2
1 “ನಾನು ಕಾವಲುಗಾರನಂತೆ ನಿಂತುಕೊಂಡು ಗಮನಿಸುವೆನು.
ಯೆಹೋವನು ನನಗೆ ಏನನ್ನುವನೋ ಎಂದು ನಾನು ನಿರೀಕ್ಷಿಸುತ್ತಿರುವೆನು.
ಆತನು ನನ್ನ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವನೆಂಬುದನ್ನು ತಾಳ್ಮೆಯಿಂದ ಗಮನಿಸುವೆನು.”
ಹಬಕ್ಕೂಕನಿಗೆ ದೇವರ ಉತ್ತರ
2 ಯೆಹೋವನು ನನಗೆ ಹೇಳಿದ್ದು: “ನಾನು ನಿನಗೆ ತೋರಿಸುವದನ್ನು ಬರೆ. ಜನರು ಸುಲಭವಾಗಿ ಓದುವಂತೆ ಅದನ್ನು ದೊಡ್ಡ ಹಲಗೆಗಳ ಮೇಲೆ ಬರೆ. 3 ಭವಿಷ್ಯದ ಒಂದು ವಿಶೇಷ ಸಮಯದ ಕುರಿತಾಗಿ ಈ ಸಂದೇಶ. ಈ ಸಂದೇಶವು ಅಂತ್ಯದ ವಿಷಯವಾಗಿ ಇದೆ. ಇದು ಖಂಡಿತವಾಗಿಯೂ ನೆರವೇರುತ್ತದೆ. ಆ ಸಮಯವು ಎಂದಿಗೂ ಬರುವುದಿಲ್ಲ ಎಂಬಂತೆ ಕಾಣಬಹುದು. ಆದರೆ ತಾಳ್ಮೆಯಿಂದಿರು; ಅದನ್ನು ನಿರೀಕ್ಷಿಸುತ್ತಾ ಇರು. ಆ ಸಮಯವು ಬರುವದು. ಅದು ತಡವಾಗುವುದಿಲ್ಲ. 4 ಯಾವ ಜನರು ಅದರ ವಿಚಾರವಾಗಿ ಕೇಳಲು ನಿರಾಕರಿಸುವರೋ ಅವರಿಗಾಗಿ ಈ ಸಂದೇಶವಿರುವದಿಲ್ಲ. ಆದರೆ ಒಬ್ಬ ಸತ್ಪುರುಷನು ಈ ಸಂದೇಶವನ್ನು ನಂಬುವನು. ಆ ಸತ್ಪುರುಷನು ತಾನು ನಂಬಿದ ನಿಮಿತ್ತವಾಗಿ ಬದುಕುವನು.”
5 ಯೆಹೋವನು ಹೇಳಿದ್ದು: “ಒಬ್ಬನನ್ನು ದ್ರಾಕ್ಷಾರಸವು ಮೋಸಪಡಿಸಬಹುದು. ಅದೇ ರೀತಿಯಲ್ಲಿ ಬಲಿಷ್ಠನ ಗರ್ವವು ಅವನನ್ನು ಮೋಸಪಡಿಸಬಹುದು. ಆದರೆ ಅವನಿಗೆ ಸಮಾಧಾನ ಸಿಕ್ಕುವುದಿಲ್ಲ. ಅವನು ಮರಣದಂತಿರುವನು. ಅವನಿಗೆ ಯಾವಾಗಲೂ ಹೆಚ್ಚೆಚ್ಚು ಬೇಕು. ಮರಣದಂತೆ ಅವನಿಗೆ ತೃಪ್ತಿಯೇ ಇರದು. ಅವನು ಜನಾಂಗಗಳನ್ನು ಸೋಲಿಸುತ್ತಲೇ ಇರುವನು. ಆ ಜನರನ್ನು ತನ್ನ ಕೈದಿಗಳನ್ನಾಗಿ ಮಾಡುತ್ತಲೇ ಇರುವನು. 6 ಆದರೆ ಬೇಗನೇ ಅವರೆಲ್ಲಾ ಇವನನ್ನು ನೋಡಿ ನಗಾಡುವರು. ಅವನ ಸೋಲುವಿಕೆಯ ಕಥೆಗಳನ್ನು ವರ್ಣಿಸುವರು; ನಗಾಡುತ್ತಾ, ‘ಎಂಥಾ ದುಃಖಕರ ಸಂಗತಿ, ಅಷ್ಟೆಲ್ಲಾ ಸಂಪಾದಿಸಿದವನು ಅದನ್ನು ಇಟ್ಟುಕೊಳ್ಳಲಾಗಲಿಲ್ಲವಲ್ಲ. ಅವನು ಸಾಲಗಳನ್ನು ವಸೂಲಿ ಮಾಡಿ ತನ್ನನ್ನು ಐಶ್ವರ್ಯವಂತನನ್ನಾಗಿ ಮಾಡಿಕೊಂಡನು.’
