯ ವರ್ಷದಲ್ಲಿ ಬೀಜ ಫಸಲು ಕೊಡುವವರೆಗೆ ನೀವು ಹಳೆಯ ಬೆಳೆಯನ್ನು ತಿನ್ನುವಿರಿ.
ಆಸ್ತಿಯ ನಿಯಮಗಳು
23 “ಭೂಮಿಯು ನನಗೆ ಸೇರಿದ್ದು. ಆದ್ದರಿಂದ ನೀವು ನಿಜವಾಗಿಯೂ ಅದನ್ನು ಶಾಶ್ವತವಾಗಿ ಮಾರುವುದಕ್ಕಾಗುವುದಿಲ್ಲ. ನೀವು ಕೇವಲ ನನ್ನ ಆಶ್ರಯದಲ್ಲಿ ವಾಸಿಸುತ್ತಿರುವ ಪರದೇಶಸ್ಥರೂ ಪ್ರವಾಸಿಗಳೂ ಆಗಿದ್ದೀರಿ. 24 ಜನರು ತಮ್ಮ ಭೂಮಿಯನ್ನು ಮಾರಿದರೆ ಅದನ್ನು ಬಿಡಿಸಿಕೊಳ್ಳುವ ಹಕ್ಕು ಅವರ ಕುಟುಂಬಕ್ಕಿದೆ. 25 ನಿಮ್ಮ ದೇಶದಲ್ಲಿ ಒಬ್ಬನು ತನ್ನ ಆಸ್ತಿಯನ್ನು ಮಾರುವಷ್ಟು ಬಡವನಾದರೆ ಅವನ ಹತ್ತಿರದ ಸಂಬಂಧಿಯು ತನ್ನ ಸಂಬಂಧಿಯ ಆಸ್ತಿಯನ್ನು ಮರಳಿ ಕೊಂಡುಕೊಳ್ಳಬೇಕು. 26 ತನ್ನ ಭೂಮಿಯನ್ನು ಮರಳಿ ಪಡೆಯಲು ಒಬ್ಬನಿಗೆ ಹತ್ತಿರದ ಸಂಬಂಧಿ ಇಲ್ಲದಿರಬಹುದು. ಆದರೆ ತನ್ನ ಭೂಮಿಯನ್ನು ತನಗಾಗಿ ಮರಳಿ ಪಡೆಯುಲು ಅವನು ಸಾಕಷ್ಟು ಹಣವನ್ನು ಪಡೆಯಬಹುದು. 27 ಆಗ ಅವನು ಭೂಮಿಯನ್ನು ಮಾರಿ ಎಷ್ಟು ವರ್ಷವಾಯಿತೆಂದು ಲೆಕ್ಕ ಮಾಡಬೇಕು. ಅವನು ಆ ಸಂಖ್ಯೆಯನ್ನು ಉಪಯೋಗಿಸಿ ಭೂಮಿಗೆ ಕೊಡತಕ್ಕ ಹಣವನ್ನು ನಿರ್ಧರಿಸಬೇಕು. ಬಳಿಕ ಅವನು ಭೂಮಿಯನ್ನು ಮರಳಿ ಕೊಂಡುಕೊಳ್ಳಬೇಕು. ಆಗ ಭೂಮಿಯು ಮತ್ತೆ ಅವನ ಸ್ವತ್ತಾಗುವುದು. 28 ಆದರೆ ಭೂಮಿಯನ್ನು ಮರಳಿ ಕೊಂಡುಕೊಳ್ಳಲು ಬೇಕಾದಷ್ಟು ಹಣ ಅವನಿಗೆ ದೊರಕದಿದ್ದರೆ, ಅವನು ಆ ಭೂಮಿಯನ್ನು ಯಾರಿಗೆ ಮಾರಿದ್ದಾನೋ ಅವನ ವಶದಲ್ಲಿ ಜ್ಯೂಬಿಲಿ ವರ್ಷದವರೆಗೆ ಇಡಬೇಕು. ಬಳಿಕ ಆ ವಿಶೇಷ ಬಿಡುಗಡೆಯ ಕಾಲದಲ್ಲಿ ಭೂಮಿಯು ಮೊದಲಿನ ಯಜಮಾನನ ಕುಟುಂಬಕ್ಕೆ ಮರಳಿ ಹೋಗುವುದು. ಹೀಗಾಗಿ ಆಸ್ತಿಯು ತಿರುಗಿ ಅದರ ಸರಿಯಾದ ಕುಟುಂಬಕ್ಕೆ ಸೇರುವುದು.
