4
1 ಜೀವಂತರಾಗಿರುವ ಜನರಿಗೂ ಸತ್ತುಹೋಗಿರುವ ಜನರಿಗೂ ನ್ಯಾಯತೀರಿಸುವಾತನು ಕ್ರಿಸ್ತ ಯೇಸುವೇ. ಆತನು ತನ್ನ ರಾಜ್ಯವನ್ನು ಹೊಂದಿದ್ದಾನೆ. ಆತನು ಮತ್ತೆ ಬರುವನು. ಆದ್ದರಿಂದ ಯೇಸು ಕ್ರಿಸ್ತನ ಮತ್ತು ದೇವರ ಸನ್ನಿಧಿಯಲ್ಲಿ ನಾನು ನಿನಗೆ ಆಜ್ಞಾಪಿಸುವುದೇನೆಂದರೆ, 2 ಸುವಾರ್ತೆಯನ್ನು ಜನರಿಗೆ ತಿಳಿಸು. ಕಾಲವು ಅನುಕೂಲವಾಗಿದ್ದರೂ ಅನಾನುಕೂಲವಾಗಿದ್ದರೂ ಬೋಧನೆಯನ್ನು ಮುಂದುವರಿಸು. ಜನರು ಮಾಡಬೇಕಾದುದನ್ನು ಅವರಿಗೆ ತಿಳಿಸು. ಅವರು ತಪ್ಪು ಮಾಡಿದಾಗ ಅದನ್ನು ಅವರಿಗೆ ತೋರಿಸಿಕೊಡು. ಅವರನ್ನು ಗದರಿಸು, ಇವುಗಳನ್ನು ಬಹಳ ತಾಳ್ಮೆಯಿಂದಲೂ ಎಚ್ಚರಿಕೆಯಿಂದಲೂ ಮಾಡು.
3 ಜನರು ಸತ್ಯೋಪದೇಶವನ್ನು ಕೇಳದಿರುವ ಕಾಲವು ಬರಲಿದೆ. ಜನರು ತಮ್ಮನ್ನು ಮೆಚ್ಚಿಸುವಂಥ ಬೋಧಕರನ್ನು ಮತ್ತು ತಮ್ಮ ಕಿವಿಗೆ ಹಿತವೆನಿಸುವ ಬೋಧನೆಯನ್ನು ನೀಡುವ ಬೋಧಕರನ್ನು ಕಂಡುಕೊಳ್ಳುವರು. 4 ಜನರು ಸತ್ಯವನ್ನು ಕೇಳದೆ ಸುಳ್ಳುಕಥೆಗಳನ್ನು ಕೇಳಲಾರಂಭಿಸುತ್ತಾರೆ. 5 ಆದರೆ ನೀನು ಎಲ್ಲಾ ಕಾಲದಲ್ಲಿಯೂ ಸ್ವಸ್ಥಚಿತ್ತನಾಗಿರು. ತೊಂದರೆಗಳು ಬಂದಾಗ ಸಹಿಸಿಕೊ. ಸುವಾರ್ತೆಯನ್ನು ಪ್ರಚಾರಮಾಡು. ದೇವರ ಸೇವಕನಿಗೆ ಯೋಗ್ಯವಾದ ಎಲ್ಲಾ ಕಾರ್ಯಗಳನ್ನು ಮಾಡುತ್ತಿರು.
6 ನನ್ನ ಜೀವಿತವನ್ನು ದೇವರಿಗಾಗಿ ಅರ್ಪಿಸುತ್ತಿದ್ದೇನೆ. ನಾನು ಈ ಲೋಕವನ್ನು ಬಿಟ್ಟುಹೋಗುವ ಕಾಲವು ಸಮೀಪಿಸಿದೆ. 7 ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ. ಪಂದ್ಯದಲ್ಲಿ ನನ್ನ ಓಟವನ್ನು ಮುಗಿಸಿದ್ದೇನೆ; ನನ್ನ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ. 8 ನೀತಿವಂತರಿಗೆ ದೊರೆಯುವ ಜಯಮಾಲೆಯು ಈಗ ನನಗೆ ಸಿದ್ಧವಾಗಿದೆ. ನೀತಿಯುಳ್ಳ ನ್ಯಾಯಾಧಿಪತಿಯಾಗಿರುವ ಪ್ರಭುವೇ ನನಗೆ ಅದನ್ನು ಆ ದಿನದಂದು ಕೊಡುವನು. ನನಗೆ ಮಾತ್ರವಲ್ಲದೆ ಆತನ ಬರುವಿಕೆಯನ್ನು ಅಪೇಕ್ಷಿಸಿ ಅದಕ್ಕಾಗಿ ಕಾಯುತ್ತಿದ್ದವರಿಗೆಲ್ಲ ಆತನು ಆ ಜಯಮಾಲೆಯನ್ನು ದಯಪಾಲಿಸುವನು.
ವೈಯಕ್ತಿಕ ಮಾತುಗಳು
9 ನಿನಗೆ ಸಾಧ್ಯವಾದಷ್ಟು ಬೇಗನೆ ನನ್ನ ಬಳಿಗೆ ಬಾ. 10 ದೇಮನು ಈ ಲೋಕವನ್ನು ಬಹಳ ಪ್ರೀತಿಸಿದನು. ಆದಕಾರಣವೇ ಅವನು ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೆ ಹೋದನು. ತೀತನು ದಲ್ಮಾತ್ಯಕ್ಕೆ ಹೋದನು. 11 ಲೂಕನೊಬ್ಬನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ನೀನು ಬರುವಾಗ ಮಾರ್ಕನನ್ನೂ ನಿನ್ನ ಜೊತೆಯಲ್ಲಿ ಕರೆದುಕೊಂಡು ಬಾ. ಅವನು ನನ್ನ ಸೇವೆಗೆ ಸಹಾಯ ಮಾಡಬಲ್ಲನು. 12 ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು.
