16
ಚೀಬನು ದಾವೀದನನ್ನು ಭೇಟಿ ಮಾಡುವನು
ದಾವೀದನು ಆಲೀವ್ ಬೆಟ್ಟದ ಮೇಲೆ ಸ್ವಲ್ಪ ದೂರ ಬಂದನು. ಅಲ್ಲಿ ಮೆಫೀಬೋಶೆತನ ಸೇವಕನಾದ ಚೀಬನು ದಾವೀದನನ್ನು ಸಂಧಿಸಿದನು. ಚೀಬನ ಹತ್ತಿರ ತಡಿಹಾಕಲ್ಪಟ್ಟ ಎರಡು ಹೇಸರಕತ್ತೆಗಳಿದ್ದವು. ಆ ಹೇಸರಕತ್ತೆಗಳ ಮೇಲೆ ಇನ್ನೂರು ರೊಟ್ಟಿಗಳು, ಒಂದುನೂರು ಗೊಂಚಲು ಒಣದ್ರಾಕ್ಷಿ, ಒಂದುನೂರು ಹಣ್ಣುಗಳು ಮತ್ತು ದ್ರಾಕ್ಷಾರಸದ ಒಂದು ಚೀಲ ಇದ್ದವು. ರಾಜನಾದ ದಾವೀದನು ಚೀಬನಿಗೆ, “ಈ ವಸ್ತುಗಳೆಲ್ಲ ಏತಕ್ಕಾಗಿ?” ಎಂದು ಕೇಳಿದನು.
ಚೀಬನು, “ಹೇಸರಕತ್ತೆಗಳನ್ನು ರಾಜನ ಕುಟುಂಬದವರು ಸವಾರಿ ಮಾಡುವುದಕ್ಕಾಗಿಯೂ ರೊಟ್ಟಿಗಳನ್ನು ಮತ್ತು ಹಣ್ಣುಗಳನ್ನು ಸೇವಕರು ತಿನ್ನುವುದಕ್ಕಾಗಿಯೂ ತಂದಿದ್ದೇನೆ. ಅರಣ್ಯದಲ್ಲಿ ಶಕ್ತಿಗುಂದಿಹೋದವನು ದ್ರಾಕ್ಷಾರಸವನ್ನು ಕುಡಿಯಲಿ” ಎಂದು ಉತ್ತರಿಸಿದನು.
ರಾಜನು, “ಮೆಫೀಬೋಶೆತನು ಎಲ್ಲಿ?” ಎಂದು ಕೇಳಿದನು.
ಚೀಬನು ರಾಜನಿಗೆ, “ಮೆಫೀಬೋಶೆತನು ಜೆರುಸಲೇಮಿನಲ್ಲಿಯೇ ಇದ್ದಾನೆ. ಯಾಕೆಂದರೆ ‘ಇಸ್ರೇಲರು ನನ್ನ ತಾತನ ರಾಜ್ಯಾಧಿಕಾರವನ್ನು ಈ ದಿನ ನನಗೆ ಹಿಂದಕ್ಕೆ ಕೊಡುತ್ತಾರೆ’ ಎಂಬುದು ಅವನ ಆಲೋಚನೆಯಾಗಿದೆ” ಎಂದನು.
ಆಗ ರಾಜನು, “ಆದ್ದರಿಂದ ಮೆಫೀಬೋಶೆತನಿಗೆ ಸೇರಿರುವುದೆಲ್ಲವನ್ನೂ ಈಗ ನಾನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.
ಚೀಬನು, “ನಾನು ನಿನಗೆ ಸಾಷ್ಟಾಂಗನಮಸ್ಕಾರ ಮಾಡುತ್ತೇನೆ; ಒಡೆಯನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ” ಎಂದನು.
