8
ವಿಗ್ರಹಗಳಿಗೆ ಅರ್ಪಿತವಾದ ಆಹಾರದ ಬಗ್ಗೆ ಚರ್ಚೆ
ವಿಗ್ರಹಗಳಿಗೆ ಯಜ್ಞ ಮಾಡಿದ ಪಶುವಿನ ಮಾಂಸದ ಬಗ್ಗೆ ಈಗ ನಾನು ಬರೆಯುತ್ತೇನೆ. “ನಮಗೆಲ್ಲರಿಗೂ ಜ್ಞಾನವಿದೆ” ಎಂಬುದು ನಮಗೆ ಗೊತ್ತಿದೆ. “ಜ್ಞಾನವು” ನಮ್ಮನ್ನು ಅಹಂಕಾರದಿಂದ ತುಂಬಿಸುತ್ತದೆ. ಆದರೆ ಪ್ರೀತಿಯು ಬೇರೆಯವರಲ್ಲಿ ಭಕ್ತಿವೃದ್ಧಿಯನ್ನು ಮಾಡುತ್ತದೆ. ಇಂಥಿಂಥದ್ದನ್ನು ತಿಳಿದುಕೊಂಡಿದ್ದೇನೆಂದು ಭಾವಿಸುವವನು ತಾನು ತಿಳಿದುಕೊಳ್ಳಬೇಕಾದ ರೀತಿಯಲ್ಲಿ ಇನ್ನೂ ತಿಳಿದುಕೊಂಡಿಲ್ಲ. ಯಾವನು ದೇವರನ್ನು ಪ್ರೀತಿಸುತ್ತಾನೋ ಅವನನ್ನು ದೇವರು ತಿಳಿದುಕೊಂಡಿದ್ದಾನೆ.
ಹೀಗಿರಲಾಗಿ, ವಿಗ್ರಹಗಳಿಗೆ ಅರ್ಪಿಸಿದ ಮಾಂಸವನ್ನು ತಿನ್ನುವುದರ ಬಗ್ಗೆ ನಾನು ಹೇಳುವುದೇನೆಂದರೆ: ಜಗತ್ತಿನಲ್ಲಿ ವಿಗ್ರಹವು ಕ್ಷುಲ್ಲಕವಾದದ್ದೆಂದು ನಮಗೆ ಗೊತ್ತಿದೆ. ಒಬ್ಬನೇ ಒಬ್ಬ ದೇವರಿದ್ದಾನೆ ಎಂಬುದು ನಮಗೆ ಗೊತ್ತಿದೆ. ಆಕಾಶದಲ್ಲಾಗಲಿ ಭೂಮಿಯ ಮೇಲಾಗಲಿ ದೇವರುಗಳೆಂದು ಕರೆಯಲ್ಪಡುವ ವಸ್ತುಗಳಿದ್ದರೆ ಅವು ನಿಜವಾಗಿಯೂ ನಮಗೆ ಮುಖ್ಯವಲ್ಲ. (ಅನೇಕ ವಸ್ತುಗಳನ್ನು ಜನರು “ದೇವರು”ಗಳೆಂತಲೂ “ಪ್ರಭು”ಗಳೆಂತಲೂ ಕರೆಯುತ್ತಾರೆ.) ನಮಗಾದರೋ ಒಬ್ಬನೇ ಒಬ್ಬ ದೇವರಿದ್ದಾನೆ. ಆತನು ನಮ್ಮ ತಂದೆ. ಸಮಸ್ತವನ್ನು ಆತನೇ ಸೃಷ್ಟಿ ಮಾಡಿದನು. ನಾವು ಆತನಿಗೋಸ್ಕರ ಜೀವಿಸುತ್ತೇವೆ. ಒಬ್ಬನೇ ಒಬ್ಬ ಪ್ರಭುವಿದ್ದಾನೆ. ಆತನೇ ಯೇಸು ಕ್ರಿಸ್ತನು. ಆತನ ಮೂಲಕವಾಗಿ ಸಮಸ್ತವು ಉಂಟಾಯಿತು. ಆತನ ಮೂಲಕವಾಗಿ ನಾವು ಜೀವವನ್ನು ಹೊಂದಿದ್ದೇವೆ.
ಆದರೆ ಎಲ್ಲಾ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಕೆಲವು ಜನರು ಇಂದಿನವರೆಗೂ ವಿಗ್ರಹಗಳನ್ನು ಆರಾಧಿಸುವ ರೂಢಿಯಲ್ಲಿದ್ದಾರೆ. ಹೀಗಿರಲಾಗಿ, ಆ ಜನರು ಮಾಂಸವನ್ನು ತಿನ್ನುವಾಗ ಅದು ವಿಗ್ರಹಕ್ಕೆ ಅರ್ಪಿತವಾದದ್ದೆಂದು ಆಲೋಚಿಸುತ್ತಾರೆ. ಆದರೆ ಈ ಮಾಂಸವನ್ನು ತಿನ್ನುವುದು ತಪ್ಪಲ್ಲ ಎಂಬ ದೃಢನಂಬಿಕೆ ಅವರಲ್ಲಿಲ್ಲ. ಆದ್ದರಿಂದ, ಅವರು ಮಾಂಸವನ್ನು ತಿನ್ನುವಾಗ ತಮ್ಮನ್ನು ದೋಷಿಗಳೆಂದು ಭಾವಿಸಿಕೊಳ್ಳುತ್ತಾರೆ. ಆದರೆ ಆಹಾರವು ನಮ್ಮನ್ನು ದೇವರ ಸಮೀಪಕ್ಕೆ ತರಲಾರದು. ನಾವು ಮಾಂಸವನ್ನು ತಿನ್ನದಿದ್ದರೆ, ನಮ್ಮ ಮೇಲೆ ದೇವರಿಗಿರುವ ಮೆಚ್ಚುಗೆಯು ಕಡಿಮೆಯೇನೂ ಆಗುವುದಿಲ್ಲ. ಅದೇ ರೀತಿ, ಮಾಂಸವನ್ನು ತಿಂದರೆ, ನಮ್ಮ ಮೇಲೆ ದೇವರಿಗಿರುವ ಮೆಚ್ಚುಗೆಯು ಹೆಚ್ಚೇನೂ ಆಗುವುದಿಲ್ಲ.
ಆದರೆ ನಿಮ್ಮ ಸ್ವತಂತ್ರದ ಬಗ್ಗೆ ಎಚ್ಚರಿಕೆಯಿಂದಿರಿ. ನಂಬಿಕೆಯಲ್ಲಿ ಬಲಹೀನರಾಗಿರುವ ಜನರನ್ನು ನಿಮ್ಮ ಸ್ವಾತಂತ್ರ್ಯವು ಪಾಪಕ್ಕೆ ಬೀಳಿಸುವ ಸಾಧ್ಯತೆಯಿದೆ. 10 ನಿಮಗೆ ತಿಳುವಳಿಕೆ ಇರುವುದರಿಂದ ನೀವು ವಿಗ್ರಹದ ಗುಡಿಯೊಂದರಲ್ಲಿ ಸಂಕೋಚವಿಲ್ಲದೆ ಊಟ ಮಾಡಬಹುದು. ನೀವು ಅಲ್ಲಿ ಊಟ ಮಾಡುವುದನ್ನು ನಂಬಿಕೆಯಲ್ಲಿ ಬಲಹೀನನಾದ ವ್ಯಕ್ತಿಯೊಬ್ಬನು ನೋಡಿ, ವಿಗ್ರಹಗಳಿಗೆ ಅರ್ಪಿತವಾದ ಮಾಂಸವನ್ನು ತಿನ್ನಲು ಪ್ರೋತ್ಸಾಹಗೊಳ್ಳಬಹುದು. ಆದರೆ ಅದನ್ನು ತಿನ್ನಕೊಡದೆಂಬ ಭಾವನೆ ಅವನಲ್ಲಿ ಆಳವಾಗಿ ಬೇರೂರಿದೆ. 11 ಹೀಗಿರಲಾಗಿ, ಈ ಬಲಹೀನ ಸಹೋದರನು ನಿಮ್ಮ ತಿಳುವಳಿಕೆಯ ದೆಸೆಯಿಂದ ಹಾಳಾದನು. ಕ್ರಿಸ್ತನು ಈ ಸಹೋದರನಿಗೋಸ್ಕರವಾಗಿ ತನ್ನ ಪ್ರಾಣವನ್ನೇ ಕೊಟ್ಟಿದ್ದಾನೆ. 12 ಹೀಗೆ ನಿಮ್ಮ ಸಹೋದರ ಸಹೋದರಿಯರಿಗೆ ವಿರೋಧವಾಗಿ ಪಾಪ ಮಾಡುವಾಗ ಮತ್ತು ಅವರು ತಪ್ಪೆಂದು ಭಾವಿಸುವ ಕಾರ್ಯಗಳನ್ನು ಮಾಡುವಂತೆ ಅವರನ್ನು ಪ್ರೋತ್ಸಾಹಿಸಿ ಅವರಿಗೆ ಕೇಡನ್ನು ಉಂಟುಮಾಡುವಾಗ ನೀವು ಕ್ರಿಸ್ತನಿಗೆ ವಿರೋಧವಾಗಿಯೂ ಪಾಪ ಮಾಡುವವರಾಗಿದ್ದೀರಿ. 13 ಹೀಗಿರಲಾಗಿ, ನಾನು ತಿನ್ನುವ ಆಹಾರವು ನನ್ನ ಸಹೋದರನನ್ನು ಪಾಪಕ್ಕೆ ಬೀಳಿಸುವುದಾಗಿದ್ದರೆ, ನಾನು ಎಂದಿಗೂ ಮಾಂಸವನ್ನು ತಿನ್ನುವುದಿಲ್ಲ. ನನ್ನ ಸಹೋದರನ ಪಾಪಕ್ಕೆ ನಾನು ಕಾರಣನಾಗಬಾರದೆಂದು ನಾನು ಮಾಂಸ ತಿನ್ನುವುದನ್ನು ನಿಲ್ಲಿಸುತ್ತೇನೆ.