29 “ಯಾವನಾದರೂ ಪೌಳಿಗೋಡೆಯುಳ್ಳ ಪಟ್ಟಣದಲ್ಲಿರುವ ಮನೆಯನ್ನು ಮಾರಿದರೆ, ಅದನ್ನು ಮಾರಿದ ದಿನ ಮೊದಲುಗೊಂಡು ಒಂದು ವರ್ಷ ಪೂರ್ಣಗೊಳ್ಳುವವರೆಗೆ ಹಿಂದಕ್ಕೆ ಪಡೆಯುವ ಹಕ್ಕು ಅವನಿಗೆ ಇನ್ನೂ ಇರುತ್ತದೆ. ಮನೆಯನ್ನು ಬಿಡಿಸಿಕೊಳ್ಳುವ (ಮರಳಿ ಪಡೆಯುವ) ಹಕ್ಕು ಒಂದು ವರ್ಷದವರೆಗೆ ಇರುವುದು. 30 ಆದರೆ ಮಾಲಿಕನು ಒಂದು ವರ್ಷ ಪೂರ್ಣಗೊಳ್ಳುವ ಮೊದಲು ಮನೆಯನ್ನು ಮರಳಿ ಕೊಂಡುಕೊಳ್ಳದಿದ್ದರೆ, ಆಗ ಪೌಳಿಗೋಡೆಯುಳ್ಳ ಪಟ್ಟಣದಲ್ಲಿರುವ ಮನೆಯು ಅದನ್ನು ಕೊಂಡುಕೊಂಡವನಿಗೂ ಅವನ ಸಂತತಿಯವರಿಗೂ ಸೇರುವುದು. ಮನೆಯು ಜ್ಯೂಬಿಲಿ ವರ್ಷದಲ್ಲಿ ಅದರ ಮೊದಲಿನ ಯಜಮಾನನಿಗೆ ಸೇರುವುದಿಲ್ಲ. 31 ಗೋಡೆಗಳಿಲ್ಲದ ಪಟ್ಟಣಗಳನ್ನು ಬಯಲಿನ ಹೊಲಗಳಂತೆ ಪರಿಗಣಿಸಬೇಕು. ಆದ್ದರಿಂದ ಆ ಸಣ್ಣ ಪಟ್ಟಣಗಳಲ್ಲಿ ಕಟ್ಟಿದ ಮನೆಗಳು ಜ್ಯೂಬಿಲಿ ವರ್ಷದಲ್ಲಿ ಅವುಗಳ ಮೊದಲಿನ ಯಜಮಾನನಿಗೆ ಮರುಳಿ ಹೋಗುತ್ತವೆ.
32 “ಆದರೆ ಲೇವಿಯರ ಪಟ್ಟಣಗಳ ಕುರಿತು ಹೇಳುವುದಾದರೆ, ಲೇವಿಯರು ತಮಗೆ ಸೇರಿದ ಪಟ್ಟಣಗಳಲ್ಲಿರುವ ತಮ್ಮ ಮನೆಗಳನ್ನು ಯಾವಾಗ ಬೇಕಾದರೂ ಹಿಂದಕ್ಕೆ ಕೊಂಡುಕೊಳ್ಳಬಹುದು. 33 ಒಬ್ಬನು ಲೇವಿಯಿಂದ ಮನೆಯನ್ನು ಕೊಂಡುಕೊಂಡರೆ, ಲೇವಿಯರ ಪಟ್ಟಣದಲ್ಲಿರುವ ಆ ಮನೆಯು ಜ್ಯೂಬಿಲಿ ಸಮಯದಲ್ಲಿ ತಿರುಗಿ ಲೇವಿಯರಿಗೆ ಸೇರುವುದು. ಯಾಕೆಂದರೆ ಲೇವಿಯರ ಪಟ್ಟಣಗಳಲ್ಲಿರುವ ಮನೆಗಳು ಲೇವಿ ಕುಟುಂಬಕ್ಕೆ ಸೇರಿದ್ದಾಗಿವೆ. ಇಸ್ರೇಲ್ ಜನರು ಆ ಪಟ್ಟಣಗಳನ್ನು ಲೇವಿಯರಿಗೆ ಕೊಟ್ಟಿದ್ದಾರೆ. ಅವು ಇಸ್ರೇಲರ ಮಧ್ಯದಲ್ಲಿರುವ ಲೇವಿಯರ ಆಸ್ತಿಯಾಗಿವೆ. 34 ಅಲ್ಲದೆ ಲೇವಿಯರ ಪಟ್ಟಣಗಳ ಸುತ್ತಲಿರುವ ಹೊಲಗಳನ್ನು ಮತ್ತು ಹುಲ್ಲುಗಾವಲುಗಳನ್ನು ಮಾರಬಾರದು. ಆ ಹೊಲಗಳು ಎಂದೆಂದಿಗೂ ಲೇವಿಯರಿಗೆ ಸೇರಿವೆ.
