36
ಯೆಹೋಯಾಕೀಮನು ಯೆರೆಮೀಯನ ಗ್ರಂಥವನ್ನು ಸುಟ್ಟದ್ದು
ಯೋಷೀಯನ ಮಗನಾದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಯೆಹೋವನ ಸಂದೇಶ ಹೀಗಿತ್ತು: “ಯೆರೆಮೀಯನೇ, ಒಂದು ಸುರಳಿಯನ್ನು ತೆಗೆದುಕೊಂಡು ನಾನು ನಿನಗೆ ಹೇಳಿದ ಎಲ್ಲಾ ಸಂದೇಶಗಳನ್ನು ಅದರಲ್ಲಿ ಬರೆದಿಡು. ನಾನು ನಿನಗೆ ಇಸ್ರೇಲ್ ಮತ್ತು ಯೆಹೂದ ಜನಾಂಗಗಳ ಬಗ್ಗೆಯೂ ಮತ್ತು ಉಳಿದ ಜನಾಂಗಗಳ ಬಗ್ಗೆಯೂ ಹೇಳಿದ್ದೇನೆ. ಯೋಷೀಯನ ಆಳ್ವಿಕೆಯ ಕಾಲದಿಂದ ಇಲ್ಲಿಯವರೆಗೂ ನಾನು ನಿನಗೆ ಹೇಳಿದ ಪ್ರತಿಯೊಂದು ಶಬ್ಧವನ್ನೂ ಬರೆದಿಡು. ನಾನು ಮಾಡಬೇಕೆಂದು ಯೋಚಿಸಿರುವುದನ್ನು ಯೆಹೂದ ಕುಲದವರು ಕೇಳಿಸಿಕೊಳ್ಳಬಹುದು. ಅವರು ಮಾಡುತ್ತಿರುವ ದುಷ್ಕೃತ್ಯಗಳನ್ನು ನಿಲ್ಲಿಸಬಹುದು. ಅವರು ಹಾಗೆ ಮಾಡಿದರೆ ಅವರು ಮಾಡಿದ ಪಾಪಗಳನ್ನು ನಾನು ಕ್ಷಮಿಸುವೆನು.”
ಆಗ ಯೆರೆಮೀಯನು ಬಾರೂಕನೆಂಬ ಒಬ್ಬ ವ್ಯಕ್ತಿಯನ್ನು ಕರೆದನು. ಬಾರೂಕನು ನೇರೀಯನ ಮಗ. ಯೆರೆಮೀಯನು ಯೆಹೋವನ ಸಂದೇಶವನ್ನು ಹೇಳುತ್ತಿದ್ದಾಗ ಬಾರೂಕನು ಆ ಸಂದೇಶವನ್ನು ಸುರುಳಿಯ ಮೇಲೆ ಬರೆದನು. ಆಗ ಯೆರೆಮೀಯನು ಬಾರೂಕನಿಗೆ ಹೀಗೆ ಹೇಳಿದನು: “ಯೆಹೋವನ ಆಲಯಕ್ಕೆ ನಾನು ಹೋಗಲಾರೆ. ಅಲ್ಲಿ ಹೋಗುವದಕ್ಕೆ ಅಪ್ಪಣೆಯಿಲ್ಲ. ಆದ್ದರಿಂದ ನೀನು ಯೆಹೋವನ ಆಲಯಕ್ಕೆ ಉಪವಾಸದ ದಿನ ಹೋಗು ಮತ್ತು ಸುರುಳಿಯಲ್ಲಿ ಬರೆದದ್ದನ್ನು ಜನರ ಮುಂದೆ ಓದು. ನಾನು ಹೇಳುತ್ತಿದ್ದಂತೆಯೇ ನೀನು ಸುರುಳಿಯ ಮೇಲೆ ಬರೆದುಕೊಂಡ ಯೆಹೋವನ ಸಂದೇಶಗಳನ್ನು ಆ ಜನರ ಮುಂದೆ ಓದು. ತಾವು ವಾಸಮಾಡುವ ಸ್ಥಳಗಳಿಂದ ಜೆರುಸಲೇಮಿಗೆ ಬಂದಿರುವ ಎಲ್ಲಾ ಯೆಹೂದ್ಯರ ಮುಂದೆ ಆ ಸಂದೇಶಗಳನ್ನು ಓದು. ಬಹುಶಃ ಆ ಜನರು ತಮಗೆ ಸಹಾಯಮಾಡೆಂದು ಯೆಹೋವನನ್ನು ಪ್ರಾರ್ಥಿಸಬಹುದು. ಆಗ ಪ್ರತಿಯೊಬ್ಬನೂ ದುಷ್ಕೃತ್ಯ ಮಾಡುವದನ್ನು ನಿಲ್ಲಿಸಬಹುದು. ಆ ಜನರ ಮೇಲೆ ತನಗೆ ಬಹಳ ಕೋಪಬಂದಿದೆ ಎಂದು ಯೆಹೋವನು ಪ್ರಕಟಿಸಿದ್ದಾನೆ.” ಪ್ರವಾದಿಯಾದ ಯೆರೆಮೀಯನು ತನಗೆ ಮಾಡಲು ಹೇಳಿದಂತೆ ನೇರೀಯನ ಮಗನಾದ ಬಾರೂಕನು ಮಾಡಿದನು. ಬಾರೂಕನು ಸುರುಳಿಯ ಮೇಲೆ ಬರೆದ ಯೆಹೋವನ ಸಂದೇಶಗಳನ್ನು ಗಟ್ಟಿಯಾಗಿ ಯೆಹೋವನ ಆಲಯದಲ್ಲಿ ಓದಿದನು.