13 ನಾನು ತ್ರೋವದಲ್ಲಿದ್ದಾಗ ಕರ್ಪನ ಬಳಿ ನನ್ನ ಮೇಲಂಗಿಯನ್ನು ಬಿಟ್ಟು ಬಂದಿದ್ದೇನೆ. ನೀನು ನನ್ನ ಬಳಿಗೆ ಬರುವಾಗ ಅದನ್ನು ತೆಗೆದುಕೊಂಡು ಬಾ. ನನ್ನ ಪುಸ್ತಕಗಳನ್ನೂ ಮುಖ್ಯವಾಗಿ, ಕುರಿಚರ್ಮದಿಂದ ಮಾಡಿದ ಪುಸ್ತಕಗಳನ್ನು ತೆಗೆದುಕೊಂಡು ಬಾ.
14 ಕಂಚುಗಾರನಾದ ಅಲೆಗ್ಸಾಂಡರನು ನನಗೆ ಅನೇಕ ಕೆಡಕುಗಳನ್ನು ಮಾಡಿದನು. ಅವನು ಮಾಡಿದ ಕೃತ್ಯಗಳಿಗಾಗಿ ಪ್ರಭುವು ಅವನನ್ನು ದಂಡಿಸುವನು. 15 ಅವನು ನಿನಗೂ ತೊಂದರೆ ಕೊಡಲಾಗದಂತೆ ಎಚ್ಚರವಾಗಿರು. ಅವನು ನಮ್ಮ ಉಪದೇಶದ ವಿರುದ್ಧ ಬಹಳ ಹೋರಾಡಿದನು.
16 ಮೊದಲ ಸಲ ನಾನು ನನ್ನನ್ನು ಸಮರ್ಥಿಸಿಕೊಂಡಾಗ ನನಗೆ ಯಾರೂ ಸಹಾಯಮಾಡಲಿಲ್ಲ. ಎಲ್ಲರೂ ನನ್ನನ್ನು ಬಿಟ್ಟುಹೋದರು. ದೇವರು ಅವರನ್ನು ಕ್ಷಮಿಸಲಿ ಎಂದು ಪ್ರಾರ್ಥಿಸುತ್ತೇನೆ. 17 ಆದರೆ ಪ್ರಭುವು ನನ್ನ ಬಳಿಯೇ ಇದ್ದನು. ನಾನು ಸುವಾರ್ತೆಯನ್ನು ಯೆಹೂದ್ಯರಲ್ಲದವರಿಗೆ ಸಂಪೂರ್ಣವಾಗಿ ಬೋಧಿಸಲು ಪ್ರಭುವು ನನಗೆ ಶಕ್ತಿಯನ್ನು ದಯಪಾಲಿಸಿದನು. ಆ ಸುವಾರ್ತೆಯನ್ನು ಯೆಹೂದ್ಯರಲ್ಲದ ಜನರೆಲ್ಲರೂ ಕೇಳುವುದು ಪ್ರಭುವಿನ ಇಷ್ಟವಾಗಿತ್ತು. ಆತನು ನನ್ನನ್ನು ಸಿಂಹದ (ಶತ್ರು) ಬಾಯಿಂದ ರಕ್ಷಿಸಿದನು. 18 ಯಾರಾದರೂ ನನಗೆ ತೊಂದರೆ ಮಾಡಲು ಪ್ರಯತ್ನಿಸಿದರೆ, ಪ್ರಭುವು ನನ್ನನ್ನು ರಕ್ಷಿಸುವನು. ಪ್ರಭುವು ನನ್ನನ್ನು ಸುರಕ್ಷಿತವಾಗಿ ತನ್ನ ಪರಲೋಕರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಪ್ರಭುವಿಗೆ ಮಹಿಮೆಯಾಗಲಿ.
ಅಂತಿಮ ವಂದನೆಗಳು
19 ಪ್ರಿಸ್ಕಳಿಗೆ, ಅಕ್ವಿಲ್ಲನಿಗೆ ಮತ್ತು ಒನೇಸಿಫೋರನ ಮನೆಯವರಿಗೆ ವಂದನೆಗಳನ್ನು ಹೇಳು. 20 ಎರಸ್ತನು ಕೊರಿಂಥದಲ್ಲಿ ನೆಲಸಿದನು. ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ನಾನು ಅವನನ್ನು ಮಿಲೇತದಲ್ಲಿ ಇರಿಸಬೇಕಾಯಿತು. 21 ಚಳಿಗಾಲಕ್ಕೆ ಮುಂಚೆಯೇ ನನ್ನ ಬಳಿಗೆ ಬರಲು ನಿನ್ನಿಂದಾದಷ್ಟು ಪ್ರಯತ್ನಿಸು.
ಯುಬೂಲ, ಪೊದೇಯ, ಲೀನ, ಕ್ಲೌದ್ಯ, ಇವರುಗಳು ಮತ್ತು ಇತರ ಸಹೋದರರೆಲ್ಲರೂ ನಿನಗೆ ವಂದನೆಗಳನ್ನು ಹೇಳಿದ್ದಾರೆ.
22 ಪ್ರಭುವು ನಿನ್ನ ಆತ್ಮದ ಸಂಗಡ ಇರಲಿ. ಆತನ ಕೃಪೆಯು ನಿನ್ನೊಂದಿಗಿರಲಿ.