ದಾನಿಯೇಲ
1
ದಾನಿಯೇಲನು ಬಾಬಿಲೋನಿಗೆ ಸೆರೆಯ್ಯೊದ್ದದ್ದು
1 ನೆಬೂಕದ್ನೆಚ್ಚರನು ಬಾಬಿಲೋನಿನ ಅರಸನಾಗಿದ್ದನು. ನೆಬೂಕದ್ನೆಚ್ಚರನು ಜೆರುಸಲೇಮಿಗೆ ಬಂದನು. ನೆಬೂಕದ್ನೆಚ್ಚರನು ತನ್ನ ಸೈನ್ಯ ಸಮೇತ ಜೆರುಸಲೇಮಿಗೆ ಮುತ್ತಿಗೆ ಹಾಕಿದನು. ಯೆಹೂದದ ಅರಸನಾದ ಯೆಹೋಯಾಕೀಮನ ಆಳ್ವಿಕೆಯ ಮೂರನೆಯ ವರ್ಷದಲ್ಲಿ* ಯೆಹೋಯಾಕೀಮ … ವರ್ಷ ಅಂದರೆ ಕ್ರಿ.ಪೂ. 605. ಈ ಘಟನೆ ನಡೆಯಿತು. 2 ನೆಬೂಕದ್ನೆಚ್ಚರನು ಯೆಹೂದದ ಅರಸನಾದ ಯೆಹೋಯಾಕೀಮನನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಅವನು ಆಲಯದ ಸಾಮಾಗ್ರಿಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು. ಆ ಸಾಮಾಗ್ರಿಗಳನ್ನು ಅವನು ತನ್ನ ವಿಗ್ರಹಾಲಯದಲ್ಲಿಟ್ಟನು.
3 ಆಗ ಅರಸನಾದ ನೆಬೂಕದ್ನೆಚ್ಚರನು ಅಶ್ಪೆನಜನಿಗೆ ಆದೇಶಕೊಟ್ಟನು. ಅಶ್ಪೆನಜನು ಅರಸನ ಸೇವೆಯಲ್ಲಿದ್ದ ಎಲ್ಲಾ ಕಂಚುಕಿಯರಿಗೆ ಮುಖಂಡನಾಗಿದ್ದನು. ಅರಸನು ಕೆಲವು ಜನ ಇಸ್ರೇಲರನ್ನು ತನ್ನ ಅರಮನೆಗೆ ಸೇರಿಸಬೇಕೆಂದು ಅಶ್ಪೆನಜನಿಗೆ ಹೇಳಿದನು. ನೆಬೂಕದ್ನೆಚ್ಚರನು ಇಸ್ರೇಲರ ರಾಜವಂಶೀಯರನ್ನು ಮತ್ತು ಪ್ರಮುಖ ಮನೆತನದವರನ್ನು ತನ್ನ ಅರಮನೆಗೆ ಸೇರಿಸಬಯಸಿದನು. 4 ಅರಸನಾದ ನೆಬೂಕದ್ನೆಚ್ಚರನು ಆರೋಗ್ಯವಂತರೂ ಅಂಗದೋಷವಿಲ್ಲದವರೂ ಸುಂದರರೂ ಬುದ್ಧಿವಂತರೂ ವಿದ್ಯಾನಿಪುಣರೂ ಆಗಿದ್ದ ಯುವಕರನ್ನು ತನ್ನ ಸನ್ನಿಧಿಸೇವೆಗಾಗಿ ಆರಿಸಿಕೊಂಡು ಅವರಿಗೆ ಕಸ್ದೀಯ ಭಾಷೆಯನ್ನೂ ಬರವಣಿಗೆಯನ್ನೂ ಕಲಿಸಬೇಕೆಂದು ಆಜ್ಞೆ ವಿಧಿಸಿದನು.
5 ಅರಸನಾದ ನೆಬೂಕದ್ನೆಚ್ಚರನು ದಿನಾಲು ಆ ತರುಣರಿಗೆ ತಾನು ಸೇವಿಸುವ ಆಹಾರವನ್ನು ಮತ್ತು ದ್ರಾಕ್ಷಾರಸವನ್ನು ಕೊಡುತ್ತಿದ್ದನು. ಅವರನ್ನು ತನ್ನ ಸೇವಕರನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ ಮೂರು ವರ್ಷಗಳ ತರಬೇತಿ ಕೊಡಬೇಕೆಂದು ಆಜ್ಞಾಪಿಸಿದನು. 6 ಆ ತರುಣರಲ್ಲಿ ಯೆಹೂದ ಕುಲಕ್ಕೆ ಸೇರಿದವರಾದ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಎಂಬವರಿದ್ದರು. 7 ಅಶ್ಪೆನಜನು ಆ ಯೆಹೂದ್ಯ ತರುಣರಿಗೆ ಬಾಬಿಲೋನಿನ ಹೆಸರುಗಳನ್ನಿಟ್ಟನು. ದಾನಿಯೇಲನ ಹೊಸ ಹೆಸರು ಬೇಲ್ತೆಶಚ್ಚರ್, ಹನನ್ಯನ ಹೊಸ ಹೆಸರು ಶದ್ರಕ್, ಮೀಶಾಯೇಲನ ಹೊಸ ಹೆಸರು ಮೇಶಕ್ ಮತ್ತು ಅಜರ್ಯನ ಹೊಸ ಹೆಸರು ಅಬೇದ್‌ನೆಗೋ.
