ಪೇತ್ರನು
ಬರೆದ ಎರಡನೆಯ ಪತ್ರಿಕೆ
1
ಕ್ರಿಸ್ತ ಯೇಸುವಿನ ದಾಸನೂ ಅಪೊಸ್ತಲನೂ ಆಗಿರುವ ಸೀಮೋನ ಪೇತ್ರನು,
 
ನಮ್ಮ ದೇವರ ಮತ್ತು ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ನೀತಿಯ ಮೂಲಕ ನಮ್ಮಂತೆಯೇ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ ಬರೆಯುವುದು:
 
ದೇವರ ವಿಷಯವಾಗಿಯೂ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ವಿಷಯವಾಗಿಯೂ ಇರುವ ತಿಳುವಳಿಕೆಯ ಮೂಲಕ ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ದೊರೆಯಲಿ.
 
ಕರೆಯುವಿಕೆಯ ಮತ್ತು ಆಯ್ಕೆಯ ನಿಶ್ಚಯ
ದೇವರು ತಮ್ಮ ಸ್ವಂತ ಮಹಿಮೆಗಾಗಿಯೂ ಸದ್ಗುಣಕ್ಕಾಗಿಯೂ ನಮ್ಮನ್ನು ಕರೆದಿದ್ದಾರೆ. ಏಕೆಂದರೆ, ದೇವರ ತಿಳುವಳಿಕೆಯ ಮೂಲಕವಾಗಿ ಜೀವಕ್ಕೂ, ಭಕ್ತಿಗೂ ಬೇಕಾದದ್ದೆಲ್ಲವುಗಳನ್ನು ದೇವರ ಶಕ್ತಿಯು ನಮಗೆ ಕೊಡಲಾಗಿದೆ. ನೀವು ಲೋಕದಲ್ಲಿ ದುರಾಶೆಯಿಂದುಂಟಾದ ಕೆಟ್ಟತನಕ್ಕೆ ತಪ್ಪಿಸಿಕೊಂಡು ದೈವಸ್ವಭಾವದಲ್ಲಿ ಪಾಲನ್ನು ಹೊಂದುವವರಾಗಬೇಕೆಂದು ಅತ್ಯಂತ ಮಹತ್ವವುಳ್ಳ ಅಮೂಲ್ಯವಾದ ವಾಗ್ದಾನಗಳನ್ನು ದೇವರು ನಮಗೆ ದಯಪಾಲಿಸಿದ್ದಾರೆ.
ಈ ಕಾರಣದಿಂದಲೇ ನೀವು ಪೂರ್ಣಜಾಗ್ರತೆಯಿಂದ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ ಜ್ಞಾನಕ್ಕೆ ಸ್ವಯಂ ನಿಯಂತ್ರಣವನ್ನೂ ಸ್ವಯಂ ನಿಯಂತ್ರಣಕ್ಕೆ ತಾಳ್ಮೆಯನ್ನೂ ತಾಳ್ಮೆಗೆ ಭಕ್ತಿಯನ್ನೂ ಭಕ್ತಿಗೆ ಸೋದರ ಸ್ನೇಹವನ್ನೂ ಸೋದರ ಸ್ನೇಹಕ್ಕೆ ಪ್ರೀತಿಯನ್ನೂ ಕೂಡಿಸಿರಿ. ಈ ಗುಣಗಳು ನಿಮ್ಮಲ್ಲಿದ್ದು ಹೆಚ್ಚುತ್ತಾ ಬಂದರೆ, ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಅರಿತುಕೊಳ್ಳುವುದರಲ್ಲಿ ನೀವು ನಿಷ್ಪ್ರಯೋಜಕರೂ ನಿಷ್ಫಲರೂ ಆಗದಂತೆ ಮಾಡುತ್ತವೆ. ಆದರೆ ಈ ಗುಣಗಳಿಲ್ಲದವನು ಕುರುಡನಾಗಿದ್ದಾನೆ. ಅವನು ದೂರದೃಷ್ಟಿಯಿಲ್ಲದವನಾಗಿದ್ದು ತನ್ನ ಹಿಂದಿನ ಪಾಪಗಳಿಂದ ಶುದ್ಧನಾದದ್ದನ್ನು ಮರೆತು ಬಿಟ್ಟಿದ್ದಾನೆ.
10 ಆದ್ದರಿಂದ ಪ್ರಿಯರೇ, ನಿಮ್ಮ ಕರೆಯುವಿಕೆಯನ್ನೂ ಆಯ್ಕೆಯನ್ನೂ ದೃಢಪಡಿಸಿಕೊಳ್ಳಲು ಸರ್ವ ಪ್ರಯತ್ನವನ್ನು ಮಾಡಿರಿ. ಏಕೆಂದರೆ ಇವುಗಳನ್ನು ನೀವು ಮಾಡಿದರೆ ಎಂದಿಗೂ ಪಾಪದಲ್ಲಿ ಬಿದ್ದುಹೋಗುವುದಿಲ್ಲ. 11 ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವು ತಮ್ಮ ನಿತ್ಯ ರಾಜ್ಯದಲ್ಲಿ ಪ್ರವೇಶಿಸುವ ಭಾಗ್ಯವನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವರು.
