10
ಜನರು ಪಾಪವನ್ನು ಅರಿಕೆ ಮಾಡಿದ್ದು
ದೇವಾಲಯದೆದುರು ಎಜ್ರನು ರೋಧಿಸುತ್ತಾ, ದೇವರಿಗೆ ಅಡ್ಡಬಿದ್ದು ಪ್ರಾರ್ಥಿಸುತ್ತಾ ಪಾಪದರಿಕೆ ಮಾಡುತ್ತಾ ಇರುವಾಗ ಅವನ ಸುತ್ತಲೂ ಅನೇಕ ಮಂದಿ ಇಸ್ರೇಲರ ಗಂಡಸರು, ಹೆಂಗಸರು, ಮಕ್ಕಳು ಸೇರಿಬಂದರು. ಅವರೂ ಗಟ್ಟಿಯಾಗಿ ಅಳಲು ಪ್ರಾರಂಭಿಸಿದರು. ಆಗ ಏಲಾಮನ ಸಂತತಿಯವನಾದ ಯೆಹೀಯೇಲನ ಮಗನಾದ ಶೆಕನ್ಯನು ಎಜ್ರನಿಗೆ ಹೀಗೆಂದನು: “ನಾವು ದೇವರಿಗೆ ನಂಬಿಗಸ್ತರಾಗಿರಲಿಲ್ಲ. ನಾವು ಅನ್ಯಜನರೊಂದಿಗೆ ಮದುವೆಯಾಗಿದ್ದೇವೆ. ಹಾಗಿದ್ದರೂ ಇಸ್ರೇಲರಿಗೆ ಒಂದು ನಿರೀಕ್ಷೆ ಇದೆ. ಈಗ ನಾವು ದೇವರ ಮುಂದೆ ಅನ್ಯರಾದ ಹೆಂಡತಿಯರನ್ನೂ ಅವರ ಮಕ್ಕಳನ್ನೂ ತೊರೆದುಬಿಡುತ್ತೇವೆಂದು ಒಡಂಬಡಿಕೆ ಮಾಡೋಣ. ಹೀಗೆ ಮಾಡುವುದರಿಂದ ಎಜ್ರನ ಮತ್ತು ದೇವರ ಕಟ್ಟಳೆಗಳನ್ನು ಗೌರವಿಸುವವರ ಸಲಹೆಯನ್ನು ನಾವು ಅನುಸರಿಸುವವರಾಗಿರುತ್ತೇವೆ; ನಾವು ದೇವರ ಕಟ್ಟಳೆಗೆ ವಿಧೇಯರಾಗುತ್ತೇವೆ. ಎಜ್ರನೇ, ಎದ್ದೇಳು, ಇದು ನಿನ್ನ ಜವಾಬ್ದಾರಿಕೆ. ನಾವು ನಿನ್ನನ್ನು ಬೆಂಬಲಿಸುತ್ತೇವೆ; ಧೈರ್ಯದಿಂದ ಈ ಕೆಲಸವನ್ನು ಪ್ರಾರಂಭಿಸು.”
