4
ಸೌಲನ ಸೈನ್ಯಾಧಿಪತಿಗಳಾಗಿದ್ದ ಬಾಣ ಮತ್ತು ರೇಕಾಬ್
ಹೆಬ್ರೋನಿನಲ್ಲಿ ಅಬ್ನೇರನು ಸತ್ತನೆಂಬುದು ಸೌಲನ ಮಗನಾದ ಈಷ್ಬೋಶೆತನಿಗೆ ತಿಳಿಯಿತು. ಈಷ್ಬೋಶೆತನು ಮತ್ತು ಅವನ ಜನರು ಬಹಳ ಭಯಗೊಂಡರು. ಬಾಣ ಮತ್ತು ರೇಕಾಬ್ ಎಂಬವರು ಸೌಲನ ಮಗನ ಸೈನ್ಯದಲ್ಲಿ, ಸೇನಾಧಿಪತಿಗಳಾಗಿದ್ದರು. ಅವರಿಬ್ಬರೂ ಬೇರೋತಿನವನಾದ ರಿಮ್ಮೋನನ ಮಕ್ಕಳು. ಅವರು ಬೆನ್ಯಾಮೀನ್ ಕುಲದವರಾಗಿದ್ದರು. ಬೇರೋತ್ ಪಟ್ಟಣವು ಬೆನ್ಯಾಮೀನ್ ಕುಲದವರಿಗೆ ಸೇರಿತ್ತು. ಬೇರೋತಿನ ಜನರು ಗಿತ್ತಯಿಮಿಗೆ ಓಡಿಹೋದರು. ಅವರು ಇವತ್ತಿನವರೆಗೂ ಅಲ್ಲಿ ನೆಲೆಸಿದ್ದಾರೆ.
ಸೌಲನ ಮಗನಾದ ಯೋನಾತಾನನಿಗೆ ಮೆಫೀಬೋಶೆತನೆಂಬ ಒಬ್ಬ ಮಗನಿದ್ದನು. ಸೌಲನು ಮತ್ತು ಯೋನಾತಾನನು ಇಜ್ರೇಲಿನಲ್ಲಿ ಸತ್ತರೆಂಬ ವರ್ತಮಾನವು ಬಂದಾಗ ಯೋನಾತಾನನ ಮಗನಿಗೆ ಐದು ವರ್ಷವಾಗಿತ್ತು. ಅವನನ್ನು ಸಾಕುತ್ತಿದ್ದ ದಾದಿಯು ಭಯಪಟ್ಟು ಅವನನ್ನು ಎತ್ತಿಕೊಂಡು ಓಡತೊಡಗಿದಳು. ಆ ದಾದಿಯು ಅವಸರದಿಂದ ಓಡಿಹೋಗುತ್ತಿದ್ದಾಗ, ಯೋನಾತಾನನ ಮಗನು ಅವಳ ತೋಳುಗಳಿಂದ ಕೆಳಕ್ಕೆ ಬಿದ್ದನು. ಹೀಗೆ ಕೆಳಗೆ ಬಿದ್ದ ಯೋನಾತಾನನ ಮಗನ ಎರಡು ಕಾಲುಗಳು ಕುಂಟಾದವು. ಈ ಮಗನ ಹೆಸರೇ ಮೆಫೀಬೋಶೆತ್.
ಬೇರೋತಿನ ರಿಮ್ಮೋನನ ಮಕ್ಕಳಾದ ಬಾಣನು ಮತ್ತು ರೇಕಾಬನು ಈಷ್ಬೋಶೆತನ ಮನೆಗೆ ಮಧ್ಯಾಹ್ನದಲ್ಲಿ ಹೋದರು. ಈಷ್ಬೋಶೆತನು ಬಿಸಿಲಿನ ತಾಪದಿಂದ ವಿಶ್ರಾಂತಿ ಪಡೆಯುತ್ತಿದ್ದನು. 6-7 ಬಾಣನು ಮತ್ತು ರೇಕಾಬನು ಗೋಧಿಯನ್ನು ತೆಗೆದುಕೊಳ್ಳುವವರಂತೆ ಮನೆಯ ಮಧ್ಯಭಾಗಕ್ಕೆ ಬಂದರು. ಈಷ್ಬೋಶೆತನು ಮಲಗುವ ಕೋಣೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದನು. ರೇಕಾಬನು ಮತ್ತು ಬಾಣನು ಈಷ್ಬೋಶೆತನನ್ನು ಇರಿದು ಕೊಂದರು. ನಂತರ ಅವರು ಅವನ ತಲೆಯನ್ನು ಕತ್ತರಿಸಿ ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ಅವರು ಜೋರ್ಡನ್ ಕಣಿವೆಯಲ್ಲಿ ರಾತ್ರಿಯೆಲ್ಲಾ ಪ್ರಯಾಣಮಾಡಿ ಹೆಬ್ರೋನಿಗೆ ಬಂದು ಈಷ್ಬೋಶೆತನ ತಲೆಯನ್ನು ದಾವೀದನಿಗೆ ಕೊಟ್ಟರು.
