21
ಯಾಜಕರು ಅನುಸರಿಸತಕ್ಕ ನಿಯಮಗಳು
ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಯಾಜಕರಾದ ಆರೋನನ ಮಕ್ಕಳಿಗೆ ಈ ಸಂಗತಿಗಳನ್ನು ಹೇಳು: ಯಾಜಕನು ಸತ್ತ ವ್ಯಕ್ತಿಯನ್ನು ಮುಟ್ಟಿ ತನ್ನನ್ನು ಅಶುದ್ಧಮಾಡಿಕೊಳ್ಳಬಾರದು. ಆದರೆ ಸತ್ತವನು ಅವನ ಹತ್ತಿರದ ಸಂಬಂಧಿಕರಲ್ಲಿ ಒಬ್ಬನಾಗಿದ್ದರೆ, ಆಗ ಅವನು ಆ ಹೆಣವನ್ನು ಮುಟ್ಟಬಹುದು. ಸತ್ತ ವ್ಯಕ್ತಿ ಅವನ ತಾಯಿ, ತಂದೆ, ಮಗ, ಮಗಳು, ಸಹೋದರ ಅಥವಾ ಮದುವೆಯಾಗದ ಸಹೋದರಿಯಾಗಿದ್ದರೆ* ಸಹೋದರಿ ಅಕ್ಷರಶಃ, “ಕನ್ನಿಕೆ.” ಯಾಜಕನು ತನ್ನನ್ನು ಅಶುದ್ಧಮಾಡಿಕೊಳ್ಳಬಹುದು. (ಈ ಸಹೋದರಿಗೆ ಗಂಡನಿಲ್ಲದಿರುವುದರಿಂದ ಅವಳು ಅವನಿಗೆ ಹತ್ತಿರದ ಸಂಬಂಧಿಯಾಗಿದ್ದಾಳೆ. ಆದ್ದರಿಂದ ಯಾಜಕನು ತನ್ನನ್ನು ಅಶುದ್ಧಮಾಡಿಕೊಳ್ಳಬಹುದು.) ಆದರೆ ಸತ್ತವನು ಕೇವಲ ಅವನ ಗುಲಾಮರಲ್ಲಿ ಒಬ್ಬನಾಗಿದ್ದರೆ ಯಾಜಕನು ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದು.
“ಯಾಜಕರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳಬಾರದು; ತಮ್ಮ ಗಡ್ಡದ ಪಾರ್ಶ್ವಗಳನ್ನು ಕತ್ತರಿಸಿ ವಿಕಾರಗೊಳಿಸಬಾರದು; ತಮ್ಮ ದೇಹಗಳಲ್ಲಿ ಯಾವ ಗಾಯ ಮಾಡಿಕೊಳ್ಳಬಾರದು. ಅವರು ತಮ್ಮ ದೇವರಿಗೆ ಪ್ರತಿಷ್ಠಿತರಾಗಿರಬೇಕು. ಅವರು ದೇವರ ಹೆಸರಿಗೆ ಗೌರವ ತೋರಿಸಬೇಕು. ಯಾಕೆಂದರೆ ಅವರು ಅಗ್ನಿಯ ಮೂಲಕ ಅರ್ಪಿಸಿದ ರೊಟ್ಟಿಯನ್ನು ಮತ್ತು ಕಾಣಿಕೆಗಳನ್ನು ಯೆಹೋವನಿಗೆ ತೆಗೆದುಕೊಂಡು ಹೋಗುತ್ತಾರೆ. ಆದ್ದರಿಂದ ಅವರು ಪವಿತ್ರರಾಗಿರಬೇಕು.
