2
ಹೆಬ್ರೋನಿಗೆ ದಾವೀದನ ಆಗಮನ
ತರುವಾಯ ದಾವೀದನು ಯೆಹೋವನಲ್ಲಿ ಪ್ರಾರ್ಥಿಸಿ, “ಯೆಹೂದದ ಯಾವುದಾದರೂ ನಗರಕ್ಕೆ ನಾನು ಹೋಗಬಹುದೇ?” ಎಂದು ಕೇಳಿದನು.
“ಹೋಗು” ಎಂಬುದಾಗಿ ಯೆಹೋವನು ಹೇಳಿದನು.
“ನಾನು ಎಲ್ಲಿಗೆ ಹೋಗಲಿ?” ಎಂದು ದಾವೀದನು ಕೇಳಿದನು.
“ಹೆಬ್ರೋನಿಗೆ ಹೋಗು” ಎಂದು ಯೆಹೋವನು ಉತ್ತರಿಸಿದನು.
ಆದ್ದರಿಂದ ದಾವೀದನು ಅಲ್ಲಿಗೆ ಹೋದನು. ಅವನ ಇಬ್ಬರು ಹೆಂಡತಿಯರೂ ಅವನ ಜೊತೆಯಲ್ಲಿ ಹೋದರು. ಅವರು ಯಾರೆಂದರೆ: ಇಜ್ರೇಲಿನ ಅಹೀನೋವಮಳು ಮತ್ತು ಕರ್ಮೆಲಿನ ನಾಬಾಲನ ವಿಧವೆಯಾದ ಅಬೀಗೈಲಳು. ದಾವೀದನು ತನ್ನ ಜನರನ್ನು ಮತ್ತು ಅವರ ಕುಟುಂಬಗಳನ್ನು ಸಹ ಕರೆತಂದನು. ಅವರೆಲ್ಲರೂ ಹೆಬ್ರೋನ್ ಮತ್ತು ಅದರ ಸಮೀಪದ ನಗರಗಳಲ್ಲಿ ನೆಲೆಸಿದರು.
ಯೆಹೂದದ ಜನರು ಬಂದು ದಾವೀದನನ್ನು ಯೆಹೂದದ ರಾಜನನ್ನಾಗಿ ಅಭಿಷೇಕಿಸಿದರು. ಬಳಿಕ ಅವರು ದಾವೀದನಿಗೆ, “ಸೌಲನ ಸಮಾಧಿ ಮಾಡಿದವರು ಯಾಬೇಷ್ ಗಿಲ್ಯಾದಿನವರೇ” ಎಂದು ಹೇಳಿದರು.
ಯಾಬೇಷ್ ಗಿಲ್ಯಾದಿನ ಜನರಿಗೆ ದಾವೀದನು ಸಂದೇಶಕರನ್ನು ಕಳುಹಿಸಿ, “ಸೌಲನ ದೇಹದ ಬೂದಿಯನ್ನು* ಬೂದಿಯನ್ನು ಸೌಲ ಮತ್ತು ಯೋನಾತಾನರ ದೇಹಗಳನ್ನು ಸುಡಲಾಗಿತ್ತು. ನೋಡಿ. 1 ಸಮು. 31:12. ಸಮಾಧಿಮಾಡುವುದರ ಮೂಲಕ ನೀವು ನಿಮ್ಮ ಒಡೆಯನಾದ ಸೌಲನಿಗೆ ಕರುಣೆ ತೋರಿದ್ದೀರಿ. ಅದಕ್ಕಾಗಿ ಯೆಹೋವನು ನಿಮ್ಮನ್ನು ಆಶೀರ್ವದಿಸಲಿ. ಆತನು ನಿಮಗೆ ಕೃಪಾಳುವೂ ನಂಬಿಗಸ್ತನೂ ಆಗಿರಲಿ. ನೀವು ಸೌಲನ ಬೂದಿಯನ್ನು ಸಮಾಧಿಮಾಡಿದ್ದರಿಂದ ನಾನೂ ನಿಮಗೆ ಕರುಣೆ ತೋರಿಸುವೆನು. ನಿಮ್ಮ ಒಡೆಯನಾದ ಸೌಲನು ಮರಣ ಹೊಂದಿರುವುದರಿಂದ, ಯೆಹೂದ ಕುಲದವರು ನನ್ನನ್ನು ತಮ್ಮ ರಾಜನನ್ನಾಗಿ ಅಭಿಷೇಕಿಸಿದ್ದಾರೆ. ಆದ್ದರಿಂದ ನೀವು ಬಲಿಷ್ಠರಾಗಿರಿ ಮತ್ತು ಧೈರ್ಯದಿಂದಿರಿ” ಎಂದು ಹೇಳಿಸಿದನು.
ಈಷ್ಬೋಶೆತನು ರಾಜನಾದನು
ಸೌಲನ ಸೈನ್ಯದಲ್ಲಿ ನೇರನ ಮಗನಾದ ಅಬ್ನೇರನು ಸೇನಾಧಿಪತಿಯಾಗಿದ್ದನು. ಸೌಲನ ಮಗನಾದ ಈಷ್ಬೋಶೆತನನ್ನು ಅಬ್ನೇರನು ಮಹನಯಿಮಿಗೆ ಕರೆದೊಯ್ದನು. ಆ ಸ್ಥಳದಲ್ಲಿ ಅಬ್ನೇರನು ಈಷ್ಬೋಶೆತನನ್ನು ಗಿಲ್ಯಾದ್, ಆಶೇರ್, ಇಜ್ರೇಲ್, ಎಫ್ರಾಯೀಮ್ ಮತ್ತು ಬೆನ್ಯಾಮೀನ್ ಜನರ ಮೇಲೆಯೂ ಮತ್ತು ಇಸ್ರೇಲಿಗೆಲ್ಲ ರಾಜನನ್ನಾಗಿ ಮಾಡಿದನು.
10 ಈಷ್ಬೋಶೆತನು ಸೌಲನ ಮಗ. ಈಷ್ಬೋಶೆತನು ಇಸ್ರೇಲನ್ನು ಆಳಲು ಆರಂಭಿಸಿದಾಗ ನಲವತ್ತು ವರ್ಷ ವಯಸ್ಸಿನವನಾಗಿದ್ದನು. ಅವನು ಎರಡು ವರ್ಷ ಆಳಿದನು. ಆದರೆ ಯೆಹೂದ ಕುಲದವರು ದಾವೀದನನ್ನು ಹಿಂಬಾಲಿಸಿದರು. 11 ದಾವೀದನು ಯೆಹೂದ ಕುಲದವರಿಗೆ ಹೆಬ್ರೋನಿನಲ್ಲಿ ಏಳು ವರ್ಷ ಆರು ತಿಂಗಳುಗಳ ಕಾಲ ರಾಜನಾಗಿದ್ದನು.
ಈಷ್ಬೋಶೆತನ ಜನರು ಮತ್ತು ದಾವೀದನ ಜನರು ಪರಸ್ಪರ ಹೋರಾಡಿದರು
12 ನೇರನ ಮಗನಾದ ಅಬ್ನೇರನೂ ಮತ್ತು ಸೌಲನ ಮಗನಾದ ಈಷ್ಬೋಶೆತನ ಸೇವಕರೂ ಮಹನಯಿಮಯನ್ನು ಬಿಟ್ಟು ಗಿಬ್ಯೋನಿಗೆ ಹೋದರು. 13 ಚೆರೂಯಳ ಮಗನಾದ ಯೋವಾಬನು ಮತ್ತು ದಾವೀದನ ಸೈನಿಕರು ಸಹ ಗಿಬ್ಯೋನಿಗೆ ಹೋದರು. ಅವರು ಅಬ್ನೇರನನ್ನು ಮತ್ತು ಈಷ್ಬೋಶೆತನ ಸೇವಕರನ್ನು ಗಿಬ್ಯೋನಿನ ಕೆರೆಯ ಹತ್ತಿರ ಸಂಧಿಸಿದರು. ಅಬ್ನೇರನ ಗುಂಪಿನವರು ಕೆರೆಯ ಒಂದು ಕಡೆ ಕುಳಿತರು. ಯೋವಾಬನ ಗುಂಪಿನವರು ಕೆರೆಯ ಮತ್ತೊಂದು ಕಡೆ ಕುಳಿತರು.
