5
ಪ್ರಭುವು ಪ್ರತ್ಯಕ್ಷನಾಗುವಾಗ ಸಿದ್ಧರಾಗಿರಿ
1 ಸಹೋದರ ಸಹೋದರಿಯರೇ, ಈಗ ನಾವು ಕಾಲ ಮತ್ತು ದಿನಗಳ ಬಗ್ಗೆ ನಿಮಗೆ ಬರೆಯುವ ಅವಶ್ಯವಿಲ್ಲ. 2 ಪ್ರಭುವು ಪ್ರತ್ಯಕ್ಷನಾಗುವ ದಿನವು ರಾತ್ರಿಕಾಲದಲ್ಲಿ ಕಳ್ಳನು ಬರುವಂತೆ ಇದ್ದಕ್ಕಿದ್ದಂತೆ ಬರುತ್ತದೆ ಎಂಬುದು ನಿಮಗೆಲ್ಲ ಚೆನ್ನಾಗಿ ತಿಳಿದಿದೆ. 3 “ನಮಗೆ ಶಾಂತಿಯಿದೆ. ನಾವು ಸುರಕ್ಷಿತರಾಗಿದ್ದೇವೆ” ಎಂದು ಜನರು ಹೇಳುವಾಗಲೇ ಅವರಿಗೆ ವಿನಾಶವು ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ ಬರುತ್ತದೆ. ಆ ಜನರು ತಪ್ಪಿಸಿಕೊಳ್ಳಲಾಗುವುದಿಲ್ಲ.
4 ಆದರೆ ಸಹೋದರ ಸಹೋದರಿಯರೇ, ನೀವು ಕತ್ತಲಿನಲ್ಲಿ (ಪಾಪದಲ್ಲಿ) ವಾಸಿಸುತ್ತಿಲ್ಲ. ಆ ದಿನವು ನಿಮಗೆ ಕಳ್ಳನಂತೆ ಇದ್ದಕ್ಕಿದ್ದಂತೆ ಬರುವುದಿಲ್ಲ. 5 ನೀವೆಲ್ಲರೂ ಬೆಳಕಿಗೆ ಸೇರಿದವರು ಮತ್ತು ಹಗಲಿಗೆ ಸೇರಿದವರು. ನಾವು ರಾತ್ರಿಗಾಗಲಿ ಅಥವಾ ಕತ್ತಲೆಗಾಗಲಿ ಸೇರಿದವರಲ್ಲ. 6 ಆದುದರಿಂದ ನಾವು ಇತರ ಜನರಂತಿರಬಾರದು. ನಾವು ನಿದ್ರೆ ಮಾಡುವುದೇ ಬೇಡ. ನಾವು ಎಚ್ಚರದಿಂದ ಇದ್ದು, ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. 7 ನಿದ್ದೆ ಮಾಡುವ ಜನರು ರಾತ್ರಿಯಲ್ಲಿ ನಿದ್ರಿಸುತ್ತಾರೆ. ಕುಡಿದು ಅಮಲೇರುವವರು ರಾತ್ರಿಯಲ್ಲಿ ಕುಡಿದು ಅಮಲೇರುತ್ತಾರೆ. 8 ಆದರೆ ನಾವು ಹಗಲಿಗೆ ಸೇರಿದವರಾದ್ದರಿಂದ ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ನಾವು ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಪ್ರೀತಿಯನ್ನೂ ನಂಬಿಕೆಯನ್ನೂ ಧರಿಸಿಕೊಳ್ಳಬೇಕು. ರಕ್ಷಣೆಯ ನಿರೀಕ್ಷೆಯು ನಮಗೆ ಶಿರಸ್ತ್ರಾಣವಾಗಿರಬೇಕು.
9 ದೇವರು ನಮ್ಮನ್ನು ಆರಿಸಿಕೊಂಡದ್ದು ತನ್ನ ಕೋಪಕ್ಕೆ ಗುರಿಯಾಗಲಿ ಎಂದಲ್ಲ. ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ರಕ್ಷಣೆಯಾಗಲೆಂದೇ ದೇವರು ನಮ್ಮನ್ನು ಆರಿಸಿಕೊಂಡನು. 10 ನಾವು ತನ್ನೊಂದಿಗೆ ಜೀವಿಸಲೆಂದು ಯೇಸು ನಮಗಾಗಿ ಸತ್ತನು. ಯೇಸು ಪ್ರತ್ಯಕ್ಷನಾದಾಗ, ನಾವು ಜೀವಿಸುತ್ತಿರುತ್ತೇವೋ ಇಲ್ಲವೆ ಸತ್ತಿರುತ್ತೇವೋ ಎಂಬುದು ಮುಖ್ಯವಲ್ಲ. 11 ಆದ್ದರಿಂದ ಒಬ್ಬರನ್ನೊಬ್ಬರು ಸಂತೈಸಿ ಬಲಪಡಿಸಿರಿ. ಈಗ ನೀವು ಮಾಡುತ್ತಿರುವುದು ಅದನ್ನೇ.