ಯೆಹೋಯಾಕೀಮನ ಆಳ್ವಿಕೆಯ ಐದನೇ ವರ್ಷದ ಒಂಭತ್ತನೇ ತಿಂಗಳಲ್ಲಿ ಒಂದು ಉಪವಾಸವನ್ನು ಪ್ರಕಟಿಸಲಾಯಿತು. ಜೆರುಸಲೇಮ್ ನಗರದ ನಿವಾಸಿಗಳೆಲ್ಲರೂ ಯೆಹೂದದ ಬೇರೆ ಊರುಗಳಿಂದ ಜೆರುಸಲೇಮಿಗೆ ಬಂದವರೆಲ್ಲರೂ ಯೆಹೋವನ ಆಲಯದಲ್ಲಿ ಉಪವಾಸ ಮಾಡುವರೆಂದು ಗೊತ್ತುಪಡಿಸಲಾಗಿತ್ತು. 10 ಆ ಸಂದರ್ಭದಲ್ಲಿ ಯೆರೆಮೀಯನು ಹೇಳಿದ ಆ ಸಂದೇಶವನ್ನು ಬಾರೂಕನು ಓದಿದನು. ಅವನು ಯೆಹೋವನ ಆಲಯದಲ್ಲಿ ಆ ಸುರುಳಿಯನ್ನು ಓದಿದನು. ಯೆಹೋವನ ಆಲಯದಲ್ಲಿದ್ದ ಎಲ್ಲಾ ಜನರು ಕೇಳುವಂತೆ ಬಾರೂಕನು ಆ ಸುರುಳಿಯನ್ನು ಓದಿದನು. ಆ ಸುರುಳಿಯನ್ನು ಓದುವಾಗ ಬಾರೂಕನು ಮೇಲಿನ ಪ್ರಾಕಾರದಲ್ಲಿದ್ದ ಗೆಮರ್ಯನ ಕೋಣೆಯಲ್ಲಿದ್ದನು. ಆ ಕೋಣೆಯು ಪವಿತ್ರ ಆಲಯದ ಹೊಸ ಬಾಗಿಲಿನ ಹತ್ತಿರ ಇತ್ತು. ಗೆಮರ್ಯನು ಶಾಫಾನನ ಮಗನಾಗಿದ್ದನು. ಗೆಮರ್ಯನು ಯೆಹೋವನ ಆಲಯದಲ್ಲಿ ಯೆಹೂದ್ಯ ಧರ್ಮಶಾಸ್ತ್ರಜ್ಞನಾಗಿದ್ದನು.
