7
“ಭೂಲೋಕದಲ್ಲಿ ಮನುಷ್ಯನಿಗೆ ಬಹು ಪ್ರಯಾಸದ ಕೆಲಸವಿದೆ.
ಅವನ ಜೀವನವು ಕೂಲಿ ಕೆಲಸದವನ ಜೀವನದಂತಿದೆ.
ಮನುಷ್ಯನು ಉರಿಬಿಸಿಲಿನಲ್ಲಿ ಪ್ರಯಾಸಪಟ್ಟು ದುಡಿದ ಮೇಲೆ
ತಂಪಾದ ನೆರಳನ್ನು ಬಯಸುವ ಗುಲಾಮನಂತಿದ್ದಾನೆ.
ಮನುಷ್ಯನು, ದಿನದ ಕೂಲಿಗಾಗಿ ಕಾಯುತ್ತಿರುವ ಕೂಲಿಯವನಂತಿದ್ದಾನೆ.
ಜಿಗುಪ್ಸೆಯ ತಿಂಗಳುಗಳನ್ನೂ ಸಂಕಟದ ರಾತ್ರಿಗಳನ್ನೂ
ನನಗೆ ನೇಮಿಸಲಾಗಿದೆ.
ಮಲಗಿಕೊಳ್ಳುವಾಗ,
‘ಯಾವಾಗ ಏಳುವೆನೋ’ ಅಂದುಕೊಳ್ಳುವೆನು.
ರಾತ್ರಿಯು ಬೆಳೆಯುತ್ತಾ ಹೋಗುವುದು;
ಸೂರ್ಯೋದಯದವರೆಗೂ ಹೊರಳಾಡುವೆನು.
ನನ್ನ ದೇಹವು ಹುಳಗಳಿಂದಲೂ ಧೂಳಿನಿಂದಲೂ ಆವರಿಸಿಕೊಂಡಿದೆ.
ನನ್ನ ಚರ್ಮವು ಬಿರಿದುಹೋಗಿ ಕೀವು ಸೋರುತ್ತಿರುವ ಕುರುಗಳಿಂದ ತುಂಬಿಹೋಗಿದೆ.
 
“ನನ್ನ ದಿನಗಳು ಮಗ್ಗದ ಲಾಳಿಗಿಂತಲೂ ವೇಗವಾಗಿ ಹೋಗುತ್ತವೆ.
ನನ್ನ ಜೀವಿತವು ನಿರೀಕ್ಷೆಯಿಲ್ಲದೆ ಕೊನೆಗೊಳ್ಳುವುದು.
ದೇವರೆ, ನನ್ನ ಜೀವನವು ಕೇವಲ ಉಸಿರೆಂಬುದನ್ನು ನೆನಸಿಕೊ,
ನನ್ನ ಕಣ್ಣುಗಳು ಮತ್ತೆಂದಿಗೂ ಸುಖವನ್ನು ನೋಡುವುದಿಲ್ಲ.
ನೀನು ನನ್ನನ್ನು ಮತ್ತೆಂದೂ ಕಾಣುವುದಿಲ್ಲ.
ನೀನು ನನಗಾಗಿ ಹುಡುಕುವೆ, ಆದರೆ ನಾನು ಅಷ್ಟರಲ್ಲೇ ಹೊರಟುಹೋಗಿರುವೆನು.
ಮೋಡವು ಕಣ್ಣಿಗೆ ಕಾಣದೆ ಇಲ್ಲವಾಗುವುದು.
ಅದೇ ರೀತಿಯಲ್ಲಿ, ಸತ್ತು ಸಮಾಧಿಯಲ್ಲಿ ಹೂಳಲ್ಪಟ್ಟವನು ಹಿಂತಿರುಗಿ ಬರುವುದಿಲ್ಲ.
10 ಅವನು ತನ್ನ ಮನೆಗೆ ಮತ್ತೆಂದಿಗೂ ಹಿಂತಿರುಗಿ ಬರುವುದಿಲ್ಲ.
ಇನ್ನು ಮೇಲೆ ಅವನ ಸ್ಥಳವು ಅವನನ್ನು ತಿಳಿದಿರುವುದಿಲ್ಲ.
 
11 “ಆದ್ದರಿಂದ ನಾನು ಮೌನವಾಗಿರುವುದಿಲ್ಲ, ನಾನು ಮಾತಾಡುವೆನು!
ನನ್ನ ಆತ್ಮವು ಸಂಕಟಪಡುತ್ತಿದೆ!
