ಪರಮಗೀತೆ
ಗ್ರಂಥಕರ್ತೃತ್ವ
ಪರಮಗೀತೆಯು (ಸೊಲೊಮೋನನ ಗೀತೆ) ಪುಸ್ತಕದ ಮೊದಲ ವಚನದಿಂದ ಅದರ ಶೀರ್ಷಿಕೆಯನ್ನು ಪಡೆದುಕೊಂಡಿದ್ದೆ, ಗೀತೆಯು ಯಾರಿಂದ ಬಂತೆಂದು ಇದು ಉಲ್ಲೇಖಿಸುತ್ತದೆ: “ಸೊಲೊಮೋನನು ರಚಿಸಿದ ಪರಮಗೀತೆ” (1:1). ಪುಸ್ತಕದ ಉದ್ದಕ್ಕೂ ಅವನ ಹೆಸರನ್ನು ಉಲ್ಲೇಖಿಸಿರುವ ಕಾರಣ ಅರಸನಾದ ಸೊಲೊಮೋನನ ಹೆಸರನ್ನು ಅಂತಿಮವಾಗಿ ಪುಸ್ತಕದ ಶೀರ್ಷಿಕೆಯಾಗಿ ತೆಗೆದುಕೊಳ್ಳಲಾಗಿದೆ (1:5; 3:7,9,11; 8:11-12).
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 971-965 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಸೊಲೊಮೋನನು ಇಸ್ರಾಯೇಲಿನ ಅರಸನಾಗಿ ಆಳುತ್ತಿದ್ದ ಸಮಯದಲ್ಲಿ ಈ ಪುಸ್ತಕವನ್ನು ಬರೆದನು, ಸೊಲೊಮೋನನ ಗ್ರಂಥಕರ್ತೃತ್ವವನ್ನು ಎತ್ತಿಹಿಡಿಯುವಂಥ ಪಂಡಿತರು ಈ ಗೀತೆಯು ಅವನ ಆಳ್ವಿಕೆಯ ಆರಂಭಕಾಲದಲ್ಲಿ ಬರೆಯಲ್ಪಟ್ಟದು ಎಂದು ಒಪ್ಪಿಕೊಳ್ಳುತ್ತಾರೆ, ಅದು ಕೇವಲ ಕವಿತೆಯ ಯೌವನದ ಹುಮ್ಮಸ್ಸಿನ ಕಾರಣದಿಂದ ಮಾತ್ರವಲ್ಲ, ಆದರೆ ಲೆಬನೋನ್ ಮತ್ತು ಐಗುಪ್ತ ಸೇರಿದಂತೆ ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳೆರಡನ್ನೂ ಗ್ರಂಥಕರ್ತನು ಉಲ್ಲೇಖಿಸಿದ್ದರಿಂದಲೂ ಈ ಸ್ಥಳದಲ್ಲಿ ಬರೆಯಲ್ಪಟ್ಟಿದೆಯೆಂದು ಹೇಳಲಾಗಿರುತ್ತದೆ.
ಸ್ವೀಕೃತದಾರರು
ವಿವಾಹಿತ ಜೋಡಿಗಳು ಮತ್ತು ಮದುವೆಯ ಬಗ್ಗೆ ಚಿಂತನೆ ಮಾಡುತ್ತಿರುವ ಒಬ್ಬೊಂಟಿಗರು.
ಉದ್ದೇಶ
ಪರಮಗೀತೆಯು ಪ್ರೀತಿಯ ಸದ್ಗುಣಗಳನ್ನು ಶ್ಲಾಘಿಸಲು ಬರೆಯಲ್ಪಟ್ಟ ಸಾಹಿತ್ಯಿಕ ಕವಿತೆಯಾಗಿದೆ ಮತ್ತು ಇದು ದೇವರ ಯೋಜನೆಯಂತೆ ಮದುವೆಯನ್ನು ಸ್ಪಷ್ಟವಾಗಿ ಸಾದರಪಡಿಸುತ್ತದೆ. ಗಂಡು ಮತ್ತು ಹೆಣ್ಣು ಮದುವೆಯ ಬಾಂಧವ್ಯದಲ್ಲಿ ಒಟ್ಟಾಗಿ ಬದುಕಬೇಕು, ಒಬ್ಬರನ್ನೊಬ್ಬರು ಆಧ್ಯಾತ್ಮಿಕವಾಗಿ, ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಪ್ರೀತಿಸಬೇಕು.