ಕೊನೆಯ ಮಾತುಗಳು ಮತ್ತು ವಂದನೆಗಳು
12 ಸಹೋದರ ಸಹೋದರಿಯರೇ, ಈಗ ನಿಮ್ಮಲ್ಲಿ ಪ್ರಯಾಸದಿಂದ ಕೆಲಸ ಮಾಡುತ್ತಾ ನಿಮ್ಮನ್ನು ಪ್ರಭುವಿನ ಮಾರ್ಗದಲ್ಲಿ ನಡೆಸುವವರನ್ನು ಮತ್ತು ಉಪದೇಶಿಸುವವರನ್ನು ಗೌರವಿಸಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇವೆ. 13 ಅವರು ನಿಮ್ಮಲ್ಲಿ ಮಾಡುವ ಸೇವೆಗಾಗಿ ಅವರನ್ನು ವಿಶೇಷವಾದ ಪ್ರೀತಿಯಿಂದ ಗೌರವಿಸಿರಿ.
ನೀವೆಲ್ಲರೂ ಸಮಾಧಾನದಿಂದ ಜೀವಿಸಿರಿ. 14 ಸಹೋದರ ಸಹೋದರಿಯರೇ, ಕೆಲಸ ಮಾಡದೆ ಇರುವ ಜನರಿಗೆ ಎಚ್ಚರಿಕೆ ನೀಡಬೇಕೆಂದು ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ. ಹೆದರಿಕೊಂಡಿರುವವರನ್ನು ಪ್ರೋತ್ಸಾಹಿಸಿರಿ; ಬಲಹೀನರಿಗೆ ಸಹಾಯ ಮಾಡಿ; ಎಲ್ಲರ ಜೊತೆಯಲ್ಲಿ ತಾಳ್ಮೆಯಿಂದಿರಿ; 15 ಯಾರೂ ಅಪಕಾರಕ್ಕೆ ಅಪಕಾರ ಮಾಡದಂತೆ ನೋಡಿಕೊಳ್ಳಿರಿ; ಒಬ್ಬರಿಗೊಬ್ಬರಿಗೆ ಮತ್ತು ಎಲ್ಲರಿಗೆ ಯಾವಾಗಲೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿರಿ.
16 ಯಾವಾಗಲೂ ಸಂತೋಷದಿಂದಿರಿ. 17 ಎಡೆಬಿಡದೆ ಪ್ರಾರ್ಥಿಸಿರಿ. 18 ದೇವರಿಗೆ ಎಲ್ಲಾ ಕಾಲದಲ್ಲಿಯೂ ಕೃತಜ್ಞತೆಗಳನ್ನು ಸಲ್ಲಿಸಿರಿ. ಇದುವೇ ನಿಮ್ಮ ವಿಷಯವಾಗಿ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಚಿತ್ತ.
19 ಪವಿತ್ರಾತ್ಮನ ಕಾರ್ಯವನ್ನು ನಂದಿಸಬೇಡಿ. 20 ಪ್ರವಾದನೆಯನ್ನು ಹೀನೈಸಬೇಡಿ. 21 ಎಲ್ಲವನ್ನೂ ಪರಿಶೋಧಿಸಿ, ಒಳ್ಳೆಯದನ್ನು ಭದ್ರವಾಗಿ ಹಿಡಿದುಕೊಳ್ಳಿರಿ. 22 ಎಲ್ಲಾ ವಿಧವಾದ ಕೆಟ್ಟತನದಿಂದ ದೂರವಾಗಿರಿ.
23 ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಸಂಪೂರ್ಣವಾಗಿ ಪರಿಶುದ್ಧಗೊಳಿಸಲೆಂದು ಪ್ರಾರ್ಥಿಸುತ್ತೇವೆ. ಪ್ರಭುವಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಿಮ್ಮ ಆತ್ಮ, ಶರೀರ, ಪ್ರಾಣಗಳು ದೋಷರಹಿತವಾಗಿರಲೆಂದು ಪ್ರಾರ್ಥಿಸುತ್ತೇವೆ. 24 ನಿಮ್ಮನ್ನು ಕರೆಯುವಾತನೇ ಅದನ್ನು ನಿಮಗಾಗಿ ಮಾಡುತ್ತಾನೆ. ಆತನು ನಂಬಿಗಸ್ತನು.
25 ಸಹೋದರ ಸಹೋದರಿಯರೇ, ದಯಮಾಡಿ ನಮಗಾಗಿ ಪ್ರಾರ್ಥಿಸಿರಿ. 26 ಸಹೋದರ ಸಹೋದರಿಯರನ್ನು ಸಂಧಿಸಿದಾಗ ಪವಿತ್ರವಾದ ಮುದ್ದಿಟ್ಟು ವಂದಿಸಿರಿ. 27 ಈ ಪತ್ರವನ್ನು ಸಹೋದರ ಸಹೋದರಿಯರಿಗೆಲ್ಲಾ ಓದಿ ತಿಳಿಸಬೇಕೆಂದು ನಾನು ನಿಮಗೆ ಪ್ರಭುವಿನ ಅಧಿಕಾರದಿಂದ ಹೇಳುತ್ತಿದ್ದೇನೆ. 28 ಪ್ರಭು ಯೇಸು ಕ್ರಿಸ್ತನ ಕೃಪೆಯು ನಿಮ್ಮೊಡನೆ ಇರಲಿ.