23
ಯೆಹೋಶುವನಿಂದ ಜನರಿಗೆ ಪ್ರೇರಣೆ
1 ಯೆಹೋವನು ಇಸ್ರೇಲರ ಶತ್ರುಗಳನ್ನು ಸದೆಬಡೆದು ಅವರಿಗೆ ವಿಶ್ರಾಂತಿಯನ್ನು ಕೊಟ್ಟನು. ಯೆಹೋವನು ಇಸ್ರೇಲನ್ನು ಸುರಕ್ಷಿತಗೊಳಿಸಿದನು. ಅನೇಕ ವರ್ಷಗಳು ಕಳೆದವು. ಯೆಹೋಶುವನು ಬಹಳ ಮುದುಕನಾದನು. 2 ಆಗ ಯೆಹೋಶುವನು ಎಲ್ಲಾ ಹಿರಿಯನಾಯಕರನ್ನು, ಕುಟುಂಬದ ಮುಖ್ಯಸ್ಥರನ್ನು, ನ್ಯಾಯಾಧೀಶರನ್ನು ಮತ್ತು ಇಸ್ರೇಲರ ಅಧಿಕಾರಿಗಳನ್ನು ಸಭೆ ಸೇರಿಸಿದನು. ಯೆಹೋಶುವನು ಅವರಿಗೆ, “ನಾನು ಬಹಳ ಮುದುಕನಾಗಿದ್ದೇನೆ. 3 ಯೆಹೋವನು ನಮ್ಮ ಶತ್ರುಗಳಿಗೆ ಏನು ಮಾಡಿದನೆಂಬುದು ನೀವು ನೋಡಿದ್ದೀರಿ. ನಮಗೆ ಸಹಾಯ ಮಾಡುವುದಕ್ಕಾಗಿ ನಮ್ಮ ದೇವರಾದ ಯೆಹೋವನು ನಮಗಾಗಿ ಯುದ್ಧಮಾಡಿದನು. 4 ಪಶ್ಚಿಮದಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ಮತ್ತು ಜೋರ್ಡನ್ ನದಿಯ ಮಧ್ಯದ ಪ್ರದೇಶವನ್ನು ನೀವು ಸ್ವಾಧೀನಪಡಿಸಿಕೊಳ್ಳಬಹುದೆಂದು ನಾನು ನಿಮಗೆ ತಿಳಿಸಿದ್ದನ್ನು ಸ್ಮರಿಸಿಕೊಳ್ಳಿ. ನಾನು ಆ ಪ್ರದೇಶವನ್ನು ನಿಮಗೆ ಕೊಡುವುದಾಗಿ ವಾಗ್ದಾನ ಮಾಡಿದ್ದೆ. ಆದರೆ ಇಲ್ಲಿಯವರೆಗೂ ಅದು ನಿಮ್ಮ ಅಧೀನಕ್ಕೆ ಬಂದಿಲ್ಲ. 5 ಆದರೆ ನಿಮ್ಮ ದೇವರಾದ ಯೆಹೋವನು ಅಲ್ಲಿಯ ನಿವಾಸಿಗಳನ್ನು ಬಲವಂತದಿಂದ ಹೊರಡಿಸುತ್ತಾನೆ. ಆ ಪ್ರದೇಶವನ್ನು ನೀವು ಪಡೆದುಕೊಳ್ಳುತ್ತೀರಿ. ನಿಮ್ಮ ದೇವರಾದ ಯೆಹೋವನು ನಿಮಗಾಗಿ ಇದನ್ನು ಮಾಡುವುದಾಗಿ ವಾಗ್ದಾನ ಮಾಡಿದ್ದಾನೆ.