ಎಜ್ರನು ಎದ್ದುನಿಂತು ಮಹಾಯಾಜಕರೂ, ಲೇವಿಯರೂ ಮತ್ತು ಇಸ್ರೇಲಿನ ಜನರೂ ಅವನು ಹೇಳಿದ ಪ್ರಕಾರ ಮಾಡುತ್ತೇವೆ ಎಂಬ ಪ್ರತಿಜ್ಞೆಯನ್ನು ಅವರಿಂದ ತೆಗೆದುಕೊಂಡನು. ಎಜ್ರನು ಅಲ್ಲಿಂದೆದ್ದು ಎಲ್ಯಾಷೀಬನ ಮಗನಾದ ಯೆಹೋಹಾನನ ಕೋಣೆಗೆ ಹೋಗಿ ಅಲ್ಲಿ ಅನ್ನನೀರಿಲ್ಲದೆ ದುಃಖತಪ್ತನಾಗಿದ್ದನು. ಯಾಕೆಂದರೆ ಸೆರೆಯಿಂದ ಜೆರುಸಲೇಮಿಗೆ ಬಂದಿದ್ದ ಯೆಹೂದ್ಯರ ದ್ರೋಹದ* ದ್ರೋಹ ಅನ್ಯಜನರನ್ನು ಮದುವೆಮಾಡಿಕೊಳ್ಳುವುದರ ಮೂಲಕ ದೇವರ ಆಜ್ಞೆಯ ಉಲ್ಲಂಘನೆ. ಬಗ್ಗೆ ಅವನು ತುಂಬಾ ದುಃಖಿತನಾಗಿದ್ದನು. ಆಮೇಲೆ ಅವನು ಯೆಹೂದಪ್ರಾಂತ್ಯ ಮತ್ತು ಜೆರುಸಲೇಮಿನಲ್ಲಿರುವ ಎಲ್ಲಾ ಯೆಹೂದ್ಯರಿಗೆ ಸಂದೇಶ ಕಳುಹಿಸಿದನು. ಅದರಲ್ಲಿ, ಸೆರೆಯಿಂದ ಹಿಂದಿರುಗಿದ್ದ ಯೆಹೂದ್ಯರೆಲ್ಲರೂ ಜೆರುಸಲೇಮಿನಲ್ಲಿ ಬಂದು ಸೇರಬೇಕು. ಮೂರು ದಿನಗಳೊಳಗೆ ಯಾರಾದರೂ ಬಾರದೆ ಹೋದಲ್ಲಿ ಅವರು ತಮ್ಮ ಆಸ್ತಿಯನ್ನು ಕಳೆದುಕೊಳ್ಳುವರು. ಈ ತೀರ್ಮಾನವನ್ನು ಪ್ರಮುಖರೂ ಅಧಿಕಾರಿಗಳೂ ಮಾಡಿದ್ದಾರೆ; ಆ ಮನುಷ್ಯನು ತಾನು ವಾಸಮಾಡುವ ಜನರ ಅನ್ಯೋನ್ಯತೆಯಿಂದ ತೆಗೆಯಲ್ಪಡುವನು.
ಮೂರು ದಿನಗಳೊಳಗೆ ಯೆಹೂದ ಮತ್ತು ಬೆನ್ಯಾಮೀನ್ ಕುಲಗಳವರಿಂದ ಎಲ್ಲಾ ಗಂಡಸರು ಒಂಭತ್ತನೆಯ ತಿಂಗಳಿನ ಇಪ್ಪತ್ತನೆಯ ದಿವಸದಲ್ಲಿ ಜೆರುಸಲೇಮಿನ ದೇವಾಲಯದ ಅಂಗಳಕ್ಕೆ ಬಂದು ಸೇರಿದರು. ನಡೆಯಲಿಕ್ಕಿರುವ ಕೂಟದ ಉದ್ದೇಶದಿಂದಲೂ ಆ ದಿವಸ ಬಂದಿದ್ದ ಮಳೆಯ ದೆಸೆಯಿಂದಲೂ ನೆರೆದಿದ್ದ ಜನರು ನಡುಗುತ್ತಿದ್ದರು. 10 ಆಗ ಎಜ್ರನು ಎದ್ದುನಿಂತು ಜನರನ್ನುದ್ದೇಶಿಸಿ ಹೇಳಿದ್ದೇನೆಂದರೆ: “ನೀವು ದೇವರಿಗೆ ವಿಧೇಯರಾಗಿರಲಿಲ್ಲ. ಅನ್ಯಮತದ ಹೆಂಗಸರನ್ನು ನೀವು ಮದುವೆಯಾಗಿರುತ್ತೀರಿ. ಹೀಗೆ ಇಸ್ರೇಲಿನ ಪಾಪವು ಹೆಚ್ಚುವಂತೆ ನೀವು ಮಾಡಿದಿರಿ. 11 ಈಗ ನೀವು ಯೆಹೋವನಿಗೆ ವಿರೋಧವಾಗಿ ಪಾಪ ಮಾಡಿರುವುದಾಗಿ ಅರಿಕೆ ಮಾಡಬೇಕು. ಆತನೇ ನಮ್ಮ ಪೂರ್ವಿಕರ ದೇವರಾದ ಯೆಹೋವನು. ಆತನ ಆಜ್ಞೆಗಳಿಗೆ ನೀವು ವಿಧೇಯರಾಗಬೇಕು. ನಿಮ್ಮ ಅನ್ಯಜಾತಿಯ ಹೆಂಡತಿಯರಿಂದಲೂ ನಿಮ್ಮ ಸುತ್ತಲು ವಾಸಿಸುವ ಅನ್ಯ ಜನಾಂಗದವರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ.”