ಮುಖ್ಯಾಂಶ
ಪ್ರೀತಿ ಮತ್ತು ಮದುವೆ
ಪರಿವಿಡಿ
1. ವಧುವು ಸೊಲೊಮೋನನ ಬಗ್ಗೆ ಯೋಚಿಸುತ್ತಾಳೆ — 1:1-3:5
2. ವಿವಾಹ ವಾಗ್ದಾನವನ್ನು ವಧುವು ಅಂಗೀಕರಿಸಿದ್ದು ಮತ್ತು ಮದುವೆಗಾಗಿ ಎದುರುನೋಡುತ್ತಿರುವುದು — 3:6-5:1
3. ವಧುವು ವರನನ್ನು ಕಳೆದುಕೊಳ್ಳುವ ಕನಸು ಕಂಡಿದ್ದು — 5:2-6:3
4. ವಧುವರರು ಒಬ್ಬರನ್ನೊಬ್ಬರು ಹೊಗಳುವುದು — 6:4-8:14
1
ಮೊದಲನೆಯ ಗೀತೆ
1 ಸೊಲೊಮೋನನು ರಚಿಸಿದ ಪರಮಗೀತೆ.
ನಲ್ಲೆ
2 ನಿನ್ನ ಬಾಯ ಮುದ್ದುಗಳಿಂದ ನನಗೆ ಮುದ್ದಿಡು
ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮ.
3 ನಿನ್ನ ತೈಲವು ಸುಗಂಧ;
ನಿನ್ನ ಹೆಸರು ಸುರಿದ ತೈಲದ ಸುಗಂಧದಂತೆ ವ್ಯಾಪಿಸಿರುವುದರಿಂದ,
ತರುಣಿಯರು ನಿನ್ನನ್ನು ಪ್ರೀತಿಸುವರು.
ಸ್ತ್ರೀಯರು - ನಲ್ಲೆ
4 ನನ್ನನ್ನು ನಿನ್ನಡೆಗೆ ಸೆಳೆದುಕೋ; ನಿನ್ನ ಹಿಂದೆ ಓಡಿ ಬರುವೆನು;
ರಾಜನು ನನ್ನನ್ನು ಅಂತಃಪುರಕ್ಕೆ ಬರಮಾಡಿದ್ದಾನೆ;
ನಿನ್ನಲ್ಲಿ ಹರ್ಷಿಸಿ ಉಲ್ಲಾಸಿಸುವೆವು,
ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮವಾದುದು;
ಸ್ತ್ರೀಯರು ನಿನ್ನನ್ನು ಯಥಾರ್ಥವಾಗಿ ಪ್ರೀತಿಸುವರು.
5 ಯೆರೂಸಲೇಮಿನ ಮಹಿಳೆಯರೇ, ನಾನು ಕೇದಾರಿನ ಗುಡಾರಗಳಂತೆ ಕಪ್ಪಾಗಿದ್ದರೂ,* 1:5 ಕೇದಾರಿನ ಗುಡಾರಗಳಂತೆ ಕಪ್ಪಾಗಿದ್ದರೂ, ಕೇದಾರ್ ಅರೇಬಿಯಾಕ್ಕೆ ಸಂಬಂಧಿಸಿರುವ ಇಷ್ಮಾಯೇಲ್ಯರ ಕುಲದವರು (ಆದಿ 25:13; ಯೆಶಾ 21:16-17; ಕೀರ್ತ 120:5). ಈ ಕುಲದವರು ಸಾಮಾನ್ಯವಾಗಿ ಕಪ್ಪು ಗುಡಾರಗಳಲ್ಲಿ ವಾಸಿಸುತ್ತಿದ್ದರು. ಆದ್ದರಿಂದ ಕೇದಾರ್ ಯುವತಿಯ ಕಪ್ಪು ಚರ್ಮವನ್ನು ಸೂಚಿಸುತ್ತದೆ.
ಸೊಲೊಮೋನನ ಪರದೆಗಳಂತೆ ಚೆಲುವಾಗಿದ್ದೇನೆ.
6 ನಾನು ಕಪ್ಪಾಗಿದ್ದೇನೆ ಎಂದು ನನ್ನನ್ನು ದಿಟ್ಟಿಸಿ ನೋಡಬೇಡಿರಿ.
ನಾನು ಕಪ್ಪಾಗಿರುವುದು ಸೂರ್ಯನ ತಾಪದಿಂದ.
ನನ್ನ ಸಹೋದರರು ನನ್ನ ಮೇಲೆ ಕೋಪಗೊಂಡು
ದ್ರಾಕ್ಷಿತೋಟಗಳನ್ನು† 1:6 ದ್ರಾಕ್ಷಿತೋಟಗಳನ್ನು ದ್ರಾಕ್ಷಿತೋಟವು “ಯುವತಿಯನ್ನು ಸೂಚಿಸಬಹುದು, ಬಹುಶಃ ಆಳವಾದ ಲೈಂಗಿಕತೆಯ ಅರ್ಥವನ್ನು ಸಹ ಒಳಗೊಂಡಿರಬಹುದು. ಕಾಯುವುದಕ್ಕೆ ಇಟ್ಟರು;
ಆದುದರಿಂದ ನನ್ನ ಸ್ವಂತ ದ್ರಾಕ್ಷಿ ತೋಟವನ್ನೂ ನಾನು ಕಾಯ್ದುಕೊಳ್ಳಲಾಗಲಿಲ್ಲ.
7 ನನ್ನ ಪ್ರಾಣಪ್ರಿಯನೇ,
ನಿನ್ನ ಮಂದೆಯನ್ನು ಎಲ್ಲಿ ಮೇಯಿಸುವೆ?
ನಡುಹಗಲಲ್ಲಿ ನಿನ್ನ ಮಂದೆಯು ಎಲ್ಲಿ ವಿಶ್ರಮಿಸುತ್ತಾರೆ? ಹೇಳು.
ನಾನೇಕೆ ಅಲೆಮಾರಿಗಳಂತೆ‡ 1:7 ಅಲೆಮಾರಿಗಳಂತೆ ಮುಸುಕು ಹಾಕಿದವಳಂತೆ
ನಿನ್ನ ಗೆಳೆಯರ ಮಂದೆಗಳ ಹತ್ತಿರ ಅಲೆಯಬೇಕು?
ನಲ್ಲ
8 ಸ್ತ್ರೀಯರಲ್ಲಿ ಅತಿ ಸುಂದರವಾದ ಹೆಣ್ಣು ನೀನು,
ನಿನಗಿದು ಗೊತ್ತಿಲ್ಲವಾದರೆ
ಹಿಂಡಿನ ಹೆಜ್ಜೆಯ ಜಾಡನ್ನು ಹಿಡಿದು ಹೋಗಿ,
ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಮರಿಗಳನ್ನು ಮೇಯಿಸು.
9 ಪ್ರಿಯಳೇ, ನಿನ್ನನ್ನು ಫರೋಹನ ರಥವನ್ನೆಳೆವ ಹೆಣ್ಣು ಕುದುರೆಗೆ ಹೋಲಿಸಿದ್ದೇನೆ.
10 ನಿನ್ನ ಕೆನ್ನೆಗಳು ಆಭರಣಗಳಿಂದಲೂ,
ನಿನ್ನ ಕಂಠವು ಹಾರಗಳಿಂದಲೂ ಎಷ್ಟೋ ಅಂದವಾಗಿವೆ!
11 ನಾನು ನಿನಗಾಗಿ ಬಂಗಾರದ ಅಂಚಿನಿಂದ ಕೂಡಿರುವ,
ಬೆಳ್ಳಿಯ ಕುಚ್ಚಗಳನ್ನು ಮಾಡಿಸುವೆನು.
ನಲ್ಲೆ
12 ರಾಜನು ಔತಣದಲ್ಲಿದ್ದಾಗ§ 1:12 ರಾಜನು ಔತಣದಲ್ಲಿದ್ದಾಗ ಅಥವಾ ರಾಜನು ಅತ್ತ ಓಲಗದಲ್ಲಿದ್ದಾಗ.
ಇತ್ತ ನನ್ನ ಸುಗಂಧತೈಲವು ಪರಿಮಳವನ್ನು ಬೀರುತ್ತಿತ್ತು.
