34
ಯೆಹೂದದ ಅರಸಾನದ ಯೋಷೀಯ
ಯೋಷೀಯನು ಅರಸನಾದಾಗ ಎಂಟು ವರ್ಷ ಪ್ರಾಯದವನಾಗಿದ್ದನು. ಅವನು ಮೂವತ್ತೊಂದು ವರ್ಷದ ತನಕ ಜೆರುಸಲೇಮಿನಲ್ಲಿ ರಾಜ್ಯಭಾರವನ್ನು ಮಾಡಿದನು. ಯೋಷೀಯನು ಯೆಹೋವನಿಗೆ ಮೆಚ್ಚಿಕೆಯಾದ ಕಾರ್ಯಗಳನ್ನೇ ಮಾಡಿದನು. ಅವನು ತನ್ನ ಪೂರ್ವಿಕನಾದ ದಾವೀದನಂತೆ ದೇವರ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು. ಅವನು ಒಳ್ಳೆಯ ಕಾರ್ಯಗಳನ್ನು ಮಾಡುವುದನ್ನು ಬಿಟ್ಟುಬಿಡಲಿಲ್ಲ. ಅವನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ತನ್ನ ಪಿತೃವಾದ ದಾವೀದನು ಅನುಸರಿಸಿದ್ದ ದೇವರನ್ನು ಅನುಸರಿಸಿದನು. ಆಗ ಅವನು ಇನ್ನೂ ಎಳೆಯ ಪ್ರಾಯದವನಾಗಿದ್ದನು. ಅವನು ಪಟ್ಟಕ್ಕೆ ಬಂದ ಹನ್ನೆರಡನೆಯ ವರ್ಷದಲ್ಲಿ, ಜೆರುಸಲೇಮಿನಲ್ಲಿ ಮತ್ತು ಯೆಹೂದದಲ್ಲಿದ್ದ ಎತ್ತರವಾದ ಸ್ಥಳಗಳನ್ನೂ ಅಶೇರಸ್ತಂಭಗಳನ್ನೂ ಎರಕದ ಮತ್ತು ಕೆತ್ತನೆಯ ವಿಗ್ರಹಗಳನ್ನೂ ನಾಶಮಾಡಿದನು. ಜನರು ಬಾಳ್ ದೇವರ ವಿಗ್ರಹಗಳನ್ನೂ ಯಜ್ಞವೇದಿಕೆಗಳನ್ನೂ ಯೋಷೀಯನ ಮುಂದೆಯೇ ಕೆಡವಿಹಾಕಿದರು. ಆಮೇಲೆ ಯೋಷೀಯನು ಉನ್ನತಸ್ಥಳದಲ್ಲಿದ್ದ ಧೂಪವೇದಿಕೆಯನ್ನು ಕೆಡವಿ ಹಾಕಿ, ವಿಗ್ರಹಗಳನ್ನೆಲ್ಲಾ ಒಡೆದು ಪುಡಿಮಾಡಿ ಬಾಳ್ ದೇವರ ಪೂಜಾರಿಗಳ ಸಮಾಧಿಯ ಮೇಲೆ ಚೆಲ್ಲಿದನು. ಯೋಷೀಯನು ಬಾಳ್ ದೇವರ ವಿಗ್ರಹಗಳನ್ನೂ ಪೂಜಾರಿಯವರ ಎಲುಬುಗಳನ್ನೂ ಅವರ ವೇದಿಕೆಗಳ ಮೇಲೆಯೇ ಸುಟ್ಟುಬಿಟ್ಟನು. ಹೀಗೆ ಅವನು ಯೆಹೂದವನ್ನು ಮತ್ತು ಜೆರುಸಲೇಮನ್ನು ಶುಚಿಗೊಳಿಸಿದನು ಮತ್ತು ಶುದ್ಧೀಕರಿಸಿದನು. ಅದೇ ಪ್ರಕಾರ ಎಫ್ರಾಯೀಮ್, ಮನಸ್ಸೆ, ಸಿಮೆಯೋನ್ ಮತ್ತು ನಫ್ತಾಲಿ ಪ್ರಾಂತ್ಯಗಳ ಉದ್ದಕ್ಕೂ ಮಾಡಿದನು. ಆ ಪಟ್ಟಣಗಳ ಸಮೀಪದಲ್ಲಿದ್ದ ಹಾಳುಬಿದ್ದವುಗಳಿಗೂ ಅವನು ಹಾಗೆಯೇ ಮಾಡಿದನು. ಅಲ್ಲಿಂದ ಮುಂದೆ ಇಸ್ರೇಲ್ ದೇಶದಲ್ಲೂ ಪೂಜಾಸ್ಥಳಗಳನ್ನು ಕೆಡವಿ, ಅಶೇರಸ್ತಂಭಗಳನ್ನು ತುಂಡರಿಸಿ ಎರಕದ ಕೆತ್ತನೆಯ ವಿಗ್ರಹಗಳನ್ನು ಪುಡಿಮಾಡಿ, ಧೂಪವೇದಿಕೆಗಳನ್ನೆಲ್ಲಾ ನಾಶಮಾಡಿ ಜೆರುಸಲೇಮಿಗೆ ಹಿಂತಿರುಗಿದನು.
ತನ್ನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಯೋಷೀಯನು ಶಾಫಾನ್, ಮಾಸೇಯ ಮತ್ತು ಯೋವಾಹ ಇವರನ್ನು ತನ್ನ ದೇವರಾದ ಯೆಹೋವನ ಆಲಯವನ್ನು ಸರಿಪಡಿಸಲು ಕಳುಹಿಸಿದನು. ಶಾಫಾನನ ತಂದೆಯ ಹೆಸರು ಅಚಲ್ಯ. ಮಾಸೇಯನು ನಗರದ ನಾಯಕನಾಗಿದ್ದನು. ಯೋವಾಹನ ತಂದೆಯ ಹೆಸರು ಯೆಹೋವಾಹಾಜ್. ಯೋವಾಹನು ರಾಜಲೇಖಕನೂ ಆಗಿದ್ದನು.
ಯೆಹೂದವನ್ನು ಮತ್ತು ದೇವಾಲಯವನ್ನು ಶುಚಿಮಾಡುವ ಉದ್ದೇಶದಿಂದ ಯೋಷೀಯನು ದೇವಾಲಯದ ದುರಸ್ತಿಕಾರ್ಯಕ್ಕೆ ಕೈ ಹಾಕಿದನು. ಜನರು ದೇವಾಲಯದ ದುರಸ್ತಿಗಾಗಿ ಅರ್ಪಿಸಿದ್ದ ಕಾಣಿಕೆಯನ್ನು ಅವರು ಮಹಾಯಾಜಕನಾದ ಹಿಲ್ಕೀಯನಿಗೆ ತಂದುಕೊಟ್ಟರು. ಮನಸ್ಸೆ, ಎಫ್ರಾಯೀಮ್ ಮತ್ತು ಇಸ್ರೇಲ್ ರಾಜ್ಯದ ಜನರು ಕೊಟ್ಟ ಕಾಣಿಕೆಯನ್ನು ದ್ವಾರಪಾಲಕರಾದ ಲೇವಿಯರು ಒಟ್ಟುಗೂಡಿಸಿದರು. ಯೆಹೂದ, ಬೆನ್ಯಾಮೀನ್ ಕುಲದವರೂ ಜೆರುಸಲೇಮಿನಲ್ಲಿ ವಾಸಿಸುವರೂ ಕೊಟ್ಟ ಕಾಣಿಕೆಗಳನ್ನು ಅವರು ತೆಗೆದುಕೊಂಡರು. 