20
ಯೆರೆಮೀಯ ಮತ್ತು ಪಷ್ಹೂರನು
ಪಷ್ಹೂರನೆಂಬುವನು ಯಾಜಕನಾಗಿದ್ದನು. ಅವನು ಯೆಹೋವನ ಆಲಯದ ಮುಖ್ಯಾಧಿಕಾರಿಯಾಗಿದ್ದನು. ಪಷ್ಹೂರನು ಇಮ್ಮೇರನ ಮಗನು. ಯೆಹೋವನ ಆಲಯದ ಪ್ರಾಕಾರದಲ್ಲಿ ಯೆರೆಮೀಯನು ಮಾಡಿದ ಪ್ರವಾದನೆಯನ್ನು ಪಷ್ಹೂರನು ಕೇಳಿದನು. ಅವನು ಪ್ರವಾದಿಯಾದ ಯೆರೆಮೀಯನನ್ನು ಹೊಡೆಯಿಸಿ ಯೆಹೋವನ ಆಲಯಕ್ಕೆ ಸೇರಿದ ಮೇಲಣ ಬೆನ್ಯಾಮೀನ್ ದ್ವಾರದಲ್ಲಿದ್ದ ಕೋಳಕ್ಕೆ ಹಾಕಿಸಿದನು. ಮರುದಿನ ಪಷ್ಹೂರನು ಯೆರೆಮೀಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆಮೀಯನು ಪಷ್ಹೂರನಿಗೆ ಹೀಗೆ ಹೇಳಿದನು: “ದೇವರು ನಿನ್ನನ್ನು ಪಷ್ಹೂರ್ ಎಂದು ಹೇಳುವದಿಲ್ಲ. ಈಗ ಯೆಹೋವನು ನಿನಗಿಟ್ಟ ಹೆಸರು, ‘ಪ್ರತಿಯೊಂದು ಭಾಗದಲ್ಲಿಯೂ ಭಯಂಕಾರಿ’ ಅದು ನಿನ್ನ ಹೆಸರು. ಏಕೆಂದರೆ ಯೆಹೋವನು ಹೇಳುತ್ತಾನೆ: ‘ನಾನು ತಕ್ಷಣ ನಿನ್ನನ್ನು ನಿನಗೆ ಭಯಂಕಾರಿಯನ್ನಾಗಿ ಮಾಡುವೆನು. ನಾನು ನಿನ್ನನ್ನು ನಿನ್ನ ಎಲ್ಲಾ ಸ್ನೇಹಿತರಿಗೆ ಭಯಂಕಾರಿಯನ್ನಾಗಿ ಮಾಡುವೆನು. ವೈರಿಗಳು ಖಡ್ಗಗಳಿಂದ ನಿನ್ನ ಸ್ನೇಹಿತರನ್ನು ಕೊಲ್ಲುವುದನ್ನು ನೀನು ನೋಡುವೆ. ಯೆಹೂದದ ಎಲ್ಲಾ ಜನರನ್ನು ನಾನು ಬಾಬಿಲೋನಿನ ರಾಜನಿಗೆ ಒಪ್ಪಿಸುವೆನು. ಅವನು ಯೆಹೂದ್ಯರನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗುವನು; ಅವನ ಸೈನಿಕರು ಯೆಹೂದ್ಯರನ್ನು ತಮ್ಮ ಕತ್ತಿಗಳಿಂದ ಕೊಂದುಹಾಕುವರು. ಸಂಪತ್ತನ್ನು ಸಂಗ್ರಹಿಸಿ ಸಿರಿವಂತರಾಗಲು ಜೆರುಸಲೇಮಿನ ಜನರು ಬಹಳ ಕಷ್ಟಪಟ್ಟು ದುಡಿದರು. ಆದರೆ ನಾನು