“ಯಾಜಕನು ವಿಶೇಷವಾದ ರೀತಿಯಲ್ಲಿ ದೇವರ ಸೇವೆ ಮಾಡುತ್ತಾನೆ. ಆದ್ದರಿಂದ ಯಾಜಕನು ಬೇರೆಯವರೊಡನೆ ಲೈಂಗಿಕ ಸಂಬಂಧಮಾಡಿದ ಸ್ತ್ರೀಯನ್ನು ಮದುವೆಯಾಗಬಾರದು. ಯಾಜಕನು ವೇಶ್ಯೆಯನ್ನಾಗಲಿ ಗಂಡ ಬಿಟ್ಟವಳನ್ನಾಗಲಿ ಮದುವೆಯಾಗಬಾರದು. ಯಾಜಕನು ವಿಶೇಷವಾದ ರೀತಿಯಲ್ಲಿ ದೇವರ ಸೇವೆ ಮಾಡುತ್ತಾನೆ. ಆದ್ದರಿಂದ ನೀವು ಅವನನ್ನು ವಿಶೇಷವಾದ ರೀತಿಯಲ್ಲಿ ನೋಡಿಕೊಳ್ಳಬೇಕು. ಯಾಕೆಂದರೆ ಅವನು ಪವಿತ್ರ ವಸ್ತುಗಳನ್ನು ಸಮರ್ಪಿಸುತ್ತಾನಲ್ಲ! ಅವನು ದೇವರ ಬಳಿಗೆ ಪವಿತ್ರ ರೊಟ್ಟಿಯನ್ನು ತರುತ್ತಾನೆ. ನಾನೇ ಪರಿಶುದ್ಧನು! ನಾನೇ ಯೆಹೋವನು! ಮತ್ತು ನಾನು ನಿಮ್ಮನ್ನು ಪರಿಶುದ್ಧಗೊಳಿಸುತ್ತೇನೆ.
“ಯಾಜಕನ ಮಗಳು ವೇಶ್ಯೆಯಾಗಿದ್ದರೆ, ಅವಳು ತನ್ನ ಗೌರವವನ್ನು ಹಾಳುಮಾಡಿಕೊಂಡವಳೂ ತನ್ನ ತಂದೆಗೆ ಅವಮಾನವನ್ನು ಉಂಟುಮಾಡಿದವಳೂ ಆಗಿದ್ದಾಳೆ. ಅವಳನ್ನು ಸುಟ್ಟುಹಾಕಬೇಕು.
10 “ಪ್ರಧಾನಯಾಜಕನು ಅವನ ಸಹೋದರರೊಳಗಿಂದ ಆರಿಸಲ್ಪಟ್ಟವನಾಗಿದ್ದಾನೆ. ಅಭಿಷೇಕತೈಲವು ಅವನ ತಲೆಯ ಮೇಲೆ ಹೊಯ್ಯಲ್ಪಟ್ಟಿದೆ. ಈ ರೀತಿಯಾಗಿ ಅವನು ಪ್ರಧಾನಯಾಜಕನ ವಿಶೇಷ ಕೆಲಸಕ್ಕೆ ಆರಿಸಲ್ಪಟ್ಟಿದ್ದಾನೆ. ಅವನು ವಿಶೇಷ ಬಟ್ಟೆಗಳನ್ನು ಧರಿಸಿಕೊಳ್ಳಲು ಆರಿಸಲ್ಪಟ್ಟಿದ್ದಾನೆ. ಆದ್ದರಿಂದ ಅವನು ಬಹಿರಂಗವಾಗಿ ದುಃಖ ಸೂಚಿಸುವ ಕಾರ್ಯಗಳನ್ನು ಮಾಡಬಾರದು. ಅವನು ತನ್ನ ಕೂದಲನ್ನು ಕೆದರಿಕೊಳ್ಳಬಾರದು. ಅವನು ತನ್ನ ಬಟ್ಟೆಗಳನ್ನು ಹರಿದುಕೊಳ್ಳಬಾರದು. 