ಗಲಾತ್ಯದವರಿಗೆ
ಬರೆದ ಪತ್ರ
1
1 ಅಪೊಸ್ತಲನಾದ ಪೌಲನು ಬರೆಯುವ ಪತ್ರ. ನನ್ನನ್ನು ಅಪೊಸ್ತಲನನ್ನಾಗಿ ಆರಿಸಿದವರು ಮನುಷ್ಯರಲ್ಲ. ನಾನು ಮನುಷ್ಯರಿಂದ ಕಳುಹಿಸಲ್ಪಟ್ಟವನಲ್ಲ. ನನ್ನನ್ನು ಅಪೊಸ್ತಲನನ್ನಾಗಿ ಮಾಡಿದವರು ಯಾರೆಂದರೆ, ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರು. ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನು ದೇವರೇ. 2 ನಾನು ಮತ್ತು ನನ್ನೊಂದಿಗಿರುವ ಎಲ್ಲಾ ಸಹೋದರರು ಈ ಪತ್ರವನ್ನು ಗಲಾತ್ಯದಲ್ಲಿರುವ ಸಭೆಗಳವರಿಗೆ ಬರೆದಿದ್ದೇವೆ.
3 ನಮ್ಮ ತಂದೆಯಾದ ದೇವರೂ ಪ್ರಭುವಾದ ಯೇಸು ಕ್ರಿಸ್ತನೂ ನಿಮಗೆ ಕೃಪೆ ತೋರಲಿ ಮತ್ತು ಶಾಂತಿಕೊಡಲಿ ಎಂದು ನಾವು ಪ್ರಾರ್ಥಿಸುತ್ತೇವೆ. 4 ನಾವು ವಾಸಿಸುತ್ತಿರುವ ಈ ಕೆಟ್ಟ ಲೋಕದೊಳಗಿಂದ ನಮ್ಮನ್ನು ಬಿಡುಗಡೆ ಮಾಡಬೇಕೆಂದು ಯೇಸು ನಮ್ಮ ಪಾಪಗಳಿಗಾಗಿ ತನ್ನನ್ನೇ ಕೊಟ್ಟುಬಿಟ್ಟನು. ಇದು ತಂದೆಯಾದ ದೇವರ ಚಿತ್ತವಾಗಿತ್ತು. 5 ಎಂದೆಂದಿಗೂ ದೇವರಿಗೆ ಮಹಿಮೆಯಾಗಲಿ. ಆಮೆನ್.
ಸತ್ಯಸುವಾರ್ತೆ ಒಂದೇ ಒಂದು
6 ಸ್ವಲ್ಪಕಾಲದ ಹಿಂದೆ ತನ್ನನ್ನು ಹಿಂಬಾಲಿಸುವುದಕ್ಕಾಗಿ ನಿಮ್ಮನ್ನು ಕರೆದಾತನು ದೇವರೇ. ಆತನು ನಿಮ್ಮನ್ನು ಯೇಸು ಕ್ರಿಸ್ತನ ಮೂಲಕವಾಗಿ ಬಂದ ತನ್ನ ಕೃಪೆಯ ಮೂಲಕ ಕರೆದನು. ಆದರೆ ಈಗ ನಾನು ನಿಮ್ಮೆಲ್ಲರ ವಿಷಯದಲ್ಲಿ ಆಶ್ಚರ್ಯಗೊಂಡಿದ್ದೇನೆ. ನೀವು ಈಗಾಗಲೇ ವಿಮುಖರಾಗಿ ಬೇರೊಂದು ಸುವಾರ್ತೆಯನ್ನು ನಂಬಿಕೊಂಡಿದ್ದೀರಿ. 7 ನಿಜವಾಗಿ ಹೇಳಬೇಕಾದರೆ, ಬೇರೊಂದು ಸತ್ಯಸುವಾರ್ತೆಯು ಇಲ್ಲವೇ ಇಲ್ಲ. ಆದರೆ ಕೆಲವು ಜನರು ನಿಮ್ಮನ್ನು ಗಲಿಬಿಲಿಗೊಳಿಸುತ್ತಿದ್ದಾರೆ. ಅವರು ಕ್ರಿಸ್ತನ ಸುವಾರ್ತೆಯನ್ನು ಬದಲಾಯಿಸಬೇಕೆಂದಿದ್ದಾರೆ. 8 ನಾವು ನಿಮಗೆ ಸತ್ಯಸುವಾರ್ತೆಯನ್ನು ತಿಳಿಸಿದೆವು. ಆದ್ದರಿಂದ ನಾವೇ ಆಗಲಿ, ಪರಲೋಕದ ದೇವದೂತರೇ ಆಗಲಿ ಮತ್ತೊಂದು ಸುವಾರ್ತೆಯನ್ನು ತಿಳಿಸಿದರೆ ಶಾಪಗ್ರಸ್ತರಾಗಲಿ. 9 ನಾನು ನಿಮಗೆ ಇದನ್ನು ಮೊದಲೇ ತಿಳಿಸಿದ್ದರೂ ಈಗ ಮತ್ತೆ ಹೇಳುತ್ತೇನೆ. ನೀವು ಈಗಾಗಲೇ ಸ್ವೀಕರಿಸಿಕೊಂಡಿರುವ ಸತ್ಯಸುವಾರ್ತೆಗೆ ವಿರುದ್ಧವಾದದ್ದನ್ನು ಯಾವನಾದರೂ ಸಾರಿದರೆ ಅವನು ಶಾಪಗ್ರಸ್ತನಾಗಲಿ.