ಅದೆಲ್ಲವನ್ನು ಅವರ ವೈರಿಗಳಿಗೆ ಒಪ್ಪಿಸುವೆನು. ಜೆರುಸಲೇಮಿನ ರಾಜನ ಬಳಿ ಅನೇಕ ನಿಧಿನಿಕ್ಷೇಪಗಳಿವೆ. ಆದರೆ ನಾನು ಆ ನಿಧಿನಿಕ್ಷೇಪಗಳನ್ನೆಲ್ಲಾ ವೈರಿಗೆ ಒಪ್ಪಿಸುತ್ತೇನೆ. ವೈರಿಯು ಅವುಗಳನ್ನು ಬಾಬಿಲೋನ್ ದೇಶಕ್ಕೆ ತೆಗೆದುಕೊಂಡು ಹೋಗುವನು. ಪಷ್ಹೂರನೇ, ನಿನ್ನನ್ನೂ ನಿನ್ನ ಮನೆಯಲ್ಲಿರುವವರೆಲ್ಲರನ್ನೂ ಬಲವಂತವಾಗಿ ಬಾಬಿಲೋನ್ ದೇಶಕ್ಕೆ ಸೆರೆ ಒಯ್ಯಲಾಗುವುದು. ನೀನು ಬಾಬಿಲೋನ್‌ನಲ್ಲಿ ಮರಣಹೊಂದುವೆ; ನಿನ್ನನ್ನು ಆ ಪರದೇಶದಲ್ಲಿಯೇ ಹೂಳಲಾಗುವುದು. ನೀನು ನಿನ್ನ ಸ್ನೇಹಿತರಿಗೆ ಸುಳ್ಳುಬೋಧನೆಯನ್ನು ಮಾಡಿದೆ. ಹೀಗಾಗುವುದಿಲ್ಲವೆಂದು ನೀನು ಹೇಳಿದೆ. ಆದರೆ ನಿನ್ನೆಲ್ಲ ಸ್ನೇಹಿತರು ಸಹ ಸತ್ತು ಬಾಬಿಲೋನಿನಲ್ಲಿ ಹೂಳಲ್ಪಡುವರು.’ ”
ಯೆರೆಮೀಯನ ಐದನೆ ದೂರು
ಯೆಹೋವನೇ, ನೀನು ನನ್ನನ್ನು ಮರುಳುಗೊಳಿಸಿದೆ, ನಿಜವಾಗಿಯೂ ನಾನು ಮರುಳಾದೆನು,
ನೀನು ನನಗಿಂತ ಬಲಿಷ್ಠನಾದುದರಿಂದ ಗೆದ್ದೆ.
ನಾನೊಂದು ತಮಾಷೆಯಾಗಿದ್ದೇನೆ.
ಹಗಲೆಲ್ಲ ಜನರು ನನ್ನನ್ನು ಕಂಡು ನಗುತ್ತಾರೆ. ನನ್ನನ್ನು ಗೇಲಿ ಮಾಡುತ್ತಾರೆ.
ನಾನು ಮಾತನಾಡಿದಾಗಲೆಲ್ಲ ಕೂಗಿಕೂಗಿ ಹೇಳುತ್ತೇನೆ.
ನಾನು ಯಾವಾಗಲೂ ಹಿಂಸೆ ಮತ್ತು ವಿನಾಶದ ಬಗ್ಗೆ ಕೂಗಿಕೊಳ್ಳುತ್ತೇನೆ.
ಯೆಹೋವನಿಂದ ಬಂದ ಸಂದೇಶದ ಬಗ್ಗೆ ಜನರಿಗೆ ಹೇಳುತ್ತೇನೆ.
ಆದರೆ ಜನರು ಯಾವಾಗಲೂ ನನಗೆ ಅವಮಾನ ಮಾಡುತ್ತಾರೆ.
ನನ್ನನ್ನು ಗೇಲಿ ಮಾಡುತ್ತಾರೆ.
ಒಮ್ಮೊಮ್ಮೆ ನನ್ನಷ್ಟಕ್ಕೆ ನಾನೇ ಹೇಳಿಕೊಳ್ಳುತ್ತೇನೆ,
“ನಾನು ಯೆಹೋವನನ್ನೇ ಮರೆತುಬಿಡುತ್ತೇನೆ.
ಆತನ ಹೆಸರಿನಲ್ಲಿ ಇನ್ನೇನೂ ಮಾತನಾಡುವುದಿಲ್ಲ”
ಎಂದುಕೊಂಡರೆ ಆತನ ಸಂದೇಶವು ನನ್ನ ಅಂತರಾಳದಲ್ಲಿ ಉರಿಯುವ ಜ್ವಾಲೆಯಂತಾಗುತ್ತದೆ.
ಅದು ಆಳಕ್ಕೆ ಇಳಿದು ನನ್ನ ಎಲುಬುಗಳನ್ನು ಸುಡುವಂತಾಗುತ್ತದೆ.
ಯೆಹೋವನ ಸಂದೇಶವನ್ನು ನನ್ನ ಅಂತರಾಳದಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನ ಮಾಡಿ ನಾನು ದಣಿಯುತ್ತೇನೆ.
ಕೊನೆಗೆ ಅದನ್ನು ನನ್ನೊಳಗೆ ಇಟ್ಟುಕೊಳ್ಳಲು ಅಸಾಧ್ಯವಾಗುತ್ತದೆ.
10 ಅನೇಕ ಜನರು ನನ್ನ ವಿರುದ್ಧವಾಗಿ ಮೆಲುಧ್ವನಿಯಲ್ಲಿ ಮಾತನಾಡುವದು ನನ್ನ ಕಿವಿಗೆ ಬೀಳುತ್ತಿದೆ,
ಅದು ನನ್ನನ್ನು ಭಯಗೊಳಿಸುತ್ತಿದೆ.
ನನ್ನ ಸ್ನೇಹಿತರು ಸಹ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ.
ನಾನು ಯಾವುದಾದರೂ ತಪ್ಪನ್ನು ಮಾಡಲಿ ಎಂದು ಜನರು ಹೊಂಚು ಹಾಕಿ ಕಾದಿದ್ದಾರೆ.
“ಅವನು ದುಷ್ಕೃತ್ಯವನ್ನು ಮಾಡಿದ್ದಾನೆಂದು ನಾವು ಸುಳ್ಳು ಹೇಳೋಣ.
ಯೆರೆಮೀಯನನ್ನು ನಾವು ವಂಚಿಸಲು ಸಾಧ್ಯವಾಗಬಹುದು.
ನಾವು ಅವನನ್ನು ಹಿಡಿದುಕೊಳ್ಳಬಹುದು.
ಕೊನೆಗೆ ಅವನನ್ನು ತೊಲಗಿಸಬಹುದು.
ನಾವು ಅವನನ್ನು ಹಿಡಿದು ಅವನ ಮೇಲೆ ನಮ್ಮ ಸೇಡನ್ನು ತೀರಿಸಿಕೊಳ್ಳೋಣ” ಎಂದು ಮಾತನಾಡುತ್ತಿದ್ದಾರೆ.
11 ಆದರೆ ಯೆಹೋವನು ನನ್ನೊಡನಿದ್ದಾನೆ.
ಯೆಹೋವನು ಒಬ್ಬ ಶೂರ ಯೋಧನಂತಿದ್ದಾನೆ.
ಆದ್ದರಿಂದ ನನ್ನನ್ನು ಬೆನ್ನಟ್ಟಿಕೊಂಡು ಬರುತ್ತಿದ್ದ ಜನರು ಬೀಳುತ್ತಾರೆ.
ಅವರು ನನ್ನನ್ನು ಸೋಲಿಸಲಾರರು.
ಆ ಜನರು ಸೋತುಹೋಗುತ್ತಾರೆ.
ಅವರಿಗೆ ಆಶಾಭಂಗವಾಗುತ್ತದೆ.
ಅವರಿಗೆ ನಾಚಿಕೆಯಾಗುತ್ತದೆ.
ಅವರು ಆ ನಾಚಿಕೆಯನ್ನು ಎಂದೂ ಮರೆಯಲಾರರು.
 
12 ಸರ್ವಶಕ್ತನಾದ ಯೆಹೋವನೇ, ನೀನು ಒಳ್ಳೆಯವರನ್ನು ಪರೀಕ್ಷಿಸುವೆ.
ನೀನು ಒಬ್ಬ ವ್ಯಕ್ತಿಯ ಹೃದಯವನ್ನು ಮತ್ತು ಬುದ್ಧಿಯನ್ನು ಆಳವಾಗಿ ಪರೀಕ್ಷಿಸಿನೋಡುವೆ.
ನಾನು ಅವರ ವಿರುದ್ಧ ನನ್ನ ಅಭಿಪ್ರಾಯಗಳನ್ನು ನಿನಗೆ ತಿಳಿಸಿದ್ದೇನೆ.
ನೀನು ಅವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಿರುವದನ್ನು ನನ್ನ ಕಣ್ಣುಗಳು ನೋಡಲಿ.
13 ಯೆಹೋವನನ್ನು ಕೀರ್ತಿಸಿರಿ, ಯೆಹೋವನನ್ನು ಸ್ತುತಿಸಿರಿ.
ಆತನು ಬಡಜನರ ಪ್ರಾಣಗಳನ್ನು ಉಳಿಸುತ್ತಾನೆ.
ಆತನು ಅವರನ್ನು ದುಷ್ಟರ ದೌರ್ಜನ್ಯದಿಂದ ರಕ್ಷಿಸುತ್ತಾನೆ.
ಯೆರೆಮೀಯನ ಆರನೇ ದೂರು
14 ನಾನು ಹುಟ್ಟಿದ ದಿನವು ಶಾಪಗ್ರಸ್ತವಾಗಲಿ;
ತಾಯಿಯು ನನ್ನನ್ನು ಹೆತ್ತ ದಿನವು ಶುಭವೆನಿಸಿಕೊಳ್ಳದಿರಲಿ.
15 “ನಿನಗೆ ಗಂಡುಮಗು ಹುಟ್ಟಿದೆ” ಎಂಬ ಸಮಾಚಾರವನ್ನು ನನ್ನ ತಂದೆಗೆ ತಿಳಿಸಿ
ಅವನಿಗೆ ಅತ್ಯಾನಂದವನ್ನು ಉಂಟುಮಾಡಿದವನು ಶಪಿಸಲ್ಪಡಲಿ.
16 ಯೆಹೋವನು ಕನಿಕರಪಡದೆ
ಕೆಡವಿಬಿಟ್ಟ ನಗರಗಳ ಗತಿಯು ಅವನಿಗೆ ಬರಲಿ.
ಬೆಳಿಗ್ಗೆ ಯುದ್ಧದ ಕೂಗಾಟವೂ,
ಮಧ್ಯಾಹ್ನದಲ್ಲಿ ಯುದ್ಧದ ಕಿರುಚಾಟವೂ ಅವನ ಕಿವಿಗೆ ಬೀಳಲಿ.
17 ಯಾಕೆ ಆ ಮನುಷ್ಯನು
ನಾನು ನನ್ನ ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಕೊಲ್ಲಲಿಲ್ಲ?
ಆಗ ಅವನು ನನ್ನನ್ನು ಕೊಂದಿದ್ದರೆ
ನನ್ನ ತಾಯಿಯೇ ನನಗೆ ಗೋರಿಯಾಗುತ್ತಿದ್ದಳು.
ನಾನೆಂದೂ ಹುಟ್ಟುತ್ತಲೇ ಇರಲಿಲ್ಲ.
18 ನಾನು ತಾಯಿಯ ಗರ್ಭದಿಂದ ಏಕೆ ಹೊರಬರಬೇಕಿತ್ತು?
ನಾನು ಕಷ್ಟವನ್ನು ಮತ್ತು ದುಃಖವನ್ನು ಕಂಡಿರುವೆನಷ್ಟೇ.
ನನ್ನ ಜೀವನವು ನಾಚಿಕೆಯಲ್ಲಿಯೇ ಕೊನೆಗೊಳ್ಳುವುದು.