7 “ಬಲಶಾಲಿಯಾದ ಮನುಷ್ಯನೇ, ನೀನು ಜನರಿಂದ ಹಣವನ್ನು ಸುಲಿದುಕೊಂಡಿರುವೆ. ಒಂದು ದಿವಸ ಆ ಜನರು ಎಚ್ಚರವಾಗಿ ತಮಗೆ ಏನಾಯಿತೆಂದು ಅರಿತುಕೊಳ್ಳುವರು. ನಿನಗೆ ವಿರುದ್ಧವಾಗಿ ಏಳುವರು. ನಿನ್ನ ಕೈಯಿಂದ ಆ ವಸ್ತುಗಳನ್ನು ಕಿತ್ತುಕೊಳ್ಳುವರು. ಆಗ ನೀನು ಭಯಗ್ರಸ್ತನಾಗುವೆ. 8 ಎಷ್ಟೋ ಜನಾಂಗಗಳಿಂದ ನೀನು ವಸ್ತುಗಳನ್ನು ಅಪಹರಿಸಿರುವೆ. ಅವರು ನಿನ್ನಿಂದ ಇನ್ನೂ ಹೆಚ್ಚಾಗಿ ಅಪಹರಿಸುವರು. ನೀನು ಎಷ್ಟೋ ಮಂದಿಯನ್ನು ಕೊಂದಿರುವೆ; ದೇಶಗಳನ್ನೂ ನಗರಗಳನ್ನೂ ನಾಶಮಾಡಿರುವೆ. ಅಲ್ಲಿಯ ಎಷ್ಟೋ ಜನರನ್ನು ಸಂಹರಿಸಿರುವೆ.
9 “ಹೌದು, ಕೆಟ್ಟದ್ದನ್ನು ಮಾಡಿ ಧನಿಕನಾದವನಿಗೆ ಬಹಳ ಕೇಡಾಗುವುದು. ಆ ಮನುಷ್ಯನು ಒಂದು ಸುರಕ್ಷಿತವಾದ ಸ್ಥಳದಲ್ಲಿ ವಾಸಿಸಲು ಇದನ್ನೆಲ್ಲಾ ಮಾಡುತ್ತಾನೆ. ಹಾಗೆ ಮಾಡುವದರಿಂದ ಬೇರೆ ಜನರು ಅವನಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲವೆಂದು ಅವನು ತಿಳಿಯುತ್ತಾನೆ. ಆದರೆ ಕೆಟ್ಟ ಸಂಗತಿಗಳು ಅವನಿಗೆ ಸಂಭವಿಸುವವು. 10 ಎಷ್ಟೋ ಜನರನ್ನು ನಾಶಮಾಡಲು ನೀನು ಯೋಜನೆ ಮಾಡಿರುವೆ. ಆದರೆ ಆ ಯೋಜನೆಗಳು ನಿನ್ನ ಮನೆಗೆ ನಾಚಿಕೆಯನ್ನು ತಂದೊಡ್ಡುವವು. ನೀನು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ನೀನು ನಿನ್ನ ಪ್ರಾಣವನ್ನು ಕಳೆದುಕೊಳ್ಳುವೆ. 11 ಗೋಡೆಯ ಕಲ್ಲುಗಳು ನಿನಗೆ ವಿರುದ್ಧವಾಗಿ ಕೂಗುವವು. ನಿನ್ನ ಮನೆಯ ಮರದ ಜಂತೆಗಳು ಸಹ ನೀನು ಅಪರಾಧಿಯೆಂದು ಸಾಕ್ಷಿ ಹೇಳುವವು.