10 ದೇವಾಲಯದ ಕೆಲಸ ಮಾಡಿದವರಿಗೆ ಲೇವಿಯರು ಹಣವನ್ನು ಕೊಟ್ಟರು. 11 ಬಡಗಿಗಳಿಗೂ ಮೇಸ್ತ್ರಿಗಳಿಗೂ ಈ ಹಣದಿಂದ ಸಂಬಳ ಕೊಟ್ಟರು; ಬೇಕಾಗಿದ್ದ ಕಲ್ಲುಗಳನ್ನೂ ಮರದ ತೊಲೆಗಳನ್ನೂ ಇತರ ವಸ್ತುಗಳನ್ನೂ ಕೊಂಡುಕೊಂಡರು. ಹಿಂದಿನ ಕಾಲದಲ್ಲಿ ಯೆಹೂದದ ಅರಸರು ಯೆಹೋವನ ದೇವಾಲಯವನ್ನು ಸರಿಪಡಿಸುವುದರ ಬಗ್ಗೆ ಹೆಚ್ಚು ಗಮನಕೊಟ್ಟಿರಲಿಲ್ಲ. ಆದ್ದರಿಂದ ಕಟ್ಟಡವು ಹಳೆಯದಾಗಿ ಬೀಳುವ ಸ್ಥಿತಿಯಲ್ಲಿತ್ತು. 12-13 ಕೆಲಸಗಾರರು ನಂಬಿಗಸ್ತಿಕೆಯಿಂದ ಕೆಲಸ ಮಾಡಿದರು. ಅವರು ಮೇಲ್ವಿಚಾರಕರು ಯಹತ್ ಮತ್ತು ಓಬದ್ಯ. ಇವರು ಲೇವಿಯರಾಗಿದ್ದರು ಮತ್ತು ಮೆರಾರೀಯ ಸಂತತಿಯವರಾಗಿದ್ದರು. ಇತರ ಮೇಲ್ವಿಚಾರಕರು ಯಾರೆಂದರೆ: ಜೆಕರ್ಯ ಮತ್ತು ಮೆಷುಲ್ಲಾಮ್. ಇವರು ಕೆಹಾತ್ಯನ ಸಂತತಿಯವರಾಗಿದ್ದರು. ವಾದ್ಯಗಳನ್ನು ಬಾರಿಸುವುದರಲ್ಲಿ ನಿಪುಣರಾದ ಲೇವಿಯರೂ ಕೆಲಸದ ಮೇಲ್ವಿಚಾರಣೆ ಮಾಡುತ್ತಿದ್ದರು. ಇತರ ಕೆಲವು ಲೇವಿಯರು, ಆ ಯೋಜನೆಯ ಅಧಿಕಾರಿಗಳಾಗಿಯೂ ಕಾರ್ಯದರ್ಶಿಗಳಾಗಿಯೂ ದ್ವಾರಪಾಲಕರಾಗಿಯೂ ನೇಮಕ ಮಾಡಲ್ಪಟ್ಟವರಾಗಿದ್ದರು.
ಧರ್ಮಶಾಸ್ತ್ರವು ದೊರೆತದ್ದು