11 ಬಾರೂಕನು ಓದಿದ ಎಲ್ಲಾ ಯೆಹೋವನ ಸಂದೇಶಗಳನ್ನು ಮೀಕಾಯನೆಂಬ ಒಬ್ಬ ಮನುಷ್ಯನು ಕೇಳಿಸಿಕೊಂಡನು. ಮೀಕಾಯನು ಶಾಫಾನನ ಮಗನಾದ ಗೆಮರ್ಯನ ಮಗನಾಗಿದ್ದನು. 12 ಸುರುಳಿಯಲ್ಲಿದ್ದ ಸಂದೇಶಗಳನ್ನು ಕೇಳಿದ ಕೂಡಲೇ ಅವನು ರಾಜನ ಅರಮನೆಯಲ್ಲಿದ್ದ ಆಸ್ಥಾನದ ಅಧಿಕಾರಿಯ ಕೋಣೆಗೆ ಹೋದನು. ರಾಜನ ಅರಮನೆಯಲ್ಲಿ ಎಲ್ಲಾ ರಾಜಾಧಿಕಾರಿಗಳು ಕುಳಿತುಕೊಂಡಿದ್ದರು. ಆ ಅಧಿಕಾರಿಗಳ ಹೆಸರುಗಳು ಇಂತಿವೆ: ದಬರ್ಾರಿನ ಅಧಿಕಾರಿಯಾದ ಎಲೀಷಾಮನು, ಶೆಮಾಯನ ಮಗನಾದ ದೆಲಾಯನು, ಅಕ್ಬೋರನ ಮಗನಾದ ಎಲಾಐಥಾನನು, ಶಾಫಾನನ ಮಗನಾದ ಗೆಮರ್ಯನು, ಹನನೀಯನ ಮಗನಾದ ಚಿದ್ಕೀಯನು ಮತ್ತು ಉಳಿದೆಲ್ಲ ಅಧಿಕಾರಿಗಳು ಅಲ್ಲಿದ್ದರು. 13 ಬಾರೂಕನು ಸುರಳಿಯಿಂದ ಓದಿದ ಎಲ್ಲಾ ವಿಷಯವನ್ನು ಮೀಕಾಯನು ಈ ಅಧಿಕಾರಿಗಳಿಗೆ ಹೇಳಿದನು.
14 ಆಗ ಆ ಅಧಿಕಾರಿಗಳೆಲ್ಲ ಯೆಹೂದಿ ಎಂಬುವನನ್ನು ಬಾರೂಕನಲ್ಲಿಗೆ ಕಳುಹಿಸಿಕೊಟ್ಟರು. ಯೆಹೂದಿಯು ಶೆಲೆಮ್ಯನ ಮಗನಾದ ನೆಥನ್ಯನ ಮಗ. ಶೆಲೆಮ್ಯನು ಕೂಷಿಯ ಮಗ. ಯೆಹೂದಿಯು ಬಾರೂಕನಿಗೆ, “ನೀನು ಓದಿದ ಸುರುಳಿಯನ್ನು ತೆಗೆದುಕೊಂಡು ನನ್ನ ಜೊತೆ ಬಾ” ಎಂದು ಕರೆದನು.
ನೇರೀಯನ ಮಗನಾದ ಬಾರೂಕನು ಸುರುಳಿಯನ್ನು ತೆಗೆದುಕೊಂಡು ಯೆಹೂದಿಯ ಸಂಗಡ ಆ ಅಧಿಕಾರಿಗಳ ಹತ್ತಿರಕ್ಕೆ ಹೋದನು.
15 ಆಗ ಆ ಅಧಿಕಾರಿಗಳು ಬಾರೂಕನಿಗೆ, “ಕುಳಿತುಕೊ. ಆ ಸುರುಳಿಯನ್ನು ನಮ್ಮ ಮುಂದೆ ಓದು” ಎಂದರು.
ಬಾರೂಕನು ಸುರುಳಿಯನ್ನು ಅವರ ಮುಂದೆ ಓದಿದನು.
16 ಆ ರಾಜ್ಯಾಧಿಕಾರಿಗಳು ಆ ಸುರುಳಿಯಲ್ಲಿ ಬರೆದ ಎಲ್ಲಾ ಸಂದೇಶಗಳನ್ನು ಕೇಳಿ ಭಯಪಟ್ಟು ಒಬ್ಬರ ಮುಖವನ್ನೊಬ್ಬರು ನೋಡಿದರು. ಅವರು ಬಾರೂಕನಿಗೆ, “ನಾವು ರಾಜನಾದ ಯೆಹೋಯಾಕೀಮನಿಗೆ ಈ ಸುರುಳಿಯಲ್ಲಿರುವ ಸಂದೇಶಗಳ ಬಗ್ಗೆ ತಿಳಿಸಬೇಕು” ಎಂದರು. 17 ಬಳಿಕ ಆ ಅಧಿಕಾರಿಗಳು ಬಾರೂಕನಿಗೆ, “ಬಾರೂಕನೇ, ನೀನು ಈ ಸುರುಳಿಯ ಮೇಲೆ ಬರೆದ ಸಂದೇಶಗಳನ್ನು ಎಲ್ಲಿಂದ ಪಡೆದೆ? ಯೆರಮೀಯನು ನಿನಗೆ ಹೇಳಿದ್ದನ್ನು ನೀನು ಬರೆದುಕೊಂಡೆಯಾ? ಹೇಳು” ಎಂದು ಪ್ರಶಿಐಸಿದರು.