12 “ಪಟ್ಟಣ ಕಟ್ಟುವುದಕ್ಕಾಗಿ ಜನರನ್ನು ಕೊಲ್ಲುವವನಿಗೂ ಪಟ್ಟಣದ ಕೋಟೆಗಳನ್ನು ಭದ್ರಪಡಿಸಲು ದುಷ್ಕೃತ್ಯಗಳನ್ನು ಮಾಡುವವನಿಗೂ ಕೇಡಾಗುವದು. 13 ಆ ಜನರು ಕಟ್ಟುವ ಪ್ರತಿಯೊಂದನ್ನೂ ಸರ್ವಶಕ್ತನಾದ ಯೆಹೋವನು ಬೆಂಕಿಯಿಂದ ನಾಶಮಾಡುವ ತೀರ್ಮಾನವನ್ನು ಮಾಡಿರುತ್ತಾನೆ. ಅವರು ಮಾಡಿದ ಕೆಲಸವೆಲ್ಲವೂ ವ್ಯರ್ಥವಾಗುವದು. 14 ಆಗ ಎಲ್ಲಾ ಕಡೆಗಳಲ್ಲಿರುವ ಜನರು ಯೆಹೋವನ ಮಹಿಮೆಯನ್ನು ತಿಳಿದುಕೊಳ್ಳುವರು. ಹೇಗೆ ನೀರು ಸಮುದ್ರಕ್ಕೆ ಹರಿಯುತ್ತದೋ ಹಾಗೆ ಈ ವರ್ತಮಾನವು ಎಲ್ಲಾ ಕಡೆಗೆ ಹಬ್ಬುವದು. 15 ತಾನು ಸಿಟ್ಟುಗೊಂಡು ಇತರರು ಸಂಕಟಪಡುವಂತೆ ಮಾಡುವವನಿಗೆ ಬಹಳ ಕೇಡು ಉಂಟಾಗುವದು. ಸಿಟ್ಟಿನ ಭರದಲ್ಲಿ ಆ ಮನುಷ್ಯನು ಇತರ ಜನರನ್ನು ನೆಲಕ್ಕೆ ಅಪ್ಪಳಿಸಿಬಿಡುವನು. ಅವನು ಅವರನ್ನು ಅಮಲೇರಿದವರಂತೆಯೂ ಬೆತ್ತಲೆಯಾಗಿರುವವರಂತೆಯೂ ಪರಿಗಣಿಸುತ್ತಾನೆ.
16 “ಆದರೆ ಅವನು ಯೆಹೋವನ ಕೋಪವನ್ನು ತಿಳಿದುಕೊಳ್ಳುವನು. ಆ ಕೋಪವು ಯೆಹೋವನ ಬಲಗೈಯಲ್ಲಿರುವ ವಿಷದ ಪಾತ್ರೆಯಂತಿರುವುದು. ಆ ವ್ಯಕ್ತಿಯು ಆ ಕೋಪವನ್ನು ರುಚಿನೋಡುವನು ಮತ್ತು ಅಮಲೇರಿದವನಂತೆ ನೆಲದ ಮೇಲೆ ಕುಸಿದುಬೀಳುವನು.