8 ದಾನಿಯೇಲನು ಅರಸನ ಪುಷ್ಟಿದಾಯಕ ಆಹಾರವನ್ನು ಮತ್ತು ಪಾನೀಯವನ್ನು ಇಷ್ಟಪಡಲಿಲ್ಲ. ಆ ಆಹಾರ ಮತ್ತು ಪಾನೀಯಗಳಿಂದ ತನ್ನನ್ನು ಅಶುದ್ಧಗೊಳಿಸಿಕೊಳ್ಳಲು ದಾನಿಯೇಲನಿಗೆ ಇಷ್ಟವಿರಲಿಲ್ಲ. ಆದ್ದರಿಂದ ಈ ರೀತಿ ತನ್ನನ್ನು ಅಶುದ್ಧಗೊಳಿಸಿಕೊಳ್ಳದೆ ಇರುವದಕ್ಕಾಗಿ ಅಶ್ಪೆನಜನ ಅಪ್ಪಣೆಯನ್ನು ಕೇಳಿದನು.
9 ದೇವರು ಅಶ್ಪೆನಜನ ಮನಸ್ಸಿನಲ್ಲಿ ದಾನಿಯೇಲನ ಮೇಲೆ ಕನಿಕರವನ್ನೂ ದಯೆಯನ್ನೂ ಹುಟ್ಟಿಸಿದನು. 10 ಆದರೆ ಅಶ್ಪೆನಜನು ದಾನಿಯೇಲನಿಗೆ, “ನಾನು ನನ್ನ ಒಡೆಯನಾದ ಅರಸನಿಗೆ ಹೆದರುತ್ತೇನೆ. ಈ ಆಹಾರ ಮತ್ತು ಪಾನೀಯಗಳನ್ನು ನಿನಗೆ ಕೊಡಬೇಕೆಂದು ಅರಸನು ಅಪ್ಪಣೆ ಮಾಡಿದ್ದಾನೆ. ನೀನು ಈ ಆಹಾರವನ್ನು ತೆಗೆದುಕೊಳ್ಳದಿದ್ದರೆ ಅಶಕ್ತನಾಗಿಯೂ ಅಸ್ವಸ್ಥನಾಗಿಯೂ ಕಾಣಿಸುವೆ. ನೀನು ನಿನ್ನ ವಯಸ್ಸಿನ ಬೇರೆ ತರುಣರಿಗಿಂತ ಸೊರಗಿದವನಾಗಿ ಕಾಣುವೆ. ಅರಸನು ಇದನ್ನು ಗಮನಿಸಿ ನನ್ನ ಮೇಲೆ ಕೋಪಗೊಂಡು ನನ್ನ ತಲೆಯನ್ನೇ ಕತ್ತರಿಸಬಹುದು. ಅದಕ್ಕೆ ನೀನೇ ಹೊಣೆಯಾಗುವೆ” ಎಂದನು.
11 ಆಗ ದಾನಿಯೇಲನು ತಮ್ಮ ಕಾವಲುಗಾರನೊಂದಿಗೆ ಮಾತನಾಡಿದನು. ಅಶ್ಪೆನಜನು ಕಾವಲುಗಾರನಿಗೆ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳ ಮೇಲೆ ದೃಷ್ಟಿಯಿಟ್ಟಿರಬೇಕೆಂದು ಆಜ್ಞಾಪಿಸಿದನು. 12 ದಾನಿಯೇಲನು ಕಾವಲುಗಾರನಿಗೆ, “ದಯವಿಟ್ಟು ಹತ್ತು ದಿನಗಳವರೆಗೆ ನಮ್ಮನ್ನು ಪರೀಕ್ಷಿಸಿರಿ. ತಿನ್ನುವದಕ್ಕೆ ಕಾಯಿಪಲ್ಯ, ಕುಡಿಯುವದಕ್ಕೆ ನೀರು, ಇವುಗಳ ಹೊರತು ನಮಗೆ ಇನ್ನೇನೂ ಕೊಡಬೇಡಿ. 13 ಹತ್ತು ದಿನಗಳಾದ ಮೇಲೆ ನಮ್ಮನ್ನು ಅರಸನ ಆಹಾರ ಪಾನೀಯಗಳನ್ನು ಸ್ವೀಕರಿಸುವ ತರುಣರ ಜೊತೆಗೆ ಹೋಲಿಸಿ ನೋಡಿರಿ. ಯಾರು ಹೆಚ್ಚು ಆರೋಗ್ಯವಂತರಾಗಿ ಕಾಣುತ್ತಾರೆಂಬುದನ್ನು ನೀವೇ ಪರೀಕ್ಷಿಸಿ ನೋಡಿರಿ. ಆಮೇಲೆ ನಮ್ಮ ವಿಷಯದಲ್ಲಿ ನೀವೇ ತೀರ್ಮಾನಿಸಿರಿ. ನಾವು ನಿಮ್ಮ ಸೇವಕರಾಗಿದ್ದೇವೆ” ಎಂದು ಬೇಡಿಕೊಂಡನು.
14 ಕಾವಲುಗಾರನು ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳನ್ನು ಹತ್ತು ದಿನಗಳವರೆಗೆ ಪರೀಕ್ಷಿಸಲು ಒಪ್ಪಿಕೊಂಡನು. 15 ಹತ್ತು ದಿನಗಳ ತರುವಾಯ ದಾನಿಯೇಲ ಮತ್ತು ಅವನ ಸ್ನೇಹಿತರು ಅರಸನ ಆಹಾರವನ್ನು ಊಟಮಾಡಿದ ಇತರ ಎಲ್ಲ ತರುಣರಿಗಿಂತ ಆರೋಗ್ಯವಂತರಾಗಿ ಕಾಣಿಸಿದರು. 16 ಆದ್ದರಿಂದ ಕಾವಲುಗಾರನು ಅರಸನ ವಿಶೇಷ ಆಹಾರವನ್ನು ಮತ್ತು ದ್ರಾಕ್ಷಾರಸವನ್ನು ತೆಗೆದುಕೊಂಡು ಅದಕ್ಕೆ ಬದಲಾಗಿ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳಿಗೆ ಕಾಯಿಪಲ್ಯಗಳನ್ನು ಕೊಡಲು ಪ್ರಾರಂಭಿಸಿದನು.
17 ದೇವರು ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳಿಗೆ ಅನೇಕ ಶಾಸ್ತ್ರಗಳನ್ನೂ ವಿಜ್ಞಾನವನ್ನೂ ಕಲಿಯುವ ಬುದ್ಧಿಸಾಮರ್ಥ್ಯಗಳನ್ನು ದಯಪಾಲಿಸಿದನು. ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ ದಿವ್ಯದರ್ಶನಗಳನ್ನೂ ಗ್ರಹಿಸಬಲ್ಲವನಾಗಿದ್ದನು.
18 ಎಲ್ಲ ತರುಣರು ಮೂರು ವರ್ಷ ತರಬೇತಿ ಪಡೆಯಬೇಕೆಂದು ಅರಸನು ಹೇಳಿದ್ದನು. ಆ ಅವಧಿ ಮುಗಿದ ಮೇಲೆ ಅಶ್ಪೆನಜನು ಆ ಎಲ್ಲ ತರುಣರನ್ನು ಅರಸನಾದ ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರೆತಂದನು. 19 ರಾಜನು ಅವರ ಸಂಗಡ ಮಾತಾಡಿದನು. ಅರಸನಿಗೆ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರಷ್ಟು ಯೊಗ್ಯರಾದವರು ಆ ಸಮಸ್ತ ಯುವಕರಲ್ಲಿ ಮತ್ತಾರೂ ಕಂಡು ಬರಲಿಲ್ಲ. ಆದ್ದರಿಂದ ಆ ನಾಲ್ಕು ಜನ ಯುವಕರು ರಾಜನ ಸೇವಕರಾದರು. 20 ಅರಸನು ಮಹತ್ವಪೂರ್ಣವಾದ ವಿಷಯಗಳ ಬಗ್ಗೆ ಅವರನ್ನು ಕೇಳಿದಾಗಲೆಲ್ಲ ಅವರು ಹೆಚ್ಚಿನ ಪ್ರಜ್ಞೆಯನ್ನು, ಬುದ್ಧಿಯನ್ನು ತೋರಿದರು. ಅವರು ಇಡೀ ದೇಶದ ಎಲ್ಲ ಜೋಯಿಸರಿಗಿಂತಲೂ ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿದ್ದಾರೆಂಬುದನ್ನು ಅರಸನು ಕಂಡುಕೊಂಡನು. 21 ದಾನಿಯೇಲನು ರಾಜನಾದ ಕೋರೆಷನ ಆಳ್ವಿಕೆಯ ಮೊದಲನೆ ವರ್ಷದ† ಕೋರೆಷನ … ವರ್ಷ ಕ್ರಿ.ಪೂ. 539-538. ತನಕ ಅರಸನ ಸೇವಕನಾಗಿ ಮುಂದುವರಿದನು.