12 ಆಗ ಅಲ್ಲಿ ನೆರೆದುಬಂದವರೆಲ್ಲರೂ ಗಟ್ಟಿಯಾಗಿ ಎಜ್ರನಿಗೆ ಉತ್ತರಿಸುತ್ತಾ, “ಎಜ್ರನೇ, ನೀನು ಸರಿಯಾಗಿ ಹೇಳಿರುವೆ! ನೀನು ಹೇಳಿದಂತೆಯೇ ನಾವು ಮಾಡಬೇಕು. 13 ಆದರೆ ಇಲ್ಲಿ ಹೆಚ್ಚು ಜನರು ಸೇರಿಬಂದಿದ್ದಾರೆ. ಮಳೆ ಸುರಿಯುತ್ತಲಿದೆ. ನಾವು ಹೆಚ್ಚು ಸಮಯ ಮಳೆಯಲ್ಲಿರಲು ಸಾಧ್ಯವಿಲ್ಲ. ನಾವು ಬಹಳ ಘೋರವಾದ ಪಾಪಮಾಡಿರುವುದರಿಂದ ಈ ಸಮಸ್ಯೆಯು ಒಂದೆರಡು ದಿನಗಳಲ್ಲಿ ಮುಗಿಯುವಂಥದಲ್ಲ. 14 ಈ ಕೂಟದಲ್ಲಿ ನಮ್ಮ ಹಿರಿಯರು, ಪ್ರಧಾನರು ಒಂದು ತೀರ್ಮಾನಕ್ಕೆ ಬರಲಿ. ಆಮೇಲೆ ನಮ್ಮನಮ್ಮ ಊರಿನಲ್ಲಿ ಅನ್ಯಸ್ತ್ರೀಯರನ್ನು ಮದುವೆ ಆದವರು ತಮ್ಮ ಪ್ರಧಾನರೊಂದಿಗೆ ಒಂದು ನೇಮಿತ ಸಮಯದಲ್ಲಿ ಇಲ್ಲಿಗೆ ಬರಲಿ. ಆಗ ದೇವರು ನಮ್ಮ ಮೇಲಿರುವ ತನ್ನ ಕೋಪವನ್ನು ನಿವಾರಿಸುವನು” ಎಂದು ಹೇಳಿದರು.
15 ಕೆಲವೇ ಮಂದಿ ಈ ಯೋಜನೆಗೆ ಒಪ್ಪಲಿಲ್ಲ. ಅವರಲ್ಲಿ ಅಸಾಹೇಲನ ಮಗನಾದ ಯೋನಾತಾನನೂ, ತಿಕ್ವನ ಮಗನಾದ ಯೆಹ್ಜೆಯನೂ ಇದ್ದರು. ಮೆಷುಲ್ಲಾಮ್ ಮತ್ತು ಲೇವಿಯನಾದ ಶಬ್ಚೆತೈ ಸಹ ಈ ಯೋಜನೆಗೆ ವಿರುದ್ಧವಾಗಿದ್ದರು.
16 ಜೆರುಸಲೇಮಿಗೆ ಹಿಂತಿರುಗಿಬಂದ ಇಸ್ರೇಲರು ಈ ಯೋಜನೆಯನ್ನು ಒಪ್ಪಿದ ಬಳಿಕ ಎಜ್ರನು ಅವರವರ ವಂಶದ ನಾಯಕರನ್ನು ಆರಿಸಿದನು. ಒಂದೊಂದು ವಂಶಕ್ಕೆ ಒಬ್ಬೊಬ್ಬ ನಾಯಕನನ್ನು ಆರಿಸಿಕೊಂಡನು. ಪ್ರತಿಯೊಬ್ಬನು ಹೆಸರಿಗನುಸಾರವಾಗಿ ಆರಿಸಲ್ಪಟ್ಟನು. ಹತ್ತನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಆ ನಾಯಕರೆಲ್ಲಾ ಒಟ್ಟಾಗಿಸೇರಿ ಒಂದೊಂದೇ ಪ್ರಕರಣಗಳನ್ನು ವಿಚಾರಿಸಿದರು. 17 ಮೊದಲನೇ ತಿಂಗಳಿನ ಮೊದಲನೆಯ ದಿನದಲ್ಲಿ ಎಲ್ಲಾ ಅನ್ಯಸ್ತ್ರೀಯರನ್ನು ಮದುವೆಯಾದವರ ವಿಷಯವನ್ನು ಪರಿಶೀಲಿಸುವ ಕಾರ್ಯವನ್ನು ಮುಗಿಸಿದರು.