“ದುಷ್ಟ ಅಧಿಪತಿಯೇ, ನೀನು ಆ ಪಾತ್ರೆಯಿಂದ ಕುಡಿಯುವೆ. ನಿನಗೆ ಅವಮಾನವೇ ಹೊರತು, ಮಾನ ಸಿಗುವುದಿಲ್ಲ. 17 ಲೆಬನೋನಿನಲ್ಲಿ ಅನೇಕರನ್ನು ಗಾಯಗೊಳಿಸಿರುವೆ. ಅಲ್ಲಿ ಎಷ್ಟೋ ಪಶುಗಳನ್ನು ಅಪಹರಿಸಿರುವೆ. ಆ ದೇಶದಲ್ಲಿ ನೀನು ಮಾಡಿದ ದುಷ್ಕೃತ್ಯಗಳ ನಿಮಿತ್ತ, ಅದರಿಂದಾಗಿ ಅಲ್ಲಿ ಸತ್ತುಹೋದವರ ನಿಮಿತ್ತ ನೀನು ಭಯಗ್ರಸ್ತನಾಗಿರುವೆ. ಅಲ್ಲಿಯ ಪಟ್ಟಣಗಳಿಗೆ ನೀನು ಮಾಡಿದ ಹಾನಿ, ಜನರಿಗೆ ನೀನು ಕೊಟ್ಟ ಸಂಕಟದ ನಿಮಿತ್ತ ನಿನಗೆ ಹೆದರಿಕೆಯುಂಟಾಗಿದೆ.”
ವಿಗ್ರಹಗಳ ವಿಷಯವಾದ ಸಂದೇಶ
18 ಆ ಮನುಷ್ಯನ ಸುಳ್ಳು ದೇವರು ಅವನಿಗೆ ಸಹಾಯ ಮಾಡಲಾರದು. ಯಾಕೆಂದರೆ ಅದು ಒಬ್ಬನು ಲೋಹದಿಂದ ಮಾಡಿದ ಕೇವಲ ವಿಗ್ರಹವಷ್ಟೆ. ಅದು ಕೇವಲ ಜಡಮೂರ್ತಿ. ಅದನ್ನು ಮಾಡಿದವನು, ಅದು ಅವನಿಗೆ ಸಹಾಯ ಮಾಡುವದೆಂದು ಯೋಚಿಸುವದು ಶುದ್ಧ ಮೂರ್ಖತನ. ಆ ಮೂರ್ತಿಯು ಮಾತಾಡುವೂದೂ ಇಲ್ಲ. 19 ಆ ಮೂರ್ತಿಗೆ “ಎದ್ದೇಳು” ಎಂದು ಹೇಳುವವನಿಗೆ ಕೇಡಾಗುವುದು! ಮಾತಾಡಲಾಗದ ಒಂದು ಕಲ್ಲಿಗೆ “ಎಚ್ಚರವಾಗು” ಎಂದು ಹೇಳುವವನಿಗೆ ಕೇಡಾಗುವುದು! ಅವುಗಳು ಅವನಿಗೆ ಸಹಾಯ ಮಾಡುವದಿಲ್ಲ. ಮಾಡಲಿಕ್ಕಾಗುವದೂ ಇಲ್ಲ. ಆ ವಿಗ್ರಹಗಳನ್ನು ಬೆಳ್ಳಿಬಂಗಾರದಿಂದ ಹೊದಿಸಿದರೂ ಆ ವಿಗ್ರಹಗಳಲ್ಲಿ ಜೀವವಿಲ್ಲ.
20 ಆದರೆ ಯೆಹೋವನಾದರೋ ಹಾಗಲ್ಲ. ಆತನು ತನ್ನ ಪವಿತ್ರ ಆಲಯದಲ್ಲಿದ್ದಾನೆ. ಆದ್ದರಿಂದ ಎಲ್ಲಾ ಭೂನಿವಾಸಿಗಳು ಆತನ ಮುಂದೆ ಮೌನದಿಂದಿದ್ದು ಆತನನ್ನು ಗೌರವಿಸತಕ್ಕದ್ದು.