13 ಎನ್ನಿನಿಯನು * 1:13 ಎನ್ನಿನಿಯನು ಪ್ರಿಯನುನನ್ನ ಸ್ತನಗಳ ಮಧ್ಯದಲ್ಲಿನ ರಕ್ತಬೋಳದ ಚೀಲ;
14 ನನ್ನ ಪಾಲಿಗೆ ನನ್ನ ನಲ್ಲನು ಏನ್ಗೆದಿಯ† 1:14 ಏನ್ಗೆದಿಯ ಏನ್ಗೆದಿ ಎಂಬುದು ಲವಣ ಸಮುದ್ರದ ನೈಋತ್ಯ ತೀರದಲ್ಲಿರುವ ಓಯಸಿಸ್ (ಮರಳುಗಾಡಿನ ಫಲವತ್ತಾದ ಪ್ರದೇಶ) ಆಗಿದೆ; ಇದು ಒಂದು ಉಲ್ಲಾಸಕರ ಮತ್ತು ಫಲವತ್ತಾದ ಸ್ಥಳವಾಗಿ ಪರಿಚಿತವಾಗಿದೆ ಏಕೆಂದರೆ ಇದು ವಸಂತಕಾಲದಲ್ಲಿ ನೀರಿರುವಂತೆ ಮಾಡುತ್ತದೆ. ದ್ರಾಕ್ಷಿ ತೋಟಗಳ
ಗೋರಂಟೆಯ ಹೂಗೊಂಚಲು.
ನಲ್ಲ
15 ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ,
ಆಹಾ, ನೀನು ಎಷ್ಟು ಸುಂದರಿ!
ನಿನ್ನ ನೇತ್ರಗಳು ಪಾರಿವಾಳಗಳಂತಿವೆ.
ನಲ್ಲೆ
16 ಆಹಾ, ಎನ್ನಿನಿಯನೇ, ನೀನೆಷ್ಟು ಸುಂದರ, ನೀನೆಷ್ಟು ಮನೋಹರ!
ಹಚ್ಚ ಹಸಿರು ಚಿಗುರುಗಳು ನಮ್ಮ ಮಂಚ,
17 ನಮ್ಮ ಮನೆಯ ಛಾವಣಿ ತುರಾಯಿ ಮರಗಳೇ;
ತೊಲೆಗಳು ದೇವದಾರು ವೃಕ್ಷಗಳೇ.
*1:5 1:5 ಕೇದಾರಿನ ಗುಡಾರಗಳಂತೆ ಕಪ್ಪಾಗಿದ್ದರೂ, ಕೇದಾರ್ ಅರೇಬಿಯಾಕ್ಕೆ ಸಂಬಂಧಿಸಿರುವ ಇಷ್ಮಾಯೇಲ್ಯರ ಕುಲದವರು (ಆದಿ 25:13; ಯೆಶಾ 21:16-17; ಕೀರ್ತ 120:5). ಈ ಕುಲದವರು ಸಾಮಾನ್ಯವಾಗಿ ಕಪ್ಪು ಗುಡಾರಗಳಲ್ಲಿ ವಾಸಿಸುತ್ತಿದ್ದರು. ಆದ್ದರಿಂದ ಕೇದಾರ್ ಯುವತಿಯ ಕಪ್ಪು ಚರ್ಮವನ್ನು ಸೂಚಿಸುತ್ತದೆ.
†1:6 1:6 ದ್ರಾಕ್ಷಿತೋಟಗಳನ್ನು ದ್ರಾಕ್ಷಿತೋಟವು “ಯುವತಿಯನ್ನು ಸೂಚಿಸಬಹುದು, ಬಹುಶಃ ಆಳವಾದ ಲೈಂಗಿಕತೆಯ ಅರ್ಥವನ್ನು ಸಹ ಒಳಗೊಂಡಿರಬಹುದು.
‡1:7 1:7 ಅಲೆಮಾರಿಗಳಂತೆ ಮುಸುಕು ಹಾಕಿದವಳಂತೆ
§1:12 1:12 ರಾಜನು ಔತಣದಲ್ಲಿದ್ದಾಗ ಅಥವಾ ರಾಜನು ಅತ್ತ ಓಲಗದಲ್ಲಿದ್ದಾಗ.
*1:13 1:13 ಎನ್ನಿನಿಯನು ಪ್ರಿಯನು
†1:14 1:14 ಏನ್ಗೆದಿಯ ಏನ್ಗೆದಿ ಎಂಬುದು ಲವಣ ಸಮುದ್ರದ ನೈಋತ್ಯ ತೀರದಲ್ಲಿರುವ ಓಯಸಿಸ್ (ಮರಳುಗಾಡಿನ ಫಲವತ್ತಾದ ಪ್ರದೇಶ) ಆಗಿದೆ; ಇದು ಒಂದು ಉಲ್ಲಾಸಕರ ಮತ್ತು ಫಲವತ್ತಾದ ಸ್ಥಳವಾಗಿ ಪರಿಚಿತವಾಗಿದೆ ಏಕೆಂದರೆ ಇದು ವಸಂತಕಾಲದಲ್ಲಿ ನೀರಿರುವಂತೆ ಮಾಡುತ್ತದೆ.