14 ದೇವಾಲಯದೊಳಗೆ ಶೇಖರಿಸಿಟ್ಟಿದ್ದ ಹಣವನ್ನು ಲೇವಿಯರು ತಂದುಕೊಟ್ಟರು. ಅದೇ ಸಮಯದಲ್ಲಿ ಮಹಾಯಾಜಕನಾದ ಹಿಲ್ಕೀಯನು ಮೋಶೆಯ ಧರ್ಮಶಾಸ್ತ್ರದ ಪ್ರತಿಯೊಂದನ್ನು ದೇವಾಲಯದಲ್ಲಿ ಕಂಡನು. 15 ಕಾರ್ಯದರ್ಶಿಯಾದ ಶಾಫಾನನಿಗೆ, “ದೇವಾಲಯದಲ್ಲಿ ನನಗೆ ಯೆಹೋವನ ಧರ್ಮಶಾಸ್ತ್ರವು ಸಿಕ್ಕಿತು” ಎಂದು ಹೇಳಿ ಅದನ್ನು ಕೊಟ್ಟನು. 16 ಶಾಫಾನನು ಅದನ್ನು ಅರಸನಾದ ಯೋಷೀಯನಿಗೆ ತಂದು ಅದು ದೊರೆತ ವಿಷಯವನ್ನು ತಿಳಿಸಿದನು. “ನೀನು ಹೇಳಿದ ಪ್ರಕಾರವೇ ನಿನ್ನ ಸೇವಕರು ಮಾಡುತ್ತಿದ್ದಾರೆ. 17 ದೇವಾಲಯದೊಳಗಿದ್ದ ಹಣವನ್ನು ಅವರು ತೆಗೆದು ಅದನ್ನು ಕೆಲಸಗಾರರಿಗೂ ಮೇಲ್ವಿಚಾರಕರಿಗೂ ಕೊಡುತ್ತಿದ್ದಾರೆ. ಯಾಜಕನಾದ ಹಿಲ್ಕೀಯನು ಈ ಪುಸ್ತಕವನ್ನು ನನಗೆ ಕೊಟ್ಟನು” 18 ಎಂದು ಹೇಳಿ ಆ ಪುಸ್ತಕವನ್ನು ಓದತೊಡಗಿದನು. ಅವನು ಅರಸನ ಮುಂದೆ ನಿಂತುಕೊಂಡು ಓದುತ್ತಿರಲು 19 ಅರಸನಾದ ಯೋಷೀಯನು ಧರ್ಮಶಾಸ್ತ್ರದ ಮಾತುಗಳನ್ನು ಕೇಳಿ ತನ್ನ ಬಟ್ಟೆಗಳನ್ನು ಹರಿದುಕೊಂಡನು. 20 ಆಗ ಅರಸನು ಹಿಲ್ಕೀಯ, ಶಾಫಾನನ ಮಗನಾದ ಅಹೀಕಾಮ್, ಮೀಕನ ಮಗನಾದ ಅಬ್ದೋನ್, ಕಾರ್ಯದರ್ಶಿಯಾದ ಶಾಫಾನ್ ಮತ್ತು ಸೇವಕನಾದ ಅಸಾಯ ಇವರಿಗೆ ಹೇಳಿದ್ದೇನೆಂದರೆ, 21 “ಹೋಗಿ ನನ್ನ ವಿಷಯವಾಗಿಯೂ ಇಸ್ರೇಲ್ ಮತ್ತು ಯೆಹೂದದಲ್ಲಿರುವ ಜನರಿಗೋಸ್ಕರವಾಗಿಯೂ ಯೆಹೋವನಲ್ಲಿ ವಿಚಾರಿಸಿರಿ. ಯೆಹೋವನು ನಮ್ಮ ಮೇಲೆ ಕೋಪಗೊಂಡಿದ್ದಾನೆ. ಯಾಕೆಂದರೆ ನಮ್ಮ ಪೂರ್ವಿಕರು ಆತನ ಧರ್ಮಶಾಸ್ತ್ರದ ಪ್ರಕಾರ ನಡೆದುಕೊಂಡಿಲ್ಲ. ಈ ಪುಸ್ತಕದಲ್ಲಿ ಮಾಡಬೇಕೆಂದು ಹೇಳಿದ್ದನ್ನು ಅವರು ಮಾಡದೆ ಹೋಗಿದ್ದಾರೆ” ಎಂದು ಹೇಳಿದನು.