ದೇವರ ವಾಕ್ಯದ ಪ್ರವಾದನೆ
12 ಆದ್ದರಿಂದ ನೀವು ಈ ಸಂಗತಿಗಳನ್ನು ತಿಳಿದವರಾಗಿ ಈಗಿನ ಸತ್ಯದಲ್ಲಿ ಸ್ಥಿರವಾಗಿದ್ದರೂ ಇವುಗಳನ್ನು ಯಾವಾಗಲೂ ನಿಮ್ಮ ನೆನಪಿಗೆ ತರಲು ನಾನು ಬಯಸುತ್ತೇನೆ. 13 ನಾನು ನನ್ನ ದೇಹವೆಂಬ ಗುಡಾರದಲ್ಲಿ ಬಾಳುವ ತನಕ ನಿಮ್ಮ ನೆನಪಿಗೆ ತರುವುದು ಯುಕ್ತವೆಂದೆಣಿಸಿದ್ದೇನೆ. 14 ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರು ನನಗೆ ಸ್ಪಷ್ಟ ಪಡಿಸಿದ ಪ್ರಕಾರ, ಈ ನನ್ನ ದೇಹವೆಂಬ ಗುಡಾರವನ್ನು ತೆಗೆದುಹಾಕುವ ಕಾಲ ಬೇಗನೆ ಬರುತ್ತದೆಂದು ನಾನು ಬಲ್ಲೆನು. 15 ಆದರೂ ನೀವು ನನ್ನ ಮರಣಾನಂತರ ಇವುಗಳನ್ನು ಯಾವಾಗಲೂ ನೆನಪಿಟ್ಟುಕೊಳ್ಳುವಂತೆ ನನ್ನಿಂದಾದಷ್ಟು ಪ್ರಯಾಸಪಡುವೆನು.
16 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಶಕ್ತಿಯ ಬಗ್ಗೆಯೂ ಅವರ ಪುನರಾಗಮನದ ಬಗ್ಗೆಯೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಕುತಂತ್ರವಾಗಿ ಕಲ್ಪಿಸಿದ ಕಥೆಗಳನ್ನು ನಾವು ಅನುಸರಿಸಲಿಲ್ಲ. ಆದರೆ ನಾವೇ ಕ್ರಿಸ್ತ ಯೇಸುವಿನ ಮಹತ್ತನ್ನು ಕಣ್ಣಾರೆ ಕಂಡವರಾಗಿ ತಿಳಿಯಪಡಿಸಿದೆವು. 17 ಏಕೆಂದರೆ, “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ,”* 1:17 ಮತ್ತಾಯ 17:5; ಮಾರ್ಕ 9:7; ಲೂಕ 9:35 ಎಂಬ ಧ್ವನಿಯು ಮಹೋನ್ನತ ಮಹಿಮೆಯಿಂದ ಅವರಿಗೆ ಉಂಟಾದದ್ದರಲ್ಲಿ ಅವರು ತಂದೆ ದೇವರಿಂದ ಗೌರವವನ್ನೂ ಮಹಿಮೆಯನ್ನೂ ಹೊಂದಿದರಲ್ಲವೇ. 18 ನಾವು ಪರಿಶುದ್ಧ ಪರ್ವತದ ಮೇಲೆ ಕ್ರಿಸ್ತ ಯೇಸುವಿನ ಸಂಗಡ ಇದ್ದಾಗ ಪರಲೋಕದಿಂದ ಬಂದ ಆ ಧ್ವನಿಯನ್ನು ನಾವೇ ಕೇಳಿದೆವು.
19 ಮಾತ್ರವಲ್ಲದೆ ನಮಗೆ ಬಹು ನಿಶ್ಚಯವಾದ ಪ್ರವಾದನೆಯ ವಾಕ್ಯಗಳಿವೆ. ಉದಯ ನಕ್ಷತ್ರವಾಗಿರುವ ಕ್ರಿಸ್ತ ಯೇಸು ನಿಮ್ಮ ಹೃದಯಗಳಲ್ಲಿ ಉದಯಿಸುವಾಗ ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪದಂತೆ ಎಣಿಸಿ, ನೀವು ಆ ಪ್ರವಾದನಾ ವಾಕ್ಯಗಳಿಗೆ ಲಕ್ಷ್ಯಕೊಡುವುದು ಒಳ್ಳೆಯದು. 20 ಪವಿತ್ರ ವೇದದ ಯಾವ ಪ್ರವಾದನೆಯೂ ಕೇವಲ ಪ್ರವಾದಿಗಳಿಂದ ಸ್ವಂತವಾಗಿ ವಿವರಿಸತಕ್ಕದ್ದಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿರಿ. 21 ಯಾವ ಪ್ರವಾದನೆಯೂ ಎಂದೂ ಮನುಷ್ಯನ ಚಿತ್ತದಿಂದ ಬರಲಿಲ್ಲ, ಆದರೆ ಪ್ರವಾದಿಗಳು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಪಡೆದುಕೊಂಡಿದ್ದನ್ನೇ ಮಾತನಾಡಿದರು.

*1:17 1:17 ಮತ್ತಾಯ 17:5; ಮಾರ್ಕ 9:7; ಲೂಕ 9:35