6 “ಯೆಹೋವನ ಆಜ್ಞೆಗಳನ್ನೆಲ್ಲಾ ಜಾಗರೂಕತೆಯಿಂದ ಕೈಕೊಂಡು ನಡೆಯಿರಿ. ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಎಲ್ಲವನ್ನು ಪಾಲಿಸಿರಿ. ಆ ಧರ್ಮಶಾಸ್ತ್ರಕ್ಕೆ ವಿಮುಖರಾಗಬೇಡಿ. 7 ಇಸ್ರೇಲರಲ್ಲದ ಕೆಲವು ಜನರು ನಮ್ಮೊಂದಿಗೆ ವಾಸಮಾಡಿಕೊಂಡಿದ್ದಾರೆ. ಅವರು ತಮ್ಮ ದೇವರುಗಳನ್ನೇ ಪೂಜಿಸುತ್ತಾರೆ. ಅವರೊಂದಿಗೆ ಸ್ನೇಹ ಮಾಡಬೇಡಿ. ಅವರ ದೇವರುಗಳ ಸೇವೆಯನ್ನಾಗಲಿ ಪೂಜೆಯನ್ನಾಗಲಿ ಮಾಡಬೇಡಿ. ಆ ದೇವರುಗಳ ಹೆಸರುಗಳ ಮೂಲಕ ಬೇಡಿಕೊಳ್ಳಬೇಡಿ. ಅವುಗಳ ಮೇಲೆ ಪ್ರಮಾಣ ಮಾಡಬೇಡಿ. ಅವುಗಳಿಗೆ ಅಡ್ಡಬಿದ್ದು ಪೂಜಿಸಬೇಡಿ. 8 ನಿಮ್ಮ ದೇವರಾದ ಯೆಹೋವನನ್ನೇ ಅನುಸರಿಸಿಕೊಂಡಿರಿ. ಈವರೆಗೆ ನೀವು ಹೇಗಿದ್ದಿರೊ ಅದೇ ರೀತಿಯಲ್ಲಿ ಮುಂದೆಯೂ ಇರಿ.
9 “ದೊಡ್ಡದಾದ ಮತ್ತು ಪ್ರಬಲವಾದ ಜನಾಂಗಗಳನ್ನು ಸೋಲಿಸಲು ಯೆಹೋವನು ನಿಮಗೆ ನೆರವಾದನು. ಆತನು ಅವರನ್ನು ತನ್ನ ಬಲವುಳ್ಳ ಹಸ್ತದಿಂದ ಹೊರಗಟ್ಟಿದನು. ನಿಮ್ಮನ್ನು ಸೋಲಿಸಲು ಯಾವ ಜನಾಂಗಕ್ಕೂ ಸಾಧ್ಯವಿಲ್ಲ. 10 ಯೆಹೋವನ ಸಹಾಯದಿಂದ ನಿಮ್ಮಲ್ಲಿ ಒಬ್ಬ ಇಸ್ರೇಲಿಯು ಒಂದು ಸಾವಿರ ಮಂದಿ ಶತ್ರುಗಳನ್ನು ಸೋಲಿಸುವಂತಾಯಿತು; ಏಕೆಂದರೆ ನಿಮ್ಮ ದೇವರಾದ ಯೆಹೋವನು ನಿಮಗಾಗಿ ಯುದ್ಧ ಮಾಡುವುದಾಗಿ ಪ್ರಮಾಣ ಮಾಡಿದ್ದಾನೆ. 11 ಆದ್ದರಿಂದ ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸುವುದರಲ್ಲಿ ಬಹು ಎಚ್ಚರಿಕೆಯಿಂದಿರಿ.