ಅನ್ಯಸ್ತ್ರೀಯರನ್ನು ಮದುವೆ ಆದವರ ಪಟ್ಟಿ
18 ಯಾಜಕ ಸಂತತಿಯವರಲ್ಲಿ ಅನ್ಯಸ್ತ್ರೀಯರನ್ನು ಮದುವೆಯಾದವರು:
 
ಯೋಚಾದಾಕನ ಮಗನಾದ ಯೇಷೂವ ಮತ್ತು ಅವನ ಸಹೋದರರಾದ ಮಾಸೇಯ, ಎಲೀಯೆಜರ್, ಯಾರೀಬ್ ಮತ್ತು ಗೆದಲ್ಯ. 19 ಇವರೆಲ್ಲಾ ತಮ್ಮ ಹೆಂಡತಿಯರನ್ನು ಬಿಟ್ಟುಬಿಡಬೇಕೆಂದು ತೀರ್ಮಾನಿಸಿದರು. ಇವರಲ್ಲಿ ಪ್ರತಿಯೊಬ್ಬರು ದೋಷಪರಿಹಾರಕ್ಕಾಗಿ ಹಿಂಡಿನ ಟಗರನ್ನು ಯಜ್ಞ ಮಾಡಿದರು.
20 ಇಮ್ಮೇರನ ಸಂತತಿಯವರಲ್ಲಿ ಹನಾನೀ, ಜೆಬದ.
21 ಹಾರೀಮನ ಸಂತತಿಯವರಲ್ಲಿ ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್ ಮತ್ತು ಉಜ್ಜೀಯ.
22 ಪಷ್ಹೂರನ ಸಂತತಿಯವರಲ್ಲಿ ಎಲ್ಯೋವೇನೈ, ಮಾಸೇಯ, ಇಷ್ಮಾಯೇಲ್, ನೆತನೇಲ್, ಯೋಜಾಬಾದ್ ಮತ್ತು ಎಲ್ಲಾಸ.
 
23 ಲೇವಿಯವರಲ್ಲಿ
ಯೋಜಾಬಾದ್, ಶಿಮ್ಮೀ, ಕೆಲೀಟ, ಪೆತಹ್ಯ, ಯೆಹೂದ ಮತ್ತು ಎಲೀಯೆಜೆರ್,
ಇವರೆಲ್ಲಾ ಅನ್ಯಸ್ತ್ರೀಯರನ್ನು ವಿವಾಹ ಮಾಡಿಕೊಂಡಿದ್ದರು.
24 ಗಾಯಕರಲ್ಲಿ ಎಲ್ಯಾಷೀಬ್ ಎಂಬವನು ಅನ್ಯಸ್ತ್ರೀಯನ್ನು ಮದುವೆ ಮಾಡಿಕೊಂಡಿದ್ದನು. ದ್ವಾರಪಾಲಕರಲ್ಲಿ ಶಲ್ಲೂಮ್, ಟೆಲೆಮ್ ಮತ್ತು ಊರೀ.
 
25 ಇಸ್ರೇಲ್ ಜನಾಂಗದವರಿಂದ
ಪರೋಷನ ಸಂತಾನದಲ್ಲಿ ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯ್ಯಾಮಿನ್, ಎಲ್ಲಾಜಾರ್, ಮಲ್ಕೀಯ ಮತ್ತು ಬೆನಾಯ.
26 ಏಲಾಮನ ಸಂತತಿಯವರಲ್ಲಿ ಮತ್ತನ್ಯ, ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೇಮೋತ್ ಮತ್ತು ಏಲೀಯ.