ಗುಲಾಮರ ಯಜಮಾನರು ಅನುಸರಿಸತಕ್ಕ ನಿಯಮಗಳು
35 “ಒಂದುವೇಳೆ ನಿಮ್ಮ ಸ್ವದೇಶದ ವ್ಯಕ್ತಿಯೊಬ್ಬನು ಬಹಳ ಬಡವನಾಗಿ ಗತಿಹೀನನಾಗಬಹುದು. ಅವನು ನಿಮ್ಮ ಮಧ್ಯದಲ್ಲಿ ಪ್ರವಾಸಿಯಂತೆ* ವಚನ 35 ಇದನ್ನು ಮತ್ತೊಂದು ರೀತಿಯಲ್ಲಿಯೂ ಅರ್ಥಮಾಡಿಕೊಳ್ಳಬಹುದು: “ಅವನು ಅನ್ಯನಾಗಿದ್ದರೂ ತಾತ್ಕಾಲಿಕ ನಿವಾಸಿಯಾಗಿದ್ದರೂ ಅವನಿಗೆ ಸಹಾಯ ಮಾಡಿರಿ.” ವಾಸಿಸಲು ನೀವು ಅವಕಾಶ ಕೊಡಬೇಕು. 36 ಅವನಿಗೆ ನೀವು ಸಾಲ ಕೊಡುವ ಹಣದ ಮೇಲೆ ಬಡ್ಡಿಯನ್ನು ಹೊರಿಸಬಾರದು. ದೇವರನ್ನು ಗೌರವಿಸಿರಿ. ನಿಮ್ಮ ಸ್ವಂತ ದೇಶದವನು ಸಹೋದರನು ಅಥವಾ “ನಿಮ್ಮ ಸ್ವಂತ ದೇಶದವನು.” ನಿಮ್ಮ ಸಂಗಡ ವಾಸಿಸಲಿ. 37 ನೀವು ಅವನಿಗೆ ಸಾಲಕೊಡುವ ಹಣದ ಮೇಲೆ ಬಡ್ಡಿಯನ್ನು ಹೊರಿಸಬಾರದು. ನೀವು ಅವನಿಗೆ ಮಾರುವ ಆಹಾರಪದಾರ್ಥಗಳಿಂದ ಲಾಭವನ್ನು ಗಳಿಸಲು ಪ್ರಯತ್ನಿಸಬಾರದು. 38 ನಾನೇ ನಿಮ್ಮ ದೇವರಾದ ಯೆಹೋವನು! ನಾನು ನಿಮಗೆ ಕಾನಾನ್ ದೇಶವನ್ನು ಕೊಟ್ಟು ನಿಮ್ಮ ದೇವರಾಗಿರಲು ನಿಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದೆನು.
39 “ಒಂದುವೇಳೆ ನಿಮ್ಮ ಸ್ವದೇಶಸ್ಥನು ಬಹಳ ಬಡವನಾಗಿ ತನ್ನನ್ನು ಗುಲಾಮನನ್ನಾಗಿ ನಿಮಗೆ ಮಾರಿಕೊಂಡರೆ ನೀವು ಅವನನ್ನು ಗುಲಾಮನನ್ನಾಗಿ ದುಡಿಸಬಾರದು. 40 ಅವನು ಕೂಲಿಯಾಳಿನಂತೆಯೂ ಜ್ಯೂಬಿಲಿ ವರ್ಷದವರೆಗೆ ನಿಮ್ಮ ಮಧ್ಯದಲ್ಲಿ ಪ್ರವಾಸಿಯಂತೆಯೂ ಇರುವನು. 41 ಬಳಿಕ ನಿಮ್ಮನ್ನು ಬಿಟ್ಟುಹೋಗಲು ಅವನಿಗೆ ಹಕ್ಕಿದೆ. ಅವನು ತನ್ನ ಮಕ್ಕಳನ್ನು ಕರೆದುಕೊಂಡು ತನ್ನ ಕುಟುಂಬಕ್ಕೆ ಮರಳಿ ಹೋಗಬಹುದು. ಅವನು ತನ್ನ ಪೂರ್ವಿಕರ ಸ್ವತ್ತನ್ನು ಹಿಂದಕ್ಕೆ ಪಡೆಯಬಹುದು. 42 ಯಾಕೆಂದರೆ ಅವರು ನನ್ನ ಸೇವಕರಾಗಿದ್ದಾರೆ. ನಾನು ಅವರನ್ನು ಈಜಿಪ್ಟಿನಲ್ಲಿ ಗುಲಾಮತನದಿಂದ ಹೊರಗೆ ಬರಮಾಡಿದೆನು; ಅವರು ಮತ್ತೆ ಗುಲಾಮರಾಗಬಾರದು. 43 ನೀವು ಈ ವ್ಯಕ್ತಿಗೆ ಕ್ರೂರ ಯಾಜಮಾನರಾಗಿರಬಾರದು. ನೀವು ನಿಮ್ಮ ದೇವರನ್ನು ಗೌರವಿಸಬೇಕು.