18 “ಹೌದು, ಯೆರೆಮೀಯನು ಬಾಯಿಂದ ಹೇಳಿದನು ಮತ್ತು ನಾನು ಆ ಸಂದೇಶಗಳನ್ನೆಲ್ಲಾ ಶಾಹಿಯಿಂದ ಸುರುಳಿಯ ಮೇಲೆ ಬರೆದೆನು” ಎಂದು ಬಾರೂಕನು ಉತ್ತರಿಸಿದನು.
19 ಆಗ ರಾಜಾಧಿಕಾರಿಗಳು ಬಾರೂಕನಿಗೆ, “ನೀನು ಮತ್ತು ಯೆರೆಮೀಯನು ಹೋಗಿ ಎಲ್ಲಿಯಾದರೂ ಅಡಗಿಕೊಳ್ಳಿರಿ. ಎಲ್ಲಿ ಅಡಗಿಕೊಂಡಿದ್ದೀರೆಂಬುದನ್ನು ಯಾರಿಗೂ ತಿಳಿಸಬೇಡಿ” ಎಂದು ಹೇಳಿದರು.
20 ಅನಂತರ ರಾಜಾಧಿಕಾರಿಗಳು ಆ ಸುರುಳಿಯನ್ನು ಧರ್ಮಶಾಸ್ತ್ರಜ್ಞನಾದ ಎಲೀಷಾಮನ ಕೋಣೆಯಲ್ಲಿ ಇಟ್ಟರು. ಅವರು ರಾಜನಾದ ಯೆಹೋಯಾಕೀಮನ ಬಳಿಗೆ ಹೋಗಿ ಆ ಸುರುಳಿಯ ಬಗ್ಗೆ ವಿವರವಾಗಿ ಹೇಳಿದರು.
21 ರಾಜನಾದ ಯೆಹೋಯಾಕೀಮನು ಆ ಸುರುಳಿಯನ್ನು ತರುವದಕ್ಕೆ ಯೆಹೂದಿಯನ್ನು ಕಳುಹಿಸಿದನು. ಯೆಹೂದಿಯು ಧರ್ಮಶಾಸ್ತ್ರಜ್ಞನಾದ ಎಲೀಷಾಮನ ಕೋಣೆಯಿಂದ ಆ ಸುರುಳಿಯನ್ನು ತಂದನು. ಬಳಿಕ ರಾಜನು ಮತ್ತು ಅವನ ಸುತ್ತಲು ನಿಂತ ಅಧಿಕಾರಿಗಳೆಲ್ಲ ಕೇಳುವಂತೆ ಯೆಹೂದಿಯು ಆ ಸುರಳಿಯನ್ನು ಓದಿದನು. 22 ಅದು ನಡೆದದ್ದು ಒಂಭತ್ತನೇ ತಿಂಗಳಲ್ಲಿ, ರಾಜನಾದ ಯೆಹೋಯಾಕೀಮನು ಚಳಿಗಾಲದ ಮನೆಯಲ್ಲಿ ಕುಳಿತಿದ್ದನು. ರಾಜನ ಎದುರಿಗಿದ್ದ ಒಂದು ಸಣ್ಣ ಅಗ್ಗಿಷ್ಟಿಕೆಯಲ್ಲಿ ಬೆಂಕಿಯು ಉರಿಯುತ್ತಿತು. 23 ಯೆಹೂದಿಯು ಸುರುಳಿಯನ್ನು ಓದಲು ಪ್ರಾರಂಭಿಸಿದನು. ಆದರೆ ಅವನು ಎರಡು ಅಥವಾ ಮೂರು ಅಂಕಣಗಳನ್ನು ಓದಿ ಮುಗಿಸಿದ ಕೂಡಲೆ ರಾಜನಾದ ಯೆಹೋಯಾಕೀಮನು ಆ ಸುರುಳಿಯನ್ನು ಕಸಿದುಕೊಂಡು ಆ ಅಂಕಣಗಳನ್ನು ಒಂದು ಸಣ್ಣ ಚೂರಿಯಿಂದ ಕತ್ತರಿಸಿ ಅಗ್ಗಿಷ್ಟಿಕೆಯಲ್ಲಿ ಎಸೆಯತೊಡಗಿದನು. ಕೊನೆಗೆ ಇಡೀ ಸುರುಳಿಯನ್ನು ಸುಟ್ಟುಹಾಕಲಾಯಿತು. 24 ಈ ಸುರುಳಿಯಲ್ಲಿದ್ದ ಸಂದೇಶವನ್ನು ಕೇಳಿ ರಾಜನಾದ ಯೆಹೋಯಾಕೀಮನು ಮತ್ತು ಅವನ ಸೇವಕರು ಗಾಬರಿಯಾಗಲಿಲ್ಲ. ತಾವು ತಪ್ಪು ಮಾಡಿದ್ದಕ್ಕಾಗಿ ದುಃಖವನ್ನು ಸೂಚಿಸಲು ಅವರು ತಮ್ಮ ವಸ್ತ್ರಗಳನ್ನು ಹರಿದುಕೊಳ್ಳಲಿಲ್ಲ.