ಶಿಮ್ಮಿಯು ದಾವೀದನನ್ನು ಶಪಿಸುವನು
ದಾವೀದನು ಬಹುರೀಮಿಗೆ ಬಂದನು. ಸೌಲನ ಕುಟುಂಬಕ್ಕೆ ಸೇರಿದ ಗೇರನ ಮಗನಾದ ಶಿಮ್ಮಿಯು ದಾವೀದನನ್ನು ಶಪಿಸುತ್ತಾ ಬಹುರೀಮಿನಿಂದ ಹೊರಗೆ ಬಂದನು.
ದಾವೀದನ ಮತ್ತು ಅವನ ಸೇವಕರ ಮೇಲೆ ಶಿಮ್ಮಿಯು ಕಲ್ಲುಗಳನ್ನು ಎಸೆಯಲಾರಂಭಿಸಿದನು. ಆದರೆ ದಾವೀದನ ಸುತ್ತಲೂ ಜನರು ಮತ್ತು ಸೇವಕರು ಒಟ್ಟುಗೂಡಿದರು. ಶಿಮ್ಮಿಯು ದಾವೀದನನ್ನು ಶಪಿಸುತ್ತಾ “ತೊಲಗಿಹೋಗು! ನೀನು ಕೊಲೆಗಾರ! ನೀನು ದುಷ್ಟ! ಯೆಹೋವನು ನಿನ್ನನ್ನು ದಂಡಿಸುತ್ತಿದ್ದಾನೆ. ಏಕೆಂದರೆ ನೀನು ಸೌಲನ ಕುಟುಂಬದವರನ್ನು ಕೊಂದು ಸೌಲನ ರಾಜಪದವಿಯನ್ನು ಕದ್ದಿರುವೆ. ಈಗ ನಿನಗೂ ಅದೇ ಸಂಭವಿಸುತ್ತಿದೆ. ಯೆಹೋವನು ರಾಜ್ಯಾಧಿಕಾರವನ್ನು ನಿನ್ನ ಮಗನಿಗೆ ಕೊಟ್ಟಿದ್ದಾನೆ. ಏಕೆಂದರೆ ನೀನೊಬ್ಬ ಕೊಲೆಗಾರ” ಎಂದನು.
ಚೆರೂಯಳ ಮಗನಾದ ಅಬೀಷೈಯು ರಾಜನಿಗೆ “ನನ್ನ ರಾಜನಾದ ಪ್ರಭುವೇ, ಈ ಸತ್ತನಾಯಿಯು ನಿನ್ನನ್ನು ಶಪಿಸುವುದೇಕೆ? ಶಿಮ್ಮಿಯ ತಲೆಯನ್ನು ಕತ್ತರಿಸಿಹಾಕುತ್ತೇನೆ, ನನಗೆ ಅಪ್ಪಣೆಕೊಡು” ಎಂದನು.
10 ಆದರೆ ರಾಜನು, “ಚೆರೂಯಳ ಗಂಡುಮಕ್ಕಳೇ, ಈಗ ನಾನೇನು ಮಾಡಲಿ? ಶಿಮ್ಮಿಯು ನನ್ನನ್ನು ಶಪಿಸುತ್ತಿರುವುದು ನಿಜ. ಆದರೆ ನನ್ನನ್ನು ಶಪಿಸಲು ಯೆಹೋವನೇ ಅವನಿಗೆ ಹೇಳಿದ್ದಾನೆ” ಎಂದನು. 11 ದಾವೀದನು ಅಬೀಷೈಗೆ ಮತ್ತು ತನ್ನ ಎಲ್ಲಾ ಸೇವಕರಿಗೆ, “ನೋಡಿ, ನನ್ನ ಸ್ವಂತ ಮಗನೇ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾನೆ. ಬೆನ್ಯಾಮೀನ್ ಕುಲದ ಇವನು ನನ್ನನ್ನು ಶಪಿಸುವುದು ಯಾವ ದೊಡ್ಡ ಮಾತು; ಅವನು ನನ್ನನ್ನು ಶಪಿಸುತ್ತಲೇ ಇರಲಿ. ಹೀಗೆ ಮಾಡುವಂತೆ ಯೆಹೋವನೇ ಅವನಿಗೆ ತಿಳಿಸಿದ್ದಾನೆ. 12 ಯೆಹೋವನು ನನಗುಂಟಾಗುತ್ತಿರುವ ಕೇಡುಗಳನ್ನು ನೋಡಿ ಶಿಮ್ಮಿಯ ಶಾಪಕ್ಕೆ ಬದಲಾಗಿ ಶುಭವನ್ನು ಅನುಗ್ರಹಿಸಬಹುದೇನೋ” ಎಂದನು.