44 “ನಿಮ್ಮ ಸುತ್ತಲಿರುವ ಬೇರೆ ಜನಾಂಗಗಳಿಂದ ನೀವು ಸೇವಕಸೇವಕಿಯರನ್ನು ಖರೀದಿ ಮಾಡಬಹುದು. 45 ಅಲ್ಲದೆ ನಿಮ್ಮ ದೇಶದಲ್ಲಿ ವಾಸಿಸುವ ಪರದೇಶಸ್ಥರಿಂದ ಮಕ್ಕಳನ್ನು ಗುಲಾಮರನ್ನಾಗಿ ಕೊಂಡುಕೊಳ್ಳಬಹುದು. ಗುಲಾಮರಾದ ಮಕ್ಕಳು ನಿಮಗೆ ಸೇರಿದವರಾಗಿದ್ದಾರೆ. 46 ಗುಲಾಮರಾದ ಈ ಪರದೇಶಸ್ಥರನ್ನು ನೀವು ಸತ್ತನಂತರ ನಿಮ್ಮ ಮಕ್ಕಳಿಗೆ ಕೊಡಬೇಕು. ಹೀಗೆ ಅವರು ನಿಮ್ಮ ಮಕ್ಕಳಿಗೆ ಸೇರಿದವರಾಗುವರು. ಅವರು ಎಂದೆಂದೂ ನಿಮ್ಮ ಗುಲಾಮರಾಗಿರುವರು. ನಿಮ್ಮ ಈ ಪರದೇಶಸ್ಥರನ್ನು ಗುಲಾಮರನ್ನಾಗಿ ಮಾಡಿಕೊಳ್ಳಬಹುದು. ಆದರೆ ನೀವು ಇಸ್ರೇಲ್ ಜನರಾದ ನಿಮ್ಮ ಸ್ವಂತ ಸಹೋದರರ ಮೇಲೆ ಕ್ರೂರವಾದ ಒಡೆಯರಾಗಿರಬಾರದು.
47 “ಒಂದುವೇಳೆ ನಿಮ್ಮ ಸ್ವದೇಶದವನು ಬಡವನಾಗಿದ್ದು, ನಿಮ್ಮ ಮಧ್ಯದಲ್ಲಿ ವಾಸಿಸಲು ಬಂದ ಐಶ್ವರ್ಯವಂತನಾದ ಪರದೇಶಸ್ಥನಿಗಾಗಲಿ ಅಥವಾ ಅವನ ಕುಟುಂಬದ ಸದಸ್ಯನಿಗಾಗಲಿ ತನ್ನನ್ನು ಮಾರಿಕೊಂಡಿದ್ದರೂ ಅವನಿಗೆ ತನ್ನನ್ನು ಬಿಡಿಸಿಕೊಳ್ಳುವ ಹಕ್ಕಿದೆ. 48 ಅವನ ಸಂಬಂಧಿಕರಲ್ಲಿ ಯಾರಾದರೂ ಅವನನ್ನು ಮರಳಿ ಕೊಂಡುಕೊಳ್ಳಬಹುದು. 49 ಅವನ ದೊಡ್ಡಪ್ಪನಾಗಲಿ ಚಿಕ್ಕಪ್ಪನಾಗಲಿ ಅವರ ಮಕ್ಕಳಾಗಲಿ ಅವನನ್ನು ಮರಳಿ ಕೊಂಡುಕೊಳ್ಳಬಹುದು. ಅವನ ಹತ್ತಿರದ ಸಂಬಂಧಿಯು ಅವನನ್ನು ಕೊಂಡುಕೊಳ್ಳಬಹುದು. ಅವನಿಗೆ ಸಾಕಷ್ಟು ಹಣ ದೊರಕಿದರೆ, ಅವನು ತಾನೇ ಹಣ ಕೊಟ್ಟು ಮತ್ತೆ ಸ್ವತಂತ್ರನಾಗಬಹುದು.
50 “ನೀವು ಬೆಲೆಯನ್ನು ತೀರ್ಮಾನಿಸುವುದು ಹೇಗೆಂದರೆ: ಅವನು ತನ್ನನ್ನು ಪರದೇಶಸ್ಥನಿಗೆ ಮಾರಿಕೊಂಡ ದಿನದಿಂದ ಹಿಡಿದು ಮುಂದಿನ ಜ್ಯೂಬಿಲಿ ವರ್ಷದವರೆಗೆ ವರ್ಷಗಳನ್ನು ಲೆಕ್ಕಿಸಿ ಬೆಲೆಯನ್ನು ತೀರ್ಮಾನಿಸಿರಿ. ಯಾಕೆಂದರೆ ಅವನು ತನ್ನನ್ನು ಕೇವಲ ಕೆಲವು ವರ್ಷಗಳವರೆಗೆ ಕೂಲಿಗೆ ಒಪ್ಪಿಸಿದ್ದಾನೆ. 51 ಜ್ಯೂಬಿಲಿ ವರ್ಷಕ್ಕೆ ಇನ್ನೂ ಹೆಚ್ಚು ವರ್ಷಗಳು ಇರುವುದಾದರೆ, ಅವನು ಬಹಳ ಹೆಚ್ಚು ಹಣವನ್ನು ಕೊಡಬೇಕಾಗುತ್ತದೆ. 52 ಜ್ಯೂಬಿಲಿ ವರ್ಷಕ್ಕೆ ಕೇವಲ ಸ್ವಲ್ಪ ವರ್ಷಗಳು ಉಳಿದಿದ್ದರೆ, ಸ್ವಲ್ಪ ಹಣವನ್ನು ಕೊಡಬೇಕಾಗುತ್ತದೆ. 53 ಆದರೆ ಅವನು ಪರದೇಶಸ್ಥನೊಡನೆ ಪ್ರತಿ ವರ್ಷ ಕೂಲಿಯಾಳಾಗಿ ವಾಸಿಸುವನು. ಪರದೇಶಸ್ಥನು ಆ ವ್ಯಕ್ತಿಯ ಮೇಲೆ ಕ್ರೂರ ಯಜಮಾನನಾಗಿ ಇರುವುದಕ್ಕೆ ಬಿಡಬೇಡಿರಿ.
54 “ಯಾರೂ ಅವನನ್ನು ಬಿಡಿಸದಿದ್ದರೂ ಜ್ಯೂಬಿಲಿ ವರ್ಷದಲ್ಲಿ ಅವನು ಮತ್ತು ಅವನ ಮಕ್ಕಳು ಬಿಡುಗಡೆ ಹೊಂದುವರು. 55 ಯಾಕೆಂದರೆ, ಇಸ್ರೇಲರು ನನ್ನ ಸೇವಕರಾಗಿದ್ದಾರೆ. ನಾನು ಅವರನ್ನು ಈಜಿಪ್ಟಿನಲ್ಲಿ ದಾಸತ್ವದಿಂದ ಬಿಡಿಸಿದ್ದರಿಂದ ಅವರು ನನ್ನ ದಾಸರಾಗಿದ್ದಾರೆ. ನಾನೇ ನಿಮ್ಮ ದೇವರಾದ ಯೆಹೋವನು!

*25:35: ವಚನ 35 ಇದನ್ನು ಮತ್ತೊಂದು ರೀತಿಯಲ್ಲಿಯೂ ಅರ್ಥಮಾಡಿಕೊಳ್ಳಬಹುದು: “ಅವನು ಅನ್ಯನಾಗಿದ್ದರೂ ತಾತ್ಕಾಲಿಕ ನಿವಾಸಿಯಾಗಿದ್ದರೂ ಅವನಿಗೆ ಸಹಾಯ ಮಾಡಿರಿ.”

25:36: ಸಹೋದರನು ಅಥವಾ “ನಿಮ್ಮ ಸ್ವಂತ ದೇಶದವನು.”