10 ಮನುಷ್ಯರು ನನ್ನನ್ನು ಸ್ವೀಕರಿಸಿಕೊಳ್ಳುವಂತೆ ಮಾಡುವುದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೆಂದು ನೀವು ಭಾವಿಸುತ್ತೀರೋ? ಇಲ್ಲ! ನಾನು ದೇವರನ್ನೇ ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇನೆ. ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೋ? ನಾನು ಮನುಷ್ಯರನ್ನು ಮೆಚ್ಚಿಸಬೇಕೆಂದಿದ್ದರೆ ಯೇಸು ಕ್ರಿಸ್ತನ ಸೇವಕನಾಗುತ್ತಿರಲಿಲ್ಲ.
ಪೌಲನ ಅಧಿಕಾರ ದೇವರಿಂದ ಬಂದದ್ದು
11 ಸಹೋದರರೇ, ನಾವು ಸಾರಿದ ಸುವಾರ್ತೆ ಮನುಷ್ಯರಿಂದ ಬಂದದ್ದಲ್ಲವೆಂಬುದು ನಿಮಗೆ ತಿಳಿದಿರಲಿ. 12 ನನಗೆ ಸುವಾರ್ತೆ ದೊರೆತದ್ದು ಮನುಷ್ಯರಿಂದಲ್ಲ. ಯಾವನೂ ನನಗೆ ಸುವಾರ್ತೆಯನ್ನು ಉಪದೇಶಿಸಲಿಲ್ಲ. ನಾನು ಜನರಿಗೆ ಉಪದೇಶಿಸಬೇಕಾದ ಸುವಾರ್ತೆಯನ್ನು ಯೇಸು ಕ್ರಿಸ್ತನೇ ನನಗೆ ಪ್ರಕಟಿಸಿದನು.
13 ನನ್ನ ಹಿಂದಿನ ಜೀವಿತದ ಬಗ್ಗೆ ನೀವು ಕೇಳಿದ್ದೀರಿ. ನಾನು ಯೆಹೂದ್ಯಧರ್ಮಕ್ಕೆ ಸೇರಿದವನಾಗಿದ್ದೆನು. ದೇವರ ಸಭೆಯನ್ನು ಬಹಳವಾಗಿ ಹಿಂಸಿಸಿದೆನು. ಕ್ರೈಸ್ತ ಸಭೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದೆನು. 14 ಯೆಹೂದ್ಯಧರ್ಮದ ನಾಯಕನಾಗಲು ನನ್ನ ಸಮವಯಸ್ಕರರಿಗಿಂತ ಎಷ್ಟೋ ಕಾರ್ಯಗಳನ್ನು ಮಾಡಿದೆನು. ನಮ್ಮ ಪೂರ್ವಿಕರ ಸಂಪ್ರದಾಯಗಳನ್ನು ಬೇರೆಲ್ಲರಿಗಿಂತಲೂ ಅತ್ಯಧಿಕ ನಿಷ್ಠೆಯಿಂದ ಅನುಸರಿಸಿದೆನು.