27 ಜತ್ತೂವಿನ ಸಂತತಿಯವರಲ್ಲಿ ಎಲ್ಯೋವೇನೈ, ಎಲ್ಯಾಷೀಬ್, ಮತ್ತನ್ಯ, ಯೆರೇಮೋತ್, ಜಾಬಾದ್ ಮತ್ತು ಅಜೀಚಾ.
28 ಬೇಬೈಯ ಸಂತತಿಯಿಂದ ಯೆಹೋಹಾನಾನ್, ಹನನ್ಯ, ಜಬ್ಬೈ ಮತ್ತು ಅತ್ಲೈ.
29 ಬಾನೀ ಸಂತತಿಯಿಂದ ಮೆಷುಲ್ಲಾಮ್, ಮಲ್ಲೂಕ್, ಆದಾಯ, ಯಾಷೂಬ್, ಶೆಯಾಲ್ ಮತ್ತು ರಾಮೋತ್.
30 ಪಹತ್ ಮೋವಾಬನ ಸಂತತಿಯಿಂದ ಆದ್ನ, ಕೆಲಾಲ್, ಬೆನಾಯ, ಮಾಸೇಯ, ಮತ್ತನ್ಯ, ಬೆಚಲೇಲ್, ಬಿನ್ನೂಯ್ ಮತ್ತು ಮನಸ್ಸೆ.
31 ಹಾರೀಮ್‌ನ ಸಂತತಿಯಿಂದ ಎಲೀಯೆಜೆರ್, ಇಷ್ಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್, 32 ಬೆನ್ಯಾಮೀನ್, ಮಲ್ಲೂಕ್ ಮತ್ತು ಶೆಮರ್ಯ.
33 ಹಾಷುಮನ ಸಂತತಿಯಿಂದ ಮತ್ತೆನೈ, ಮತ್ತತ್ತ, ಜಾಬಾದ್, ಎಲಿಫೆಲೆಟ್, ಯೆರೇಮೈ, ಮನಸ್ಸೆ ಮತ್ತು ಶಿಮ್ಮೀ.
34 ಬಾನೀಯ ಸಂತತಿಯಿಂದ ಮಾದೈ, ಅಮ್ರಾಮ್, ಊವೇಲ್, 35 ಬೆನಾಯ, ಬೇದೆಯ, ಕೆಲೂಹು, 36 ವನ್ಯಾಹ, ಮೆರೇಮೊತ್, ಎಲ್ಯಾಷೀಬ್, 37 ಮತ್ತನ್ಯ, ಮತ್ತನೈ ಮತ್ತು ಯಾಸೈ.
38 ಬಿನ್ನೂಯಿಯ ಸಂತತಿಯವರಿಂದ ಯಾರೆಂದರೆ: ಶಿಮ್ಮೀ, 39 ಶೆಲೆಮ್ಯ, ನಾತಾನ್, ಆದಾಯ, 40 ಮಕ್ನದೆಬೈ, ಶಾಷೈ, ಶಾರೈ. 41 ಅಜರೇಲ್, ಶೆಲೆಮ್ಯ, ಶೆಮರ್ಯ, 42 ಶಲ್ಲೂಮ್, ಅಮರ್ಯ ಮತ್ತು ಯೋಸೇಫ್.
43 ನೆಬೋನ ಸಂತತಿಯಿಂದ ಯೆಗೀಯೇಲ್, ಮತ್ತಿತ್ಯ, ಜಾಬಾದ್, ಜೆಬೀನ, ಯದ್ದೈ, ಯೋವೇಲ್ ಮತ್ತು ಬೆನಾಯ.
 
44 ಇವರೆಲ್ಲಾ ಅನ್ಯಸ್ತ್ರೀಯರನ್ನು ಮದುವೆಯಾದವರು. ಕೆಲವರಿಗೆ ಆ ಸ್ತ್ರೀಯರಲ್ಲಿ ಮಕ್ಕಳೂ ಹುಟ್ಟಿದ್ದರು.

*10:6: ದ್ರೋಹ ಅನ್ಯಜನರನ್ನು ಮದುವೆಮಾಡಿಕೊಳ್ಳುವುದರ ಮೂಲಕ ದೇವರ ಆಜ್ಞೆಯ ಉಲ್ಲಂಘನೆ.