25 ಎಲಾಐಥಾನನೂ ದೆಲಾಯನೂ ಗೆಮರ್ಯನೂ ಅದನ್ನು ಸುಡಬೇಡವೆಂದು ರಾಜನಿಗೆ ಹೇಳುವ ಪ್ರಯತ್ನ ಮಾಡಿದರು. ಆದರೆ ರಾಜನು ಅವರ ಮಾತನ್ನು ಕೇಳಲಿಲ್ಲ. 26 ರಾಜನಾದ ಯೆಹೋಯಾಕೀಮನು ಲಿಪಿಕಾರನಾದ ಬಾರೂಕನನ್ನು ಮತ್ತು ಪ್ರವಾದಿಯಾದ ಯೆರೆಮೀಯನನ್ನು ಬಂಧಿಸಬೇಕೆಂದು ರಾಜವಂಶೀಯನಾದ ಎರಖ್ಮೆಯೇಲ, ಅಜ್ರಿಯೇಲನ ಮಗನಾದ ಸೆರಾಯ, ಅಬ್ದೆಯೇಲನ ಮಗನಾದ ಶೆಲೆಮ್ಯ ಇವರಿಗೆ ಆಜ್ಞೆಯನ್ನು ಕೊಟ್ಟನು. ಆದರೆ ಅವರಿಂದ ಬಾರೂಕನನ್ನು ಮತ್ತು ಯೆರೆಮೀಯನನ್ನು ಹುಡುಕಲಾಗಲಿಲ್ಲ. ಯಾಕೆಂದರೆ ಯೆಹೋವನು ಅವರನ್ನು ಬಚ್ಚಿಟ್ಟಿದ್ದನು.
27 ಯೆರೆಮೀಯನು ಬಾರೂಕನಿಗೆ ಹೇಳಿದ್ದ, ಬಾರೂಕನು ಶಾಹಿಯಿಂದ ಬರೆದಿದ್ದ ಸುರುಳಿಯನ್ನು ಯೆಹೋಯಾಕೀಮನು ಸುಟ್ಟುಹಾಕಿದ ಮೇಲೆ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು:
28 “ಯೆರೆಮೀಯನೇ, ಇನ್ನೊಂದು ಸುರುಳಿಯನ್ನು ತೆಗೆದುಕೊ. ಯೆಹೂದದ ರಾಜನಾದ ಯೆಹೋಯಾಕೀಮನು ಸುಟ್ಟುಹಾಕಿದ ಮೊದಲನೇ ಸುರುಳಿಯಲ್ಲಿ ಬರೆದ ಎಲ್ಲಾ ಸಂದೇಶಗಳನ್ನು ಈ ಸುರುಳಿಯ ಮೇಲೆ ಬರೆ. 29 ಯೆರೆಮೀಯನೇ, ಯೆಹೂದದ ರಾಜನಾದ ಯೆಹೋಯಾಕೀಮನಿಗೆ ಹೀಗೆ ಹೇಳು, ‘ಯೆಹೋವನು ಹೀಗೆನ್ನುತ್ತಾನೆ: ಯೆಹೋಯಾಕೀಮನೇ, ನೀನು ಆ ಸುರುಳಿಯನ್ನು ಸುಟ್ಟುಬಿಟ್ಟೆ. ನೀನು, “ಬಾಬಿಲೋನ್ ರಾಜನು ಖಂಡಿತವಾಗಿ ಬಂದು ಈ ದೇಶವನ್ನು ನಾಶಮಾಡುವನು ಎಂದು ಯೆರೆಮೀಯನು ಏಕೆ ಬರೆದನು? ಬಾಬಿಲೋನ್ ರಾಜನು ಈ ದೇಶದ ಮನುಷ್ಯರನ್ನು ಮತ್ತು ಪ್ರಾಣಿಗಳನ್ನು ನಾಶಮಾಡುವನು ಎಂದು ಏಕೆ ಹೇಳಿದನು?” ಎಂದು ಕೇಳಿದೆ. 