21
ಬಾಬಿಲೋನಿಗೆ ದೇವರ ಸಂದೇಶ
ಸಮುದ್ರದ ಮರುಭೂಮಿಗೆ ದುಃಖದ ಸಂದೇಶ:
 
ನೆಗೆವ್ ಮೂಲಕ ಬೀಸುವ ಬಿರುಗಾಳಿಯಂತೆ ಮರುಭೂಮಿಯಿಂದಲೂ
ಭಯಂಕರ ದೇಶದಿಂದಲೂ ಒಬ್ಬನು ದಂಡೆತ್ತಿ ಬರುವನು.
ನಡೆಯಲಿರುವ ಒಂದು ಭಯಂಕರ ಘಟನೆಯನ್ನು ನಾನು ದರ್ಶನದಲ್ಲಿ ನೋಡಿದ್ದೇನೆ.
ನಿನಗೆ ವಿರುದ್ಧವಾಗಿ ದ್ರೋಹಿಗಳು ಏಳುತ್ತಿದ್ದಾರೆ.
ನಿನ್ನ ಧನೈಶ್ವರ್ಯಗಳನ್ನು ಜನರು ಕಿತ್ತುಕೊಳ್ಳುತ್ತಿದ್ದಾರೆ.
 
ಏಲಾಮೇ, ಹೋಗಿ ಆ ಜನರೊಂದಿಗೆ ಹೋರಾಡು.
ಮೇದ್ಯವೇ, ಆ ಪಟ್ಟಣವನ್ನು ನಿನ್ನ ಸೈನ್ಯದಿಂದ ಸೋಲಿಸು.
ಆ ನಗರದ ಎಲ್ಲಾ ದುಷ್ಟತನವನ್ನು ನಾನು ಕೊನೆಗಾಣಿಸುವೆನು.
 
ನಾನು ಆ ಭಯಂಕರ ಸಂಗತಿಗಳನ್ನು ನೋಡಿದ್ದರಿಂದ ಈಗ ಭಯಪೀಡಿತನಾಗಿದ್ದೇನೆ.
ಭಯದಿಂದ ನನ್ನ ಹೊಟ್ಟೆಯು ನೋಯುತ್ತಿದೆ. ಆ ನೋವು ಪ್ರಸವವೇದನೆಯಂತಿದೆ.
ನಾನು ಕೇಳುವ ವಿಷಯಗಳು ನನ್ನನ್ನು ಭಯಪಡಿಸಿವೆ;
ನಾನು ನೋಡುವ ವಿಷಯಗಳು ನನ್ನನ್ನು ನಡುಗಿಸುತ್ತಿವೆ.
ನಾನು ಚಿಂತೆಯಿಂದಲೂ ಭಯದಿಂದಲೂ ನಡುಗುತ್ತಿದ್ದೇನೆ.
ನನ್ನ ಆನಂದದ ರಾತ್ರಿಯು ಭಯಂಕರವಾಗಿದೆ.
 
ಜನರಾದರೋ, “ಊಟ ಬಡಿಸಿರಿ!
ತಿನ್ನೋಣ, ಕುಡಿಯೋಣ” ಎಂದು ಹೇಳುತ್ತಿದ್ದಾರೆ.
ಅದೇ ಸಮಯದಲ್ಲಿ ಸೈನಿಕರು, “ಕಾವಲುಗಾರರನ್ನು ಇರಿಸಿರಿ,
ಸೇನಾಪತಿಗಳೇ ಎದ್ದೇಳಿರಿ,
ನಿಮ್ಮ ಗುರಾಣಿಗಳನ್ನು ಉಜ್ಜಿ ನಯಗೊಳಿಸಿರಿ” ಎಂದು ಹೇಳುತ್ತಿದ್ದಾರೆ.
 
ನನ್ನ ಒಡೆಯನು ನನಗೆ, “ಹೋಗಿ ಈ ನಗರವನ್ನು ಕಾಯಲು ಒಬ್ಬ ಮನುಷ್ಯನನ್ನು ಕಂಡುಹಿಡಿ. ಅವನು ಏನೂ ನೋಡಿದರೂ ನಮಗೆ ತಿಳಿಸಬೇಕು. ಅವನು ಸಾಲಾಗಿ ಬರುತ್ತಿರುವ ಸೈನಿಕರನ್ನೋ, ಕತ್ತೆಗಳನ್ನೋ, ಒಂಟೆಗಳನ್ನೋ ನೋಡಿದರೆ ಬಹಳ ಸೂಕ್ಷ್ಮವಾಗಿ ಆಲಿಸಬೇಕು.”
ಒಂದು ದಿವಸ ಆ ಕಾವಲುಗಾರನು,
 
“ನನ್ನ ಒಡೆಯನೇ, ಪ್ರತಿ ದಿನವೂ ನಾನು ಹಗಲಿರುಳು
ಕಾವಲಿನ ಬುರುಜಿನಲ್ಲಿ ನಿಂತುಕೊಂಡು ಕಾವಲು ಕಾಯುತ್ತಿದ್ದೇನೆ;
ನೋಡು, ಅವರು ಬರುತ್ತಿದ್ದಾರೆ. ಅಶ್ವದಳಗಳು ಸಾಲುಸಾಲಾಗಿಯೂ ಬರುತ್ತಿವೆ” ಎಂದು ಕೂಗಿಕೊಂಡನು.
 