ರೇಕಾಬನು ಮತ್ತು ಬಾಣನು ರಾಜನಾದ ದಾವೀದನಿಗೆ, “ಸೌಲನ ಮಗನೂ ನಿನ್ನ ಶತ್ರುವೂ ಅದ ಈಷ್ಬೋಶೆತನ ತಲೆಯು ಇಲ್ಲಿದೆ. ಅವನು ನಿನ್ನನ್ನು ಕೊಲ್ಲಲು ಪ್ರಯತ್ನಿಸಿದನು. ನಿನಗಾಗಿ ಯೆಹೋವನು ಈ ದಿನ ಸೌಲನನ್ನೂ ಅವನ ಕುಲವನ್ನೂ ದಂಡಿಸಿದನು” ಎಂದು ಹೇಳಿದರು.
ದಾವೀದನು ರಿಮ್ಮೋನನ ಮಕ್ಕಳಾದ ರೇಕಾಬನಿಗೂ ಅವನ ಸೋದರನಾದ ಬಾಣನಿಗೂ, “ಯೆಹೋವನಾಣೆಯಾಗಿಯೂ ಆತನು ಎಲ್ಲಾ ಕೇಡುಗಳಿಂದ ನನ್ನನ್ನು ರಕ್ಷಿಸಿದನು. 10 ಆದರೆ ಒಮ್ಮೆ ಒಬ್ಬ ವ್ಯಕ್ತಿಯು ತಾನು ಶುಭ ಸುದ್ದಿಯನ್ನು ನನಗೆ ತರುತ್ತಿದ್ದೇನೆಂದು ಯೋಚಿಸಿದನು. ಅವನು, ‘ನೋಡು, ಸೌಲನು ಸತ್ತನು’ ಎಂದು ನನಗೆ ಹೇಳಿದನು. ಈ ಸುದ್ದಿಯನ್ನು ನನಗೆ ತಿಳಿಸಿದ್ದರಿಂದ ನಾನು ಅವನಿಗೆ ಕೊಡುಗೆಗಳನ್ನು ಕೊಡಬಹುದೆಂದು ಅವನು ಭಾವಿಸಿದನು. ಆದರೆ ನಾನು ಅವನನ್ನು ಚಿಕ್ಲಗಿನಲ್ಲಿ ಕೊಂದೆನು. 11 ದುಷ್ಟರಾದ ನೀವು ಇಂದು ಒಬ್ಬ ನೀತಿವಂತನನ್ನು ಅವನ ಸ್ವಂತ ಮನೆಯಲ್ಲಿ ಅವನ ಸ್ವಂತ ಹಾಸಿಗೆಯ ಮೇಲೆಯೇ ಕೊಂದಿರುವುದರಿಂದ ನಿಮ್ಮನ್ನೂ ನಾನು ಕೊಂದು ನಿರ್ಮೂಲ ಮಾಡಬೇಕು” ಎಂದನು.
12 ದಾವೀದನು, ರೇಕಾಬನನ್ನು ಮತ್ತು ಬಾಣನನ್ನು ಕೊಲ್ಲಲು ಯುವಕರಿಗೆ ಆಜ್ಞಾಪಿಸಿದನು. ಆಗ ಆ ಯುವಕರು ರೇಕಾಬನ ಮತ್ತು ಬಾಣನ ಕೈಕಾಲುಗಳನ್ನು ಕತ್ತರಿಸಿಹಾಕಿ, ಹೆಬ್ರೋನಿನ ಕೊಳದ ಬಳಿಯಲ್ಲಿ ಅವರ ದೇಹಗಳನ್ನು ನೇತುಹಾಕಿದರು. ನಂತರ ಅವರು ಈಷ್ಬೋಶೆತನ ತಲೆಯನ್ನು ತೆಗೆದುಕೊಂಡು ಹೋಗಿ, ಹೆಬ್ರೋನಿನಲ್ಲಿ ಅಬ್ನೇರನನ್ನು ಸಮಾಧಿಮಾಡಿದ ಸ್ಥಳದಲ್ಲೇ ಸಮಾಧಿಮಾಡಿದರು.