10
ಮೊರ್ದೆಕೈಯನ್ನು ಗೌರವಿಸಿದ್ದು
ಅಹಷ್ವೇರೋಷ್ ರಾಜನು ತನ್ನ ಪ್ರಜೆಗಳಿಂದ ತೆರಿಗೆಯನ್ನು ಎತ್ತಿದನು. ಅವನ ಸಾಮ್ರಾಜ್ಯದ ಪ್ರಜೆಗಳೆಲ್ಲರೂ ಹಾಗೂ ದೂರದ ಕರಾವಳಿಯ ನಗರವಾಸಿಗಳೂ, ತೆರಿಗೆಯನ್ನು ಕಟ್ಟಬೇಕಾಯಿತು. ಅಹಷ್ವೇರೋಷ್ ಅರಸನು ಮಾಡಿದ ಎಲ್ಲಾ ಮಹತ್ಕಾರ್ಯಗಳೂ ಕೃತ್ಯಗಳೂ ಮೇದ್ಯ, ಪರ್ಶಿಯ ಅರಸರ ರಾಜಕಾಲವೃತ್ತಾಂತ ಪುಸ್ತಕಗಳಲ್ಲಿ ಬರೆಯಲ್ಪಟ್ಟಿರುತ್ತವೆ. ಮತ್ತು ಮೊರ್ದೆಕೈ ಮಾಡಿದ ವಿಷಯಗಳ ಬಗ್ಗೆಯೂ ಬರೆಯಲ್ಪಟ್ಟಿದೆ. ಮೊರ್ದೆಕೈಯನ್ನು ಅರಸನು ಬಹು ದೊಡ್ಡ ಪ್ರಭಾವಶಾಲಿ ವ್ಯಕ್ತಿಯನ್ನಾಗಿ ಮಾಡಿದನು. ಅರಸನ ನಂತರ ರಾಜ್ಯದಲ್ಲಿ ಯೆಹೂದಿಯಾದ ಮೊರ್ದೆಕೈಯೇ ಮುಖ್ಯ ವ್ಯಕ್ತಿಯಾಗಿದ್ದನು. ರಾಜ್ಯದಲ್ಲಿ ಅವನಿಗೆ ಎರಡನೇ ಸ್ಥಾನವಿತ್ತು. ಯೆಹೂದ್ಯರೊಳಗೆ ಅವನು ಪ್ರಮುಖ ವ್ಯಕ್ತಿಯಾಗಿದ್ದನು. ಯೆಹೂದ್ಯರೆಲ್ಲರೂ ಅವನನ್ನು ಬಹಳವಾಗಿ ಗೌರವಿಸುತ್ತಿದ್ದರು. ತನ್ನ ಜನರ ಒಳಿತಿಗಾಗಿ (ಜನರಿಗೋಸ್ಕರವಾಗಿ) ಮೊರ್ದೆಕೈ ಬಹಳವಾಗಿ ಪ್ರಯಾಸಪಟ್ಟಿದ್ದರಿಂದ ಜನರು ಅವನನ್ನು ಸನ್ಮಾನಿಸಿದರು; ಮೊರ್ದೆಕೈ ಯೆಹೂದ್ಯರೆಲ್ಲರಿಗೆ ಸಮಾಧಾನವನ್ನು ತಂದನು.