ಆಗ ಒಬ್ಬ ದೂತನು,
“ಬಾಬಿಲೋನಿಗೆ ಸೋಲಾಯಿತು.
ಬಾಬಿಲೋನು ನೆಲಕ್ಕೆ ಅಪ್ಪಳಿಸಲ್ಪಟ್ಟಿತು.
ಅದರ ದೇವ ದೇವತೆಯರ ವಿಗ್ರಹಗಳೆಲ್ಲಾ
ನೆಲದ ಮೇಲೆ ಚೂರುಚೂರಾಗಿ ಬಿದ್ದಿವೆ” ಎಂದು ಹೇಳಿದನು.
 
10 ನನ್ನ ಬಡಿತಕ್ಕೆ ಈಡಾದ ಜನರೇ, ಸರ್ವಶಕ್ತನೂ ದೇವರೂ ಆಗಿರುವ ಯೆಹೋವನು ಹೇಳಿದ್ದನ್ನೆಲ್ಲಾ ಇಸ್ರೇಲರಾದ ನಿಮಗೆ ತಿಳಿಸಿದ್ದೇನೆ. ಕಣದಲ್ಲಿ ಧಾನ್ಯವು ನುಚ್ಚುನೂರಾಗುವಂತೆ ನೀವು ನಜ್ಜುಗುಜ್ಜಾಗುವಿರಿ.
ಎದೋಮಿಗೆ ದೇವರ ಸಂದೇಶ
11 ದೂಮದ ಕುರಿತು ದುಃಖದ ದೈವೋಕ್ತಿ:
 
ಸೇಯಿರ್‌ನಿಂದ ಎದೋಮನ್ನು ಯಾರೋ ಒಬ್ಬನು,
“ಕಾವಲುಗಾರನೇ, ರಾತ್ರಿ ಮುಗಿಯಲು ಎಷ್ಟು ಸಮಯ ಉಂಟು?
ರಾತ್ರಿಗೆ ಇನ್ನು ಎಷ್ಟು ಕಾಲ ಉಂಟು?” ಎಂದು ಕೇಳಿದನು.
 
12 ಅದಕ್ಕೆ ಕಾವಲುಗಾರ,
“ಮುಂಜಾನೆ ಬರುತ್ತಿದೆ. ಆದರೆ ರಾತ್ರಿ ತಿರುಗಿ ಬರುತ್ತಿದೆ.
ನೀನೇನಾದರೋ ಕೇಳಬೇಕಿದ್ದರೆ ಮತ್ತೆ ಬಂದು ವಿಚಾರಿಸು”
ಎಂದು ಉತ್ತರಿಸಿದನು.
ಅರೇಬಿಯಕ್ಕೆ ದೇವರ ಸಂದೇಶ
13 ಅರೇಬಿಯದ ಬಗ್ಗೆ ದುಃಖಕರವಾದ ಸಂದೇಶ:
 
ದೇದಾನಿನಿಂದ ಬಂದ ಪ್ರಯಾಣಿಕರು
ಅರೇಬಿಯ ಮರುಭೂಮಿಯಲ್ಲಿನ ಪೊದೆಗಳಲ್ಲಿ ರಾತ್ರಿ ತಂಗಿದರು.
14 ಬಾಯಾರಿದ ಪ್ರಯಾಣಿಕರಿಗೆ ಅವರು ಕುಡಿಯಲು ನೀರು ಕೊಟ್ಟರು.
ತೇಮದ ಕೆಲವರು ಹಸಿದ ಪ್ರವಾಸಿಗಳಿಗೆ ಊಟ ಕೊಟ್ಟರು.
15 ಅವರು ತಮ್ಮನ್ನು ಸಾಯಿಸಲಿಕ್ಕಿದ್ದ
ಕತ್ತಿಯಿಂದ ತಪ್ಪಿಸಿಕೊಂಡು ಬಂದವರು.
ಅವರು ತಮ್ಮನ್ನು ಹೊಡೆಯಲು ಸಿದ್ಧವಾಗಿದ್ದ
ಬಾಣಗಳಿಂದ ಪಾರಾಗಿ ಬಂದವರು.
ಅವರು ಘೋರ ರಣರಂಗದಿಂದ ಓಡಿಬಂದವರು.
 
16 ನನ್ನ ಒಡೆಯನಾದ ಯೆಹೋವನು ಈ ವಿಷಯಗಳು ಸಂಭವಿಸುವವೆಂದು ಹೇಳಿದನು. ಆತನು ಹೇಳಿದ್ದೇನೆಂದರೆ: “ಇನ್ನೊಂದು ವರ್ಷದಲ್ಲಿ ಕೂಲಿಗಾರನು ತನ್ನ ಸಮಯವನ್ನು ಲೆಕ್ಕಿಸುವಂತೆ ಕೇದಾರಿನ ಘನತೆಯೆಲ್ಲವೂ ಹೋಗಿ ಬಿಡುವದು. 17 ಆ ಸಮಯದಲ್ಲಿ ಕೆಲವೇ ಮಂದಿ ಬಿಲ್ಲುಗಾರರು ಕೇದಾರಿನ ವೀರರೊಳಗಿಂದ ಉಳಿಯುವರು.” ಇಸ್ರೇಲರ ದೇವರಾದ ಯೆಹೋವನು ಇದನ್ನು ನುಡಿದನು.