12 “ಯೆಹೋವನನ್ನೇ ಅನುಸರಿಸಿರಿ. ಇಸ್ರೇಲಿಗೆ ಸೇರಿಲ್ಲದ ಅನ್ಯರೊಂದಿಗೆ ಸ್ನೇಹ ಮಾಡಬೇಡಿ. ಅವರ ಜನರನ್ನು ಮದುವೆಯಾಗಬೇಡಿ. ನೀವು ಅವರೊಂದಿಗೆ ಸ್ನೇಹ ಮಾಡಿದರೆ, 13 ನಿಮ್ಮ ದೇವರಾದ ಯೆಹೋವನು ಶತ್ರುಗಳನ್ನು ಸೋಲಿಸಲು ನಿಮಗೆ ಸಹಾಯ ಮಾಡುವುದಿಲ್ಲ, ಅವರು ನಿಮಗೆ ಉರುಲಿನಂತಾಗುತ್ತಾರೆ. ಹೊಗೆ ಮತ್ತು ಧೂಳು ನಿಮ್ಮ ಕಣ್ಣಿಗೆ ನೋವನ್ನುಂಟು ಮಾಡುವಂತೆ ಅವರು ನಿಮಗೆ ನೋವನ್ನುಂಟು ಮಾಡುತ್ತಾರೆ; ಈ ಒಳ್ಳೆಯ ದೇಶದಿಂದ ನಿಮ್ಮನ್ನು ಬಲಾತ್ಕಾರದಿಂದ ಹೊರಗಟ್ಟಲಾಗುವುದು. ನಿಮ್ಮ ದೇವರಾದ ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟಿದ್ದಾನೆ. ಆದರೆ ಯೆಹೋವನ ಆಜ್ಞೆಯನ್ನು ಪಾಲಿಸದಿದ್ದಲ್ಲಿ ನೀವು ಇದನ್ನು ಕಳೆದುಕೊಳ್ಳಬೇಕಾಗುತ್ತದೆ.
14 “ನಾನು ಇಹಲೋಕ ಯಾತ್ರೆಯನ್ನು ಮುಗಿಸುವ ಕಾಲಬಂದಂತಿದೆ. ಯೆಹೋವನು ನಿಮಗಾಗಿ ಅನೇಕ ಮಹತ್ಕಾರ್ಯಗಳನ್ನು ಮಾಡಿದ್ದು ನಿಮಗೆ ಗೊತ್ತಿದೆ; ಅದನ್ನು ನೀವು ಮನಃಪೂರ್ವಕವಾಗಿ ನಂಬುತ್ತೀರಿ. ಆತನು ತನ್ನ ಯಾವ ವಾಗ್ದಾನವನ್ನೂ ನೆರವೇರಿಸದೆ ಬಿಟ್ಟಿಲ್ಲ. ಯೆಹೋವನು ನಮಗೆ ಮಾಡಿದ ಪ್ರತಿಯೊಂದು ವಾಗ್ದಾನಗಳನ್ನು ನೆರವೇರಿಸಿದ್ದಾನೆ. 15 ನಿಮ್ಮ ದೇವರಾದ ಯೆಹೋವನು ಮಾಡಿದ ಪ್ರತಿಯೊಂದು ಒಳ್ಳೆಯ ವಾಗ್ದಾನವು ನೆರವೇರಿದೆ. ಅದೇ ರೀತಿಯಲ್ಲಿ ಯೆಹೋವನು ತನ್ನ ಉಳಿದ ವಾಗ್ದಾನವನ್ನು ನೆರವೇರಿಸುವನು. ನೀವು ತಪ್ಪುಗಳನ್ನು ಮಾಡಿದರೆ ನಿಮಗೆ ಕೆಟ್ಟದ್ದಾಗುವುದೆಂದೂ ಆತನು ನಿಮಗೆ ಕೊಟ್ಟ ಈ ಒಳ್ಳೆಯ ದೇಶದಿಂದ ಬಲವಂತವಾಗಿ ಹೊರಗಟ್ಟವುದಾಗಿಯೂ ಆತನು ಹೇಳಿದ್ದಾನೆ. 16 ನಿಮ್ಮ ದೇವರಾದ ಯೆಹೋವನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಪಾಲಿಸದೆ ಬೇರೆ ದೇವರುಗಳ ಸೇವೆಮಾಡಿದರೆ ಈ ದೇಶವನ್ನು ಕಳೆದುಕೊಳ್ಳುವಿರಿ. ನೀವು ಅನ್ಯದೇವರುಗಳನ್ನು ಪೂಜಿಸಬಾರದು. ಇಲ್ಲವಾದರೆ, ಯೆಹೋವನು ನಿಮ್ಮ ಮೇಲೆ ಬಹು ಕೋಪಗೊಂಡು ಆತನು ನಿಮಗೆ ಕೊಟ್ಟ ಈ ಒಳ್ಳೆಯ ದೇಶದಿಂದ ಬಲವಂತವಾಗಿ ಹೊರಡಿಸುವನು,” ಅಂದನು.