13 ಆದ್ದರಿಂದ ದಾವೀದನು ತನ್ನ ಜನರೊಂದಿಗೆ ಮುಂದೆ ಸಾಗಿದನು. ಆದರೆ ಶಿಮ್ಮಿಯು ದಾವೀದನನ್ನು ಹಿಂಬಾಲಿಸುತ್ತಲೇ ಇದ್ದನು. ಬೆಟ್ಟದ ಪಕ್ಕದ ರಸ್ತೆಯ ಅಂಚಿನಲ್ಲಿ ಶಿಮ್ಮಿಯು ನಡೆಯುತ್ತಾ ದಾವೀದನನ್ನು ಶಪಿಸುತ್ತಲೇ ಇದ್ದನು. ಶಿಮ್ಮಿಯು ಕಲ್ಲುಗಳನ್ನು ಮತ್ತು ಧೂಳನ್ನು ಸಹ ದಾವೀದನತ್ತ ಎಸೆದನು.
14 ರಾಜನಾದ ದಾವೀದನು ಮತ್ತು ಅವನ ಜನರೆಲ್ಲರೂ ಬಹುರೀಮಿಗೆ ಬಂದರು. ರಾಜನು ಮತ್ತು ಅವನ ಜನರು ಆಯಾಸಗೊಂಡಿದ್ದರಿಂದ ಅವರು ಬಹುರೀಮಿನಲ್ಲಿ ವಿಶ್ರಾಂತಿ ಪಡೆದರು.
15 ಅಬ್ಷಾಲೋಮನು, ಅಹೀತೋಫೆಲನು ಮತ್ತು ಇಸ್ರೇಲಿನ ಜನರೆಲ್ಲ ಜೆರುಸಲೇಮಿಗೆ ಬಂದರು. 16 ದಾವೀದನ ಸ್ನೇಹಿತನೂ ಅರ್ಕೀಯನೂ ಆದ ಹೂಷೈಯು ಅಬ್ಷಾಲೋಮನ ಬಳಿಗೆ ಬಂದನು. ಹೂಷೈಯು, “ರಾಜನು ಚಿರಾಯುವಾಗಿರಲಿ, ರಾಜನು ಚಿರಾಯುವಾಗಿರಲಿ” ಎಂದು ಅಬ್ಷಾಲೋಮನಿಗೆ ಹೇಳಿದನು.
17 ಅಬ್ಷಾಲೋಮನು, “ನಿನ್ನ ಸ್ನೇಹಿತನಾದ ದಾವೀದನಿಗೆ ನೀನೇಕೆ ನಂಬಿಗಸ್ತನಾಗಿಲ್ಲ? ನಿನ್ನ ಸ್ನೇಹಿತನೊಡನೆ ನೀನು ಜೆರುಸಲೇಮಿನಿಂದ ಯಾಕೆ ಹೋಗಲಿಲ್ಲ” ಎಂದು ಕೇಳಿದನು.