22 ಹಿಲ್ಕೀಯನೂ ಅರಸನ ಸೇವಕರೂ ಪ್ರವಾದಿನಿಯಾಗಿದ್ದ ಹುಲ್ದಳ ಬಳಿಗೆ ಹೋದರು. ಆಕೆ ತೊಕ್ಹತನ ಮಗನಾದ ಶಲ್ಲೂಮನ ಹೆಂಡತಿಯಾಗಿದ್ದಳು. ತೊಕ್ಹತನು ಹಸ್ರನ ಮಗ. ಇವನು ಅರಸನ ಬಟ್ಟೆಬರೆಗಳ ಮುಖ್ಯಸ್ತನಾಗಿದ್ದನು. ಹುಲ್ದಳು ಜೆರುಸಲೇಮಿನ ಹೊಸ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದಳು. ಅರಸನು ಹೇಳಿದ್ದನ್ನೆಲ್ಲಾ ಸೇವಕರು ಆಕೆಗೆ ತಿಳಿಸಿದರು. 23 ಹುಲ್ದಳು ಅವರಿಗೆ, “ಅರಸನಾದ ಯೋಷೀಯನಿಗೆ ಹೋಗಿ ತಿಳಿಸಿರಿ. 24 ಯೆಹೋವನು ಹೇಳುವುದೇನೆಂದರೆ, ‘ನಾನು ಈ ಸ್ಥಳಕ್ಕೂ ಇಲ್ಲಿ ವಾಸಿಸುವವರಿಗೂ ಸಂಕಟವನ್ನು ಬರಮಾಡುವೆನು. ಯೆಹೂದದೇಶದ ಅರಸನ ಮುಂದೆ ಓದಿದಂಥ ಪುಸ್ತಕದಲ್ಲಿ ಬರೆಯಿಸಿದ ಎಲ್ಲಾ ಶಾಪಗಳನ್ನು ನಾನು ಬರಮಾಡುವೆನು. 25 ಯಾಕೆಂದರೆ ಜನರು ನನ್ನನ್ನು ತೊರೆದು ಸುಳ್ಳುದೇವರುಗಳಿಗೆ ಧೂಪಹಾಕಿದರು. ಅವರು ತಮ್ಮ ಕೆಟ್ಟಕಾರ್ಯಗಳಿಂದ ನನ್ನನ್ನು ರೇಗಿಸಿದ್ದಾರೆ. ಆದ್ದರಿಂದ ನನ್ನ ಕೋಪಾಗ್ನಿಯನ್ನು ಈ ಸ್ಥಳದ ಮೇಲೆ ಸುರಿಸುವೆನು. ಉರಿಯುವ ಬೆಂಕಿಯಂತಿರುವ ನನ್ನ ಕೋಪಾಗ್ನಿಯನ್ನು ಆರಿಸಲು ಸಾಧ್ಯವಿಲ್ಲ.’
26 “ಆದರೆ ಯೆಹೋವನನ್ನು ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಾದ ಯೋಷೀಯನಿಗೆ ಹೀಗೆ ಹೇಳಿರಿ: ‘ನೀನು ಸ್ವಲ್ಪಕಾಲದ ಹಿಂದೆ ಕೇಳಿದ ವಿಷಯಗಳ ಬಗ್ಗೆ ಇಸ್ರೇಲಿನ ಯೆಹೋವನು ಹೇಳುವುದೇನೆಂದರೆ, 27 ಯೋಷೀಯನೇ, ನೀನು ನನ್ನ ಮಾತುಗಳನ್ನು ಕೇಳಿದಾಗ ನನ್ನ ಮುಂದೆ ತಗ್ಗಿಸಿಕೊಂಡು ಪಶ್ಚಾತ್ತಾಪಪಟ್ಟು ನಿನ್ನ ಬಟ್ಟೆಗಳನ್ನು ಹರಿದುಕೊಂಡೆ. ನನ್ನ ಮುಂದೆ ನೀನು ಗೋಳಾಡಿದೆ. ನಿನ್ನ ಹೃದಯವು ಮೃದುವಾದದ್ದರಿಂದ, ನಿನ್ನನ್ನು ಲಕ್ಷಿಸಿದೆನು. 28 ನಿನ್ನನ್ನು ನಿನ್ನ ಪೂರ್ವಿಕರ ಬಳಿಗೆ ತೆಗೆದುಕೊಳ್ಳುತ್ತೇನೆ. ನಿನ್ನ ಪ್ರಾರ್ಥನೆಯನ್ನು ನಾನು ಕೇಳಿದೆ. ನೀನು ನಿನ್ನ ಸಮಾಧಿಗೆ ಸಮಾಧಾನದಿಂದ ಸೇರುವೆ. ನಾನು ಈ ಸ್ಥಳದ ಮೇಲೂ ಈ ಸ್ಥಳದಲ್ಲಿ ವಾಸಿಸುವವರ ಮೇಲೂ ತರುವ ಸಂಕಟಗಳಲ್ಲಿ ನೀನು ಒಂದಾನ್ನಾದರೂ ಅನುಭವಿಸುವದಿಲ್ಲ.’ ” ಹಿಲ್ಕೀಯನೂ ಅರಸನ ಸೇವಕರೂ ಈ ಸಂದೇಶವನ್ನು ಅರಸನಾದ ಯೋಷೀಯನಿಗೆ ತಂದರು.