14 ಅಬ್ನೇರನು ಯೋವಾಬನಿಗೆ, “ಯುವಜನರೆಲ್ಲ ಮೇಲೆದ್ದು, ಇಲ್ಲಿ ಹೋರಾಡಲಿ” ಎಂದು ಹೇಳಿದನು.
ಯೋವಾಬನು “ಆಗಲಿ, ಅವರು ಹೋರಾಡಲಿ” ಎಂದನು.
15 ನಂತರ ಯುವಜನರು ಮೇಲೆದ್ದರು. ಎರಡು ಗುಂಪಿನವರೂ ಹೋರಾಡುವುದಕ್ಕಾಗಿ ತಮ್ಮತಮ್ಮ ಜನರನ್ನು ಲೆಕ್ಕ ಹಾಕಿದರು. ಸೌಲನ ಮಗನಾದ ಈಷ್ಬೋಶೆತನಿಗಾಗಿ ಬೆನ್ಯಾಮೀನ್ ಕುಲದ ಹನ್ನೆರಡು ಜನರನ್ನು ಆರಿಸಲಾಯಿತು. ದಾವೀದನ ಸೇವಕರಲ್ಲಿ ಹನ್ನೆರಡು ಜನರನ್ನು ಆರಿಸಲಾಯಿತು. 16 ಪ್ರತಿಯೊಬ್ಬರೂ ತಮ್ಮ ಎದುರಾಳಿಯ ತಲೆಯನ್ನು ಹಿಡಿದುಕೊಂಡರು ಮತ್ತು ಖಡ್ಗದಿಂದ ಅವರ ಪಕ್ಕೆಗಳಿಗೆ ತಿವಿದರು. ಆದ್ದರಿಂದ ಅವರು ಒಟ್ಟಾಗಿ ಕೆಳಕ್ಕೆ ಬಿದ್ದರು. ಆದಕಾರಣವೇ ಆ ಸ್ಥಳವನ್ನು “ಹರಿತ ಕತ್ತಿಯ ಹೊಲ” ಎಂದು ಕರೆಯುತ್ತಾರೆ. ಈ ಸ್ಥಳವು ಗಿಬ್ಯೋನಿನಲ್ಲಿದೆ. 17 ಆ ದಿನ ಘೋರವಾದ ಯುದ್ಧ ಸಂಭವಿಸಿತು. ದಾವೀದನ ಸೇವಕರು ಅಬ್ನೇರನನ್ನು ಮತ್ತು ಇಸ್ರೇಲರನ್ನು ಸೋಲಿಸಿದರು.
ಅಸಾಹೇಲನನ್ನು ಅಬ್ನೇರನು ಕೊಲ್ಲುವನು
18 ಚೆರೂಯಳಿಗೆ ಯೋವಾಬ್, ಅಬೀಷೈ ಮತ್ತು ಅಸಾಹೇಲ್ ಎಂಬ ಮೂವರು ಮಕ್ಕಳಿದ್ದರು. ಅವರೆಲ್ಲಾ ಅಲ್ಲಿದ್ದರು. ಅಸಾಹೇಲನು ವೇಗದ ಓಟಗಾರ. ಅವನು ಕಾಡಿನ ಜಿಂಕೆಯಂತೆ ವೇಗವಾಗಿ ಓಡಬಲ್ಲವನಾಗಿದ್ದನು. 19 ಅಸಾಹೇಲನು ಯಾವ ಕಡೆಗೂ ತಿರುಗದೆ ನೇರವಾಗಿ ಅಬ್ನೇರನ ಕಡೆಗೆ ಹೋದನು. 20 ಅಬ್ನೇರನು ಹಿಂದಕ್ಕೆ ತಿರುಗಿ, “ನೀನು ಅಸಾಹೇಲನಲ್ಲವೇ?” ಎಂದು ಕೇಳಿದನು.
“ಹೌದು” ಎಂದು ಅಸಾಹೇಲನು ಹೇಳಿದನು.
21 ಆಗ ಅಬ್ನೇರನು ಅವನಿಗೆ, “ನೀನು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿ ಒಬ್ಬ ಯುವಕನನ್ನು ಹಿಡಿದುಕೊಂಡು ಅವನ ಬಳಿಯಿರುವ ಆಯುಧವನ್ನು ನಿನಗಾಗಿ ತೆಗೆದುಕೊ” ಎಂದು ಹೇಳಿದನು. ಆದರೆ ಅಸಾಹೇಲನು ಅಬ್ನೇರನನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಲಿಲ್ಲ.
22 ಅಬ್ನೇರನು ಮತ್ತೆ ಅಸಾಹೇಲನಿಗೆ, “ನನ್ನನ್ನು ಅಟ್ಟಿಸಿಕೊಂಡು ಬರಬೇಡ; ಇಲ್ಲವಾದರೆ ನಾನು ನಿನ್ನನ್ನು ಕೊಲ್ಲುತ್ತೇನೆ. ನಾನು ನಿನ್ನನ್ನು ಕೊಂದುಬಿಟ್ಟರೆ, ನಿನ್ನ ಸೋದರನಾದ ಯೋವಾಬನ ಮುಖವನ್ನು ನಾನು ಮತ್ತೆ ನೋಡಲಾಗುವುದಿಲ್ಲ” ಎಂದು ಹೇಳಿದನು.
23 ಆದರೂ ಅಸಾಹೇಲನು ಅಬ್ನೇರನನ್ನು ಅಟ್ಟಿಸಿಕೊಂಡೇ ಹೋದನು. ಆದ್ದರಿಂದ ಅಬ್ನೇರನು ತನ್ನ ಬರ್ಜಿಯ ಹಿಡಿಕೆಯನ್ನು ಹಿಡಿದುಕೊಂಡು ಅದನ್ನು ಅಸಾಹೇಲನ ಹೊಟ್ಟೆಗೆ ತಿವಿದನು. ಆ ಬರ್ಜಿಯು ಅಸಾಹೇಲನ ಹೊಟ್ಟೆಯೊಳಗೆ ಆಳವಾಗಿ ಚುಚ್ಚಿಕೊಂಡು ಅವನ ಬೆನ್ನಿನಿಂದ ಹಾಯ್ದು ಬಂದಿತು. ಅಸಾಹೇಲನು ಕೂಡಲೇ ಅಲ್ಲೇ ಸತ್ತುಬಿದ್ದನು.
ಅಬ್ನೇರನನ್ನು ಯೋವಾಬ್ ಮತ್ತು ಅಬೀಷೈ ಅಟ್ಟಿಸಿಕೊಂಡು ಹೋಗುವರು
ಅಸಾಹೇಲನ ದೇಹವು ನೆಲದ ಮೇಲೆ ಬಿದ್ದಿತ್ತು. ಜನರು ಅವನ ಬಳಿಗೆ ಹೋಗಿ ಅಲ್ಲಿಯೇ ನಿಂತರು. 24 ಆದರೆ ಯೋವಾಬ್ ಮತ್ತು ಅಬೀಷೈ ಅಬ್ನೇರನನ್ನು ಅಟ್ಟಿಸಿಕೊಂಡೇ ಹೋದರು. ಅವರು “ಅಮ್ಮಾ” ಬೆಟ್ಟಕ್ಕೆ ಬರುವಷ್ಟರಲ್ಲಿ ಸೂರ್ಯನು ಮುಳುಗಿದನು. (ಗಿಬ್ಯೋನಿನ ಮರಳುಗಾಡಿನ ಮಾರ್ಗದಲ್ಲಿರುವ ಗೀಯದ ಎದುರಿಗಿರುವುದೇ “ಅಮ್ಮಾ” ಬೆಟ್ಟ.) 25 ಬೆನ್ಯಾಮೀನ್ ಕುಲದವರೆಲ್ಲರು ಅಬ್ನೇರನ ಹತ್ತಿರಕ್ಕೆ ಬಂದರು. ಅವರೆಲ್ಲ ಬೆಟ್ಟದ ಮೇಲೆ ಒಟ್ಟಾಗಿ ನಿಂತರು.
26 ಅಬ್ನೇರನು ಯೋವಾಬನಿಗೆ, “ನಾವು ಎಂದೆಂದಿಗೂ ಯುದ್ಧ ಮಾಡಿ ಒಬ್ಬರನ್ನೊಬ್ಬರು ಕೊಲ್ಲಬೇಕೇ? ಇದು ಹಗೆತನದಲ್ಲಿ ಅಂತ್ಯಗೊಳ್ಳುತ್ತದೆಂಬುದು ನಿಜವಾಗಿಯೂ ನಿನಗೆ ತಿಳಿದಿದೆ. ತಮ್ಮ ಸೋದರರನ್ನೇ ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಲು ನಿನ್ನ ಜನರಿಗೆ ಹೇಳು” ಎಂದು ಕೂಗಿ ಹೇಳಿದನು.
27 ಆಗ ಯೋವಾಬನು, “ನೀನು ಒಳ್ಳೆಯ ಮಾತನ್ನೇ ಆಡಿರುವೆ. ನೀನು ಹೀಗೆ ಹೇಳದೆ ಇದ್ದಿದ್ದರೆ, ಯೆಹೋವನಾಣೆಗೂ ಜನರು ನಾಳೆ ಮುಂಜಾನೆವರೆಗೂ ತಮ್ಮ ಸೋದರರನ್ನೇ ಅಟ್ಟಿಸಿಕೊಂಡು ಹೋಗುತ್ತಿದ್ದರು” ಎಂದು ಹೇಳಿದನು. 28 ಆಗ ಯೋವಾಬನು ತುತ್ತೂರಿಯನ್ನು ಊದಿದನು. ಅವನ ಜನರು ಇಸ್ರೇಲರನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಿದರು. ಅವರು ಇಸ್ರೇಲರ ವಿರುದ್ಧ ಹೋರಾಡಲು ಪ್ರಯತ್ನಿಸಲೇ ಇಲ್ಲ.
29 ಅಬ್ನೇರನು ತನ್ನ ಜನರೊಂದಿಗೆ ರಾತ್ರಿಯೆಲ್ಲಾ ಅರಾಬಾ ಕಣಿವೆಯಲ್ಲಿ ಪ್ರಯಾಣಮಾಡಿ, ಜೋರ್ಡನ್ ನದಿಯನ್ನು ದಾಟಿ ಮಹನಯಿಮಿಗೆ ಬಂದನು.
30 ಅಬ್ನೇರನನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಿದ ನಂತರ ಯೋವಾಬನು ಹಿಂತಿರುಗಿ ಬಂದನು. ಯೋವಾಬನು ತನ್ನ ಜನರನ್ನೆಲ್ಲ ಒಟ್ಟಾಗಿ ಸೇರಿಸಿದಾಗ, ದಾವೀದನ ಭಟರಲ್ಲಿ ಹತ್ತೊಂಭತ್ತು ಮಂದಿ ಕಾಣಲಿಲ್ಲ. ಅಸಾಹೇಲನು ಸಹ ಕಾಣಲಿಲ್ಲ. 31 ಆದರೆ ಅಬ್ನೇರನ ಹಿಂಬಾಲಕರೂ ಬೆನ್ಯಾಮೀನ್ ಕುಟುಂಬದ ಗುಂಪಿನವರೂ ಆದ ಮುನ್ನೂರೈವತ್ತು ಜನರನ್ನು ದಾವೀದನ ಭಟರು ಕೊಂದಿದ್ದರು. 32 ದಾವೀದನ ಭಟರು ಅಸಾಹೇಲನ ಶವವನ್ನು ಬೆತ್ಲೆಹೇಮಿಗೆ ತಂದು, ಅವನ ತಂದೆಯ ಶ್ಮಶಾನ ಭೂಮಿಯಲ್ಲಿ ಸಮಾಧಿಮಾಡಿದರು.
ಯೋವಾಬನು ತನ್ನ ಜನರೊಂದಿಗೆ ರಾತ್ರಿಯೆಲ್ಲ ಪ್ರಯಾಣಮಾಡಿ ಹೆಬ್ರೋನನ್ನು ತಲುಪಿದಾಗ ಸೂರ್ಯೋದಯವಾಯಿತು.

*2:5: ಬೂದಿಯನ್ನು ಸೌಲ ಮತ್ತು ಯೋನಾತಾನರ ದೇಹಗಳನ್ನು ಸುಡಲಾಗಿತ್ತು. ನೋಡಿ. 1 ಸಮು. 31:12.