2
ಜನರೆಲ್ಲರನ್ನೂ ಪ್ರೀತಿಸಿ
1 ನನ್ನ ಪ್ರಿಯ ಸಹೋದರ ಸಹೋದರಿಯರೇ, ಮಹಿಮಾಪೂರ್ಣನಾದ ಪ್ರಭು ಯೇಸು ಕ್ರಿಸ್ತನಲ್ಲಿ ನೀವು ನಂಬಿಕೆಯಿಟ್ಟಿದ್ದೀರಿ. ಆದ್ದರಿಂದ ಕೆಲವರು ಇತರ ಜನರಿಗಿಂತ ಬಹಳ ಮುಖ್ಯರೆಂದು ಯೋಚಿಸಬೇಡಿ. 2 ನಿಮ್ಮ ಸಭೆಗೆ ಒಬ್ಬನು ಬರುತ್ತಾನೆಂದು ನೆನೆಸಿರಿ. ಅವನು ಒಳ್ಳೆಯ ವಸ್ತ್ರಗಳನ್ನೂ ಬಂಗಾರದ ಉಂಗುರವನ್ನೂ ಧರಿಸಿರುತ್ತಾನೆ. ಅದೇ ಸಮಯಕ್ಕೆ ಕೊಳೆಯಾದ ಮತ್ತು ಹಳೆಯದಾದ ವಸ್ತ್ರಗಳನ್ನು ಧರಿಸಿರುವ ಒಬ್ಬ ಬಡವನೂ ಬರುತ್ತಾನೆ. 3 ಒಳ್ಳೆಯ ವಸ್ತ್ರಗಳನ್ನು ಧರಿಸಿರುವವನಿಗೆ ವಿಶೇಷ ಗಮನವನ್ನು ನೀಡುವಿರಿ. “ಉತ್ತಮವಾದ ಈ ಸ್ಥಳದಲ್ಲಿ ನೀವು ಕುಳಿತುಕೊಳ್ಳಿ” ಎಂದು ಅವನಿಗೆ ಹೇಳುವಿರಿ. ಆದರೆ ಆ ಬಡ ಮನುಷ್ಯನಿಗೆ “ಅಲ್ಲೇ ನಿಂತುಕೊ!” ಎಂದಾಗಲಿ, “ನಮ್ಮ ಪಾದಗಳ ಬಳಿ ನೆಲದ ಮೇಲೆ ಕುಳಿತುಕೊ!” ಎಂದಾಗಲಿ ಹೇಳುವಿರಿ. 4 ನೀವು ಮಾಡುತ್ತಿರುವುದೇನು? ಕೆಲವರನ್ನು ಇತರ ಜನರಿಗಿಂತ ಬಹಳ ಮುಖ್ಯರೆಂದು ಪರಿಗಣಿಸುತ್ತಿರುವಿರಿ. ನಿಮ್ಮ ಈ ತೀರ್ಪು ದುರುದ್ದೇಶದಿಂದ ಕೂಡಿರುತ್ತದೆ.
5 ನನ್ನ ಪ್ರಿಯ ಸಹೋದರ ಸಹೋದರಿಯರೇ, ಕೇಳಿರಿ! ಈ ಲೋಕದಲ್ಲಿ ಬಡವರು ನಂಬಿಕೆಯಲ್ಲಿ ಶ್ರೀಮಂತರಾಗಿರಲೆಂದು ದೇವರು ಅವರನ್ನು ಆರಿಸಿಕೊಂಡಿದ್ದಾನೆ. ತನ್ನನ್ನು ಪ್ರೀತಿಸುವ ಜನರಿಗೆ ದೇವರು ವಾಗ್ದಾನಮಾಡಿದ ರಾಜ್ಯವನ್ನು ಹೊಂದಿಕೊಳ್ಳಲು ಆತನು ಅವರನ್ನು ಆರಿಸಿಕೊಂಡಿದ್ದಾನೆ. 6 ಆದರೆ ಬಡವನಿಗೆ ನೀವು ಗೌರವವನ್ನೇ ತೋರುವುದಿಲ್ಲ. ಶ್ರೀಮಂತ ಜನರು ಯಾವಾಗಲೂ ನಿಮ್ಮ ಬದುಕನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆಂಬುದು ನಿಮಗೆ ತಿಳಿದಿದೆ. ನಿಮ್ಮನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವವರು ಅವರೇ. 7 ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿರುವ ಯೇಸುವಿನ ಶ್ರೇಷ್ಠವಾದ ಹೆಸರಿಗೆ ವಿರುದ್ಧವಾಗಿ ಕೆಟ್ಟಮಾತುಗಳನ್ನು ಆಡುವವರು ಶ್ರೀಮಂತರೇ.
8 ಪವಿತ್ರ ಗ್ರಂಥದಲ್ಲಿ ಬರೆದಿರುವ, “ನಿನ್ನನ್ನು ಪ್ರೀತಿಸುವಂತೆ ಇತರರನ್ನೂ ಪ್ರೀತಿಸು”✡ ಉಲ್ಲೇಖನ: ಯಾಜಕ. 19:18. ಎಂಬ ರಾಜಾಜ್ಞೆಗೆ ನೀವು ವಿಧೇಯರಾಗಿದ್ದರೆ ಸರಿಯಾದುದನ್ನೇ ಮಾಡುವವರಾಗಿದ್ದೀರಿ. 9 ಆದರೆ ನೀವು ಒಬ್ಬನನ್ನು ಇನ್ನೊಬ್ಬನಿಗಿಂತ ಮುಖ್ಯನೆಂದು ಪರಿಗಣಿಸಿ ಪಕ್ಷಪಾತ ಮಾಡಿದರೆ ಪಾಪವನ್ನು ಮಾಡುವವರಾಗಿದ್ದೀರಿ. ದೇವರ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ದೋಷಿಗಳಾಗಿದ್ದೀರೆಂದು ಆ ರಾಜಾಜ್ಞೆಯು ನಿರೂಪಿಸುತ್ತದೆ.
10 ಒಬ್ಬನು ದೇವರ ಎಲ್ಲಾ ಆಜ್ಞೆಗಳನ್ನು ಅನುಸರಿಸುತ್ತಿರಬಹುದು. ಆದರೆ ಅವನು ಒಂದು ಆಜ್ಞೆಗೆ ಅವಿಧೇಯನಾದರೆ ಅವನು ಧರ್ಮಶಾಸ್ತ್ರದ ಎಲ್ಲಾ ಆಜ್ಞೆಗಳನ್ನು ಮೀರಿದನೆಂಬ ಅಪರಾಧಕ್ಕೆ ಗುರಿಯಾಗುವನು. 11 “ವ್ಯಭಿಚಾರ ಮಾಡಬಾರದು”✡ ಉಲ್ಲೇಖನ: ವಿಮೋಚನ. 20:14; ಧರ್ಮೋಪದೇಶ. 5:18. ಎಂದು ದೇವರು ಹೇಳಿದನು. “ಕೊಲ್ಲಬಾರದು”✡ ಉಲ್ಲೇಖನ: ವಿಮೋಚನ. 20:13; ಧರ್ಮೋಪದೇಶ. 5:17. ಎಂದೂ ಅದೇ ದೇವರು ಹೇಳಿದನು. ಹೀಗಿರಲಾಗಿ, ನೀವು ವ್ಯಭಿಚಾರವನ್ನು ಮಾಡದಿದ್ದರೂ ಯಾರನ್ನೇ ಆಗಲಿ ಕೊಂದರೆ, ದೇವರ ಇಡೀ ಧರ್ಮಶಾಸ್ತ್ರವನ್ನೇ ಉಲ್ಲಂಘಿಸಿದವರಾಗಿದ್ದೀರಿ.
12 ಜನರನ್ನು ಬಿಡುಗಡೆ ಮಾಡುವ ಧರ್ಮಶಾಸ್ತ್ರದಿಂದಲೇ ನಿಮಗೆ ತೀರ್ಪಾಗುವುದು. ನೀವು ಕೇಳುವ ಮತ್ತು ಮಾಡುವ ಪ್ರತಿಯೊಂದರಲ್ಲಿಯೂ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ. 13 ಹೌದು, ಇತರರಿಗೆ ನೀವು ಕರುಣೆ ತೋರಬೇಕು. ಇಲ್ಲವಾದರೆ ದೇವರು ತೀರ್ಪು ನೀಡುವಾಗ ನಿಮಗೂ ಕರುಣೆ ತೋರನು. ಕರುಣೆ ತೋರುವವನು ದೇವರ ನ್ಯಾಯತೀರ್ಪಿನಲ್ಲಿ ಭಯವಿಲ್ಲದೆ ಇರುವನು.
ನಂಬಿಕೆ ಮತ್ತು ಉತ್ತಮ ಕಾರ್ಯಗಳು
14 ನನ್ನ ಸಹೋದರ ಸಹೋದರಿಯರೇ, ಒಬ್ಬ ವ್ಯಕ್ತಿಯು ತನ್ನಲ್ಲಿ ನಂಬಿಕೆಯಿದೆಯೆಂದು ಹೇಳಿಕೊಂಡರೂ ಅದನ್ನು ಕಾರ್ಯರೂಪಕ್ಕೆ ತರದಿದ್ದರೆ, ಅವನ ನಂಬಿಕೆಯಿಂದ ಪ್ರಯೋಜನವೇನೂ ಇಲ್ಲ. ಆ ರೀತಿಯ ನಂಬಿಕೆಯು ಅವನನ್ನು ರಕ್ಷಿಸಬಲ್ಲದೇ? ಇಲ್ಲ! 15 ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ಅಥವಾ ಸಹೋದರಿಯಾಗಿರುವವಳಿಗೆ ಬಟ್ಟೆಗಳು ಬೇಕಾಗಿರಬಹುದು ಅಥವಾ ತಿನ್ನಲು ಆಹಾರ ಬೇಕಾಗಿರಬಹುದು. 16 ಆದರೆ ನೀವು ಆ ವ್ಯಕ್ತಿಗೆ, “ದೇವರು ನಿನ್ನೊಂದಿಗಿರಲಿ! ಚಳಿಕಾಯಿಸಿಕೊಂಡು ತೃಪ್ತಿಯಾಗುವಷ್ಟು ಊಟ ಮಾಡು” ಎಂಬುದಾಗಿ ಹೇಳಿ ಬೇಕಾದವುಗಳನ್ನು ಅವನಿಗೆ ಕೊಡದೆ ಹೋದರೆ ನಿಮ್ಮ ಮಾತುಗಳಿಗೆ ಯಾವ ಬೆಲೆಯೂ ಇಲ್ಲ. 17 ಇದೇ ನಿಯಮ ನಂಬಿಕೆಗೂ ಅನ್ವಯಿಸುತ್ತದೆ. ಕ್ರಿಯೆಯಿಲ್ಲದ ನಂಬಿಕೆಯು ತನ್ನಲ್ಲಿಯೇ ಸತ್ತುಹೋಗಿದೆ.
18 ಆದರೆ ಯಾವನಾದರೂ, “ನಿನ್ನಲ್ಲಿ ನಂಬಿಕೆಯಿದೆ; ನನ್ನಲಿ ಕ್ರಿಯೆಗಳಿವೆ” ಎಂದು ವಾದಿಸಬಹುದು. ಅದಕ್ಕೆ ನನ್ನ ಉತ್ತರವೇನೆಂದರೆ ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ತೋರಿಸಲಾರೆ. ನಾನಾದರೊ ನನ್ನ ಒಳ್ಳೆಯ ಕಾರ್ಯಗಳ ಮೂಲಕ ನನ್ನ ನಂಬಿಕೆಯನ್ನು ನಿನಗೆ ತೋರಿಸುವೆ ಎಂದು ಹೇಳಬಹುದು. 19 ಒಬ್ಬನೇ ದೇವರಿರುವನೆಂದು ನೀವು ನಂಬಿದ್ದೀರಿ. ಒಳ್ಳೆಯದು! ಆದರೆ ದೆವ್ವಗಳೂ ಅದನ್ನು ನಂಬುತ್ತವೆ ಮತ್ತು ಭಯದಿಂದ ನಡುಗುತ್ತವೆ.