15 ಆದರೆ ನಾನು ಹುಟ್ಟುವುದಕ್ಕಿಂತ ಮೊದಲೇ ನನ್ನ ವಿಷಯದಲ್ಲಿ ದೇವರಿಗೆ ವಿಶೇಷವಾದ ಯೋಜನೆಯಿತ್ತು. ಆದ್ದರಿಂದ ದೇವರು ತನ್ನ ಕೃಪೆಯಿಂದ ನನ್ನನ್ನು ಕರೆದನು. 16 ಆತನ ಮಗನ ವಿಷಯವಾದ ಸುವಾರ್ತೆಯನ್ನು ನಾನು ಯೆಹೂದ್ಯರಲ್ಲದವರಿಗೆ ತಿಳಿಸಬೇಕೆಂಬುದು ದೇವರ ಚಿತ್ತವಾಗಿತ್ತು. ಆದ್ದರಿಂದ ದೇವರು ತನ್ನ ಮಗನನ್ನು ನನಗೆ ತೋರಿಸಿದನು. ಆತನು ನನ್ನನ್ನು ಕರೆದಾಗ ನಾನು ಯಾರಿಂದಲೂ ಸಲಹೆಯನ್ನಾಗಲಿ ಸಹಾಯವನ್ನಾಗಲಿ ತೆಗೆದುಕೊಳ್ಳಲಿಲ್ಲ. 17 ಅಪೊಸ್ತಲರನ್ನು ನೋಡುವುದಕ್ಕಾಗಿ ಜೆರುಸಲೇಮಿಗೂ ಹೋಗಲಿಲ್ಲ. ಅವರು ನನಗಿಂತ ಮೊದಲೇ ಅಪೊಸ್ತಲರಾಗಿದ್ದರು. ಆದರೆ, ನಾನು ತಡಮಾಡದೆ ಅರೇಬಿಯಾಕ್ಕೆ ಹೋದೆನು. ಆ ಬಳಿಕ ದಮಸ್ಕ ಪಟ್ಟಣಕ್ಕೆ ಹಿಂತಿರುಗಿದೆನು.
18 ಮೂರು ವರ್ಷಗಳ ನಂತರ ಪೇತ್ರನನ್ನು ಭೇಟಿಯಾಗಲು ಜೆರುಸಲೇಮಿಗೆ ಹೋದೆನು. ಅವನೊಂದಿಗೆ ಹದಿನೈದು ದಿನಗಳ ಕಾಲ ಇದ್ದೆನು. 19 ಪ್ರಭುವಿನ (ಯೇಸು) ಸಹೋದರನಾದ ಯಾಕೋಬನನ್ನು ಹೊರತು ಬೇರೆ ಯಾವ ಅಪೊಸ್ತಲರನ್ನೂ ನಾನು ಭೇಟಿಯಾಗಲಿಲ್ಲ. 20 ನಾನು ಬರೆಯುತ್ತಿರುವ ಈ ಸಂಗತಿಗಳು ಸುಳ್ಳಲ್ಲವೆಂದು ದೇವರಿಗೆ ಗೊತ್ತಿದೆ. 21 ತರುವಾಯ ಸಿರಿಯ ಮತ್ತು ಕಿಲಿಕ್ಯ ಪ್ರಾಂತ್ಯಗಳಿಗೆ ಹೋದೆನು.
22 ಕ್ರಿಸ್ತನಲ್ಲಿರುವ ಜುದೇಯದ ಸಭೆಗಳವರು ನನ್ನನ್ನು ಹಿಂದೆಂದೂ ಭೇಟಿಯಾಗಿರಲಿಲ್ಲ. 23 “ಈ ಮನುಷ್ಯನು ನಮ್ಮನ್ನು ಹಿಂಸಿಸುತ್ತಿದ್ದನು. ಆದರೆ ಈಗ ಇವನು ತಾನು ಮೊದಲೊಮ್ಮೆ ನಾಶಮಾಡಲು ಪ್ರಯತ್ನಿಸಿದ ನಂಬಿಕೆಯ ಬಗ್ಗೆ ಜನರಿಗೆ ಹೇಳುತ್ತಿದ್ದಾನೆ” ಎಂಬುದನ್ನು ಮಾತ್ರ ಅವರು ಕೇಳಿದ್ದರು. 24 ಅವರು ನನ್ನ ನಿಮಿತ್ತ ದೇವರನ್ನು ಕೊಂಡಾಡಿದರು.