ನನ್ನ ಮನಸ್ಸು ನೊಂದು ಹೋಗಿರುವುದರಿಂದ ನಾನು ದೂರು ಹೇಳುವೆನು.
12 ದೇವರೇ, ನೀನು ನನ್ನನ್ನು ಕಾಯುವುದೇಕೆ?
ನಾನೇನು ಸಮುದ್ರವೇ? ಭಯಂಕರವಾದ ಸಮುದ್ರ ಪ್ರಾಣಿಯೇ?
13 ನನ್ನ ಹಾಸಿಗೆಯು ನನ್ನನ್ನು ಸಂತೈಸುತ್ತದೆ;
ನನ್ನ ಮಂಚವು ನನಗೆ ವಿಶ್ರಾಂತಿಯನ್ನೂ ಉಪಶಮನವನ್ನೂ ಕೊಡುತ್ತದೆ ಎಂದು
ನಾನು ಆಲೋಚಿಸುವಾಗ,
14 ನೀನು ಕನಸುಗಳಿಂದ ನನ್ನನ್ನು ಹೆದರಿಸುವೆ;
ದರ್ಶನಗಳಿಂದ ನನ್ನನ್ನು ಭಯಗೊಳಿಸುವೆ.
15 ನಾನು ಬದುಕುವುದಕ್ಕಿಂತ
ಉಸಿರುಕಟ್ಟಿ ಸಾಯುವುದೇ ಮೇಲು.
16 ನನ್ನ ಜೀವಿತವು ನನಗೆ ಅಸಹ್ಯವಾಗಿದೆ.
ಶಾಶ್ವತವಾಗಿ ಬದುಕಲು ನನಗೆ ಇಷ್ಟವಿಲ್ಲ.
ನನ್ನನ್ನು ಒಬ್ಬಂಟಿಗನನ್ನಾಗಿ ಬಿಟ್ಟುಬಿಡು!
ನನ್ನ ಜೀವಿತಕ್ಕೆ ಅರ್ಥವೇ ಇಲ್ಲ!
17 ದೇವರೇ, ಮನುಷ್ಯನು ಎಷ್ಟರವನು?
ನೀನು ಅವನ ಕಡೆಗೆ ಗಮನ ಕೊಡುವುದೇಕೆ?
18 ನೀನು ಪ್ರತಿ ಮುಂಜಾನೆ ಮನುಷ್ಯನನ್ನು ಪರೀಕ್ಷಿಸುವುದೇಕೆ?
ಅವನನ್ನು ಪ್ರತಿಗಳಿಗೆಯಲ್ಲೂ ಪರೀಕ್ಷಿಸುವುದೇಕೆ?
19 ದೇವರೇ, ಇನ್ನೆಷ್ಟರವರೆಗೆ ನೀನು ನನ್ನ ಕಡೆಯಿಂದ ದೃಷ್ಟಿಯನ್ನು ತಿರುಗಿಸದೆ ಇರುವೆ?
ನೀನು ನನ್ನನ್ನು ಕ್ಷಣ ಕಾಲವಾದರೂ ಒಬ್ಬಂಟಿಗನನ್ನಾಗಿ ಬಿಡುವುದಿಲ್ಲ.
20 ಮನುಷ್ಯನನ್ನು ಗಮನಿಸುವವನೇ,
ನಾನು ಪಾಪ ಮಾಡಿದ್ದರೆ, ಅದರಿಂದ ನಿನಗೇನಾಯಿತು?
ದೇವರೇ, ನೀನು ನನ್ನನ್ನು ಗುರಿಯನ್ನಾಗಿ ಮಾಡಿಕೊಂಡದ್ದೇಕೆ?
ನಾನು ನಿನಗೆ ಸಮಸ್ಯೆಯಾದೆನೇ?
21 ನೀನು ನನ್ನ ತಪ್ಪುಗಳನ್ನು ಮನ್ನಿಸಬಾರದೇಕೆ?
ನನ್ನ ಪಾಪಗಳನ್ನು ಕ್ಷಮಿಸಬಾರದೇಕೆ?
ನಾನು ಬೇಗನೆ ಸತ್ತು ಸಮಾಧಿಯಲ್ಲಿರುವೆನು.
ಆಮೇಲೆ ನೀನು ನನಗಾಗಿ ಹುಡುಕುವೆ, ಆದರೆ ನಾನು ಅಷ್ಟರಲ್ಲೇ ಹೊರಟುಹೋಗಿರುವೆನು.”