18 ಹೂಷೈಯು, “ಯೆಹೋವನು ಆರಿಸಿಕೊಂಡ ವ್ಯಕ್ತಿಗೆ ನಾನು ಸೇರಿದವನು. ಈ ಜನರು ಮತ್ತು ಇಸ್ರೇಲಿನ ಜನರು ನಿನ್ನನ್ನು ಆರಿಸಿದ್ದಾರೆ. ನಾನು ನಿನ್ನೊಡನೆ ನೆಲೆಸುತ್ತೇನೆ. 19 ಮುಂಚೆ ನಾನು ನಿನ್ನ ತಂದೆಯ ಸೇವೆ ಮಾಡಿದೆನು. ಈಗ ದಾವೀದನ ಮಗನ ಸೇವೆ ಮಾಡಬೇಕು. ನಾನು ನಿನ್ನ ಸೇವೆ ಮಾಡುತ್ತೇನೆ” ಎಂದು ಉತ್ತರಕೊಟ್ಟನು.
ಅಹೀತೋಫೆಲನ ಸಲಹೆಯನ್ನು ಅಬ್ಷಾಲೋಮನು ಕೇಳುವನು
20 ಅಬ್ಷಾಲೋಮನು, “ನಾವೇನು ಮಾಡಬೇಕೆಂಬುದನ್ನು ದಯವಿಟ್ಟು ನಮಗೆ ತಿಳಿಸು” ಎಂದು ಅಹೀತೋಫೆಲನನ್ನು ಕೇಳಿದನು.
21 ಅಹೀತೋಫೆಲನು ಅಬ್ಷಾಲೋಮನಿಗೆ, “ನಿಮ್ಮ ತಂದೆಯು, ಮನೆಯನ್ನು ಕಾಯುವುದಕ್ಕೆ ತನ್ನ ಕೆಲವು ಪತ್ನಿಯರನ್ನು* ಪತ್ನಿಯರು ಅಕ್ಷರಶಃ, “ಉಪಪತ್ನಿಯರು” ಪತ್ನಿಯರಂತಿರುವ ಸೇವಕಿಯರು. ಇಲ್ಲಿ ಬಿಟ್ಟುಹೋಗಿದ್ದಾನೆ. ನೀನು ಅವರೊಂದಿಗೆ ಮಲಗಿಕೋ. ನಿನ್ನ ತಂದೆಯು ನಿನ್ನನ್ನು ದ್ವೇಷಿಸುವನೆಂಬುದು ಇಸ್ರೇಲರಿಗೆಲ್ಲ ಆಗ ತಿಳಿಯುವುದು; ನಿನಗೆ ಮತ್ತಷ್ಟು ಬೆಂಬಲವನ್ನು ಕೊಡಲು ನಿನ್ನ ಜನರೆಲ್ಲರನ್ನು ಪ್ರೋತ್ಸಾಹಿಸಿದಂತಾಗುತ್ತದೆ” ಎಂದನು.
22 ಆಗ ಅವರು ಅಬ್ಷಾಲೋಮನಿಗಾಗಿ ಮನೆಯ ಮಾಳಿಗೆಯ ಮೇಲೆ ಒಂದು ಗುಡಾರವನ್ನು ಹಾಕಿದರು. ಅಬ್ಷಾಲೋಮನು ತನ್ನ ತಂದೆಯ ಪತ್ನಿಯರೊಡನೆ ಮಲಗಿಕೊಂಡನು. ಇಸ್ರೇಲರೆಲ್ಲ ಇದನ್ನು ನೋಡಿದರು. 23 ಆ ಸಮಯದಲ್ಲಿ ದಾವೀದನಿಗೆ ಮತ್ತು ಅಬ್ಷಾಲೋಮನಿಗೆ ಅಹೀತೋಫೆಲನ ಸಲಹೆಯು ಬಹಳ ಮುಖ್ಯವಾಗಿತ್ತು. ದೇವರ ವಾಕ್ಯವು ಮನುಷ್ಯನಿಗೆಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿತ್ತು.

*16:21: ಪತ್ನಿಯರು ಅಕ್ಷರಶಃ, “ಉಪಪತ್ನಿಯರು” ಪತ್ನಿಯರಂತಿರುವ ಸೇವಕಿಯರು.