11 ಅವನು ಹೆಣವನ್ನು ಮುಟ್ಟಿ ತನ್ನನ್ನು ಅಶುದ್ಧನನ್ನಾಗಿ ಮಾಡಿಕೊಳ್ಳಬಾರದು. ಅದು ಅವನ ತಂದೆಯ ಶವವಾಗಿದ್ದರೂ ಸರಿ, ಅಥವಾ ತಾಯಿಯ ಶವವಾಗಿದ್ದರೂ ಸರಿ, ಅವನು ಅದರ ಬಳಿಗೆ ಹೋಗಬಾರದು. 12 ಪ್ರಧಾನಯಾಜಕನು ದೇವರ ಪರಿಶುದ್ಧ ಸ್ಥಳವನ್ನು ಬಿಟ್ಟು ಹೊರಗೆ ಹೋದರೆ ಅಶುದ್ಧನಾಗುವನು. ಅಲ್ಲದೆ ಅವನಿಂದ ದೇವರ ಪರಿಶುದ್ಧಸ್ಥಳವು ಅಶುದ್ಧವಾಗುವುದು. ಅಭಿಷೇಕತೈಲವು ಪ್ರಧಾನಯಾಜಕನ ತಲೆಯ ಮೇಲೆ ಹೊಯ್ಯಲ್ಪಟ್ಟಿದೆ. ಇದು ಅವನನ್ನು ಇತರ ಜನರಿಂದ ಪ್ರತ್ಯೇಕಗೊಳಿಸಿದೆ. ನಾನೇ ಯೆಹೋವನು!
13 “ಪ್ರಧಾನಯಾಜಕನು ಕನ್ಯೆಯಾಗಿರುವವಳನ್ನು ಮದುವೆಯಾಗಬೇಕು. 14 ಪ್ರಧಾನಯಾಜಕನು ಬೇರೆ ಪುರುಷನೊಡನೆ ಲೈಂಗಿಕ ಸಂಬಂಧ ಮಾಡಿದ ಸ್ತ್ರೀಯನ್ನು ಮದುವೆಯಾಗಬಾರದು. ಪ್ರಧಾನಯಾಜಕನು ವೇಶ್ಯಾ ಸ್ತ್ರೀಯನ್ನಾಗಲಿ ಗಂಡ ಬಿಟ್ಟವಳನ್ನಾಗಲಿ ಅಥವಾ ವಿಧವೆಯನ್ನಾಗಲಿ ಮದುವೆಯಾಗಬಾರದು. ಪ್ರಧಾನಯಾಜಕನು ತನ್ನ ಸ್ವಂತ ಜನರಲ್ಲಿ ಒಬ್ಬ ಕನ್ಯೆಯನ್ನು ಮದುವೆಯಾಗಬೇಕು. 15 ಹೀಗಾಗಿ ಜನರು ಅವನ ಮಕ್ಕಳಿಗೆ ಗೌರವ ತೋರಿಸುವರು. ಹೀಗಾಗಿ … ತೋರಿಸುವರು ಅಥವಾ “ಅವನ ಮಕ್ಕಳು ಇತರ ಜನರಿಂದ ಅಶುದ್ಧರಾಗುವುದಿಲ್ಲ.” ಯೆಹೋವನಾಗಿರುವ ನಾನು ಪ್ರಧಾನಯಾಜಕನನ್ನು ಅವನ ವಿಶೇಷ ಕೆಲಸಕ್ಕಾಗಿ ಪ್ರತ್ಯೇಕಿಸಿದ್ದೇನೆ.”
16 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 17 “ಆರೋನನಿಗೆ ಹೀಗೆ ಹೇಳು: ನಿನ್ನ ಸಂತತಿಯವರ ಮಕ್ಕಳಲ್ಲಿ ಯಾರಾದರೂ ಅಂಗವಿಕಲರಾಗಿದ್ದರೆ, ಅವರು ವಿಶೇಷ ರೊಟ್ಟಿಯನ್ನು ದೇವರ ಬಳಿಗೆ ತೆಗೆದುಕೊಂಡು ಹೋಗಬಾರದು. 18 ಯಾವ ಅಂಗವಿಕಲನೂ ಯಾಜಕನಾಗಿ ಸೇವೆಮಾಡಬಾರದು; ನನಗೆ ಯಜ್ಞಗಳನ್ನು ಅರ್ಪಿಸಬಾರದು. ಯಾಜಕರಾಗಿ ಸೇವೆ ಮಾಡಬಾರದವರು ಯಾರೆಂದರೆ: ಕುರುಡರು, ಕುಂಟರು, ತಮ್ಮ ಮುಖಗಳಲ್ಲಿ ಕೆಟ್ಟದಾದ ಗಾಯದ ಗುರುತುಗಳುಳ್ಳವರು, ಬಹಳ ಉದ್ದವಾದ ಕೈಕಾಲುಗಳುಳ್ಳವರು. 19 ಮುರಿದ ಕೈಕಾಲುಗಳುಳ್ಳವರು. 20 ಗೂನು ಬೆನ್ನುಳ್ಳವರು, ದೇಹ ಬೆಳವಣಿಗೆ ನಿಂತುಹೋಗಿರುವವರು, ಕಣ್ಣು ದೋಷವುಳ್ಳವರು, ಕಜ್ಜಿತುರಿಗಳುಳ್ಳವರು ಅಥವಾ ಚರ್ಮರೋಗವುಳ್ಳವರು, ಬೀಜದೋಷವುಳ್ಳವರು.
21 “ಆರೋನನ ಸಂತತಿಯವರಲ್ಲಿ ಅಂಗವಿಕಲರಾದ ಯಾರೂ ಯೆಹೋವನಿಗೆ ಹೋಮದ್ರವ್ಯಗಳನ್ನು ಸಮರ್ಪಿಸಬಾರದು; ಅಂಥವನು ವಿಶೇಷ ರೊಟ್ಟಿಯನ್ನು ದೇವರ ಬಳಿಗೆ ತೆಗೆದುಕೊಂಡು ಹೋಗಕೂಡದು. 22 ಅವನು ಯಾಜಕರ ಕುಟುಂಬದವನಾಗಿರುವುದರಿಂದ ಪರಿಶುದ್ಧ ರೊಟ್ಟಿಯನ್ನೂ ಮಹಾಪರಿಶುದ್ಧ ರೊಟ್ಟಿಯನ್ನೂ ತಿನ್ನಬಹುದು. 23 ಆದರೆ ಅವನು ತೆರೆಯ ಬಳಿಗೆ ಹೋಗಬಾರದು; ಅವನು ಯಜ್ಞವೇದಿಕೆಯ ಬಳಿಗೆ ಹೋಗಬಾರದು. ಯಾಕೆಂದರೆ ಅವನು ಅಂಗವಿಕಲನಾಗಿದ್ದಾನೆ. ಅವನು ನನ್ನ ಪರಿಶುದ್ಧ ಸ್ಥಳಗಳನ್ನು ಅಶುದ್ಧಗೊಳಿಸಬಾರದು. ಯೆಹೋವನಾದ ನಾನೇ ಆ ಸ್ಥಳಗಳನ್ನು ಪರಿಶುದ್ಧಗೊಳಿಸಿದ್ದೇನೆ.”
24 ಹೀಗೆ ಮೋಶೆಯು ಈ ಸಂಗತಿಗಳನ್ನು ಆರೋನನಿಗೂ ಅವನ ಪುತ್ರರಿಗೂ ಮತ್ತು ಇಸ್ರೇಲರೆಲ್ಲರಿಗೂ ಹೇಳಿದನು.

*21:3: ಸಹೋದರಿ ಅಕ್ಷರಶಃ, “ಕನ್ನಿಕೆ.”

21:15: ಹೀಗಾಗಿ … ತೋರಿಸುವರು ಅಥವಾ “ಅವನ ಮಕ್ಕಳು ಇತರ ಜನರಿಂದ ಅಶುದ್ಧರಾಗುವುದಿಲ್ಲ.”