20 ಬುದ್ಧಿಹೀನರೇ, ಕ್ರಿಯೆಯಿಲ್ಲದ ನಂಬಿಕೆಯು ನಿಷ್ಪ್ರಯೋಜಕವೆಂದು ನಿಮಗೆ ತೋರಿಸಬೇಕೋ? 21 ಅಬ್ರಹಾಮನು ನಮ್ಮ ಪಿತೃ. ಅವನು ತನ್ನ ಕ್ರಿಯೆಗಳಿಂದ ನೀತಿವಂತನಾದನು. ಅವನು ಯಜ್ಞವೇದಿಕೆಯ ಮೇಲೆ ತನ್ನ ಮಗನಾದ ಇಸಾಕನನ್ನು ದೇವರಿಗೆ ಅರ್ಪಿಸಿದನು. 22 ಆದ್ದರಿಂದ ಅವನ ನಂಬಿಕೆ ಮತ್ತು ಅವನ ಕ್ರಿಯೆ ಒಟ್ಟಿಗೆ ಕಾರ್ಯ ಮಾಡಿದವು. ಅವನ ನಂಬಿಕೆಯು ಅವನ ಕ್ರಿಯೆಗಳಿಂದಲೇ ಪರಿಪೂರ್ಣಗೊಂಡಿತು. 23 ಹೀಗೆ ಪವಿತ್ರಗ್ರಂಥದ ಈ ಮಾತುಗಳು ನೆರವೇರಿದವು: “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಒಪ್ಪಿಕೊಂಡು ಅವನನ್ನು ನೀತಿವಂತನೆಂದು ಪರಿಗಣಿಸಿದನು.”✡ ಉಲ್ಲೇಖನ: ಆದಿಕಾಂಡ 15:6. ಅಬ್ರಹಾಮನನ್ನು “ದೇವರ ಸ್ನೇಹಿತ”✡ 2 ಉಲ್ಲೇಖನ: ಪೂರ್ವಕಾಲವೃತ್ತಾಂತ 20:7; ಯೆಶಾಯ 41:8. ನೆಂದು ಕರೆಯಲಾಯಿತು. 24 ಹೀಗಿರಲು ಒಬ್ಬನು ತನ್ನ ಕ್ರಿಯೆಗಳಿಂದ ನೀತಿವಂತನಾಗುತ್ತಾನೆ ಎಂಬುದು ಸ್ಪಷ್ಟವಾಗಿದೆ. ಒಬ್ಬನು ಕೇವಲ ನಂಬಿಕೆಯೊಂದರಿಂದಲೇ ನೀತಿವಂತನಾಗಲು ಸಾಧ್ಯವಿಲ್ಲ.
25 ರಹಾಬಳು ಮತ್ತೊಬ್ಬ ಉದಾಹರಣೆಯಾಗಿದ್ದಾಳೆ. ಆಕೆ ಒಬ್ಬ ವೇಶ್ಯೆ. ಆದರೆ ಅವಳು ತನ್ನ ಕ್ರಿಯೆಗಳಿಂದಲೇ ನೀತಿವಂತಳಾದಳು. ಅವಳು ದೇವರ ಜನರಿಗೋಸ್ಕರ ಗೂಢಚಾರರನ್ನು ತನ್ನ ಮನೆಗೆ ಬರಮಾಡಿಕೊಂಡು, ಬೇರೊಂದು ರಸ್ತೆಯಲ್ಲಿ ತಪ್ಪಿಸಿಕೊಂಡು ಹೋಗಲು ಅವರಿಗೆ ಸಹಾಯ ಮಾಡಿದಳು.* ರಹಾಬಳು … ಮಾಡಿದಳು ಯೆಹೋಶುವನು 2:1-21 ರಲ್ಲಿದೆ.
26 ಒಬ್ಬ ವ್ಯಕ್ತಿಯ ದೇಹದಲ್ಲಿ ಆತ್ಮವಿಲ್ಲದಿದ್ದರೆ, ಅವನ ದೇಹವು ಸತ್ತದ್ದೇ. ಅದೇ ರೀತಿಯಲ್ಲಿ ಕ್ರಿಯೆಯಿಲ್ಲದ ನಂಬಿಕೆಯು ಸತ್ತದ್ದೇ.
✡2:8: ಉಲ್ಲೇಖನ: ಯಾಜಕ. 19:18.
✡2:11: ಉಲ್ಲೇಖನ: ವಿಮೋಚನ. 20:14; ಧರ್ಮೋಪದೇಶ. 5:18.
✡2:11: ಉಲ್ಲೇಖನ: ವಿಮೋಚನ. 20:13; ಧರ್ಮೋಪದೇಶ. 5:17.
✡2:23: ಉಲ್ಲೇಖನ: ಆದಿಕಾಂಡ 15:6.
✡2:23: 2 ಉಲ್ಲೇಖನ: ಪೂರ್ವಕಾಲವೃತ್ತಾಂತ 20:7; ಯೆಶಾಯ 41:8.
*2:25: ರಹಾಬಳು … ಮಾಡಿದಳು ಯೆಹೋಶುವನು 2:1-21 ರಲ್ಲಿದೆ.