30 ಇಗೋ ಯೆಹೂದದ ರಾಜನಾದ ಯೆಹೋಯಾಕೀಮನ ಬಗ್ಗೆ ಯೆಹೋವನು ಹೀಗೆ ಹೇಳುತ್ತಾನೆ: ಯೆಹೋಯಾಕೀಮನ ಸಂತಾನದವರು ದಾವೀದನ ಸಿಂಹಾಸನದ ಮೇಲೆ ಕುಳಿತುಕೊಳ್ಳಲಾಗದು. ಯೆಹೋಯಾಕೀಮನು ಸತ್ತರೆ ರಾಜ ಮರ್ಯಾದೆಯಿಂದ ಅವನ ಶವಸಂಸ್ಕಾರ ಮಾಡಲಾಗುವದಿಲ್ಲ. ಅವನ ಶವವನ್ನು ನೆಲದ ಮೇಲೆ ಎಸೆಯಲಾಗುವುದು. ಅವನ ಶವ ಹಗಲಿನ ತಾಪದಲ್ಲಿ ಮತ್ತು ರಾತ್ರಿಯ ಚಳಿಯಲ್ಲಿ ಹೊರಗೆ ಬಿದ್ದಿರುವದು. 31 ಯೆಹೋವನಾದ ನಾನು ಯೆಹೋಯಾಕೀಮ ಮತ್ತು ಅವನ ಮಕ್ಕಳನ್ನು ದಂಡಿಸುವೆನು. ನಾನು ಅವನ ಅಧಿಕಾರಿಗಳನ್ನೂ ದಂಡಿಸುವೆನು. ಅವರು ದುಷ್ಟರಾದುದರಿಂದ ಹೀಗೆ ಮಾಡುವೆನು. ನಾನು ಅವರ ಮೇಲೂ ಜೆರುಸಲೇಮಿನಲ್ಲಿ ವಾಸಮಾಡುವ ಜನರೆಲ್ಲರ ಮೇಲೂ ಮತ್ತು ಯೆಹೂದದ ಜನರ ಮೇಲೂ ಭಯಂಕರವಾದ ಕೇಡನ್ನು ತರಲು ನಿಶ್ಚಯಿಸಿದ್ದೇನೆ. ನಾನು ಹೇಳಿದಂತೆ ಅವರಿಗೆ ಎಲ್ಲಾ ಕೆಡುಕನ್ನು ಉಂಟುಮಾಡುವೆನು. ಏಕೆಂದರೆ ಅವರು ನನ್ನ ಮಾತನ್ನು ಕೇಳಲಿಲ್ಲ.’ ”
32 ಅನಂತರ ಯೆರೆಮೀಯನು ಇನ್ನೊಂದು ಸುರುಳಿಯನ್ನು ತೆಗೆದುಕೊಂಡು ನೇರೀಯನ ಮಗನಾದ ಲಿಪಿಕಾರ ಬಾರೂಕನಿಗೆ ಕೊಟ್ಟನು. ರಾಜ ಯೆಹೋಯಾಕೀಮನು ಸುಟ್ಟುಹಾಕಿದ ಸುರುಳಿಯಲ್ಲಿದ್ದ ಸಂದೇಶವನ್ನೇ ಯೆರೆಮೀಯನು ಹೇಳಿದಂತೆಲ್ಲ ಬಾರೂಕನು ಸುರುಳಿಯ ಮೇಲೆ ಬರೆದನು. ಬೇರೆ ಹಲವು ಸಂದೇಶಗಳನ್ನು ಎರಡನೇ ಸುರುಳಿಯಲ್ಲಿ ಸೇರಿಸಲಾಯಿತು.