29 ಅರಸನಾದ ಯೋಷೀಯನು ಯೆಹೂದದ ಮತ್ತು ಜೆರುಸಲೇಮಿನ ಪ್ರಧಾನರನ್ನು ತನ್ನ ಬಳಿಗೆ ಕರೆಯಿಸಿದನು. 30 ಅರಸನೂ ಯೆಹೂದದಲ್ಲಿ ವಾಸಿಸುವ ಜನರೂ ಜೆರುಸಲೇಮಿನಲ್ಲಿ ವಾಸಿಸುವ ಜನರೂ ಯಾಜಕರೂ ಲೇವಿಯರೂ ದೊಡ್ಡವರು ಸಣ್ಣವರು ಎಂಬ ವ್ಯತ್ಯಾಸವಿಲ್ಲದೆ ತಮ್ಮ ಅರಸನೊಂದಿಗೆ ಇದ್ದರು. ಯೋಷೀಯನು ಧರ್ಮಶಾಸ್ತ್ರವನ್ನು ಜನರಿಗೆ ಓದಿ ತಿಳಿಸಿದನು. ಆ ಪುಸ್ತಕವು ದೇವಾಲಯದಲ್ಲಿ ಸಿಕ್ಕಿತ್ತು. 31 ಆಮೇಲೆ ಅರಸನು ತನ್ನ ಸ್ಥಳದಲ್ಲಿ ಎದ್ದುನಿಂತು, ಯೆಹೋವನ ಎಲ್ಲಾ ಕಟ್ಟಳೆಗಳಿಗೆ ವಿಧೇಯನಾಗಿ ಆತನನ್ನು ಪೂರ್ಣಹೃದಯದಿಂದಲೂ ಪೂರ್ಣಮನಸ್ಸಿನಿಂದಲೂ ಅನುಸರಿಸುವುದಾಗಿ ಪ್ರಮಾಣಮಾಡಿದನು. 32 ಆಮೇಲೆ ಎಲ್ಲಾ ಜೆರುಸಲೇಮಿನವರಿಂದಲೂ ಮತ್ತು ಬೆನ್ಯಾಮೀನ್ಯರಿಂದಲೂ ಪ್ರಮಾಣ ಮಾಡಿಸಿದನು. ತಮ್ಮ ಪೂರ್ವಿಕರು ವಿಧೇಯರಾಗಿದ್ದ ದೇವರಿಗೆ ತಾವೂ ವಿಧೇಯರಾಗಿರುವುದಾಗಿ ಅವರು ಪ್ರಮಾಣ ಮಾಡಿದರು. 33 ಇಸ್ರೇಲ್ ಜನರ ಬಳಿ ನಾನಾ ಜನಾಂಗದವರ ವಿಗ್ರಹಗಳಿದ್ದವು. ಆದರೆ ಯೋಷೀಯನು ಆ ವಿಗ್ರಹಗಳನ್ನೆಲ್ಲಾ ನಾಶಮಾಡಿದನು. ಇಸ್ರೇಲರು ದೇವರಾದ ಯೆಹೋವನ ಸೇವೆಮಾಡುವಂತೆ ಯೋಷೀಯನು ಮಾಡಿದನು. ಯೋಷೀಯನು ಬದುಕಿದ್ದಷ್ಟು ಕಾಲ ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಸೇವೆಮಾಡಿದರು.